ಮಾನವನ ಅವತರಣ ಈ ಭುವಿಯ ಮೇಲೆ ಆದ ದಿನದಿಂದಲೂ ಅನ್ವೇಷಣ ಪ್ರವೃತ್ತಿ ಅವನ ಉಸಿರಲ್ಲಿ ಉಸಿರಾಗಿ ಬೆರೆತುಹೋಯಿತು. ಈ ಕಾರಣದಿಂದ ಹುಡುಕಾಟ ಅವನ ನಿರಂತರ ಪ್ರವೃತ್ತಿಯಾಯಿತು.
ಆದಿವಾಸಿಗಳ ಹಿರಿಯರು ತಮ್ಮ ಜೀವನಾನುಭವಗಳಿಂದ ವಯೋವೃದ್ಧರಾಗುವ ಜೊತೆ ಜೊತೆಗೆ ಜ್ಞಾನವೃದ್ಧರೂ ಆಗಿರುತ್ತಿದ್ದರು. ಕಿರಿಯರು ಅಂಥ ಹಿರಿಯರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದರು, ಕಲಿಯುತ್ತಿದ್ದರು, ಬೆಳೆಯುತ್ತಿದ್ದರು. ಆಗೆಲ್ಲಾ ಇನ್ನೂ ಅಕ್ಷರಗಳ ಬರಹವನ್ನು ಮಾನವ ಕಂಡುಕೊಂಡಿರಲಿಲ್ಲ. ಆಗ ಇದ್ದುದ್ದು ಒಂದೇ. ತೋಂಡಿ ಸಂಪ್ರದಾಯ. ಅಂದರೆ, ಮೌಖಿಕ ಕಲಿಕೆ. ಹಿರಿಯರಿಂದ ಕಿರಿಯರಿಗೆ ಬಾಯಿಪಾಠ ಮಾಡಿಸುವ ರೂಢಿ. ಅದೇ ಕಂಠಪಾಠ. ಸ್ಮೃತಿಗಳು ಉಳಿದುಬಂದದ್ದು ಹಾಗೆ. ಬೆಳೆದು ಬಂದದ್ದೂ ಹಾಗೇನೇ.
ಮಾನವ ಎಂದು ಅಕ್ಷರವನ್ನು ಕಲಿತುಕೊಂಡನೋ ಅಂದೇ ಮನುಕುಲದ ಮಹಾದಿನ. ಪರ್ವಕ್ಷಣ. ಅಕ್ಷರವು ಭಾವನಾ ಭಾಷೆಯ ಸಂಕೇತ. ಅಭಿವ್ಯಕ್ತಿ ಮಾಧ್ಯಮದಲ್ಲಿ ಇದು ಮಹತ್ತರ ಮೈಲಿಗಲ್ಲು. ವಾಸ್ತವವಾಗಿ ಇದೂ ಒಂದು ಸಾಧನೆಯ ಪ್ರಮುಖ ಮಜಲು. ಮುಂದಿನ ಪ್ರಗತಿಗೆ ಮೆಟ್ಟಿಲು.
ಜ್ಞಾನಾನ್ವೇಷಕರು ಈ ದಾರಿಯಲ್ಲಿ ಸಾಗಿದರು. ಮಹತ್ವಪೂರ್ಣ ಮಾಹಿತಿಗಳ ಜ್ಞಾನ ಸಂಗ್ರಹ ಸಾಧ್ಯವಾಗಿದ್ದು ಅಧ್ಯಯನದಿಂದ. ಜ್ಞಾನಾಭಿಮುಖಿಗಳಾಗಿ ಗ್ರಂಥಗಳ ಓದಿನಿಂದ ವ್ಯಕ್ತಿತ್ವಗಳನ್ನು ವಿಕಾಸಗೊಳಿಸಿಕೊಂಡರು. ಹಿರಿಯರು ಬರೆದಿಟ್ಟ ಕೃತಿಗಳನ್ನು (ತಾಳೆಗರಿಗಳ ಮೇಲೆ ಲೆಕ್ಕಣಿಕೆಯಿಂದ ಕೊರೆದಿಟ್ಟದ್ದನ್ನು) ಓದಿದ್ದರಿಂದ ವಿಷಯಗಳನ್ನು ಅರಿತುಕೊಂಡರು. ಕೊರೆದದ್ದು ಗ್ರಂಥ! ಕಟ್ಟಿದ್ದು ಗ್ರಂಥ! ಇಂಥ ಗ್ರಂಥ ಸಮುದಾಯವನ್ನು ಒಂದೊಂದಾಗಿ ಪಠಿಸಿದ್ದರಿಂದ ಕಂಠಸ್ಥವಾಯಿತು. ಚಿಂತನೆ ನಡೆಸಿದ್ದರಿಂದ, ಮಂಥನ ಮಾಡಿದ್ದರಿಂದ ಜ್ಞಾನ ವೈಶಾಲ್ಯ ಅರಿಯಲು ನಾಂದಿಯಾಯಿತು. ಪಾಂಡಿತ್ಯಗಳನ್ನು ಹಿರಿಯರು ಗಳಿಸಿದ್ದು ಹೀಗೇನೆ.
ಜನಮನದಲ್ಲಿ ವಾಚನಾಭಿರುಚಿ ಹೆಚ್ಚಿದ್ದರಿಂದ ಪುಸ್ತಕಗಳ ಸಂಖ್ಯೆ ಹೆಚ್ಚುಹೆಚ್ಚಾಗಿ ಬೆಳೆಯಿತು. ಲೇಖಕರ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು.
