ಭಾರತೀಯ ಆಧ್ಯಾತ್ಮಿಕ ಪರಂಪರೆಯ ವೈಶಿಷ್ಟ್ಯ ಎಂದರೆ ಪರಿಷ್ಕಾರಬುದ್ಧಿ. ವೇದಗಳ ಕಾಲದಿಂದ ಮೊದಲ್ಗೊಂಡು ಇಲ್ಲಿಯತನಕ ಈ ಪರಿಷ್ಕರಣೆಯ ಸ್ರೋತ ಹರಿದುಬಂದಿದೆ. ಈ ಪರಂಪರೆಯ ಹರಿವಿಗೆ ಕಾರಣವೆಂದರೆ, ಆಯಾ ಕಾಲದಲ್ಲಿ ತೋರಿಕೊಂಡ ಮಹಾವಿಭೂತಿಗಳೇ ಹೌದು. ಭಗವಾನ್ ಬುದ್ಧ, ಶಬರಸ್ವಾಮಿ, ಆಚಾರ್ಯ ಶಂಕರ, ಅಭಿನವಗುಪ್ತ, ಬಸವ, ಅಲ್ಲಮ ಅವರಂತಹ ಪೂರ್ವಸೂರಿಗಳಲ್ಲದೆ, ನಮ್ಮ ಕಾಲಕ್ಕೆ ತುಂಬ ಹತ್ತಿರದವರಾದ ಸಿದ್ಧೇಶ್ವರ ಶ್ರೀಗಳತನಕ ಈ ಪರಿಷ್ಕಾರಪರ್ವ ಕೊನೆಯಿಲ್ಲದೆ ಮುಂದುವರಿದಿದೆ. ಹೀಗೆ ಆಧುನಿಕ ಭಾರತದಲ್ಲಿ ಈ ದಾರಿಯಲ್ಲಿ ಕಾಣಿಸಿಕೊಂಡ ಮಹಾಪುರುಷರು ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಅವರ ಶಿಷ್ಯ ಸ್ವಾಮಿ ವಿವೇಕಾನಂದ. ಗುರುಗಳು ಮೂಲಮೂರ್ತಿಯಾಗಿ ಕಂಗೊಳಿಸಿದರೆ, ಉತ್ಸವಮೂರ್ತಿಯಾಗಿ ಸಂಚರಿಸಿದ ಶಿಷ್ಯ, ಇಡಿಯ ಜಗತ್ತಿಗೆ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಕಾಂತಿಯನ್ನು ಪಸರಿಸಿದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತೀಯ ಆಧ್ಯಾತ್ಮಿಕತೆಗೇ ತಾರುಣ್ಯ ತುಂಬಿ ಹೊಸ ಜೀವಕಳೆಯನ್ನು ಒದಗಿಸಿದವರು ಸ್ವಾಮಿ ವಿವೇಕಾನಂದ. ಯೌವನವೇ ನಮ್ಮ ಜೀವನದ ಅತ್ಯಂತ ಕ್ರಿಯಾಶೀಲ ಹಂತವಲ್ಲವೆ? ವಿವೇಕಾನಂದರ ಜೀವನ–ದರ್ಶನಗಳಿಗೂ ನಮ್ಮ ತಾರುಣ್ಯಕ್ಕೂ ಸಮಾಜದ ಕ್ರಿಯಾಶೀಲತೆಗೂ ನೇರ ಸಂಬಂಧವನ್ನು ಕಾಣಬಹುದು. ಹೀಗಾಗಿ ಅವರು ಪ್ರತಿಪಾದಿಸಿದ ವೇದಾಂತವನ್ನು ‘ಅನುಷ್ಠಾನ ವೇದಾಂತ’ ಎಂದು ಕರೆಯುವುದೇ ಸರಿ. ‘ಸಾಧಾರಣ ಸನ್ಯಾಸಿಯು ಪ್ರಪಂಚದಿಂದ ಬಿಡುಗಡೆ ಬಯಸುತ್ತಾನೆ. ಆದರೆ ನಿಜವಾದ ಸನ್ಯಾಸಿಯು ಪ್ರಪಂಚದಲ್ಲಿಯೇ ಇರುತ್ತಾನೆ, ಆದರೆ ಅದಕ್ಕೆ ಅಂಟಿಕೊಂಡಿರುವುದಿಲ್ಲ. ಮುಕ್ತಿಯನ್ನು ಬಯಸಿ ಕಾಡಿನಲ್ಲಿ ಬದುಕುವುದು ನಿಜವಾದ ಸನ್ಯಾಸ ಅಲ್ಲ. ಜೀವನಸಂಗ್ರಾಮದ ನಡುವೆ ಬದುಕಬೇಕು. ಗುಹೆಯಲ್ಲೋ ನಿದ್ರೆಯಲ್ಲೋ ಯಾರು ಬೇಕಾದರೂ ಪ್ರಶಾಂತವಾಗಿರಬಹುದು. ಆದರೆ ಪ್ರಪಂಚದ ಸುಳಿಯಲ್ಲಿ ಸಿಕ್ಕಿಯೂ ಕೇಂದ್ರವನ್ನು ಮುಟ್ಟುವುದು ನಿಜವಾದ ಸಾಧನೆ’ ಎಂದ ವಿವೇಕಾನಂದರು ಸನ್ಯಾಸದ ವ್ಯಾಪ್ತಿಯನ್ನು ಹಿಗ್ಗಿಸಿದರು.
