ADVERTISEMENT

ಸಂಗತ | ದಾರಿದ್ರ್ಯ ದೂರವಾಗಿಸುವ ಬಗೆ...

ಅನೇಕ ಸಮಸ್ಯೆಗಳ ಮೂಲವಾದ ಬಡತನದ ನಿರ್ಮೂಲನೆ ನಮ್ಮ ಕೈಯಲ್ಲೇ ಇದೆ

ಬಿ.ಎಸ್.ಭಗವಾನ್
Published 16 ಅಕ್ಟೋಬರ್ 2024, 21:59 IST
Last Updated 16 ಅಕ್ಟೋಬರ್ 2024, 21:59 IST
   

ಬೆಳಿಗ್ಗೆಯೇ ಮಳೆ ಜಡಿ ಹಿಡಿದಿತ್ತು. ಪೇಟೆ ಬೀದಿಯಲ್ಲಿ ಕೆಲವರು ಮಾತ್ರ ಕೊಡೆ ಹಿಡಿದು ಓಡಾಡುತ್ತಿದ್ದರು. ಕರವಸ್ತ್ರ ಸುರುಳಿ ಸುತ್ತಿ ತಲೆ ರಕ್ಷಿಸಿಕೊಳ್ಳುವ ಸಾಹಸವೂ ನಡೆದಿತ್ತು. ‘ರಿಪೇರಿ ಎಲ್ಲಿ ಸ್ವಾಮಿ, ಛತ್ರಿ ಇರೋದೆ ಮರೆಯೋಕೆ ಅನ್ನೋ ಹಾಗೆ ಮನೇಲಿಟ್ಟು ಬರ್ತಾರೆ’ ಅಂದ ಛತ್ರಿ ರಿಪೇರಿಯವನ ಮಾತು ನೆನಪಾಯಿತು. ಮಳೆ, ಬಿಸಿಲಿನಿಂದ ರಕ್ಷಣೆಗಾಗಿ ಇರುವ ಕೊಡೆಯನ್ನು ಅಲಕ್ಷಿಸಿದರೆ ಆಗುವುದೇನು? ಅತ್ತ ಕೊಡೆಯ ಉತ್ಪಾದನೆಗೂ ಇತ್ತ ಅಷ್ಟಿಷ್ಟು ಕಾಸಿಗೆ ದಾರಿಯಾಗುವ ಅದರ ದುರಸ್ತಿಗೂ ಧಕ್ಕೆ. ಬೆಳೆ, ಸಾಮಗ್ರಿ, ಸರಂಜಾಮು ವಗೈರೆ ಸಮರ್ಥವಾಗಿ ಬಳಸದಿದ್ದರೆ ಉದ್ಯೋಗ ಜಾಲ ಹೇಗೆ ಕುಂಠಿತವಾಗಬಹುದು ಎನ್ನಲು ಇದೊಂದು ನಿದರ್ಶನವಷ್ಟೆ.

ದುಡಿಮೆಯ ಅವಕಾಶಗಳ ಅಭಾವದ ಪರಿಣಾಮವಾಗಿಯೇ ಬಡತನ, ಅಸಹಾಯಕತೆ. ಬಡತನ ಬೇಡುವುದು ಭಿಕ್ಷೆ ಅಥವಾ ವಂತಿಗೆಯನ್ನಲ್ಲ, ನೌಕರಿ, ತರಬೇತಿಯನ್ನು. ‘ಬಡತನ ಸ್ವಾಭಾವಿಕವಲ್ಲ, ಅದು ಮನುಷ್ಯಕೃತ’ ಎಂದರು ನೆಲ್ಸನ್‌ ಮಂಡೇಲ. ಕಾಸಿಲ್ಲದೇ ಇರಬಹುದು, ಆದರೆ ಜ್ಞಾನ ಮತ್ತು ಕೌಶಲಕ್ಕೆ ಎಂಥ ಬರ? ಪ್ರತಿಭೆ ಯಾರೇ ಅರ್ಜಿಸಬಹುದಾದಷ್ಟು ಸುಂದರ. ಅದನ್ನು ನಗದಾಗಿಸಿಕೊಳ್ಳಬಹುದು, ವಿನಿಮಯ ಮಾಡಿಕೊಳ್ಳಬಹುದು. ನಿರ್ಗತಿಯನ್ನೇ ಸ್ಫೂರ್ತಿಆಗಿಸಿಕೊಂಡು ಆಯಾ ಕ್ಷೇತ್ರಗಳಲ್ಲಿ ಮಹಾಸಾಧನೆ ಮಾಡಿದವರು ನ್ಯೂಟನ್‌, ಶ್ರೀನಿವಾಸ ರಾಮಾನುಜನ್‌, ಲಾಲ್‌ ಬಹದ್ದೂರ್‌ ಶಾಸ್ತ್ರಿ... ಅಂಗವೈಕಲ್ಯಕ್ಕೆ ಅಂಜದೆ ದುಡಿಮೆನಿರತರಾಗುವ ಸ್ವಾಭಿಮಾನಿಗಳಿಗೆ ಲೆಕ್ಕವಿಲ್ಲ. ಮಹಾತ್ಮ ಗಾಂಧಿ ‘ದುಡಿದೇ ಸಂಪತ್ತನ್ನು ಅರ್ಜಿಸಬೇಕು’ ಎಂದರು.

