ADVERTISEMENT

ಸಂಗತ: ಪ್ರಜಾಪ್ರಭುತ್ವವೋ ಜಾತಿಪ್ರಭುತ್ವವೋ?

ಜಾತಿ ವ್ಯವಸ್ಥೆ ಇರುವ ಸಮಾಜದಲ್ಲಿ ಪ್ರತಿಸಲ ಗೆಲುವು ಜಾತಿಗೆ, ಸೋಲು ಪ್ರಜಾತಂತ್ರಕ್ಕೆ

ಡಾ.ಸರ್ಫ್ರಾಜ್ ಚಂದ್ರಗುತ್ತಿ
Published 7 ಜನವರಿ 2021, 19:31 IST
Last Updated 7 ಜನವರಿ 2021, 19:31 IST
ಪ್ರಜಾಪ್ರಭುತ್ವ
ಪ್ರಜಾಪ್ರಭುತ್ವ   

ನಮ್ಮ ಜನತಂತ್ರ ವ್ಯವಸ್ಥೆ ತನ್ನ ಸತ್ವವನ್ನು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಿಕೊಳ್ಳಲು ಅಡ್ಡಿಯಾಗಿರುವ ಜಾತಿ ರಾಜಕಾರಣಕ್ಕೆ ಮೊದಲು ತಡೆಯೊಡ್ಡಬೇಕಾಗಿದೆ.

ಜಾತಿ ವ್ಯವಸ್ಥೆಯು ಆಧುನಿಕ ಕಾಲಘಟ್ಟದಲ್ಲಿ ಕರಗಿಹೋಗುವ ಬದಲು ಪ್ರಬಲವಾಗಿ ಬೆಳೆದುನಿಂತು, ಹೊಸ ಹೊಸ ರೂಪಗಳಲ್ಲಿ ಅವತರಿಸುತ್ತಿದೆ. ಸಂವಿಧಾನದ ಸಮಾನತೆಯ ಆಶಯವನ್ನೇ ಮುಕ್ಕಾಗಿಸುತ್ತಿದೆ. ಈ ಕಾಲಕ್ಕೆ ಅಗತ್ಯವಾಗಿ ಬೇಕಾಗಿರುವ ಜಾತ್ಯತೀತ ಮೌಲ್ಯವನ್ನು ಅಣಕಿಸುತ್ತಿದೆ.

ಜಾತೀಯತೆಯು ಲಜ್ಜೆಯ ಸಂಗತಿಯಾಗಿದ್ದರೂ ಅಂತಹದ್ದೊಂದು ಭಾರತೀಯ ಪೌರಪ್ರಜ್ಞೆ ಸತ್ತು, ಅದಕ್ಕಾಗಿ ಹೆಮ್ಮೆ ಪಡುವಂತಹ ಜುಗುಪ್ಸೆಯ ವಾತಾವರಣ ನಿರ್ಮಾಣಗೊಂಡಿದೆ. ಚುನಾವಣೆ, ನೇಮಕಾತಿ, ಪ್ರತಿಭಾನ್ವೇಷಣೆ ಎಲ್ಲವನ್ನೂ ಹಲವು ಬಾರಿ ಜಾತಿಯೇ ನಿರ್ಧರಿಸುತ್ತಿದೆ. ಸಾಂವಿಧಾನಿಕ ಸಂಸ್ಥೆಗಳ ಒಳಗೆ ಸೇರಿಕೊಂಡ ‘ಜಾತಿಪ್ರಜ್ಞೆ’ ಎಲ್ಲವನ್ನೂ ನಿರ್ದೇಶಿಸುತ್ತಿದೆ.

