ಕಾಡಂಚಿನ ಮಲೆನಾಡಿನಲ್ಲಿ ಮತ್ತೊಂದು ದುರಂತ ಘಟಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಇನ್ನೂ ಹದಿನೆಂಟರ ಹರೆಯದ ಯುವತಿಯೊಬ್ಬಳು ಮಂಗನ ಕಾಯಿಲೆಗೆ ತುತ್ತಾಗುವ ಮೂಲಕ ಈ ವರ್ಷದ ‘ಬಲಿ ಖಾತೆ’ ತೆರೆದುಕೊಂಡಿದೆ. ಏಳು ದಶಕಗಳ ಹಿಂದೆಯೇ ಪತ್ತೆ ಹಚ್ಚಲಾದ ರೋಗವೊಂದು ಇಂದೂ ಸಾವು, ನೋವು ತರುತ್ತಿರುವುದು ನಮ್ಮ ವ್ಯವಸ್ಥೆಯ ಲೋಪಗಳನ್ನು ಎತ್ತಿ ತೋರುತ್ತಾ ತಲೆ ತಗ್ಗಿಸುವಂತೆ ಮಾಡಿದೆ!
ಹೌದು, ಬಿಸಿಲ ಝಳ ಏರುತ್ತಿರುವಂತೆಯೇ ಮಂಗನ ಕಾಯಿಲೆ ಸೋಂಕಿತರ ಸಂಖ್ಯೆಯೂ ನಿಧಾನವಾಗಿ ಹೆಚ್ಚುತ್ತಿದೆ. ಪ್ರತಿವರ್ಷವೂ ಚಳಿಗಾಲ, ಬೇಸಿಗೆಯಲ್ಲಿ ಮಲೆನಾಡಿನ ಒಂದಲ್ಲ ಒಂದು ಭಾಗದಲ್ಲಿ ಇದೇ ಕಣ್ಣೀರ ಕತೆ. ಪಶ್ಚಿಮಘಟ್ಟದ ಸೆರಗಿನ ಕೆಲವೆಡೆ ಧುತ್ತೆಂದು ಈ ರೋಗ ಅವತರಿಸುತ್ತದೆ. ಅದು ಎಲ್ಲಿ ಬರಬಹುದು, ಅಲ್ಲಿ ಯಾಕೆ, ಹೇಗೆ ಬಂತು ಎಂದೆಲ್ಲಾ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಏಕಾಏಕಿ ಕಾಣಿಸಿಕೊಳ್ಳುವುದೇ ಈ ಕಾಯಿಲೆಯ ವಿಶೇಷ.
50ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬದ ಕ್ಯಾಸನೂರು ಕಾಡಿನಲ್ಲಿ ಕಂಡುಬಂದ ಈ ಕಾಯಿಲೆಯ ಅಧಿಕೃತ ಹೆಸರು ಕ್ಯಾಸನೂರು ಫಾರೆಸ್ಟ್ ಡಿಸೀಸ್. ಸೋಂಕಿತ ಮಂಗನ ರಕ್ತ ಹೀರುವ ಉಣ್ಣೆ (ಇಣಗು) ಮಾನವನಿಗೆ ವೈರಾಣುಗಳನ್ನು ದಾಟಿಸುತ್ತದೆ ಎಂಬುದಷ್ಟೇ ನಮ್ಮ ಸದ್ಯದ ಜ್ಞಾನ. ಮಂಗನ ಕಾಯಿಲೆಗೆ ಇಲ್ಲಿಯವರೆಗೆ ಸಾವಿರಾರು ಜನ ಬಲಿಯಾಗಿದ್ದಾರೆ. ಎಲ್ಲರೂ ಕಾಡಿನ ಸನಿಹದಲ್ಲಿ ವಾಸಿಸುವ ರೈತರು, ಕೃಷಿಕಾರ್ಮಿಕರು, ಮತ್ತವರ ಮಕ್ಕಳೇ.
ಮಳೆ ಕೊರತೆಯ ಪರಿಣಾಮವಾಗಿ ಉಣ್ಣೆಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಇದರಿಂದ ಮಂಗನ ಕಾಯಿಲೆ ಪೀಡಿತರ ಸಂಖ್ಯೆಯೂ ಏರಬಹುದು ಎಂಬ ಭೀತಿಯಿದೆ. ಇತ್ತ ರೋಗ ತಡೆಗಟ್ಟಲು ಲಸಿಕೆಯೂ ಲಭ್ಯವಿಲ್ಲ. ವೈರಲ್ ಕಾಯಿಲೆಯಾದ್ದರಿಂದ ನಿರ್ದಿಷ್ಟ ಚಿಕಿತ್ಸೆಯೂ ಇಲ್ಲ. ಇಂತಹ ಪ್ರತಿಕೂಲ ಅಂಶಗಳು ಬಾಧಿತ ಪ್ರದೇಶದ ಜನರ ನಿದ್ದೆಗೆಡಿಸಿ ತೀವ್ರ ಆತಂಕಕ್ಕೆ ದೂಡಿವೆ.
