1926ರಲ್ಲಿಯೇ ಹಳ್ಳಿಗರನ್ನು ಕುರಿತು ‘ನಿನ್ನನೀ ಕೀಳ್ಗತಿಗೆ ತಂದವರಾರು? ನಿನ್ನವರ ಕೈ ಬೆರಳ ಕಡಿದವರಾರು?’ ಎಂದು ಕುವೆಂಪು ಆತಂಕಪಟ್ಟಿದ್ದರು. ‘ರಾಜಕೀಯ ಪಾಳೆಯಗಾರಿಕೆಗಾಗಿ ರೈತರನ್ನು ಪ್ರಯೋಗಿಸಿಕೊಳ್ಳಬಾರದು’ ಎಂದಿದ್ದರು ಗಾಂಧೀಜಿ. ಇದನ್ನು ಅರಿತಿದ್ದ ಗ್ರಾಮೀಣರು, ‘ಯಾರೇ ರಾಜ್ಯವಾಳಿದರೂ ರಾಗಿ ಬೀಸೋದು ತಪ್ಪುತ್ತದೆಯೇ?’ ಎಂದುಬಿಡುತ್ತಾರೆ. ಅಂದರೆ ಜಗಲಿ ಮೇಲಿನ ನೇಯ್ಗೆ ಕಿತ್ತು, ಮನೆಯೊಳಗಿನ ಗೃಹ ಕೈಗಾರಿಕೆ ಕಿತ್ತು ಲಂಡನ್‌ಗೆ ಸಾಗಿಸಿಕೊಂಡ ಪರಂಗಿಯವರಿಗೂ, ಜಾಗತೀಕರಣ ದಿಕ್ಕಿನಲ್ಲಿ ಸುಖದ ಸುಪ್ಪತ್ತಿಗೆ ಹಾಸಬಲ್ಲೆವು ಎಂಬ ದೇಶಿ ಆಳ್ವಿಕೆಯ ಭರವಸೆಗೂ ಅಂತಹ ವ್ಯತ್ಯಾಸ ಕಾಣುತ್ತಿಲ್ಲ. ಕಾಲ ಸಾಗಿದೆ. ಬದುಕು ಅಸ್ತವ್ಯಸ್ತವಾಗಿದೆ.
ಹೊಲಗದ್ದೆ, ಜಗಲಿ, ಊರು ಬಿಟ್ಟು ಬಂದು ವಿಧಾನಸೌಧದೊಳಗಿನ ಗಂಧದ ಬಾಗಿಲಿನ ಘಮ ಮೂಸಿದರೆ ಸಾಕು; ನಾಯಕರು ಹಳತನ್ನೆಲ್ಲ ಮರೆತುಬಿಡುತ್ತಾರೆ. ಮೊನ್ನೆ ಹೊಸ ಮುಖ್ಯಮಂತ್ರಿ, ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಿದ್ದಾಗ ಅವರ ಅಣ್ಣ ಕಿವಿಯಲ್ಲಿ ‘ಹಾಲಿನ ದರ ಎರಡು ರೂಪಾಯಿ ಏರಿಸುತ್ತೇವೆಂದು ಹೇಳು ಹೇಳು’ ಎನ್ನುತ್ತಿದ್ದರು. ‘ಏನು ಮಾಡಲಿ ಎಂತು ಮಾಡಲಿ’ ಎಂದು ಇಕ್ಕಟ್ಟಿನಲ್ಲಿದ್ದ ಮುಖ್ಯಮಂತ್ರಿ, ‘ಸುಮ್ಮನಿರ್ತಿಯಾ!’ ಎಂದು ಅಣ್ಣನ ಮೇಲೆ ಎಗರಿದ್ದುಂಟು. ದರ ಏರಿಸುವುದಿರಲಿ, ಎರಡೇ ದಿನಗಳಲ್ಲಿ ಲೀಟರಿಗೆ ಎರಡು ರೂಪಾಯಿ ಕಡಿತ ಮಾಡಿದ ಹೇಳಿಕೆ ಬಂತು. ಇದಕ್ಕೆ ಕೊಡುತ್ತಿರುವ ಕಾರಣ: ‘ಉತ್ತಮ ಮಳೆಯಿಂದ ಹಾಲು ಶೇಖರಣೆ ಹೆಚ್ಚಾಗಿದೆ’.
ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ನಡೆಯಲಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಆಳ್ವಿಕೆಯೇ ಇರುವ ರಾಜ್ಯಗಳಲ್ಲೂ ರೈತರು ಸಾಲಮನ್ನಾ ಹಾಗೂ ಬೆಂಬಲ ಬೆಲೆಗೆ ಒತ್ತಾಯಿಸಿ ಬೀದಿಗಿಳಿದಿದ್ದಾರೆ. ಇದರಲ್ಲಿ ರಾಜಕಾರಣವಿದೆಯೋ ಇಲ್ಲವೋ, ಅದು ಬೇರೆ ಮಾತು. ಅಲ್ಲಿ ಗೋಲಿಬಾರ್ ಆಗಿದೆ. ತೂತ್ತುಕುಡಿಯಲ್ಲೂ 15 ಜನ ಬಲಿಯಾಗಿದ್ದಾರೆ. ಅಂತೂ ರೈತರ ಗೋಣು ಕುಣಿಕೆಗೆ ಹತ್ತಿರವಾಗುತ್ತಿರುವುದು ಸತ್ಯ. 2017ರ ಮಾಹಿತಿಯಂತೆ, ಈ ದೇಶವು ಹಾಲು ಉತ್ಪಾದನೆಯಲ್ಲಿ ಜಗದ ಮೊದಲ ಸ್ಥಾನದಲ್ಲಿದೆ. ಆದರೆ ರಫ್ತು ಮಾಡುವುದರಲ್ಲಿ ಕೆಳಸ್ಥಾನದಲ್ಲಿದೆ. ಅಂದರೆ ರೈತರ ಉತ್ಪಾದನೆಗೂ ಆರ್ಥಿಕ ನಿರ್ವಹಣೆಗೂ ತಾಳೆಯಾಗುತ್ತಿಲ್ಲ.
ಹಸಿರು ಕ್ರಾಂತಿಯು ನೆಹರೂ ಕಾಲಕ್ಕೆ ದೇಶದ ತುರ್ತು ಅವಶ್ಯಕತೆಯಾಗಿತ್ತು. ಜಗತ್ತು ಆಗ ಹಸಿವಿನಿಂದ ಕಂಗಾಲಾಗಿತ್ತು. ಅಮೆರಿಕೆಯ ನಾರ್ಮನ್ ಬೊರ್ಲಾಗ್ ಮುಂತಾದ ತಜ್ಞರ ದಾರಿಯಲ್ಲಿ ಎಂ.ಎಸ್. ಸ್ವಾಮಿನಾಥನ್ ಹೆಜ್ಜೆ ಹಾಕಿದರು. ದೇಶ ಹಸಿರಾಯಿತು. ವರ್ಗೀಸ್ ಕುರಿಯನ್ ಮುಂತಾದವರು ಶ್ವೇತ ಕ್ರಾಂತಿಯನ್ನು ಸಹ ಇದರೊಂದಿಗೆ ಜೋಡಿಸಿದರು. ಈ ಕ್ರಾಂತಿ ದೇಶದ ತಾತ್ಕಾಲಿಕ ಹಸಿವನ್ನು ನೀಗಿತು ನಿಜ. ರೈತರು ಬೆಳೆದ ಬೆಳೆಗಳಿಗೆ ಸರ್ಕಾರಗಳು ಬೆಂಬಲವಾಗಿ ನಿಲ್ಲದಿದ್ದರೆ, ಕರೆದ ಹಾಲಿಗೆ ಶ್ರೀಮಂತರು ಉದಾರವಾಗಿ ಬೆಲೆ ನೀಡದಿದ್ದರೆ ರೈತರ ಬೆನ್ನು ಇನ್ನಷ್ಟು ಗೂನಾಗಿ ಬಿಡುತ್ತದೆ. ಬ್ಯಾಂಕುಗಳು, ಬಡ್ಡಿದಾರರ ಸಾಲಗಳು ಕುತ್ತಿಗೆಯ ಹಗ್ಗ ಬಿಗಿ ಮಾಡುತ್ತವೆ. ಸಾಲಮನ್ನಾ ಎಂಬ ಆಶ್ವಾಸನೆ ತಾತ್ಕಾಲಿಕವಾದದ್ದು. ಅದನ್ನು ನೀಡಲು ಮೀನಮೇಷ ಎಣಿಸುವ ಕೇಂದ್ರ ಸರ್ಕಾರವು ಕಂಪನಿ ಸರದಾರರ ಸಾಲ ವಿಮುಕ್ತಿಯ ಕಡೆಗೆ ಮಾತ್ರ ವೇಗವಾಗಿ ಚಲಿಸುತ್ತದೆ.
