ADVERTISEMENT

ಹಸಿರುಕ್ರಾಂತಿ: ಬದಲಾದ ಮನಃಸ್ಥಿತಿ

ಡಾ.ಉಲ್ಲಾಸ ಎಂ.ವೈ.
Published 23 ಜನವರಿ 2020, 19:46 IST
Last Updated 23 ಜನವರಿ 2020, 19:46 IST
   

‘ಕೃತಕ ಗೊಬ್ಬರ ಬಳಕೆ ಇಳಿಮುಖ: ಆತಂಕ’ ಎಂಬ ಸುದ್ದಿಯನ್ನು ನೋಡಿ (ಪ್ರ.ವಾ., ಡಿ. 13) ಚಕಿತಗೊಂಡೆ. ಆದರೆ, ಸಮಾಧಾನಕರ ವಿಷಯವೆಂದರೆ, ಆ ಸುದ್ದಿ ಪ್ರಕಟವಾಗಿದ್ದು ‘50 ವರ್ಷಗಳ ಹಿಂದೆ’ ಅಂಕಣದಲ್ಲಿ. ಅಂದರೆ, 1969ರಲ್ಲಿ ಕೇಂದ್ರದ ಆಹಾರ ಸಚಿವರಾಗಿದ್ದ ಬಾಬು ಜಗಜೀವನ್ ರಾಂ ಅವರು, ಆ ವರ್ಷ ಕೃತಕ ಗೊಬ್ಬರದ ಬೇಡಿಕೆ ಕಡಿಮೆ ಆಗಿದ್ದಕ್ಕೆ ಆಹಾರ ಉತ್ಪಾದನೆ ಕುಂಠಿತವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದರು. ಕೃತಕ ಗೊಬ್ಬರ ಬಳಕೆಗೆ ರೈತರನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಬೇಕೆಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದರು.

ಈ 50 ವರ್ಷಗಳಲ್ಲಿ ದೇಶದ ಕೃಷಿ ಹಾಗೂ ರೈತರ ಮನಃಸ್ಥಿತಿ ಊಹಿಸಲಾಗದಷ್ಟು ಬದಲಾಗಿದೆ. ಈಗ ರೈತರನ್ನು ರಾಸಾಯನಿಕ ಗೊಬ್ಬರ ಬಳಸಿ ಎಂದು ಪ್ರೋತ್ಸಾಹಿಸುವ ಅಗತ್ಯವಿಲ್ಲ. ಏಕೆಂದರೆ, ರಾಸಾಯನಿಕ ಗೊಬ್ಬರ ಇಲ್ಲದಿದ್ದರೆ ಕೃಷಿ ಅಸಾಧ್ಯ ಎಂಬ ಸ್ಥಿತಿಗೆ ಅವರು ತಲುಪಿದ್ದಾರೆ. ಬಿತ್ತನೆ ಸಮಯಕ್ಕೆ ಸರಿಯಾಗಿ ಗೊಬ್ಬರ ದೊರೆಯದೆ ಹಲವಾರು ಪ್ರತಿಭಟನೆಗಳು ಸಹ ನಡೆದಿವೆ. ದೇಶದಲ್ಲಿ ರಾಸಾಯನಿಕ ಗೊಬ್ಬರಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಈಗೇನಿದ್ದರೂ ಅದನ್ನು ಮಿತವಾಗಿ ಬಳಸಿ ಎಂದು ಹೇಳಬೇಕಾಗಿದೆ.

ಹಾಗಾದರೆ ಇಂತಹ ಬೆಳವಣಿಗೆಗೆ ಕಾರಣಗಳೇನು? ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ (1951-1956) ಕೃಷಿ ಮತ್ತು ನೀರಾವರಿಗೆ ಪ್ರಾಮುಖ್ಯ ಕೊಟ್ಟಿದ್ದರೂ ಅರವತ್ತರ ದಶಕದ ಮಧ್ಯಭಾಗದವರೆಗೂ ದೇಶವು ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಸಾಧ್ಯವಾಗಿರಲಿಲ್ಲ. ಈ ಸಮಯದಲ್ಲಿ (1965-66) ದೇಶ ಉತ್ಪಾದಿಸುತ್ತಿದ್ದ ಆಹಾರಧಾನ್ಯವು 50 ಕೋಟಿ ಭಾರತೀಯರ ಹಸಿವು ನೀಗಿಸಲು ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಅಮೆರಿಕದಂತಹ ದೇಶಗಳ ಮುಂದೆ ಕೈ ಚಾಚುವ ಪರಿಸ್ಥಿತಿ ಇತ್ತು. ಹಸಿವಿನಿಂದ ಮುಕ್ತಿ ಪಡೆದರೆ ಮಾತ್ರ ನಿಜವಾದ ಸ್ವಾತಂತ್ರ್ಯ ಪಡೆದಂತೆ ಎಂದು ನಂಬಿದ್ದ ಆಗಿನ ಆಡಳಿತಗಾರರು, ಆಹಾರೋತ್ಪಾದನೆ ಹೆಚ್ಚಿಸಲೇಬೇಕು ಎಂದು ಪಣ ತೊಟ್ಟು ಹಸಿರುಕ್ರಾಂತಿಯನ್ನು ಜಾರಿಗೆ ತರಲು ಶ್ರಮಿಸಿದರು.