ಹಿಡಿದ ಉದ್ಯೋಗವನ್ನು ಮಡಿಲ ಮಗು ಎಂದುಕೊಂಡು ಕರ್ತವ್ಯಮಗ್ನರಾದರೆ ದಾರಿದ್ರ್ಯ ದೂರ. ದೇಶದಿಂದ ಹಾಗೂ ಇಡೀ ವಿಶ್ವದಿಂದ ಬಡತನ ಇನ್ನಿಲ್ಲವಾಗಲು ಪ್ರತಿಯೊಬ್ಬರೂ ಸೆಣಸಾಡಬೇಕಿದೆ. ಎಲ್ಲರಿಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ, ಸಾಕ್ಷರತೆ, ಆಶ್ರಯ, ಶಿಕ್ಷಣದ ಜೊತೆಗೆ ಸರಳ ಜೀವನ ನಡೆಸಲು ಇತರ ಅಗತ್ಯ ಸೌಲಭ್ಯಗಳು ದೊರಕಬೇಕು. ಕೀಳರಿಮೆಯಿಂದ ಮುಕ್ತವಾದ ಘನತೆಯ ಬದುಕಿಗೆ ಯಾರೂ ಹೊರತಾಗಬಾರದು. ಪ್ರತಿನಿತ್ಯವೂ ಒಂದು ಮೀನನ್ನು ತನ್ನ ಮಗನಿಗೆ ಕೊಡುತ್ತಿದ್ದ ಅಪ್ಪ. ‘ಹೀಗೆ ಮಾಡುವ ಬದಲು ನಿನ್ನ ಮಗನಿಗೆ ಮೀನು ಹಿಡಿಯುವುದನ್ನು ಕಲಿಸು’ ಅಂತ ಹಿತೈಷಿ ಸೂಚಿಸಿದ. ಈ ಧೋರಣೆಯೇ ಕಾರ್ಯಗತವಾದರೆ ಬಡತನ ಎನ್ನುವುದೇ ಬರಿಯ ಸುಳ್ಳಾದೀತು. ಬಡತನವು ವ್ಯಕ್ತಿತ್ವದ ದೋಷ ಎಂಬ ಮಾತಿದೆ. ಅದನ್ನು ನೀಗಲು ಎಷ್ಟು ಹಣ, ಸಂಪನ್ಮೂಲಗಳಿದ್ದರೂ ಸಾಲದು. ಈ ದೃಷ್ಟಿಯಿಂದ ಬಡತನದಷ್ಟು ದುಬಾರಿಯಾದುದು ಮತ್ತೊಂದಿಲ್ಲ.

ADVERTISEMENT

ಅಸಮಾನತೆ ವಿಪರೀತಕ್ಕೆ ಹೋದರೆ ಸಾಮಾಜಿಕ ಒಗ್ಗಟ್ಟಿಗೆ ಭಂಗವಾಗುವುದು, ಹಿಂಸೆ ಮತ್ತು ಅಪರಾಧಗಳ ಮೇಲುಗೈಗೆ ಆಸ್ಪದವಾಗುವುದು.

ಜಗತ್ತಿನಲ್ಲಿ ಎಲ್ಲರಿಗೂ ಹೊಟ್ಟೆ ತುಂಬುವಷ್ಟು ಆಹಾರವೇನೊ ಇದೆ. ಆದರೂ ಹೊಟ್ಟೆ ತುಂಬಿದರೆ ಹೇಗಿರುತ್ತದೆ ಎನ್ನುವುದೇ ತಿಳಿಯದಷ್ಟು ಹಸಿವು ಕೋಟ್ಯಂತರ ಮಂದಿಯನ್ನು ಬಾಧಿಸಿದೆ.  ಗ್ರೀಕ್‌ ದಾರ್ಶನಿಕ ಪ್ಲೇಟೊ ಬಡತನವನ್ನು ‘ಅನೈತಿಕ ಬದುಕಿಗೆ ದೂಡಬಲ್ಲ ಸಾಮಾಜಿಕ ಅನಿಷ್ಟ’ ಎಂದಿದ್ದ. ಅವನ ಪ್ರಕಾರ, ಕೊರತೆಯು ಸಿರಿತನವನ್ನು ಕಡಿತಗೊಳಿಸದು, ಬದಲಿಗೆ ಹಣದ ದಾಹ ಹೆಚ್ಚಿಸುವುದು!

