ರಾಜ್ಯದ ಉನ್ನತ ಶಿಕ್ಷಣ ಇಲಾಖೆಯು ರಾಷ್ಟ್ರೀಯ ಶಿಕ್ಷಣ ನೀತಿ- 2020ಕ್ಕೆ ಅನ್ವಯಿಸಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ನೂತನ ಪಠ್ಯಕ್ರಮವನ್ನು ಈಗಾಗಲೇ ಜಾರಿಗೆ ತಂದಿದ್ದು, ಸದ್ಯದಲ್ಲೇ ಈ ವಿದ್ಯಾರ್ಥಿಗಳು ತಮ್ಮ ಮೊದಲ ಸೆಮಿಸ್ಟರ್ ಪರೀಕ್ಷೆ ಬರೆಯಲಿದ್ದಾರೆ. ಈ ನಡುವೆ, ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಇತ್ತೀಚೆಗೆ ನಡೆದ ಸಭೆಯಲ್ಲಿ, ಪಿಎಚ್.ಡಿ ಪದವಿಗೆ ಸಂಬಂಧಿಸಿದಂತೆ ಕನಿಷ್ಠ ಮಾನದಂಡಗಳು ಮತ್ತು ಕಾರ್ಯವಿಧಾನಗಳ ಮಾರ್ಗಸೂಚಿಯೊಂದನ್ನು ಅನುಮೋದಿಸಿದೆ. ಈ ನಿಯಮಾವಳಿಗಳು ಯುಜಿಸಿ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಸಲಹೆಗಳಿಗಾಗಿ ಸದ್ಯ ದಲ್ಲೇ ಪ್ರಕಟಗೊಳ್ಳಲಿವೆ.
ಉನ್ನತ ಶಿಕ್ಷಣದ ಹೆಚ್ಚಿನ ಪಾಲುದಾರರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಾಥಮಿಕ ಅರಿವು ಈಗಾಗಲೇ ಸ್ವಲ್ಪಮಟ್ಟಿಗೆ ಇದ್ದರೂ, ವಿಶೇಷವಾಗಿ ಸಂಶೋಧನಾಸಕ್ತ ವಿದ್ಯಾರ್ಥಿಗಳಿಗೆ ಹೊಸ ಮಾರ್ಗಸೂಚಿಗಳ ಸ್ಪಷ್ಟ ಅರಿವು ಅತ್ಯಗತ್ಯವಾಗಿದೆ.
ಈ ಪರಿಷ್ಕೃತ ಮಾನದಂಡಗಳ ಪ್ರಕಾರ, ಇನ್ನು ಮುಂದೆ ವಿದ್ಯಾರ್ಥಿಗಳಲ್ಲಿ ಪಿಎಚ್.ಡಿ ಸಂಶೋಧನೆ ಪ್ರವೇಶಕ್ಕೆ, ತಮ್ಮ ನಾಲ್ಕು ವರ್ಷಗಳ ಪದವಿಯಲ್ಲಿ ಕನಿಷ್ಠ 7.5 ಸಿಜಿಪಿಎ (ಸರಾಸರಿ ಅಂಕ) ಪಡೆದಿರುವವರು ಅರ್ಹರಾಗಿರುತ್ತಾರೆ. ಜೊತೆಗೆ, ಯುಜಿಸಿ ತನ್ನ 2016ರ ನಿಯಮಗಳನ್ನು ತಿದ್ದುಪಡಿ ಮಾಡಿ, ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಅಥವಾ ಜೂನಿಯರ್ ರಿಸರ್ಚ್ ಫೆಲೊಶಿಪ್‌ನಲ್ಲಿ (ಜೆಆರ್‌ಎಫ್) ಆಯ್ಕೆಯಾದವರಿಗೆ, ಲಭ್ಯವಿರುವ ಸೀಟುಗಳಲ್ಲಿ ಶೇ 60ರಷ್ಟನ್ನು ಕಾಯ್ದಿರಿಸಲು ತೀರ್ಮಾನಿಸಿದೆ. ಈ ಪ್ರಸ್ತಾವಗಳನ್ನು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯ ಈ ಶೈಕ್ಷಣಿಕ ವರ್ಷದಿಂದಲೇ ಅಳವಡಿಸಿಕೊಳ್ಳಲು ನಿರ್ಧರಿಸಿವೆ.
