ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಜ್ಞಾನಶಾಖೆಗಳಲ್ಲಿ ಸಂಶೋಧನೆ ಕೈಗೊಳ್ಳುವವರನ್ನು ತೀವ್ರವಾಗಿ ಕಾಡುವ ಪ್ರಮುಖ ಸಂಗತಿಯೆಂದರೆ, ಮೂಲಸೌಕರ್ಯಗಳ ಅಲಭ್ಯತೆ. ಪ್ರಯೋಗಗಳನ್ನು ಆಧರಿಸಿ ಸಂಶೋಧನೆ ನಡೆಸುವವರಿಗೆ ಬೇಕಿರುವ ಉಪಕರಣಗಳು, ತಂತ್ರಾಂಶ ಹಾಗೂ ಸಂಶೋಧನಾ ಪತ್ರಿಕೆಗಳು ಸುಲಭಕ್ಕೆ ಕೈಗೆಟುಕಲಾರವು.
ಉನ್ನತ ಶಿಕ್ಷಣ ವಲಯದಲ್ಲಿ ಹಿಂದಿನ ಒಂದೆರಡು ದಶಕಗಳಿಂದ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೆ, ಸಂಶೋಧನೆ ಕೈಗೊಳ್ಳಲು ಅಗತ್ಯವಿರುವ ಮೂಲಸೌಕರ್ಯಗಳು ದೇಶದಾದ್ಯಂತ ಶೈಕ್ಷಣಿಕ ಸಂಸ್ಥೆಗಳು ಹಾಗೂ ಪ್ರಯೋಗಾಲಯಗಳಲ್ಲಿ ಚದುರಿದಂತಿವೆ. ಸಂಶೋಧನೆಗಾಗಿ ಸರ್ಕಾರ ಹಾಗೂ ಖಾಸಗಿ ವಲಯದಿಂದ ಹೆಚ್ಚು ಸಂಪನ್ಮೂಲ ದಕ್ಕಿಸಿಕೊಳ್ಳಲು ಶಕ್ತವಿರುವ ಐಐಟಿ, ಐಐಎಸ್‌ಸಿ, ಎನ್‍ಐಟಿ, ಕೆಲ ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಕೇಂದ್ರಗಳಲ್ಲಿ ಹೆಚ್ಚಿನ ಸೌಲಭ್ಯಗಳು ಲಭ್ಯವಿದ್ದರೆ, ಉಳಿದೆಡೆ ಲಭ್ಯವಿರುವ ಮೂಲಸೌಕರ್ಯಗಳು ಹೇಳಿಕೊಳ್ಳುವಂತೇನಿಲ್ಲ.
ತಮ್ಮ ಸಂಶೋಧನೆಗೆ ಅಗತ್ಯವಿರುವ ಉಪಕರಣಗಳು ಹಾಗೂ ತಂತ್ರಾಂಶ ಎಲ್ಲಿ ಲಭ್ಯವಿವೆ ಮತ್ತು ಅವುಗಳನ್ನು ಬಳಸಿಕೊಂಡು ಸಂಶೋಧನೆ ಕೈಗೊಳ್ಳಲು ಬೇಕಿರುವ ಅನುಮತಿ ಪಡೆದುಕೊಳ್ಳಲು ಯಾರನ್ನು ಸಂಪರ್ಕಿಸಬೇಕು ಮತ್ತು ಯಾವೆಲ್ಲ ಕ್ರಮಗಳನ್ನು ಪಾಲಿಸಬೇಕು ಎಂಬ ಕುರಿತು ಸೂಕ್ತ ಮಾಹಿತಿ ದೊರೆಯದೆ, ಸಂಶೋಧನೆಯಲ್ಲಿ ತೊಡಗಿರುವವರು ಪರದಾಡುವ ಪರಿಸ್ಥಿತಿ ಇಂದಿಗೂ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುವವರು ಎದುರಿಸಿಕೊಂಡೇ ಬಂದಿರುವ ಈ ಸಮಸ್ಯೆಗೆ ಪರಿಹಾರ ಹುಡುಕುವ ಉಪಕ್ರಮಕ್ಕೆ ಹಿಂದಿನ ನಾಲ್ಕು ವರ್ಷಗಳ ಹಿಂದೆಯೇ ಚಾಲನೆ ದೊರೆತಿದೆ.