ಪುಸ್ತಕವು ಜ್ಞಾನದ ಕೈದೀವಿಗೆ. ಹೃದಯದ ಕತ್ತಲೆಯನ್ನು ಓಡಿಸುವ ಬೆಳಕಿನ ದೊಂದಿ. ಸುತ್ತಣ ಪರಿಸರ ಅರಿಯುವ ಅರಿವಿನ ಮನೆಯ ಹೆಬ್ಬಾಗಿಲು. ಪಾಂಡಿತ್ಯದ ಆತ್ಮವು ವ್ಯಕ್ತಿತ್ವ ವಿಕಾಸದ ಸತ್ವ. ಪುಸ್ತಕ ತಿಳಿವಿನ ಗಣಿ. ಬುದ್ಧಿಮತ್ತೆಯ ಭಂಡಾರ. ಎಂಟು ದಿಕ್ಕಿನ ಜ್ಞಾನ ಸಮೀರಸಾರ. ನವಚೈತನ್ಯಕ್ಕೆ ಬರೆಯುವ ಶ್ರೀಕಾರ. ಒಂದು ಹತ್ತಾಗಿ, ಹತ್ತು ನೂರಾಗಿ, ನೂರು ಸಾವಿರವಾಗಿ ಲಕ್ಷಲಕ್ಷವಾಗಿ ಜ್ಞಾನಿಗಳ ಲಕ್ಷ್ಯ ಸೆಳೆಯುವ ಸೂಜಿಗಲ್ಲಾಗಿ ವಿಭುದವರ್ಗಕ್ಕೆ ಸೇರಲು ರಹದಾರಿ.
ಜ್ಞಾನಸೂರ್ಯನ ಹೊಂಗಿರಣಗಳು ಹೊಳೆಯು ವುದೇ ಹೊತ್ತಗೆಗಳಲ್ಲಿ. ಅಂದರೆ ಪುಸ್ತಕಗಳಲ್ಲಿ. ಅಂಥ ಜ್ಞಾನನಿಧಿಗಳ ಸಂಸರ್ಗದಿಂದ ಸುಸಂಸ್ಕೃತ ಜನಾಂಗ ನಿರ್ಮಾಣವಾಗಿದೆ. ಅದರ ಫಲವೇ ನಮ್ಮ ನಲಂದಾ, ತಕ್ಷಶಿಲಾ ಬೃಹತ್ ಗ್ರಂಥಾಲಯಗಳು. ಕೋಟಿ ಕೋಟಿ ಜನಮನವು ಕಾಲಗರ್ಭದಲ್ಲಿ ಅವುಗಳ ಸಂಪರ್ಕದಿಂದ ಉದ್ಧಾರವಾಗಿದೆ.
ಪುಸ್ತಕ ಸಂಸ್ಕೃತಿ ಎಂದರೆ ಪಾವನ ಗಂಗೆಯಲ್ಲಿ ಬಂದು ಪುನೀತವಾಗುವುದು. ಹೊಸ ವ್ಯಕ್ತಿತ್ವಗಳನ್ನು ಪಡೆಯುವುದು. ನಡೆ, ನುಡಿ, ಆಚಾರ, ವಿಚಾರ, ಬದುಕಿನ ಶೈಲಿಯಲ್ಲಿ ರೂಕ್ಷತೆಗಳನ್ನು ಕಳೆದುಕೊಂಡು ಮಾರ್ಮಿಕವಾಗುವುದು. ವಾಸ್ತವವಾಗಿ ನಿಜಮಾನವನಾಗುವುದು. ಈಗ ರಾಜ್ಯದಲ್ಲಿ ಗ್ರಂಥಾಲಯ ಸಪ್ತಾಹದ (ನ. 14ರಿಂದ 20ರವರೆಗೆ) ಆಚರಣೆ.
ಹೊಸ ಹುಟ್ಟಿಗೆ ಬುನಾದಿ ಹಾಕುವುದು, ಅರೆಬರೆ ತಿಳಿವಳಿಕೆ ಅಳಿಸಿ ಪರಿಪೂರ್ಣತೆಯ ಕಡೆಗೆ ಅಧ್ಯಯನದ ವಿನೂತನ ಹೆಜ್ಜೆಗುರುತು ಮೂಡಿಸುವುದು ಪುಸ್ತಕ ಸಂಸ್ಕೃತಿ. ಮೂಢರ ಮೈಮನಗಳಲ್ಲಿ ನವ ಜ್ಞಾನವಾಹಿನಿ ಹರಿಸಿ ಎದೆಎದೆಗೆ ನಾಲ್ಕು ಅಕ್ಷರ ಅಮೃತ ಹರಿಸಿ ಪರಿವರ್ತನೆಗೆ ಶ್ರೀಕಾರ ಹಾಕುವುದು ಪುಸ್ತಕ ಸಂಸ್ಕೃತಿ. ವಿಕೃತಿಗಳ ಪೈಶಾಚಿಕ ಪ್ರವೃತ್ತಿ ನಾಶಪಡಿಸಿ ಸಂಸ್ಕೃತಿಯ ಲಕ್ಷಲಕ್ಷ ನಕ್ಷತ್ರಗಳ ಮಿಂಚಿನ ಸಂಚಾರದ ಕ್ಷೀರಪಥ ಈಂಟುವುದು ಪುಸ್ತಕ ಸಂಸ್ಕೃತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.