ADVERTISEMENT

ಹಸಿರುಕ್ರಾಂತಿಯು ಪ್ರಮುಖವಾಗಿ ಮೂರು ಅಂಶಗಳ ಮೇಲೆ ನೆಲೆಗೊಂಡಿತ್ತು. ಅವುಗಳೆಂದರೆ: ನೀರಾವರಿ, ರಸಗೊಬ್ಬರ ಹಾಗೂ ಅಧಿಕ ಇಳುವರಿ ನೀಡುವ ಸುಧಾರಿತ ಗಿಡ್ಡ ತಳಿಗಳು. ಇವುಗಳ ಅಳವಡಿಕೆಯ ಜೊತೆಗೆ, ಕೃಷಿ ವಿಜ್ಞಾನಿಗಳು ಮತ್ತು ಕೃಷಿ ವಿಸ್ತರಣಾ ಕಾರ್ಯಕರ್ತರ ಶ್ರಮದಿಂದಾಗಿ ದೇಶವು ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿಯಾಯಿತು.

ಹೀಗೆ ದೇಶಕ್ಕೆ ಆಹಾರ ಭದ್ರತೆ ಒದಗಿಸಿದ ಹಸಿರುಕ್ರಾಂತಿಯು ದಿನ‌ಗಳೆದಂತೆ ತನ್ನ ಹೊಳಪು ಕಳೆದುಕೊಳ್ಳುತ್ತಿದೆ. ಹಸಿರುಕ್ರಾಂತಿಯನ್ನು ಕೈಗೊಂಡಿದ್ದೇ ಅಪರಾಧ ಎಂದು ಬಿಂಬಿಸಲಾಗುತ್ತಿದೆ. ನಮಗೆಲ್ಲರಿಗೂ ತಿಳಿದಿರುವಂತೆ, ಯಾವುದೇ ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ವರವಾಗುತ್ತದೆ. ಅದೇ ತಪ್ಪಾಗಿ ಬಳಸಿದರೆ ಶಾಪವಾಗುತ್ತದೆ. ಹೀಗೇ ಹಸಿರುಕ್ರಾಂತಿಯ ತಪ್ಪಾದ ಅಳವಡಿಕೆಯಿಂದಾಗಿ ಅದು ಶಾಪವಾಗಿ ಪರಿಣಮಿಸಿದೆಯೇ ಹೊರತು ಈ ತಂತ್ರಜ್ಞಾನವೇ ತಪ್ಪಲ್ಲ.

ರಾಸಾಯನಿಕ ಗೊಬ್ಬರವನ್ನು ಪರಿಚಯಿಸಿದ ಪ್ರಾರಂಭಿಕ ಹಂತದಲ್ಲಿ ಮಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾವಯವ ಇಂಗಾಲದ ಪ್ರಮಾಣ ಇತ್ತು. ಸಾವಯವ ಗೊಬ್ಬರವನ್ನೂ ರೈತರು ಬಳಸುತ್ತಿದ್ದುದರಿಂದಾಗಿ ಸ್ವಲ್ಪ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸಿದರೂ ಅಧಿಕ ಇಳುವರಿ ದೊರೆಯುತ್ತಿತ್ತು. ಆದರೆ ರೈತರು ಕಾಲಕ್ರಮೇಣ ತ್ವರಿತ ಫಲಿತಾಂಶದ ಬೆನ್ನುಬಿದ್ದು ರಾಸಾಯನಿಕ ಗೊಬ್ಬರಕ್ಕೇ ಮೊರೆ ಹೋದರು. ಇದರಿಂದಾಗಿ ಕಾಲಕ್ರಮೇಣ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಯಿತು. ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕ್ಷೀಣಿಸಿತು. ಕೇವಲ ಪ್ರಧಾನ ಪೋಷಕಾಂಶಗಳನ್ನು ಹೊಂದಿರುವ ರಸಗೊಬ್ಬರವನ್ನು ಬಳಸಿದ್ದರಿಂದಾಗಿ ಇನ್ನುಳಿದ ಸೂಕ್ಷ್ಮ ಪೋಷಕಾಂಶಗಳ ಕೊರತೆ ಉಂಟಾಯಿತು, ಮಣ್ಣಿನ ಆರೋಗ್ಯವೂ ಹಾಳಾಯಿತು.