ಒಕ್ಕೂಟ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಮೇಲುಸ್ತುವಾರಿ ಮತ್ತು ಬೆಂಬಲದೊಂದಿಗೆ ನಡೆಯುತ್ತಿರುವ ಐ-ಸ್ಟೆಮ್ (ಇಂಡಿಯನ್ ಸೈನ್ಸ್ ಟೆಕ್ನಾಲಜಿ ಆ್ಯಂಡ್ ಎಂಜಿನಿಯರಿಂಗ್ ಫೆಸಿಲಿಟೀಸ್ ಮ್ಯಾಪ್) ಉಪಕ್ರಮ ತನ್ನ ಮೂಲ ಉದ್ದೇಶವಾದ ಸಂಶೋಧಕರು ಮತ್ತು ಸಂಶೋಧನಾ ಸಂಪನ್ಮೂಲಗಳನ್ನು ಬೆಸೆಯುವ ದಿಸೆಯಲ್ಲಿ ಯಶಸ್ಸು ಕಂಡರೆ, ಸಂಶೋಧಕರಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ.
2020ರ ಜನವರಿ 3ರಂದು ಚಾಲನೆಗೊಂಡ ಐ-ಸ್ಟೆಮ್, ಸಂಶೋಧಕರು ಮತ್ತು ಸಂಶೋಧನಾ ಸಂಪನ್ಮೂಲಗಳನ್ನು ಬೆಸೆಯುವ ಸಲುವಾಗಿ ತನ್ನದೇ ಆದ ಜಾಲತಾಣವನ್ನು ಹೊಂದಿದೆ. ಸಂಶೋಧನೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಹೊಂದಿರುವ ಸಂಸ್ಥೆಗಳು ಇದರಲ್ಲಿ ನೋಂದಣಿ ಮಾಡಿಕೊಂಡು, ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ನಮೂದಿಸಬಹುದು. ಸಂಶೋಧಕರು ಕೂಡ ಪೋರ್ಟಲ್‍ನಲ್ಲಿ ನೋಂದಣಿಯಾಗಿ ತಮ್ಮ ಸಂಶೋಧನೆಗೆ ಅಗತ್ಯವಿರುವ ಸಂಪನ್ಮೂಲಗಳು ಎಲ್ಲಿ ಲಭ್ಯ ಇವೆ ಎಂಬುದನ್ನು ತಿಳಿದುಕೊಂಡು, ಈ ಪೋರ್ಟಲ್ ಮೂಲಕವೇ ಕಾಯ್ದಿರಿಸಬಹುದು. ಅದಾದ ನಂತರ, ಸಂಪನ್ಮೂಲ ಹೊಂದಿರುವ ಸಂಸ್ಥೆ ನಿಗದಿಪಡಿಸುವ ಶುಲ್ಕ ಪಾವತಿಸಿ, ತಮ್ಮ ಸಂಶೋಧನೆಗೆ ಅಗತ್ಯವಿರುವ ಪ್ರಯೋಗಗಳನ್ನು ಕೈಗೊಳ್ಳಬಹುದು. ಪರೀಕ್ಷೆಗಳನ್ನು ನಡೆಸಿ ವರದಿ ಪಡೆದುಕೊಳ್ಳಬಹುದು. 2024ರ ಫೆ. 23ರವರೆಗೆ ಪೋರ್ಟಲ್‍ನಲ್ಲಿ 2,361ಕ್ಕೂ ಹೆಚ್ಚು ಸಂಸ್ಥೆಗಳು, 30,081ಕ್ಕೂ ಹೆಚ್ಚು ಬಳಕೆದಾರರು ನೋಂದಣಿಯಾಗಿದ್ದಾರೆ. ಇಲ್ಲಿ 26,223ಕ್ಕೂ ಅಧಿಕ ಉಪಕರಣಗಳನ್ನು ಪಟ್ಟಿ ಮಾಡಲಾಗಿದೆ.