ಎಲ್ಲ ಬಂಧನಗಳನ್ನೂ ಕಳಚಿಕೊಂಡ ಸನ್ಯಾಸಿಗೂ ಅವರು ಕರ್ತವ್ಯಗಳನ್ನು ಸೂಚಿಸಿದ್ದು ಗಮನಾರ್ಹ. ಇದು ಮೇಲ್ನೋಟಕ್ಕೆ ಬಂಡಾಯ ಎಂದು ಕಂಡೀತು. ಆದರೆ ಅವರು ಮಾಡಿದ್ದು ಪರಂಪರೆಯ ಪರಿಷ್ಕರಣೆ ಯಷ್ಟೆ. ಭಾರತೀಯ ಆಧ್ಯಾತ್ಮಿಕತೆಯಲ್ಲಿ ಜೀವನ್ಮುಕ್ತಿಯ ಕಲ್ಪನೆಯುಂಟು. ಅವರು ಆ ವಿವರವನ್ನೇ ನಮ್ಮ ಕಾಲಕ್ಕೂ ಅನ್ವಯಿಸಿದರಷ್ಟೆ. ಇಲ್ಲಿ ಇನ್ನೂ ಒಂದು ಸ್ವಾರಸ್ಯವುಂಟು. ಅವರಿಗೆ ಈ ವಿಸ್ತರಣಕಾರ್ಯದಲ್ಲಿ ತಮ್ಮ ಗುರುಗಳ ದರ್ಶನಸೂತ್ರವೂ ಒದಗಿಬಂದಿರಬಹುದು. ‘ಕಣ್ಣನ್ನು ಮುಚ್ಚಿ ಎಲ್ಲರೂ ಧ್ಯಾನ ಮಾಡುತ್ತಾರೆ. ಆದರೆ ಕಣ್ಣುಗಳನ್ನು ತೆರೆದಿಟ್ಟುಕೊಂಡು ಧ್ಯಾನ ಮಾಡುವುದು ವಿಶೇಷ’ ಎಂದ ಶ್ರೀ ರಾಮಕೃಷ್ಣ ಪರಮಹಂಸರ ಕಾಣ್ಕೆಯಲ್ಲಿ ವಿವೇಕಾನಂದರು ಲೋಕಕಾರುಣ್ಯದ ಕರ್ತವ್ಯವನ್ನು ಕಂಡರು. ‘ಹಸಿದಿರುವವನಿಗೆ ಬೇಕಾಗಿರುವುದು ಅಧ್ಯಾತ್ಮದ ಪಾಠವಲ್ಲ, ಅನ್ನ’ ಎಂಬ ಘೋಷಣೆಯಲ್ಲಿ ನಾವು ಕಾಣುವುದು ಅಂದು ಬುದ್ಧನಲ್ಲಿ ಕಾಣಿಸಿದ ಕಾರುಣ್ಯವೇ ಹೌದು.
ಭಾರತೀಯ ಆಧ್ಯಾತ್ಮಿಕತೆಗೆ ಎರಡು ಆಯಾಮಗಳು: ಒಂದು ಕರುಣೆ, ಇನ್ನೊಂದು ಪ್ರಜ್ಞೆ. ನಾವು ವಿಷಯದ ಸ್ಪಷ್ಟತೆಗೆ ಉದಾಹರಣೆಗಳಾಗಿ ಬುದ್ಧನನ್ನು ಕರುಣೆಗೂ ಶಂಕರರನ್ನು ಪ್ರಜ್ಞೆಗೂ ಸಂಕೇತಗಳಾಗಿ ನೋಡಬಹುದು. ವಿವೇಕಾನಂದರು ಕರುಣೆ ಮತ್ತು ಪ್ರಜ್ಞೆ– ಇವೆರಡರ ಮೂರ್ತರೂಪವಾಗಿ ನಮಗೆ ಒದಗುತ್ತಾರೆ. ಅವರ ಕಾರುಣ್ಯಕ್ಕೊಂದು ನಿದರ್ಶನವನ್ನು ನೋಡಿದೆವು. ಅವರ ಪ್ರಜ್ಞೆಗೆ ನಿದರ್ಶನವಾಗಿ ಜೀವನ–ದರ್ಶನಗಳೇ ನಮ್ಮ ಮುಂದಿವೆ. ಪ್ರಜ್ಞೆಯ ಕ್ರಿಯಾರೂಪವೆನಿಸಿರುವ ಜ್ಞಾನವನ್ನು ಅವರು ಶಾಸ್ತ್ರಗಳ ಪರಿಷ್ಕರಣೆಯಲ್ಲಿ ತೊಡಗಿಸಲಿಲ್ಲ. ಆದರೆ ಇಡಿಯ ಜೀವನದ ಪರಿಭಾಷೆಯನ್ನೇ ಪರಿಷ್ಕಾರ ಮಾಡಿ, ನಮ್ಮ ಕಾಲಕ್ಕೆ ಅದನ್ನು ಅನ್ವಯಗೊಳಿಸಿ, ‘ಮಾನುಷಕೇಂದ್ರಿತ ಅಧ್ಯಾತ್ಮಶಾಸ್ತ್ರ’ವನ್ನು ಸಿದ್ಧಗೊಳಿಸಿದರು.
