ADVERTISEMENT

ಸಂಗತ: ಕಾಶ್ಮೀರದ ‘ಕರೆವ’ ಕರೆ ಕೇಳುತ್ತಿಲ್ಲವೇ?

ಕಾಶ್ಮೀರದ ಕಣಿವೆಗಳ ಫಲವತ್ತಾದ ‘ಕರೆವ’ ಪ್ರಸ್ಥಭೂಮಿಯ ಮಣ್ಣು ಮಾನವಾಭಿವೃದ್ಧಿಯ ಒತ್ತಡಕ್ಕೆ ಸಿಲುಕಿ ಧೂಳೀಪಟವಾಗುತ್ತಿದೆ

ಶ್ರೀಗುರು
Published 18 ಏಪ್ರಿಲ್ 2024, 19:32 IST
Last Updated 18 ಏಪ್ರಿಲ್ 2024, 19:32 IST
.
.   

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಇತ್ತೀಚಿನ ಕಾಶ್ಮೀರದ ಭೇಟಿ ಬಹಳ ಸದ್ದು ಮಾಡಿತು. ಹಿಮದ ಹಾಸಿನ ಕೊರತೆಯಿಂದ ಕಾಶ್ಮೀರದ ಪ್ರವಾಸೋದ್ಯಮ ಸೊರಗಿದೆ ಎಂಬ ಸುದ್ದಿಯೂ ಇತ್ತು. ಈಗ ತಡವಾಗಿಯಾದರೂ ಹಿಮಪಾತ ಶುರು ವಾಗಿದೆ. ಕಾಶ್ಮೀರ ಎಂದಾಕ್ಷಣ ಅಲ್ಲಿನ ಹಿಮಾಚ್ಛಾದಿತ ಕಣಿವೆಗಳು, ಸುಂದರ ಸರೋವರಗಳು, ಪ್ರವಾಸಿ ತಾಣಗಳಲ್ಲಿ ಸಂತೋಷದಿಂದ ವಿಹರಿಸುವ ಪ್ರವಾಸಿ ಗರು, ಕರಕುಶಲ ಕಲೆಗಳನ್ನು ಪ್ರದರ್ಶಿಸುವ ಸ್ಥಳೀಯರು, ರಸ್ತೆಬದಿಯಲ್ಲಿ ಮಾರಾಟಕ್ಕೆ ದೊರಕುವ ಕೇಸರಿ, ರಕ್ತವರ್ಣದ ಸೇಬುಹಣ್ಣುಗಳು... ಹೀಗೆ ರಮ್ಯ ಚಿತ್ರವೊಂದು ಕಣ್ಣ ಮುಂದೆ ಸುಳಿಯುತ್ತದೆ. ಇವೆಲ್ಲದರ ನಡುವೆ ಕಾಶ್ಮೀರದ ಪರಿಸರಕ್ಕೆ ಶಾಶ್ವತ ಹಾನಿ ಉಂಟುಮಾಡಿ ರೈತರನ್ನು ಕಷ್ಟಕ್ಕೆ ನೂಕುವ ‘ಕರೆವ’ ಗಣಿಗಾರಿಕೆಯ ಕುರಿತು ಯಾವ ಸುದ್ದಿಯೂ ಇಲ್ಲ.

ಕಾಶ್ಮೀರದ ಕಣಿವೆಗಳ ಫಲವತ್ತಾದ ‘ಕರೆವ’ ಪ್ರಸ್ಥಭೂಮಿಯ ಮಣ್ಣು ಮಾನವಾಭಿವೃದ್ಧಿಯ ಒತ್ತಡಕ್ಕೆ ಸಿಲುಕಿ ಧೂಳೀಪಟವಾಗುತ್ತಿದೆ. ಕಾಶ್ಮೀರದ ಭೌಗೋಳಿಕ ಹಿರಿಮೆಗೆ ಕಾರಣವಾದ ಮತ್ತು ಹಿಮಾಲಯದೊಂದಿಗೆ ಗಡಿ ಹಂಚಿಕೊಂಡಿರುವ ‘ಪಿರ್ ಪಂಜಲ್’ ಪರ್ವತ ಪ್ರದೇಶವೀಗ ಅಭಿವೃದ್ಧಿಯ ಹೊಡೆತಕ್ಕೆ ಸಿಲುಕಿ ನಲುಗುತ್ತಿದೆ. ಕರೆವ ಪ್ರಸ್ಥಭೂಮಿಯು (ಎತ್ತರದ ಮೇಜಿನಾಕಾರದ ಮೈದಾನ ಪ್ರದೇಶ) ಮರಳುಶಿಲೆ ಮತ್ತು ಮೆಕ್ಕಲು ಮಣ್ಣಿನ ನಿಕ್ಷೇಪಗಳಿಂದ ಕೂಡಿದೆ. ಮಳೆಗಾಲದಲ್ಲಿ ಕಣಿವೆ ಪ್ರದೇಶಗಳಿಂದ ಹರಿದುಬರುವ ಮೆಕ್ಕಲು ಮಣ್ಣು ರೈತರ ಪಾಲಿನ ಜೀವನಿಧಿ ಎನಿಸಿದೆ. ಕಾಶ್ಮೀರದ ಕೇಸರಿ, ಸೇಬು ಮತ್ತು ಬಾದಾಮಿ ಬೆಳೆಗೆ ಅತ್ಯಗತ್ಯ ಪೋಷಕಾಂಶ ನೀಡುವ ಫಲವತ್ತಾದ ಈ ಮಣ್ಣು ಈಗ ರೈಲು ಮಾರ್ಗ, ರಸ್ತೆ ನಿರ್ಮಾಣ ಮತ್ತು ಹೆದ್ದಾರಿ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ.