ADVERTISEMENT

ಜಾತಿಗೊಂದು ಮಠ, ಮಠಾಧೀಶರು ತಮ್ಮ ತಮ್ಮ ಜಾತಿಯವರನ್ನು ಮಂತ್ರಿಗಳನ್ನಾಗಿಸಲು ಮತ್ತು ತಮ್ಮ ತಮ್ಮ ಜಾತಿಗಳಿಗೆ ಮೀಸಲಾತಿ ನೀಡುವಂತೆ ಬಹಿರಂಗವಾಗಿ ಒತ್ತಾಯಿಸುತ್ತಿರುವ ಸನ್ನಿವೇಶಗಳು ಪ್ರಜಾತಂತ್ರ ವ್ಯವಸ್ಥೆಯ ಮಾನವನ್ನು ಬೀದಿಗೆ ತಂದು ನಿಲ್ಲಿಸಿವೆ. ಇವರು ಅಧ್ಯಾತ್ಮ ಬೋಧಿಸುವ ಸಾಧುಸಂತರೋ ಕಾವಿಧಾರಿ ರಾಜಕಾರಣಿಗಳೋ ಎಂಬ ಅನುಮಾನ ಜನಸಾಮಾನ್ಯರಲ್ಲಿ ಶುರುವಾಗಿದೆ. ಬುದ್ಧ, ಬಸವ, ಪರಮಹಂಸ, ವಿವೇಕ, ರಮಣ, ನಾರಾಯಣಗುರು ಮೊದಲಾದ ‘ನೀತಿಗುರುಗಳು’ ತೆರೆಯ ಹಿಂದೆ ಸರಿದಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯನ್ನೇ ಬಹಿರಂಗವಾಗಿ ಗೇಲಿ ಮಾಡುತ್ತಿರುವ ‘ಜಾತಿಗುರುಗಳ’ ಸಂಖ್ಯೆ ಹೆಚ್ಚುತ್ತಿದೆ. ಈ ಬೆಳವಣಿಗೆ ಒಳ್ಳೆಯದಲ್ಲ.

ಒಂದು ಕಾಲದಲ್ಲಿ ಪ್ರಬಲ ಜನಸಮುದಾಯಗಳವರು ಕೆಳಮಧ್ಯಮ ಜಾತಿಗಳ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದರು. ಕಾಲಚಕ್ರ ಬದಲಾಗಿದೆ. ಈಗ ರಾಜಕೀಯ ಶಕ್ತಿ ಪಡೆದುಕೊಂಡ ಆಯಾ ಭೂಭಾಗಗಳಲ್ಲಿನ ಬಹುಸಂಖ್ಯಾತ ಜನಸಮುದಾಯವು ಸಂಖ್ಯಾಬಲ ಇಲ್ಲದ ಜಾತಿ– ಸಮುದಾಯಗಳ ಮೇಲೆ ರಾಜಕೀಯ ಸವಾರಿ ನಡೆಸುತ್ತಿದೆ.

ಅಂಬೇಡ್ಕರ್ ಅವರ ಹೋರಾಟ, ಚಿಂತನೆಗಳೆಲ್ಲ ಜಾತಿ ವಿನಾಶದತ್ತಲೇ ಕೇಂದ್ರೀಕೃತಗೊಂಡಿದ್ದರೂ ‘ಅಸ್ಪೃಶ್ಯತೆ’ಯನ್ನು ಸಂವಿಧಾನದ ಮೂಲಕ ಸಾಮಾಜಿಕ ಅಪರಾಧವಾಗಿ ಘೋಷಿಸಲು ಸಾಧ್ಯವಾದ ಹಾಗೆ ‘ಜಾತಿ ವ್ಯವಸ್ಥೆ’ಯನ್ನು ನಿಷೇಧಿಸಲಾಗಲಿಲ್ಲ. ಹಾಗೆ ಮಾಡಿದ್ದರೆ ಅದನ್ನು ಭೂಮಿ–ಆಕಾಶಗಳನ್ನು ಒಂದು ಮಾಡಿ ವಿರೋಧಿಸುವವರು ಇದ್ದರು. ಇಂದಿಗೂ ಅದೇ ಮನಃಸ್ಥಿತಿ ಉಳಿದುಬಂದಿದೆ. ಆದರೆ ಜಾತಿಯನ್ನು ನಿಷೇಧಿಸಲಾಗದಿದ್ದರೂ ಜಾತ್ಯತೀತ ತತ್ವವು ಸಂವಿಧಾನದ ಉದ್ದಕ್ಕೂ ಮಿಳಿತವಾಗಿರುವುದನ್ನು ಗಮನಿಸಬಹುದು.

