ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲೊಬ್ಬರು ಇತ್ತೀಚೆಗೆ ತಮ್ಮ ಕನ್ನಡ ಉಪನ್ಯಾಸದಲ್ಲಿ ಎಂಜಾಯ್ ಮಾಡುವುದು, ಎನ್‌ಕ್ವಯರಿ ನಡೆಸುವುದು ಎಂದಾಗ, ಅದರಿಂದ ಕನ್ನಡ ಕೆಡುತ್ತಿದೆ ಎಂದೇನೂ ನನಗನಿಸಲಿಲ್ಲ. ಕಾರಣ, ಕನ್ನಡದಲ್ಲಿ ಈ ಶಬ್ದಗಳಿಗೆ ಪಾರಿಭಾಷಿಕ ಶಬ್ದಗಳಿಲ್ಲ. ಇಂಗ್ಲಿಷ್ ಪದಗಳನ್ನು ಬೇಕಾಬಿಟ್ಟಿಯಾಗಿ ಬಳಸುವ ಹಾಗೆ ಅಥವಾ ಶುದ್ಧ ಕನ್ನಡ ಶಬ್ದಗಳು ಬಳಕೆಯಲ್ಲಿದ್ದೂ ಸೊ, ಬಟ್, ಸನ್ನು, ಡಾಟರು, ಫಾದರು, ಮದರು, ಥಿಂಕ್ ಮಾಡು, ಯೂಸು ಮಾಡು ಇತ್ಯಾದಿ ಶಬ್ದಗಳನ್ನು ಬಳಸುವ ಹಾಗೆ ಇದು ಅಲ್ಲ.
ಕಾರು, ರೈಲು, ಸೋಪು ಮುಂತಾದ ಕೆಲವು ಸಾವಿರ ಇಂಗ್ಲಿಷ್ ಶಬ್ದಗಳು ಕನ್ನಡವನ್ನು ಪ್ರವೇಶಿಸಿ ಕನ್ನಡ ಶಬ್ದಗಳೇ ಆಗಿವೆ. ಇತರ ಎಲ್ಲಾ ಭಾಷೆಗಳಲ್ಲಿಯೂ ಹೀಗಾಗಿದೆ. ಇಂಗ್ಲಿಷ್ ಶಬ್ದಗಳ ಸೇರಿಕೆಯಿಂದಾಗಿ ಕನ್ನಡ ಖಂಡಿತವಾಗಿಯೂ ಬೆಳೆದಿದೆ. ಟೀವಿ, ರೇಡಿಯೊ ಮುಂತಾದ ಸಾವಿರಾರು ಶಬ್ದಗಳು ಇಡೀ ಜಗತ್ತಿನಲ್ಲಿ ಬಳಕೆಯಲ್ಲಿರುವ ಶಬ್ದಗಳೇ ಆಗಿವೆ. ಭಾಷಾ ಪಂಡಿತರು ಎಂಜಿನಿಯರ್ ಎಂಬ ಶಬ್ದಕ್ಕೆ ಅಭಿಯಂತರ, ಪೊಲೀಸು ಎಂಬ ಶಬ್ದಕ್ಕೆ ಆರಕ್ಷಕ ಇನ್ನಿತರ ಶಬ್ದಗಳನ್ನು ಸೃಷ್ಟಿಸಿ ಸುಮ್ಮನಾದಾಗಲೇ ಆ ಎಲ್ಲಾ ಶಬ್ದಗಳೂ
ಯಾರಿಗೂ ಬೇಕಿಲ್ಲದೆ ಸುಮ್ಮನಾಗಿವೆ. ಅವು ಬಳಕೆಗೆ ಬರಲೇ ಇಲ್ಲ.