ಒಂದು ಲೀಟರ್ ಹಾಲು ಕರೆಯಬೇಕೆಂದರೆ ಕೋಳಿ ಕೂಗುವ ಹೊತ್ತಿಗೆ ಮನೆಯಾಕೆ ಏಳಬೇಕು. ಹುಲ್ಲು ತರಬೇಕು. ಕಲಗಚ್ಚು ಇಡಬೇಕು. ಹಾಲು ಕರೆದು ಡೈರಿಗೆ ಓಡಬೇಕು. ಅದು ತೆಳ್ಳಗಾಯ್ತೆಂದು ತಕರಾರು ತೆಗೆದವನೊಡನೆ ಜಗಳವಾಡಬೇಕು. ಮನೆಗೆ ಓಡಿಹೋಗಿ ಗಂಡ–ಮಕ್ಕಳಿಗೆ ಬೇಯಿಸಿ ಹಾಕಬೇಕು. ಇಷ್ಟಾದರೂ ಆಕೆಗೆ ಸಿಗುವ ಹಣ ನಾಲ್ಕು ಲೀಟರಿಗೆ ಕೇವಲ ನೂರು ರೂಪಾಯಿ. ಅಂತಹದು ಏಳುದಿನ ಕೂಡಿಸಿದರೂ ಹಿಂಡಿ, ಬೂಸಾಕ್ಕೆ ಸಮನಾಗಿ, ಉಳಿದದ್ದು ಮಕ್ಕಳ ಅಂಗಿಗಾದರೆ ಚಡ್ಡಿಗೆ ಸಾಕಾಗುವುದಿಲ್ಲ. ಈ ನಡುವೆ ಹೆಗಲ ಮೇಲೆ ಟವಲ್ ಹಾಕಿ ‘ತತ್ತಾರೆ ಉಣ್ಣಕೆ’ ಎನ್ನುವ ಗಂಡನ ಅಬ್ಬರ ಬೇರೆ.
ಹೀಗಿರುವಂತಹ ನಮ್ಮ ನಿಮ್ಮ ಹಳ್ಳಿಯ ಹೆಂಗಸರ ಮೇಲಾದರೂ ಈ ಲೋಕಕ್ಕೆ ಕರುಣೆ ಬೇಡವೇ!? ಪೆಟ್ರೋಲಿಗೆ ದಿನಕ್ಕೆ ಕನಿಷ್ಠ ಇನ್ನೂರು, ಮುನ್ನೂರು ರೂಪಾಯಿ ಸಲೀಸಾಗಿ ಕೊಡುವ ಪೇಟೆಯ ಜನ, ಹಾಲಿಗೆ ದಿನಕ್ಕೆ ಹತ್ತು ಹದಿನೈದು ರೂಪಾಯಿ ಹೆಚ್ಚಾಗಿ ನೀಡಿದರೆ ಪ್ರಪಂಚ ಮುಳುಗಿ ಹೋಗುವುದಿಲ್ಲ. ಹಸುವಿಗೆ ಹುಲ್ಲು, ಬೂಸಾ ಹಾಕಿ, ಮೈನೀವಿ ಹಾಲು ತರುವವರಿಗೆ ಎರಡು ರೂಪಾಯಿ ಹೆಚ್ಚು ಕೊಟ್ಟರೆ ಕಣ್ಣುರಿ ಬಂದುಬಿಡುತ್ತದೆ. ಇದನ್ನು ಸರ್ಕಾರ ಕೂಡ ಸಮರ್ಥಿಸುತ್ತಿದೆ ಎಂಬುದು ಬಡತನಕ್ಕೆ ಮಾಡುತ್ತಿರುವ ಅವಮಾನ.
