ADVERTISEMENT

ಸಂಗತ | ಅಮೂಲ್ಯ ಕ್ಷಣವೂ ವ‌ರ್ಚುವಲ್‌ ಆದಾಗ...

ಕೊರೊನಾದಿಂದಾಗಿ ಪದವಿ ಪ್ರದಾನ ಸಮಾರಂಭದಂಥ ಅಮೂಲ್ಯ ಕ್ಷಣಗಳಿಂದ ವಂಚಿತರಾದ ಅಮೆರಿಕದ ಪದವೀಧರರಿಗೆ ಖ್ಯಾತನಾಮರ ಸಂದೇಶ ಮನಮುಟ್ಟುವಂತಿದೆ

ರವಿಚಂದ್ರ ಎಂ.
Published 23 ಜೂನ್ 2020, 19:30 IST
Last Updated 23 ಜೂನ್ 2020, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಿಶ್ವವಿದ್ಯಾಲಯಗಳ ಘಟಿಕೋತ್ಸವಗಳು, ಪದವಿ ಪ್ರದಾನ ಸಮಾರಂಭಗಳು ಬಹಳಷ್ಟು ಮಂದಿಯ ಜೀವನದಲ್ಲಿ ಅಮೂಲ್ಯ ಪ್ರಸಂಗಗಳಾಗಿ ಸ್ಮೃತಿಪಟಲದಲ್ಲಿ ಸ್ಥಾನ ಪಡೆದಿರುತ್ತವೆ. ಆದರೆ, 2020ರಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಪದವಿ ಪ್ರದಾನ ಸಮಾರಂಭಗಳು ನಡೆಯುವುದು ಇರಲಿ, ಪದವಿ ಪರೀಕ್ಷೆಗಳೇ ಭಾರತದಲ್ಲಿ ಮುಗಿದಿಲ್ಲ.

ಅಮೆರಿಕದಲ್ಲಿ ಕೆಲವು ವಿಶ್ವವಿದ್ಯಾಲಯಗಳು ಆನ್‌ಲೈನ್‌ ಪರೀಕ್ಷೆ ಮುಗಿಸಿರುವ ಕಾರಣ, ವಿದ್ಯಾರ್ಥಿವೃಂದವು ಪದವಿ ಪ್ರದಾನ ಸಮಾರಂಭವನ್ನು ಯುಟ್ಯೂಬ್‌ ಮೂಲಕವೇ ವರ್ಚುವಲ್‌ ‘ಡಿಯರ್ ಕ್ಲಾಸ್ ಆಫ್ 2020’ ಎಂಬ ಹೆಸರಿನಡಿ ಇತ್ತೀಚೆಗೆ ಆಚರಿಸಿದೆ. ಈ ಪದವೀಧರರನ್ನು ಉದ್ದೇಶಿಸಿ ಖ್ಯಾತನಾಮರು ಮಾಡಿರುವ ಮನಮುಟ್ಟುವ ಭಾಷಣಗಳು ಯುಟ್ಯೂಬ್‍ನಲ್ಲಿ ಲಭ್ಯವಿವೆ.

‘ಗ್ರ್ಯಾಜುಯೇಷನ್‌ ಡೇ’ ಹುಟ್ಟು 12ನೇ ಶತಮಾನದಲ್ಲಿ ಐರೋಪ್ಯ ದೇಶಗಳಲ್ಲಿನ ವಿಶ್ವವಿದ್ಯಾಲಯಗಳ ಮೂಲಕ ಆಯಿತು ಎನ್ನಲಾಗಿದೆ. ಭಾರತದಲ್ಲಿ ಸಹ ಬಹುತೇಕ ಎಲ್ಲಾ ಕಾಲೇಜು, ವಿಶ್ವವಿದ್ಯಾಲಯಗಳೂ ಇದನ್ನು ಆಚರಿಸುತ್ತವೆ. ನಮ್ಮಲ್ಲಿ ಪ್ರಾಚೀನವಾದ ಜಗತ್ಪ್ರಸಿದ್ಧ ವಿಶ್ವವಿದ್ಯಾಲಯಗಳು ಇದ್ದವು ಎಂಬುದು ಇಲ್ಲಿ ಉಲ್ಲೇಖನೀಯ. ಸುಮಾರು 9 ವಿಶ್ವವಿದ್ಯಾಲಯಗಳು ಪ್ರಖ್ಯಾತವಾಗಿದ್ದು, ಅವುಗಳಲ್ಲಿ ಬಿಹಾರದಲ್ಲಿರುವ ನಳಂದಾ ವಿಶ್ವವಿದ್ಯಾಲಯ, ಪಾಕಿಸ್ತಾನದಲ್ಲಿರುವ ತಕ್ಷಶಿಲಾ ವಿಶ್ವವಿದ್ಯಾಲಯವು ಜಗತ್ತೇ ನಮ್ಮತ್ತ ನೋಡುವಂತೆಮಾಡಿದ್ದವು. ಈ ವಿಶ್ವವಿದ್ಯಾಲಯಗಳು ಇರುವ ದೇಶಗಳಿಂದ ಬಂದ ಇಬ್ಬರು ಸಾಧಕರು ‘ಡಿಯರ್ ಕ್ಲಾಸ್...’ ಅನ್ನು ಉದ್ದೇಶಿಸಿ ಭಾಷಣ ಮಾಡಿರುವುದು ನಮಗೆ ಹೆಮ್ಮೆಯ ವಿಚಾರ.