ಶೈಕ್ಷಣಿಕ ವರ್ಷದ ಒಟ್ಟು ಖಾಲಿ ಸೀಟುಗಳಲ್ಲಿ ಶೇ 60ರಷ್ಟನ್ನು ಎನ್ಇಟಿ/ಜೆಆರ್‌ಎಫ್ ಹೊಂದಿದ ವಿದ್ಯಾರ್ಥಿಗಳಿಗೆ ಮೀಸಲಿಟ್ಟರೆ, ಉಳಿದ ಶೇ 40 ರಷ್ಟನ್ನು ಆಯಾಯ ಶಿಕ್ಷಣ ಸಂಸ್ಥೆಗಳು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ (70) ಮತ್ತು ಸಂದರ್ಶನದ (30) ಅನುಪಾತದಲ್ಲಿ ಮೌಲ್ಯ ಮಾಪನ ಮಾಡಿ ನಿರ್ಧರಿಸಲಾಗುತ್ತದೆ. ಸಂದರ್ಶನ ದಲ್ಲಿ ಅಭ್ಯರ್ಥಿಯು ಸಂಶೋಧನಾ ಸಮಿತಿಯ ಮುಂದೆ ತನ್ನ ಸಂಶೋಧನಾ ಆಸಕ್ತಿ ಮತ್ತು ಕ್ಷೇತ್ರದ ಕುರಿತು ವಿವರವಾಗಿ ಚರ್ಚಿಸಬೇಕಾಗುತ್ತದೆ. ಹಾಗೆಯೇ ಅಭ್ಯರ್ಥಿಯು ಉದ್ದೇಶಿತ ಸಂಶೋಧನೆಗೆ ಸಮರ್ಥನಿದ್ದಾನೆಯೇ, ವಿಷಯ ಪ್ರಸ್ತುತವಾಗಿದೆಯೇ ಎನ್ನುವುದನ್ನು ಸಮಿತಿ ಪರಿಶೀಲಿಸಬೇಕಾಗುತ್ತದೆ.
ಪಿಎಚ್.ಡಿ ಪೂರ್ಣಗೊಳಿಸಲು ಕನಿಷ್ಠ ಅವಧಿ ಯನ್ನು ಇಲ್ಲಿಯವರೆಗೆ ಇದ್ದ ಮೂರು ವರ್ಷಗಳ ಬದಲಾಗಿ ಎರಡು ವರ್ಷಗಳಿಗೆ ನಿಗದಿಗೊಳಿಸಲಾಗಿದೆ. ಆದರೆ, ಆರು ವರ್ಷಗಳ ಗರಿಷ್ಠ ಅವಧಿಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಹಾಗೆಯೇ, ಸಂಶೋಧಕರಿಗೆ ತಮ್ಮ ವಿಷಯಾಧಾರಿತ ಅಧ್ಯಯನ ಮತ್ತು ಕ್ಷೇತ್ರಕಾರ್ಯಕ್ಕೆ ಅನುಕೂಲವಾಗುವಂತೆ ರಜೆ ಗಳನ್ನು ಪಡೆಯುವ ಅವಕಾಶವನ್ನು ಕೂಡ
ಮಾರ್ಗಸೂಚಿ ಪ್ರಸ್ತಾಪಿಸಿದೆ.
ಇನ್ನುಳಿದಂತೆ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಅರ್ಹತಾ ಮಾನದಂಡದಲ್ಲಿ ಶೇ 5ರಷ್ಟು ಸಡಿಲಿಕೆಯನ್ನು ಪ್ರಸ್ತಾಪಿಸಲಾಗಿದೆ. ಮುಖ್ಯವಾಗಿ, ಸಂಶೋಧನೆಯು ಕ್ಷೇತ್ರಕಾರ್ಯ, ಸಮಾಜಕ್ಕೆ ಅನುಕೂಲವಾಗುವಂತಹ ಮಾಹಿತಿ ಸಂಗ್ರಹ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದನೆ, ಜಾಗತಿಕ ಮಹತ್ವ, ಸಮಾಜಮುಖಿ ಮೌಲ್ಯಸೃಷ್ಟಿ, ಹೆಚ್ಚುವರಿ ಜ್ಞಾನಕ್ಕೆ ಕೊಡುಗೆ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ.