ಸರ್ಕಾರ ಮಾಡಬೇಕಾದ ಆದ್ಯ ಕರ್ತವ್ಯವೆಂದರೆ ಬಿಟ್ಟಿ ಊಟವಲ್ಲ. ಬಿಟ್ಟಿ ರೇಷನ್ ಹಂಚುವುದೂ ಅಲ್ಲ. ಸಾಲಮನ್ನಾವೂ ನಗಣ್ಯ. ಅದು ಮಾಡಬೇಕಾದ್ದು, ಬೆಳೆದ ಬೆಳೆ ಅಗ್ಗವಾದಾಗ ತಂದು ದಾಸ್ತಾನು ಮಾಡಿ ಬೆಲೆ ಬಂದಾಗ ಮಾರಿಕೊಳ್ಳುವ ಸಹಕಾರ. ರೈತ ಬೀದಿಗೆ ಬಿದ್ದಾಗ ಕೈಹಿಡಿದೆತ್ತಿ ನಿಲ್ಲಿಸುವ ಮಾನವೀಯತೆ. ಹಾಲು ಕರೆದು ತಂದಾಗ ಅದನ್ನು ಅಮೃತವೆಂದು ಪರಿಗಣಿಸಿ ಶ್ರಮಕ್ಕೆ ತಕ್ಕಂತೆ ಮೌಲ್ಯ ನೀಡುವ ಮನುಷ್ಯತ್ವ. ಇದೇ ಪ್ರಜಾಪ್ರಭುತ್ವದೊಳಗಿನ ಹೂರಣ. ಅದೇ ಸಂಘ ಸಂಸ್ಥೆಗಳು ಸರ್ಕಾರದ ಪರವಾಗಿ ಮಾಡುವ ಧರ್ಮದರ್ಶಿತ್ವ. ಅದೇ ಸ್ವರಾಜ್ಯದ ಕಲ್ಪನೆ.
ಗಾಂಧೀಜಿ ಹೇಳುವಂತೆ ‘ಬಡವರ ಶಾಪ ರಾಷ್ಟ್ರಗಳನ್ನು ನಾಶ ಮಾಡಿದೆ. ರಾಜರ ಕಿರೀಟಗಳನ್ನು ಉರುಳಿಸಿದೆ. ಶ್ರೀಮಂತರ ಸಂಪತ್ತನ್ನು ಇಲ್ಲವಾಗಿಸಿದೆ’. ಈ ದೇಶ ತಾಳ್ಮೆಯ ದೇಶ. ಹಾಗೆಂದು ಬಡವ– ಶ್ರೀಮಂತರಲ್ಲಿ ಅಂತರ ಹೆಚ್ಚಾಗದಂತೆ ನೋಡಿಕೊಳ್ಳುವುದು ಕೂಡ ಸರ್ಕಾರದ ಕರ್ತವ್ಯ. ನೀರು, ಗಾಳಿ, ಆಹಾರ ಮನುಷ್ಯನಿಗೆ ಬೇಕಾಗಿರುವ ಪ್ರಥಮ ಅವಶ್ಯಕತೆಗಳು. ನಿಸರ್ಗ ನೀರನ್ನು ಸೋಸುತ್ತದೆ. ಗಾಳಿಯನ್ನು ಮಡಿ ಮಾಡುತ್ತದೆ. ಆಹಾರವನ್ನು ಆರೋಗ್ಯಭರಿತ ಮಣ್ಣಿನಿಂದ ನೀಡುತ್ತದೆ. ಮೂರ್ಖ ಮಾನವ ಇದೆಲ್ಲವನ್ನೂ ಸ್ವಾರ್ಥ ಅತಿಲಾಲಸೆಯಿಂದ ಕುಲಗೆಡಿಸುತ್ತಿದ್ದಾನೆ. ಇದೆಲ್ಲದರ ಕಾಪಾಡುವಿಕೆ ದೇಶದ ಎಲ್ಲಾ ಪ್ರಜೆಗಳ ಪ್ರಥಮ ಕರ್ತವ್ಯ. ಅದೆಲ್ಲದರ ದೇಶಿ ತಿಳಿವನ್ನು ಪುನಃ ಅವರಿಗೆ ತಿಳಿಸುವುದು ಕೂಡ ಸಮಾಜದ ಕರ್ತವ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.