ಹಸಿರುಕ್ರಾಂತಿಯ ಪ್ರಾರಂಭಿಕ ಹಂತದಲ್ಲಿ ಒಂದು ಕೆ.ಜಿ ರಾಸಾಯನಿಕ ಗೊಬ್ಬರ ಬಳಸಿದರೆ ಸರಾಸರಿ 14 ಕೆ.ಜಿ ಇಳುವರಿ ಬರುತ್ತಿತ್ತು. ಆದರೆ ಇಂದು ಒಂದು ಕೆ.ಜಿ ರಾಸಾಯನಿಕ ಗೊಬ್ಬರ ಬಳಸಿದರೆ ಸರಾಸರಿ 3.5 ಕೆ.ಜಿ ಇಳುವರಿ ಬರುತ್ತಿದೆ. ನಿಗದಿತ ಇಳುವರಿ ಪಡೆಯಲು ಬಳಸಬೇಕಾದ ರಾಸಾಯನಿಕದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಯಿತು. ಇದರಿಂದಾಗಿ ರೈತರ ಖರ್ಚು ವೆಚ್ಚ ಅಧಿಕವಾಯಿತು. ಕೇಂದ್ರ ಸರ್ಕಾರ ನೀಡುವ ರಸಗೊಬ್ಬರದ ಸಬ್ಸಿಡಿ ಮೊತ್ತವೂ ಸಾವಿರಾರು ಕೋಟಿ ರೂಪಾಯಿಗೆ ಏರಿಕೆಯಾಯಿತು.

ಅಧಿಕ ರಾಸಾಯನಿಕ ಗೊಬ್ಬರವನ್ನು ಬಳಸಿದಾಗ ರೋಗ ಹಾಗೂ ಕೀಟಬಾಧೆಯೂ ಹೆಚ್ಚಾಗುತ್ತದೆ. ಮತ್ತೆ ಇವುಗಳ ನಿಯಂತ್ರಣಕ್ಕೆ ಕೀಟನಾಶಕಗಳನ್ನು ಸಿಂಪಡಿಸಿ ಇನ್ನೂ ಖರ್ಚು ವೆಚ್ಚ ಹೆಚ್ಚಾಗಿ, ಕೃಷಿ ಲಾಭಕರವಾಗಿ ಉಳಿಯುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಹಸಿರುಕ್ರಾಂತಿಯೇ ಕಾರಣ ಎಂದು ದೂರುವ ಬದಲು, ವೈಜ್ಞಾನಿಕ ಕಾರಣಗಳನ್ನು ಹುಡುಕಿ ಪರಿಹಾರ ಕಂಡುಕೊಳ್ಳಬೇಕಿದೆ. ರೈತರು ಮಣ್ಣಿನ ಆರೋಗ್ಯವನ್ನು ಉನ್ನತೀಕರಿಸಿ ಕೃಷಿಯಲ್ಲಿ ಸುಸ್ಥಿರತೆ ಸಾಧಿಸಿಕೊಳ್ಳಬಹುದಾಗಿದೆ.

ರಾಸಾಯನಿಕ ಕೃಷಿ ಒಳ್ಳೆಯದೋ, ಸಾವಯವ ಕೃಷಿ ಒಳ್ಳೆಯದೋ ಎಂದು ತರ್ಕ ಮಾಡುವ ಬದಲು, ವಿವಿಧ ಕೃಷಿ ಪದ್ಧತಿಗಳಲ್ಲಿರುವ ಒಳ್ಳೆಯ ಅಂಶಗಳನ್ನು ಪರಿಗಣಿಸಿ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.