ದೇಶದ ಯಾವುದೇ ಕ್ಷೇತ್ರದಲ್ಲಿ ಚುನಾವಣಾ ಅಭ್ಯರ್ಥಿಯಾಗಿ ನಿಲ್ಲಲು ಇಂದಿನ ಚುನಾವಣೆ ಬೇಡುವ ಮೊದಲ ಅರ್ಹತೆ ಜಾತಿ. ಸ್ಥಳೀಯ ಬಹುಸಂಖ್ಯಾತ ಸಮಾಜಕ್ಕೆ ಸೇರಿದವರಾಗಿರಬೇಕು ಎಂಬುದನ್ನು ಆಧರಿಸಿ ಅಭ್ಯರ್ಥಿಯ ಆಯ್ಕೆ ನಡೆಯುತ್ತದೆ. ಪ್ರಾಮಾಣಿಕತೆ, ಸೇವಾ ಮನೋಭಾವ, ಘನವಾದ ವ್ಯಕ್ತಿತ್ವ, ವಿದ್ಯಾರ್ಹತೆ ಯಾವುದನ್ನೂ ಮಾನದಂಡವನ್ನಾಗಿ ಪರಿಗಣಿಸಲಾಗುತ್ತಿಲ್ಲ. ಕೇವಲ ಅರ್ಹತೆ ಒಂದೇ– ಅದು ಜಾತಿ-ಜಾತಿ-ಜಾತಿ. ಇನ್ನುಳಿದಂತೆ, ಚುನಾವಣೆಯನ್ನು ಎದುರಿಸಿ ಗೆಲ್ಲುವ ಆರ್ಥಿಕ ಸಾಮರ್ಥ್ಯ. ಇದನ್ನು ಪ್ರಜಾಪ್ರಭುತ್ವವೆಂದು ಹೇಗೆ ಕರೆಯಲಾದೀತು? ಜಾತಿಪ್ರಭುತ್ವವಲ್ಲವೇ ಇದು?!

ಜಾತೀಯತೆಯಿಂದ ಮುಕ್ತವಾದ ಪ್ರಜಾಪ್ರಭುತ್ವ ಇಂದಿನ ತುರ್ತು. ಜಾತಿ ಬೆಂಬಲವಿಲ್ಲದೆಯೂ ತಮ್ಮ ವ್ಯಕ್ತಿತ್ವದಿಂದ ಗೆದ್ದುಬಂದಿರುವ ಹಲವರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜಕಾರಣ ಆರಂಭಿಸಿದ ಗುಜರಾತ್‍ನಲ್ಲಿ ಅವರು ಬಹುಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಲಿಲ್ಲ. ಕರ್ನಾಟಕದ ಸಂದರ್ಭದಲ್ಲಿ, ಸಮಾಜವಾದಿ ನೇತಾರ, ದಿವಂಗತ ಶಾಂತವೇರಿ ಗೋಪಾಲಗೌಡ ಅವರು ಸಿದ್ಧಾಂತದ ಬಲದಿಂದಲೇ ಶಾಸನಸಭೆಗೆ ಆರಿಸಿ ಬಂದವರು. ದಿವಂಗತ ಧರ್ಮಸಿಂಗ್ ನಿರಂತರ ಏಳು ಸಲ ಅಸೆಂಬ್ಲಿಗೆ ಆಯ್ಕೆಯಾದರು. ಅವರು ಅಲ್ಪಸಂಖ್ಯಾತ ರಜಪೂತ ಸಮುದಾಯಕ್ಕೆ ಸೇರಿದವರಾಗಿದ್ದರು. ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹಲವು ದಾಖಲೆಗಳನ್ನು ಬರೆದ ದೇವರಾಜ ಅರಸು ಕೂಡ ಜಾತಿಯ ಬೆಂಬಲವಿಲ್ಲದೆ ಗೆದ್ದು ದೀರ್ಘ ಕಾಲ ಮುಖ್ಯಮಂತ್ರಿಯಾಗಿದ್ದವರು.