ADVERTISEMENT

ಎಲ್ಲ ತಂತ್ರಜ್ಞರೂ ಸೇರಬಯಸುವ ಗೂಗಲ್ ಕಂಪನಿಯ ಸಿಇಒ ಆಗಿರುವ ಭಾರತದ ಸುಂದರ್ ಪಿಚೈ ಮೊದಲನೆಯವರಾದರೆ, ಪಾಕಿಸ್ತಾನದಲ್ಲಿ ತಾಲಿಬಾನೀಯರಿಂದ ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗುತ್ತಿರುವುದರ ವಿರುದ್ಧ ಧ್ವನಿ ಎತ್ತಿ, ಗುಂಡೇಟು ತಿಂದು, ಅದರಿಂದ ತನ್ನ ನಿಲುವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿರುವ ವಿಶ್ವದ ಕಿರಿಯ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಝೈ ಮತ್ತೊಬ್ಬರು.

ಯುವಜನ ‘ತೆರೆದ ಮನಸ್ಸು’ ಹೊಂದುವುದು ಅವರ ಬೆಳವಣಿಗೆಗೆ ಅವಶ್ಯ ಎಂಬ ಸಂದೇಶವನ್ನು ಪಿಚೈ ರವಾನಿಸಿದ್ದಾರೆ. ಧ್ಯೇಯ ಅಚಲವಾಗಿದ್ದರೆ ಇನ್ನಷ್ಟು ಪಿಚೈಗಳು ಆರ್ಥಿಕವಾಗಿ ಸದೃಢವಲ್ಲದ ಕುಟುಂಬಗಳಿಂದಲೂ ಉದಯಿಸಲು ಸಾಧ್ಯ ಎಂಬುದಕ್ಕೆ ತಮ್ಮನ್ನೇ ಉದಾಹರಣೆಯಾಗಿ ಕೊಟ್ಟಿ ದ್ದಾರೆ. ಅಭಿವೃದ್ಧಿಶೀಲ ದೇಶಗಳಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಕೋವಿಡ್‍ ಹೇಗೆ ಅಡ್ಡಿಯಾಗುತ್ತಿದೆ ಎಂದು ಮಲಾಲಾ ವಿಶ್ಲೇಷಿಸಿದ್ದಾರೆ.

ಇನ್ನು, ಅಮೆರಿಕದಲ್ಲಿನ ಸ್ಥಳೀಯ ಸಾಧಕರು ನವ ಪದವೀಧರರಿಗೆ ನೀಡಿರುವ ಸಂದೇಶವು ಸುಶಿಕ್ಷಿತ ವರ್ಗದಿಂದ ಕಾಣಬಯಸುವ ಬದಲಾವಣೆಗಳ ದಿಕ್ಸೂಚಿಯಂತಿದೆ. ಹಾಡುಗಾರ್ತಿ ಲೇಡಿ ಗಾಗ ನೀಡಿರುವ ಸಂದೇಶವು ಜನಾಂಗೀಯ ದ್ವೇಷದ ದಳ್ಳುರಿಗೆ ಸಿಲುಕಿರುವ ಅಮೆರಿಕದ ಯುವಜನರನ್ನು ಚಿಂತನೆಗೆ ಹಚ್ಚುವಂತಿದೆ. ಜನ್ಮದಿಂದ ಶ್ವೇತವರ್ಣೀಯೆ ಆಗಿರುವ ಆಕೆ ‘ಅಮೆರಿಕ ಆಗಲೀ ಇತರ ದೇಶವೇ ಆಗಲೀ ಇದುವರೆಗೂ ದಟ್ಟವಾದ ಮಾನವ ಜನಾಂಗದ ಅಡವಿಯನ್ನು ಸಮೃದ್ಧಿಯಾಗಿ ಬೆಳೆಸಿವೆ ನಿಜ. ಆದರೆ, ಈ ಅಡವಿಯ ಪ್ರತೀ ಮರ-ಗಿಡದಲ್ಲಿ ಬೇರಿನಿಂದ ಚಿಗುರಿನವರೆಗೂ ವರ್ಣಭೇದ, ಜನಾಂಗೀಯ ಭೇದದ ರಸವನ್ನು ತುಂಬಿಸಿ ಪೋಷಿಸಲಾಗಿದೆ. ಇದು ನಮ್ಮ ಹಿರಿಯರು ಮಾಡಿರುವ ತಪ್ಪು. ಯುವ ಪದವೀಧರರು ಆ ಕಾಡನ್ನು ನಾಶ ಮಾಡಿ, ಪರಸ್ಪರ ನಂಬಿಕೆ– ವಿಶ್ವಾಸದ ರಸವನ್ನು ಉಣಿಸಿ, ಹೊಸ ಅಡವಿಯನ್ನು ಬೆಳೆಸಿ ಪೋಷಿಸಬೇಕು’ ಎಂದಿದ್ದಾರೆ.