ಮಂಗನ ಕಾಯಿಲೆಯ ಲಸಿಕೆ ಉತ್ಪಾದನೆ ಹೋದ ವರ್ಷದಿಂದ ಸ್ಥಗಿತಗೊಂಡಿದೆ. ರಾಷ್ಟ್ರೀಯ ವೈರಾಣು ಸಂಸ್ಥೆಯಿಂದ ಎಂಬತ್ತರ ದಶಕದಲ್ಲಿ ಕಂಡುಹಿಡಿದ ಲಸಿಕೆಯೇ ಇಲ್ಲಿಯವರೆಗೂ ಬಳಕೆಯಲ್ಲಿತ್ತು. ಕಾಲಕಾಲಕ್ಕೆ ಮಾರ್ಪಾಡುಗಳಿಗೆ ಒಳಗಾಗುವುದು ರೋಗಾಣುಗಳ ಸಹಜ ಪ್ರಕ್ರಿಯೆ. ಈ ಮ್ಯುಟೇಶನ್ ಕಾರಣದಿಂದ ಅವುಗಳ ರೂಪದಲ್ಲಿ ಅತಿಸೂಕ್ಷ್ಮ ಬದಲಾವಣೆಗಳಾಗುತ್ತವೆ. ಹೀಗಾದಾಗ ಮೂಲ ಲಸಿಕೆ ಹೆಚ್ಚು ಪರಿಣಾಮಕಾರಿಯಾಗದು. ರೂಪಾಂತರಿಯ ಅಂಶವನ್ನು ಸೇರಿಸಿ ಚುಚ್ಚುಮದ್ದನ್ನು ಮೇಲ್ದರ್ಜೆಗೆ ಏರಿಸುವುದು ಅನಿವಾರ್ಯ. ಮಂಗನ ಕಾಯಿಲೆಯಲ್ಲಿ ಲಸಿಕೆಯನ್ನು ನವೀಕರಿಸುವ ಪ್ರಯತ್ನಗಳಾಗಲೀ ಸಂಶೋಧನೆಗಳಾಗಲೀ ಆಗಲೇ ಇಲ್ಲ! ಪರಿಣಾಮ ಮತ್ತು ಸುರಕ್ಷತೆಯಲ್ಲಿ ಅಧಿಕೃತ ಮಾನದಂಡಗಳನ್ನು ಪೂರೈಸದ ಕಾರಣ ಉತ್ಪಾದನೆಯನ್ನು ಈಗ ಸ್ಥಗಿತಗೊಳಿಸಲಾಗಿದೆ.
ಹೆಚ್ಚು ಪರಿಣಾಮಕಾರಿಯಾದ ಲಸಿಕೆಯನ್ನು ಅಭಿವೃದ್ಧಿಪಡಿಸಲು ದೊಡ್ಡ ಮೊತ್ತದ ಹಣ ಬೇಕು. ಮಂಗನ ಕಾಯಿಲೆ ಎಂಬುದು ಸೀಮಿತ ಪ್ರದೇಶದಲ್ಲಿ, ಅದರಲ್ಲೂ ವರ್ಷದ ನಿರ್ದಿಷ್ಟ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುವುದರಿಂದ ದೊಡ್ಡ ಪ್ರಮಾಣದಲ್ಲಿ ಲಸಿಕೆ ಬೇಕಿಲ್ಲ. ವ್ಯಾವಹಾರಿಕವಾಗಿ ಲಾಭ ತರದ ಈ ಕಾರ್ಯಕ್ಕೆ ಬಂಡವಾಳ ಸುರಿಯಲು ಖಾಸಗಿಯವರು ಮುಂದೆ ಬರುತ್ತಿಲ್ಲ. ಹಾಗಾಗಿಯೇ ಪರಿಣಾಮಕಾರಿ ಲಸಿಕೆ ಬೇಕೆಂಬ ಬೇಡಿಕೆ ನನೆಗುದಿಗೆ ಬಿದ್ದಿರುವುದು. ಈ ದಿಸೆಯಲ್ಲಿ ಸಂಶೋಧನೆ, ಅಭಿವೃದ್ಧಿಗಾಗಿ ಅನುದಾನ ಒದಗಿಸಿ ತನ್ನ ಅಧೀನ ಸಂಸ್ಥೆಗಳಿಂದ ಲಸಿಕೆ ಉತ್ಪಾದಿಸಿ, ಅಮಾಯಕರ ಜೀವ ಕಾಪಾಡುವ ಹೊಣೆ ಸರ್ಕಾರದ್ದೇ ಆಗಿದೆ.