ಅಷ್ಟು ದೀರ್ಘ ಕಾಲ ಭಾರತವನ್ನು ಆಳಿದ್ದರೂ ಕೇವಲ ಬೆರಳೆಣಿಕೆಯಷ್ಟು ಭಾರತೀಯ ಶಬ್ದಗಳು ಇಂಗ್ಲಿಷರ ನಾಲಿಗೆಯನ್ನು ಮುಟ್ಟಿವೆ. ಆದರೆ ಇಂಗ್ಲೆಂಡಿಗೆ ನೆಗೆಯಲಿಲ್ಲ. ಭಾರತದ ಎಲ್ಲಾ ಭಾಷೆಗಳಿಗೂ ಇಂಗ್ಲಿಷ್ ಭಾಷಾ ಶಬ್ದಗಳು ನುಸುಳಿದ್ದಲ್ಲದೆ, ಓದು ಬರಹವಿಲ್ಲದ ಜನರ ನಾಲಿಗೆಯಲ್ಲಿ ಸಹ ಈಗಲೂ ಇಂಗ್ಲಿಷ್ ಶಬ್ದಗಳು ಉರುಳಾಡುತ್ತಿರುತ್ತವೆ.
ಇಂಗ್ಲಿಷ್ ಬೆಳೆದದ್ದೇ ಫ್ರೆಂಚ್, ಲ್ಯಾಟಿನ್, ಗ್ರೀಕ್, ಇಟಾಲಿಯನ್ ಮುಂತಾದ ಭಾಷೆಯ ಶಬ್ದಗಳನ್ನು ತನ್ನದಾಗಿಸಿಕೊಂಡಾಗ. ಒಂದು ಭಾಷೆ ಬೆಳೆದು ಶ್ರೀಮಂತವಾಗುವುದು ಇತರ ಭಾಷೆಗಳ ನಿಕಟ ಸಂಪರ್ಕದ ಮೂಲಕ. ಆದ್ದರಿಂದ ಅನ್ಯ ಭಾಷೆಯ ಶಬ್ದಗಳು ಅದೇ ರೂಪದಲ್ಲಿ ಅಥವಾ ಕನ್ನಡೀಕರಣಗೊಂಡು, ಕನ್ನಡದ ಶಬ್ದ ಸಂಪತ್ತು ಹಿಗ್ಗಿದ್ದಕ್ಕೆ ನಾವು ಸಂತೋಷಪಡಬೇಕು. ಸಂಸ್ಕೃತ ಭಾಷೆಯ ಸಾವಿರಾರು ಶಬ್ದಗಳು ಕನ್ನಡ ಶಬ್ದಗಳಾಗಿವೆ. ಸಂಸ್ಕೃತ ಶಬ್ದಗಳನ್ನು ‘ಬಾಲ’ರಹಿತವಾಗಿ ಕನ್ನಡದಲ್ಲಿ ಬಳಸುವುದರಿಂದ ಕನ್ನಡಕ್ಕೆ ತೊಂದರೆಯಾಗುವುದಿಲ್ಲ.
ದಕ್ಷಿಣ ಕನ್ನಡದ ಮೂಲಕ ಮತ್ತು ಕನ್ನಡ ಕರಾವಳಿಯ ಮೂಲಕ ನೂರಾರು ಪರ್ಶಿಯನ್ ಮತ್ತು ಅರೇಬಿಕ್ ಶಬ್ದಗಳು ಕನ್ನಡ ಭಾಷೆಗೆ ಬಂದಿವೆ. ಅದೆಷ್ಟೋ ಹಿಂದಿ ಶಬ್ದಗಳು ಮೂಲದಲ್ಲಿರುವ ಹಾಗೆಯೇ ಅಥವಾ ಕನ್ನಡೀಕರಣಗೊಂಡು ಕನ್ನಡದಲ್ಲಿ ಬಳಕೆಯಲ್ಲಿವೆ. ಸಾವಿರಾರು ಶಬ್ದಗಳು ತಮಿಳು ಮತ್ತು ಕನ್ನಡದಲ್ಲಿ ಹೆಚ್ಚು ಕಡಿಮೆ ಒಂದೇ ರೂಪದಲ್ಲಿವೆ.