ಗಾಯಕಿ ಹಾಗೂ ಮಹಿಳಾ ಉದ್ಯಮಿ ಬಿಯೋನ್ಸ್, ಗ್ರ್ಯಾಮಿ ಪ್ರಶಸ್ತಿಗಾಗಿ ನಡೆಸಿದ ಪ್ರಯತ್ನದಲ್ಲಿ ತಮಗೆ 46 ಬಾರಿ ಉಂಟಾದ ಸೋಲು, 24 ಬಾರಿ ಸಿಕ್ಕ ಗೆಲುವಿಗಿಂತಲೂ ಹೆಚ್ಚಿನ ಪಾಠ ಕಲಿಸಿದೆ ಎಂದಿದ್ದಾರೆ.

‘ಸಮುದಾಯ ಪ್ರಜ್ಞೆ ಬೆಳೆಸಿಕೊಳ್ಳಿ. ನಾವು ಮಾತ್ರ ಕಷ್ಟದಿಂದ ಆಚೆ ಬಂದರೆ ಸಾಕು ಎಂಬ ಮನೋಭಾವಕ್ಕಿಂತ, ಎಲ್ಲರ ಒಳಿತಿಗಾಗಿ ಚಿಂತಿಸಿ’ ಎಂಬ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರ ಮಾತು, ಎಲ್ಲಾ ಯುವಸಾಧಕರ ಸಂದೇಶಗಳಿಗೆ ಕಳಶಪ್ರಾಯದಂತಿದೆ.

ಎಲ್ಲಕ್ಕಿಂತ ಮಿಗಿಲಾಗಿ ಎಲ್ಲ ಸಾಧಕರೂ ಒಕ್ಕೊರಲಿನಿಂದ ಹೇಳಿರುವುದು, ಶಿಕ್ಷಣವು ನಮ್ಮ ಜೀವನಶೈಲಿಯನ್ನು, ನಾವು ಜಗತ್ತನ್ನು ನೋಡುವ ದೃಷ್ಟಿಕೋನವನ್ನು, ಸಮಸ್ಯೆಗಳನ್ನು ಎದುರಿಸುವ ರೀತಿಯನ್ನು ಮತ್ತು ಇತರರ ಕಷ್ಟಗಳಿಗೆ ಸ್ಪಂದಿಸುವ ಬಗೆಯನ್ನು ತಿದ್ದಿ ತೀಡುತ್ತದೆ ಎಂದು. ಆದ್ದರಿಂದ ಹಣ ಗಳಿಸುವುದೊಂದೇ ಇಂದಿನ ವ್ಯಾಪಾರೀಕರಣಗೊಂಡ ಸಮಾಜದಲ್ಲಿ ಯಶಸ್ಸಿನ ಹೆಗ್ಗುರುತು ಎಂಬ ತಪ್ಪು ಕಲ್ಪನೆಯಿಂದ ನಾವು ಹೊರಬರಬೇಕಿದೆ. ಇಂದಿನ ಶಿಕ್ಷಣದಲ್ಲಿರುವ ಇತಿಮಿತಿಗಳ ನಡುವೆಯೂ ಒಬ್ಬ ಶಿಕ್ಷಿತ ವ್ಯಕ್ತಿಯು ಪ್ರಪಂಚದ ಸವಾಲುಗಳನ್ನು ಎದುರಿಸುವುದರಲ್ಲಿ ಶಿಕ್ಷಣ ವಂಚಿತನಿಗಿಂತ ಹೆಚ್ಚು ಸನ್ನದ್ಧನಾಗಿರುತ್ತಾನೆ ಎಂಬುದನ್ನು ಮನಗಾಣಬೇಕಿದೆ. ಪದವೀಧರನಿಗಿಂತ ಅನಕ್ಷರಸ್ಥ ಹೆಚ್ಚು ಗಳಿಸುತ್ತಾನೆ ಎಂಬ ಸಿನಿಕವಾದವನ್ನು ಬದಿಗಿಟ್ಟು, ಮುಂದಿನ ಜನಾಂಗ ಇನ್ನಷ್ಟು ಶಿಕ್ಷಿತವಾಗಲಿ ಎಂದು ಆಶಿಸೋಣ. ಶಿಕ್ಷಣದಿಂದ ಗೌರವ ಸಿಗುತ್ತದೆ ಎಂಬ ಮಾತು ಎಂದೆಂದಿಗೂ ಪ್ರಸ್ತುತ ಎಂಬುದನ್ನು ಅರಿಯೋಣ.

ಲೇಖಕ: ಪ್ರಾಧ್ಯಾಪಕ, ಮಾಹಿತಿ ತಂತ್ರಜ್ಞಾನ ವಿಭಾಗ ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.