ಹಿಂದೇನೋ ಸರಿ, ಮಾನವರಲ್ಲಿ ಕಾಯಿಲೆ ಕಾಣಿಸಿಕೊಂಡಿದ್ದಕ್ಕೂ ದೊಡ್ಡ ಸಂಖ್ಯೆಯ ಮಂಗಗಳ ಸಾವಿಗೂ ಸಂಬಂಧವಿತ್ತು. ನಮ್ಮ ಸದ್ಯದ ಅರಿವಿನ೦ತೆ, ಅಕಸ್ಮಾತ್ ಒಂದು ಮಂಗಕ್ಕೆ ರೋಗ ಬಂದರೆ ಉಳಿದೆಲ್ಲವಕ್ಕೂ ವೇಗವಾಗಿ ಹರಡಿ ಅವು ಗುಂಪು ಗುಂಪಾಗಿ ಸಾಯಬೇಕು. ಆದರೆ ಮಾನವರಲ್ಲಿ ಸೋಂಕು ಕಾಣಿಸಿಕೊಂಡ ಜಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಂಗಗಳು ಸತ್ತಿರುವುದು ಕಂಡುಬಂದಿಲ್ಲ. ಇನ್ನು ಸತ್ತ ಮಂಗಗಳ ದೇಹದಿಂದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ವೈರಸ್ ಪತ್ತೆಯಾಗಿರುವುದು ಬೆರಳೆಣಿಕೆಯ ಪ್ರಕರಣಗಳಲ್ಲಷ್ಟೆ. ಹಾಗಾಗಿ, ಮಂಗನ ಕಾಯಿಲೆಯಲ್ಲಿ ಮಂಗಗಳ ಪಾತ್ರವೇ ಅನುಮಾನಾಸ್ಪದ. ವೈರಾಣುಗಳು ತಮ್ಮ ಪ್ರಸಾರಕ್ಕೆ ಬೇರೆ ಪಶು, ಪಕ್ಷಿಗಳನ್ನು ಆಶ್ರಯಿಸಿರಬಹುದು. ಅದು ಅಳಿಲು, ಇಲಿ, ಹೆಗ್ಗಣ, ಹಕ್ಕಿಗಳಂತಹ ಜೀವಿಗಳಾಗಿರಬಹುದು. ಉಣ್ಣೆಗಳ ಜೊತೆಗೆ ಕಾಡಿನ ಕೆಲವು ಕೀಟಗಳೂ ರೋಗಾಣುಗಳನ್ನು ದಾಟಿಸುತ್ತಿರುವ ಸಾಧ್ಯತೆಗಳಿವೆ.
ಬಾಧಿತ ಸ್ಥಳಗಳಲ್ಲಿ ಮಣ್ಣು, ನೀರು, ಜೀವಿಗಳು ಸೇರಿದಂತೆ ಎಲ್ಲ ಆಯಾಮದಲ್ಲೂ ಸಮಗ್ರ ತನಿಖೆಯ ಅಗತ್ಯವಿದೆ. ಇದಕ್ಕೆ ಬೇಕಿರುವುದು ಅಗತ್ಯ ಸೌಕರ್ಯ ಹೊಂದಿರುವ ಸಂಶೋಧನಾ ಕೇಂದ್ರ. ‘ಏಕ ಸ್ವಾಸ್ಥ್ಯ’ ಉಪಕ್ರಮದಡಿ ಪರಿಣತರ ತಂಡ ರಚಿಸಿ ವ್ಯಾಪಕ ಅಧ್ಯಯನ ಕೈಗೊಂಡಾಗ ಮಾತ್ರ ಮಂಗನ ಕಾಯಿಲೆಯ ನಿಗೂಢ ಬಯಲಾಗಬಹುದು. ಪ್ರಕರಣಗಳು ಕಾಣಿಸಿಕೊಂಡಾಗಲೆಲ್ಲಾ ಮಂಗ, ಉಣ್ಣೆಗಳ ಸುತ್ತವೇ ಸುತ್ತುವುದನ್ನು ಬಿಟ್ಟು ಬೇರೆ ಸಾಧ್ಯತೆಗಳತ್ತ ಹೊರಳಲು ಅಗತ್ಯವಾಗಿ ಬೇಕಿರುವುದು ಸಮರ್ಪಕ ಮಾಹಿತಿ.
ಹಲವು ದಶಕಗಳಿಂದ ನಿಗೂಢವಾಗಿರುವ ಮಂಗನ ಕಾಯಿಲೆಯನ್ನು ಮಣಿಸಲು ಪ್ರಬಲ ಇಚ್ಛಾಶಕ್ತಿ ಬೇಕಿದೆ. ಇಲ್ಲದಿದ್ದರೆ ಪ್ರತಿವರ್ಷವೂ ಜೀವಹಾನಿ, ವೈದ್ಯಕೀಯ ವೆಚ್ಚ, ಜಾಗೃತಿ, ನಿಯಂತ್ರಣ ಎಂದೆಲ್ಲಾ ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳು ವ್ಯಯವಾಗುತ್ತಲೇ ಇರುತ್ತವೆ.
ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ ಸರ್ಕಾರಿ ಪಶುಆಸ್ಪತ್ರೆ, ತೀರ್ಥಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.