ಹಣವಿಲ್ಲದೆ ಶಿಕ್ಷಣವಿಲ್ಲ. ಹಾಗಾಗಿ ನಿರುದ್ಯೋಗ. ನಿರುದ್ಯೋಗಿ ತನಗೆ ಮತ್ತು ತನ್ನ ಕುಟುಂಬಕ್ಕೆ ಅಗತ್ಯವಾದ ಪೌಷ್ಟಿಕ ಆಹಾರ ಒದಗಿಸಲಾರ. ಅನಾರೋಗ್ಯ ಬೆನ್ನೇರಿ ದುಡಿಯಲು ಅಸಾಧ್ಯವಾಗುವಷ್ಟು ದಯನೀಯ ಸ್ಥಿತಿ. ಎಂದಮೇಲೆ ಬಡತನ ಅನೇಕ ಸಮಸ್ಯೆಗಳ ಬೇರು. ಜಾಗತಿಕ ಮಟ್ಟದಲ್ಲಿ 712 ದಶಲಕ್ಷ ಮಂದಿ ಕಡುಬಡತನದಲ್ಲಿದ್ದಾರೆ ಎಂದು 2022ರಲ್ಲಿ ವಿಶ್ವಬ್ಯಾಂಕ್ ವರದಿ ಮಾಡಿತ್ತು. ಸುದೈವದಿಂದ ಈ ಸಂಖ್ಯೆ 692 ದಶಲಕ್ಷಕ್ಕೆ ಇಳಿದಿದೆ. ಶುದ್ಧ ನೀರು ಪೂರೈಕೆ, ಮಹಿಳಾ ಸಬಲೀಕರಣ, ಪರಿಸರ ರಕ್ಷಣಾ ಕಾರ್ಯಕ್ರಮಗಳಿಗೆ ಒತ್ತು, ಬಾಲ್ಯವಿವಾಹಕ್ಕೆ ತಡೆಯಂತಹ ವಿಷಯಗಳ ಬಗ್ಗೆ ಸಮೂಹ ಮಾಧ್ಯಮಗಳು ತಕ್ಕಮಟ್ಟಿಗಾದರೂ ಈ ದಿಸೆಯಲ್ಲಿ ಪ್ರಭಾವ ಬೀರಿವೆಯೆನ್ನೋಣ.

ಜಗತ್ತಿನ ಯಾವ ದೇಶವೂ ಬಡತನದಿಂದ ಸಂಪೂರ್ಣವಾಗಿ ಪಾರಾಗಿಲ್ಲ. ನಾರ್ವೆ, ಫಿನ್‌ಲ್ಯಾಂಡ್‌, ಡೆನ್ಮಾರ್ಕ್‌ ಸಾಪೇಕ್ಷವಾಗಿ ಕಡಿಮೆ ಬಡತನವಿರುವ ದೇಶಗಳು. ಅವುಗಳಲ್ಲಿನ ದೃಢ ಸಾಮಾಜಿಕ ಕಲ್ಯಾಣ ವ್ಯವಸ್ಥೆ, ಉತ್ತಮ ಜೀವನಮಟ್ಟದಿಂದಾಗಿ ಈ ಹೆಗ್ಗಳಿಕೆ ಕೈಗೂಡಿದೆ. ಭಾರತದಲ್ಲಿ ಜನಸಂಖ್ಯಾ ಹೆಚ್ಚಳವು ಆರ್ಥಿಕ ಬೆಳವಣಿಗೆಯನ್ನು ಮೀರಿದೆ. ಹಿಂದಿನ 45 ವರ್ಷಗಳಿಂದಲೂ ಜನಸಂಖ್ಯೆ ಏರುಗತಿಯಲ್ಲಿದೆ. ಜನಸಂಖ್ಯೆಯು ವರ್ಷಕ್ಕೆ ಶೇಕಡ 2.2ರಷ್ಟು ಹೆಚ್ಚುತ್ತಿದೆ. ಅಂದರೆ ಪ್ರತಿವರ್ಷವೂ 1.7 ಕೋಟಿ ಮಂದಿ ಸೇರ್ಪಡೆ ಆಗುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಕಡಿಮೆ ಉತ್ಪಾದನೆ, ಬೆಲೆ ಏರಿಕೆಯು ವಿಶೇಷವಾಗಿ ಬಡತನಕ್ಕೆ ಮಣೆ ಹಾಕುತ್ತಿವೆ.

ಮಕ್ಕಳ ವಿದ್ಯಾಭ್ಯಾಸಕ್ಕೆ, ಆರೋಗ್ಯ ಸುಧಾರಣೆಗೆ ಅಥವಾ ಮನೆ ದುರಸ್ತಿಗೆ ಬಳಸಬೇಕೆಂಬ ಷರತ್ತು ವಿಧಿಸಿಯೇ ಸಹಾಯ ಮಾಡುವುದು ಅರ್ಥಪೂರ್ಣ. ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನದ (ಅ. 17) ಈ ಸಂದರ್ಭದಲ್ಲಿ ಒಂದು ಸಲಹೆ ಪಾಲನೀಯ. ಬಡ ವಿದ್ಯಾರ್ಥಿಗಳಿಗೆ ಉಚಿತ ಪಾಠ ಹೇಳಿಕೊಡುವುದು. ಪ್ರತಿಯಾಗಿ ಒಬ್ಬೊಬ್ಬರೂ ಒಂದೊಂದು ಗಿಡ ನೆಟ್ಟು ಅದರ ಪೋಷಣೆಯ ಹೊಣೆ ಹೊತ್ತುಕೊಳ್ಳುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.