ಸಂಶೋಧನಾ ಮಾರ್ಗದರ್ಶಕರಿಗೆ ಸಂಬಂಧಿಸಿ ದಂತೆ ಕೆಲವು ಗಮನಾರ್ಹ ಸಂಗತಿಗಳೆಂದರೆ, ನಿಗದಿತ ಸಮಯದೊಳಗೆ ಸಂಶೋಧನೆ ಸಾಧ್ಯವೇ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸಂಶೋಧನೆಯ ಪರಿಣಾಮದ ಸಾಧ್ಯತೆಯೇನು ಎಂಬ ಬಗ್ಗೆ ಸಂಶೋಧನಾರ್ಥಿಯೊಂದಿಗೆ ಚರ್ಚಿಸಬೇಕಾಗುತ್ತದೆ. ಹಾಗೆಯೇ, ಸಂಶೋಧನಾರ್ಥಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ವಿಷಯಾಧಾರಿತ ಕೋರ್ಸ್‌ಗಳು ಮತ್ತು ಸಮ್ಮೇಳನಗಳ ಕುರಿತು ಮಾಹಿತಿ ಹಂಚಿ ಕೊಳ್ಳುವುದು ಹಾಗೂ ಸಂಬಂಧಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕೇಂದ್ರಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ವಿದ್ಯಾರ್ಥಿಗೆ ಸಹಾಯ ಮಾಡುವುದು ಮಾರ್ಗದರ್ಶಕರ ಜವಾಬ್ದಾರಿಯಾಗಿರುತ್ತದೆ. ಹೆಚ್ಚು ವರಿಯಾಗಿ ಇಬ್ಬರು ವಿದೇಶಿ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಒಟ್ಟಿನಲ್ಲಿ, ಪಿಎಚ್.ಡಿ ಪದವಿಗಳ ಗುಣಮಟ್ಟವನ್ನು ಹೆಚ್ಚಿಸುವ ಜವಾಬ್ದಾರಿ ಮತ್ತು ಯುಜಿಸಿಯ ಪ್ರಸ್ತಾವಿತ ಮಾರ್ಗಸೂಚಿಯಲ್ಲಿ ಮೌಲ್ಯಾಧಾರಿತ ಅಂಶಗಳನ್ನು ಅಳವಡಿಸುವ ಮುಕ್ತತೆಯು ಸಂಬಂಧಿತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಇದೆ ಎನ್ನುವುದು ಈ ತಿದ್ದುಪಡಿಯ ಪ್ರಧಾನ ಅಂಶ.
ಇದರೊಂದಿಗೆ, ವಿವಿಧ ಉದ್ಯಮಗಳ ತಜ್ಞರು ಮತ್ತು ವೃತ್ತಿಪರರನ್ನು ಕೇಂದ್ರೀಯ ವಿಶ್ವವಿದ್ಯಾಲಯ ಗಳಲ್ಲಿ ಬೋಧನೆಗೆ ಸೆಳೆಯುವ ಸಲುವಾಗಿ,ಪಿಎಚ್.ಡಿ ಕಡ್ಡಾಯವಲ್ಲ ಎನ್ನುವ ಯುಜಿಸಿ ನಿರ್ಧಾರ ಕೂಡ ಸ್ವಾಗತಾರ್ಹವಾದುದು. ಬಹಳಷ್ಟು ಅನುಭವ ಹೊಂದಿರುವ ಹಲವಾರು ವಿಷಯ ತಜ್ಞರು ಮತ್ತು ಕಲಾಕಾರರು ಪ್ರಸ್ತುತ ನಿಯಮಗಳಿಗೆ ಅನುಸಾರವಾಗಿ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವ ಅವಕಾಶಗಳಿಂದ ವಂಚಿತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.