ಇತರ ಭಾಷೆಯ ಶಬ್ದಗಳನ್ನು ತಮ್ಮ ಭಾಷಾ ಶಬ್ದಗಳಾಗಿಸಿಕೊಳ್ಳುವುದರಲ್ಲಿ ತಮಿಳರು ನಿಸ್ಸೀಮರು. ಬಾಲವಿರುವ ಎಲ್ಲಾ ಸಂಸ್ಕೃತ ಶಬ್ದಗಳ ಬಾಲ ಕಿತ್ತು ಲಕ್ಷಾಂತರ ಸಂಸ್ಕೃತ ಶಬ್ದಗಳನ್ನು ತಮ್ಮ ಭಾಷಾಶಬ್ದಗಳಾಗಿಸಿಕೊಂಡು, ಮಹಾಪ್ರಾಣವನ್ನೆಲ್ಲ ಏಕಪ್ರಾಣವಾಗಿಸಿ ತಮಿಳನ್ನು ಬಹಳ ಸಲೀಸಾಗಿ ಮಾತಾಡಲಾಗುವ ಭಾಷೆಯಾಗಿಸಿಕೊಂಡರು.
ಕನ್ನಡ ಭಾಷೆಯದ್ದು ಇನ್ನೊಂದು ರೀತಿ. ತಮಿಳರು ಮಾಡಿದಂತೆ ನಾವು ಶಬ್ದಗಳ ರೂಪ ಬದಲಾಯಿಸಲಿಲ್ಲ. ಸಂಸ್ಕೃತ ಶಬ್ದಗಳ ಅಂದಗೆಡಿಸದೆ ಅವುಗಳ ಘನತೆ, ಗಾಂಭೀರ್ಯ ಮತ್ತು ಪ್ರಾಣಬಲವನ್ನು ಮೆಚ್ಚಿ ಕನ್ನಡದಲ್ಲಿಯೂ ಹಾಗೇ ಇರಿಸಿಕೊಂಡೆವು. ಇದರಿಂದಾಗಿ ಕನ್ನಡದ ಶ್ರೀಮಂತಿಕೆ ಕುಗ್ಗಲಿಲ್ಲ, ಹಿಗ್ಗಿತು. ಆದರೆ ಯಾಕೆ ಏನೆಂದಿಲ್ಲದೆ, ಶುದ್ಧ ಕನ್ನಡ ಶಬ್ದಗಳಿಗೆ ಮಹಾಪ್ರಾಣ(ಬಾಲ)ವನ್ನಂಟಿಸುವ ಕೆಲಸವನ್ನು ದೃಶ್ಯ ಮಾಧ್ಯಮಗಳು ಮಾಡುತ್ತಲೇ ಇವೆ. ಅವುಗಳು ಮಾಡುವ ಅಕ್ಷರದೋಷಗಳಿಗಂತೂ ಕೊನೆಯೇ ಇಲ್ಲ.
ಕನ್ನಡ ಭಾಷೆಗೆ ಇವತ್ತು ಏನೂ ಆಪತ್ತು ಉಂಟಾಗಿಲ್ಲ. ಆದರೆ ಕನ್ನಡ ಭಾಷೆ ಕುಬ್ಜತೆಗೀಡಾಗುವಂತೆ ತೋರುತ್ತದೆ. ಯಾಕೆಂದರೆ, ವಿದ್ಯಾವಂತರು ಮಾತ್ರವಲ್ಲ, ಶಾಲೆ ಕಾಲೇಜುಗಳ ಶಿಕ್ಷಕರು ಕೂಡ ತಮ್ಮ ಕನ್ನಡ ಭಾಷೆಯ ನಡುವೆ ಇಂಗ್ಲಿಷ್ ಬೆರೆಸಿ ಮಾತಾಡು
ವುದನ್ನು ರೂಢಿ ಮಾಡಿಕೊಂಡಿದ್ದಾರೆ. ಮೇಲು ಮಟ್ಟದ ವಿದ್ಯಾವಂತರಿಗಂತೂ ಇಂಗ್ಲಿಷಿನ ನೆರವಿಲ್ಲದೆ ಮಾತಾಡಲು, ಉಪನ್ಯಾಸ ಮಾಡಲು ಆಗುತ್ತಿಲ್ಲ.