ಮೇಲ್ನೋಟಕ್ಕೆ ಸಂಶೋಧಕರ ಪಾಲಿಗೆ ವರದಾನವಾಗಿ ಪರಿಣಮಿಸುವ ಹಾಗೆ ತೋರುವ ಈ ಉಪಕ್ರಮವನ್ನು ಪರಿಣಾಮಕಾರಿಯಾಗಿ ರೂಪಿಸಿ, ಮುನ್ನಡೆಸಿಕೊಂಡು ಹೋಗುವುದು ಸರಳವೇನಲ್ಲ. ತೀರಾ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳನ್ನೂ ಒಳಗೊಂಡಂತೆ ದೇಶದ ವಿವಿಧೆಡೆ ಲಭ್ಯವಿರುವ ಸಂಶೋಧನಾ ಸಂಪನ್ಮೂಲಗಳ ಬಳಕೆ ಮತ್ತು ನಿರ್ವಹಣೆಯಲ್ಲಿ ಬಹಳಷ್ಟು ಸಮಸ್ಯೆಗಳಿವೆ. ದುಬಾರಿಯಾದ ಉಪಕರಣಗಳು ಪ್ರಯೋಗಾಲಯಗಳಲ್ಲಿ ಇದ್ದರೂ ಅವುಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸದ ಕಾರಣದಿಂದ ಅವು ಬಹುತೇಕ ಸಂದರ್ಭಗಳಲ್ಲಿ ಬಳಕೆಗೆ ಯೋಗ್ಯವಾಗಿ ಇರುವುದಿಲ್ಲ. ಇನ್ನು ಕೆಲವೆಡೆ ಉತ್ತಮ ನಿರ್ವಹಣೆ ಇದ್ದರೂ, ಸಂಪನ್ಮೂಲಗಳ ಸದುಪಯೋಗಕ್ಕೆ ಎಲ್ಲರಿಗೂ ಮುಕ್ತ ಅವಕಾಶ ದೊರೆಯದು. ಆಯಾ ಸಂಪನ್ಮೂಲದ ನಿರ್ವಹಣೆಯ ಹೊಣೆ ಹೊತ್ತವರ ವೈಯಕ್ತಿಕ ಹಿತಾಸಕ್ತಿಗಳು ಮುನ್ನೆಲೆಗೆ ಬಂದು, ಸಂಶೋಧಕರ ಹಿತ ಕಾಯುವ ಆಶಯ ಈಡೇರದಿರುವುದೂ ಇದೆ.
ಐಐಎಸ್‌ಸಿ, ಐಐಟಿ, ಎನ್‍ಐಟಿ ಹಾಗೂ ಕೆಲ ಸಂಶೋಧನಾ ಕೇಂದ್ರಗಳ ಬಳಿಯೇ ಕೇಂದ್ರೀಕೃತವಾಗಿರುವ ಸಂಪನ್ಮೂಲಗಳನ್ನು ಯಾವುದೇ ಶಿಫಾರಸು ಅಥವಾ ವ್ಯಕ್ತಿಗತ ಪರಿಚಯವಿಲ್ಲದಿದ್ದರೂ ಬಳಸುವ ಮುಕ್ತ ಅವಕಾಶ ಸಂಶೋಧಕರಿಗೆ ಸಿಗಬೇಕು. ಇದನ್ನು ಸಾಧ್ಯವಾಗಿಸಲು ಐ-ಸ್ಟೆಮ್ ಉಪಕ್ರಮ ಪೂರಕವಾಗಿ ಕಾರ್ಯನಿರ್ವಹಿಸಬಲ್ಲದು.
ಸರ್ಕಾರಿ ಯೋಜನೆಗಳನ್ನು ಸರ್ವೇಸಾಮಾನ್ಯವಾಗಿ ಆವರಿಸುವ ಜಡತ್ವವು ಐ-ಸ್ಟೆಮ್ ಉಪಕ್ರಮಕ್ಕೂ ಆವರಿಸಿಕೊಳ್ಳದ ಹಾಗೆ ಎಚ್ಚರ ವಹಿಸಬೇಕಿದೆ. ಇದರ ಅನುಷ್ಠಾನದ ಹೊಣೆ ಹೊತ್ತವರಿಗೆ ದೇಶದಲ್ಲಿನ ವೈಜ್ಞಾನಿಕ ಸಂಶೋಧನಾ ಗುಣಮಟ್ಟ ವೃದ್ಧಿಸುವುದೇ ಆದ್ಯತೆಯಾದಾಗ ಮಾತ್ರ, ಇದು ಸಂಶೋಧನೆ ಕೈಗೊಳ್ಳುವವರ ಪಾಲಿಗೆ ವರದಾನವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.