ಸ್ವಾಮಿ ವಿವೇಕಾನಂದರು ನಮ್ಮ ಕಾಲಕ್ಕೆ ಹೇಗೆ ಒದಗುತ್ತಾರೆ? ಅವರು ಎರಡು ಆಯಾಮಗಳಲ್ಲಿ ನಮ್ಮ ಪರಂಪರೆಯ ರಕ್ಷಕರಾದರು. ಈ ಎರಡು ದಾರಿಗಳೂ ನಮಗೆ ಇಂದು ಬೆಳಕಾಗಿ ಒದಗುತ್ತವೆ. ಅವರು ಪರಂಪರೆಯ ಒಳಗೇ ನಿಂತು, ಅದರ ಕಳೆಯನ್ನೂ ಕಲ್ಮಶಗಳನ್ನೂ ಸ್ವಚ್ಛಗೊಳಿಸಲು ತೊಡಗಿದರು. ನಮ್ಮ ಪರಂಪರೆಯ ಮೇಲೆ ನಡೆದ ಬಾಲಿಶ ದಾಳಿಗಳ ವಿರುದ್ಧವೂ ದನಿ ಎತ್ತಿದರು. ಈ ಎರಡು ನೆಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಡಿಯ ವಿಶ್ವದ ಮೂಲತತ್ವದ ಏಕತ್ವವನ್ನು ಎತ್ತಿಹಿಡಿದರು. ಈ ಏಕತ್ವದ ಸಾಕ್ಷಾತ್ಕಾರಕ್ಕಾಗಿ ಭಕ್ತಿ, ಜ್ಞಾನ, ಕರ್ಮ– ಹೀಗೆ ಹಲವು ದಾರಿಗಳನ್ನು ಕಾಣಿಸಿದರು; ಅಲ್ಲಿ ಎದುರಾಗಬಹುದಾದ ಅಪಾಯಗಳ ಬಗ್ಗೆಯೂ ಎಚ್ಚರಿಸಿದರು. ಇಲ್ಲೊಂದು ಉದಾಹರಣೆಯನ್ನು ನೋಡಬಹುದು. ದೈವತ್ವದ ಸಾಕ್ಷಾತ್ಕಾರಕ್ಕೆ ಭಕ್ತಿ ಅತ್ಯಂತ ಸುಲಭದ ದಾರಿ ಎಂದರು. ಆದರೆ ಈ ಭಕ್ತಿಯೇ ‘ನನ್ನ ದೇವರೇ ಶ್ರೇಷ್ಠ, ನಿನ್ನ ದೇವರು ನೀಚ’ ಎಂಬ ಉನ್ಮಾದಕ್ಕೆ ಅವಕಾಶ ಒದಗಿಸಿ, ಅದು ಅಸಹ್ಯಕರ ಮತಾಂಧತೆಗೂ ಕಾರಣ ವಾಗಬಲ್ಲದು. ಎಲ್ಲ ಧರ್ಮಗಳ ಅಪ್ರಬುದ್ಧರಿಂದ ಇಂಥ ‘ದ್ವೇಷಭಕ್ತಿ’ ಹುಟ್ಟಿಕೊಳ್ಳುತ್ತದೆ ಎಂದು ಎಚ್ಚರಿಸಿದರು. ಇಂಥ ಎಚ್ಚರಿಕೆಯೇ ಸ್ವಾಮಿ ವಿವೇಕಾನಂದರನ್ನು ನಮ್ಮ ಕಾಲಕ್ಕೂ ಪ್ರಸ್ತುತರನ್ನಾಗಿಸುವುದೆನ್ನಿ!
ಸ್ವಾಮಿ ವಿವೇಕಾನಂದರ ಜೀವನವನ್ನು ನಾವು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ, ಅವರದ್ದು ಅವಧೂತಪ್ರಜ್ಞೆ ಎಂಬುದು ಸ್ಪಷ್ಟವಾಗುತ್ತದೆ. ಅವ ಧೂತನ ಕಾರುಣ್ಯವನ್ನಾಗಲೀ ಪ್ರಜ್ಞೆಯನ್ನಾಗಲೀ ನಮ್ಮ ಬೌದ್ಧಿಕ ಮಾನದಂಡಗಳಿಂದ ಅಳೆಯಲಾಗದಷ್ಟೆ.
ಇಂದು (ಜ. 12) ವಿವೇಕಾನಂದರ ಜನ್ಮದಿನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.