ಭಾಷೆ ಬೆಳೆಯುವುದು ಬಳಕೆಯ ಮೂಲಕ. ಮುಖ್ಯವಾಗಿ ಮಾತಿನ ಮೂಲಕ. ಸ್ವಂತ ಭಾಷೆಯ ನಡುನಡುವೆ ಇಂಗ್ಲಿಷನ್ನು ಬಳಸುವುದರಿಂದ ಕನ್ನಡ ಬೆಳೆಯುವುದಿಲ್ಲ. ತಮ್ಮ ಭಾಷೆ ಇಂಗ್ಲಿಷೆಂಬಂತೆ ಕನ್ನಡವನ್ನು ಕೆಟ್ಟದಾಗಿ ಆಡುವವರಿಂದ ಕನ್ನಡಕ್ಕೆ ಕೇಡುಂಟಾಗಿದೆ.
ಭಾಷೆಗೆ ಸಾಹಿತ್ಯ ಬೇಕು, ಸಾಹಿತ್ಯಕ್ಕೆ ಭಾಷೆ ಬೇಕು. ಆದರೆ ಇವತ್ತು ಶಾಲೆ ಕಾಲೇಜಿನ ಮಕ್ಕಳು ಕನ್ನಡ ಓದುತ್ತಿಲ್ಲ. ಓದುವವರಿಲ್ಲದೆ ಸಾಹಿತ್ಯ ಹೇಗೆ ಜನಪ್ರಿಯವಾದೀತು? ಓದು ಇಲ್ಲದೆ ವಿದ್ಯಾರ್ಥಿಗಳ ಚಿಂತನಾಶಕ್ತಿ ಕುಂಠಿತವಾಗಿದೆ. ಬಹುರೂಪಿ ಮೊಬೈಲ್ ಮೋಹಿನಿಯಿಂದಾಗಿ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳ ಮಿದುಳು ವೈಚಾರಿಕವಾಗಿ, ಸೃಜನಶೀಲವಾಗಿ ಸತ್ವಹೀನವಾಗುತ್ತಲಿದೆ. ಹೀಗಾದರೆ ನಮಗೆ ಒಳ್ಳೆಯ ಲೇಖಕರು, ಪತ್ರಕರ್ತರು, ಆಡಳಿತಗಾರರು ಇಲ್ಲದಂತಾಗುತ್ತದೆ. ಹಣ ಮಾಡಲಿಕ್ಕೆಂದೇ ಓದಿದ ಅಧಿಕಾರಿಗಳ ಮತ್ತು ರಾಜಕಾರಣಿಗಳ ಭ್ರಷ್ಟ ಆಡಳಿತದಲ್ಲಿ ಈಗಲೇ ದರ್ಬಲವಾಗಿರುವ ಪ್ರಜಾಪ್ರಭುತ್ವ ಇನ್ನಷ್ಟು ದುರ್ಬಲವಾಗುತ್ತಾ ಹೋಗುತ್ತದೆ.
ಮಕ್ಕಳ ತಾಯಿ ತಂದೆ ಇಂಗ್ಲಿಷಿನ ಮೋಹ ಬಿಡಬೇಕು. ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ನೌಕರಿ ಗಿಟ್ಟಿಸಿದವರು, ಅನ್ಯದೇಶವಾಸಿಗಳಾಗುವವರು ಕೇವಲ ಹಣವನ್ನಷ್ಟೇ ಕಾಣಬಲ್ಲರು. ತಾವಾಗಿಯೇ ಸೃಷ್ಟಿಸಿಕೊಳ್ಳುವ ಅಂಧತ್ವಕ್ಕೆ ಅವಕಾಶ ಮಾಡಿಕೊಡದೆ ಅವರಿಗೆ ತಂತಮ್ಮ ಸ್ವಂತ ಭಾಷೆಯಲ್ಲಿ ಓದಿ ಬುದ್ಧಿವಂತರಾಗುವ ಮತ್ತು ಉತ್ತಮ ವ್ಯಕ್ತಿಗಳಾಗುವ ದಾರಿಯಲ್ಲಿ ಅವರನ್ನು ಪ್ರಜ್ಞಾವಂತರಾಗಿಸಿ, ಸಜ್ಜನರಾಗಿಸಿ ಸಚ್ಚಾರಿತ್ರ್ಯದ ದಾರಿಯಲ್ಲಿ ಮುನ್ನಡೆಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.