ಕೊರೊನಾ ಹೊಡೆತಕ್ಕೆ ಬದುಕೇ ದಿಗ್ಬಂಧನಕ್ಕೆ ಒಳಗಾಗಿ ಲೋಕವೇ ಬಾವಿಯಂತಾಗಿದೆ. ಜನರೆಲ್ಲ ಕಪ್ಪೆಗಳಂತಾಗಿ ವಟಗುಟ್ಟುತ್ತಿದ್ದಾರೆ.
ಶಾಲೆ– ಕಾಲೇಜು, ಓದು– ಬರಹವನ್ನು ಮರೆತ ಮಕ್ಕಳು, ನೌಕರಿ- ಪೀಕರಿ (ಸಂಬಳ-ಗಿಂಬಳ) ಇಲ್ಲದ ಗಂಡಸರು, ಚಾಕರಿ ಮಾಡುವ ಗೃಹಿಣಿಯರು, ಮಾಡಿಸಿಕೊಳ್ಳುವ ಯಜಮಾನತಿಯರು ಎಲ್ಲರೂ ‘ಫೇಕ್ ಬುಕ್’ ಓದುತ್ತ, ‘ಹೇಟ್ಸ್ ಆ್ಯಪ್’ ಬ್ರಹ್ಮಜ್ಞಾನದಲ್ಲಿ ಮೂರು ಹೊತ್ತೂ ಮೊಬೈಲ್ ತಿಕ್ಕುತ್ತಿದ್ದಾರೆ.
ಲೋಕಸಂಚಾರ, ಊರಉಸಾಬರಿ ಮಾಡುತ್ತಿದ್ದ ‘ತೀರ್ಥಂಕರರು’ ಲಾಕ್‌ಡೌನ್‌ನಿಂದಾಗಿ ಎಣ್ಣೆ ಇಲ್ಲದೆ ಖಿನ್ನತೆಗೆ ಒಳಗಾಗಿ ಒದ್ದಾಡುತ್ತಿರಬೇಕಾದರೆ, ‘ನಮ್ಮ ಕಾಲದಾಗ ಹಂಗಿತ್ತು... ಈ ಕಾಲ ಹಿಂಗಾತು…’ ಎಂದು ಗೊಣಗುತ್ತ ಅಜ್ಜ ತರಕಾರಿ, ಹಣ್ಣಿನ ಚೀಲ ಕೈಯಲ್ಲಿ ಹಿಡಿದುಕೊಂಡು ಒಳಗೆ ಬಂದ.
ಮೊಬೈಲ್ ಲೋಕಜ್ಞಾನಿ ಮೊಮ್ಮಗ ಥಟ್ಟನೆ ಎದ್ದುಬಂದು ಅಜ್ಜನನ್ನು ಅಡ್ಡಗಟ್ಟಿ, ‘ಯಜ್ಜಾ, ಈ ತರಕಾರಿ, ಹಣ್ಣು ಆ ನಿನ್ನ ಗೆಳೆಯನ ಅಂಗಡಿಯಿಂದ ತಂದ್ಯಾ? ಹಣ್ಣು, ತರಕಾರಿ ಮ್ಯಾಲೆ ಆ ಜನ ಉಗುಳಿ ಕೊರೊನಾ
ಹಬ್ಬಿಸ್ತಿದ್ದಾರಂತೆ. ನೋಡಿಲ್ವೇನು, ‘ಹೇಟ್ಸ್ ಆ್ಯಪ್’ನ್ಯಾಗೆ ಬಂದೈತೆ. ಮೊದಲು ಅವುಗಳನ್ನ ಹೊರಗೆ ಚೆಲ್ಲು’ ಎಂದು ಅಜ್ಜನ ಮುಂದೆ ತನ್ನ ಮೊಬೈಲ್‌ಗೆ ಬಂದಿದ್ದ ಸಂದೇಶ ತೋರಿಸಿದ. ‘ಕೊರೊನಾ... ಹಂಗಂದ್ರೆ ಏನೋ?’ ಎಂದು ಅಜ್ಜ ಕೇಳಿದ. ‘ಚೈನಾದ ಭಯಾನಕ ವೈರಸ್. ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದು ಬಂದರೆ ಸತ್ತೇ ಹೋಗ್ತಾರೆ’ ಎಂದು ಅಜ್ಜನಿಗೆ ಮೊಮ್ಮಗ ಸಾವಿನ ಬೆದರಿಕೆ ಹಾಕಿದ.
ಅಜ್ಜ ನಗುತ್ತ ‘ನಿನ್ನ ಕೈಯಲ್ಲಿ ಇದೆಯಲ್ಲ ಚೈನಾ ಮೇಡ್ ಮೊಬೈಲ್, ಅದು ಕೊರೊನಾ ವೈರಸ್‌ಗಿಂತ ಭಯಾನಕ ವೈರಸ್. ಅದನ್ನು ಹಿಡಿದವರು ಜೀವನಪೂರ್ತಿ ನರಸತ್ತವರಂತೆ ಆಗ್ತಾರೆ. ಮೊದಲು ಅದನ್ನ ಬಿಸಾಕು. ತರಕಾರಿಯಾದರೂ ತೊಳೆದು ತಿನ್ನಬಹುದು. ಆದರೆ ಸಂಶಯ ಮೆಟ್ಟಿಕೊಂಡ ಮನಸ್ಸನ್ನು ತೊಳೆಯಲಾಗದು’ ಎನ್ನುತ್ತ ಮೊಮ್ಮಗನನ್ನು ತಳ್ಳಿಕೊಂಡು ಅಜ್ಜ ಒಳಗೆ ಹೋದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.