ದೇಶದಲ್ಲಿರುವ ಚಿಕ್ಕ ಪುಟ್ಟ ಸಾವಿರಾರು ಸಮುದಾಯಗಳಲ್ಲಿ ಈವರೆಗೆ ಮಂತ್ರಿ, ಮುಖ್ಯಮಂತ್ರಿಯಿರಲಿ ಒಂದು ಸಲವೂ ಒಬ್ಬೇ ಒಬ್ಬಾತ ಶಾಸಕನಾಗಿಯೂ ಆಯ್ಕೆಯಾಗಿಲ್ಲ. ಬಿಹಾರದಲ್ಲಿ ಮತ ಚಲಾವಣೆಯ ಬದಲಿಗೆ ಜಾತಿ– ಧರ್ಮದ ಚಲಾವಣೆ ಆಗುತ್ತದೆ ಎಂಬ ಮಾತಿದೆ. ಇದೇ ಮನೋಧರ್ಮ ವರ್ತಮಾನದಲ್ಲಿ ದೇಶದ ಹಲವೆಡೆ ವಿಸ್ತರಣೆಗೊಂಡಿದೆ. ಪರಿಶಿಷ್ಟರಿಗೆ ರಾಜಕೀಯ ಮೀಸಲಾತಿಯನ್ನು ನೀಡಿರುವಂತೆ ಉಳಿದ ಅವಕಾಶವಂಚಿತ ಸಮುದಾಯದವರಿಗೂ ಇದನ್ನು ವಿಸ್ತರಿಸುವುದು ಈಗ ನಮ್ಮ ಮುಂದೆ ಉಳಿದಿರುವ ಏಕೈಕಮಾರ್ಗ.

ನಮ್ಮ ಜನತಂತ್ರ ವ್ಯವಸ್ಥೆ ತನ್ನ ಸತ್ವವನ್ನು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಿಕೊಳ್ಳಲು ಅಡ್ಡಿಯಾಗಿರುವ ಜಾತಿ ರಾಜಕಾರಣಕ್ಕೆ ಮೊದಲು ತಡೆಯೊಡ್ಡಬೇಕಾಗಿದೆ.

ಕುವೆಂಪು ಹೇಳಿದ್ದ ‘ಕಾಲರಾ, ಪ್ಲೇಗು, ಮಲೇರಿಯಾಗಳನ್ನು ದೇವರೇ ಸೃಷ್ಟಿ ಮಾಡಿದ್ದು ಅಂತ ಹೇಳಿ ನಾವು ಸುಮ್ಮನಿರಲು ಆದೀತೆ? ಅನಾರೋಗ್ಯಕರವೂ ಮೃತ್ಯುಕಾರಕವೂ ಆಗಿರುವ ಅವನ್ನೆಲ್ಲಾ ನಾಶಪಡಿಸಿ ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳುವಂತೆ, ವರ್ಣ, ಜಾತಿ, ವರ್ಗ ಮೊದಲಾದ ದುರ್ಭಾವಗಳನ್ನೆಲ್ಲ ಧ್ವಂಸ ಮಾಡಿ ಸಮಾಜದ ಕ್ಷೇಮವನ್ನು ಸಾಧಿಸಬೇಕು’ ಎಂಬ ಮಾತು ಇಂದಿಗೆ ಹೆಚ್ಚು ಸಲ್ಲುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.