ಸುಮಾರು 26 ಲಕ್ಷ ವರ್ಷಗಳ ಹಿಂದೆ ರೂಪುಗೊಂಡ ಈ ‘ಕರೆವ’ ಪ್ರಸ್ಥಭೂಮಿಯು ಪಿರ್ ಪಂಜಲ್ ಪರ್ವತ ಶ್ರೇಣಿಯಿಂದ ಹರಿದುಬರುವ ಮಳೆನೀರನ್ನು ತಡೆಹಿಡಿದು ಐದು ಸಾವಿರ ಚದರ ಕಿ.ಮೀ. ವಿಸ್ತಾರದ ದೊಡ್ಡ ಸರೋವರವನ್ನೇ ನಿರ್ಮಿಸಿತ್ತು. ಶತಮಾನಗಳು ಕಳೆದಂತೆ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬಂತು. ನೀರಿನ ಹರಿವಿನ ಮಾರ್ಗ ಮತ್ತು ಪರ್ವತಶ್ರೇಣಿಯ ನಡುವೆ ರೂಪುಗೊಂಡ ಕರೆವ ಪ್ರಸ್ಥಭೂಮಿಯಲ್ಲಿ ಫಲವತ್ತಾದ ಮಣ್ಣಿನ ಜೊತೆಗೆ ಹಲವು ನಾಗರಿಕತೆಗಳ ಪಳೆಯುಳಿಕೆಗಳೂ ಇವೆ. ವ್ಯಾವಸಾಯಿಕ ಮತ್ತು ಭೂಐತಿಹಾಸಿಕ ಪ್ರಾಮುಖ್ಯ ಪಡೆದಿದ್ದರೂ ಕರೆವಗಳ ಉತ್ಖನನ ನಿರಂತರವಾಗಿ ನಡೆಯುತ್ತಿದೆ. ಹಿಂದಿನ 20 ವರ್ಷಗಳಲ್ಲಿ ಪುಲ್ವಾಮ, ಬುಡ್‍ಗಮ್, ಬಾರಾಮುಲ್ಲ ಜಿಲ್ಲೆಗಳ ಕರೆವಗಳನ್ನು ನೆಲಸಮ ಮಾಡಿ 125 ಕಿ.ಮೀ. ಉದ್ದದ ಖಾಜಿಗಂಡ್- ಬಾರಾಮುಲ್ಲ ರೈಲು ಮಾರ್ಗಕ್ಕೆ ಮಣ್ಣು ಒದಗಿಸಲಾಗಿದೆ. ಶ್ರೀನಗರದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬುಡ್‍ಗಮ್‍ನ ದಾಮೋದರ್ ಕರೆವ ಪ್ರದೇಶ ಬಲಿಯಾಗಿದೆ. ಈಗ ಪುಲ್ವಾಮ ಮತ್ತು ಗಂದೇರ್‌ಬಲ್‌ ಜಿಲ್ಲೆಗಳ ನಡುವಿನ 58 ಕಿ.ಮೀ. ಉದ್ದದ ರಸ್ತೆಗಾಗಿ ಕರೆವಗಳನ್ನು ಅಗೆಯಲಾಗುತ್ತಿದೆ.

ADVERTISEMENT

ಪರ್ವತ ಪ್ರದೇಶದಲ್ಲಿ ಬೃಹತ್ ರಸ್ತೆ, ಸೇತುವೆ ಹಾಗೂ ರೈಲು ಮಾರ್ಗದ ನಿರ್ಮಾಣಕ್ಕೆ ಮಣ್ಣು ಹೊಂದಿಸುವುದು ತುಸು ತ್ರಾಸದಾಯಕ ಕೆಲಸವೆ. ಎತ್ತರದ ಪ್ರದೇಶಗಳೆಲ್ಲಾ ಗಟ್ಟಿಶಿಲೆಗಳಿಂದ ಆವೃತ ವಾಗಿವೆ ಮತ್ತು ಕಣಿವೆಗಳಲ್ಲಿ ಮಾತ್ರ ಮಣ್ಣು ಸಿಗುತ್ತದೆ. ಕಣಿವೆಯ ಭಾಗಗಳಲ್ಲಿ ಅಂತರ್ಜಲ ಬರೀ ಐದು ಮೀಟರ್ ಆಳದಲ್ಲಿದೆ. ದುರದೃಷ್ಟವಶಾತ್ ಕಣಿವೆ ಪ್ರದೇಶಕ್ಕೆ ಹೊಂದಿಕೊಂಡ ಕರೆವಗಳನ್ನು ಸುಲಭವಾಗಿ ಅಗೆಯಬಹುದಾಗಿವೆ.

ಪಟ್ಟನ್ ಹಳ್ಳಿಯ ಸಾಮಾಜಿಕ ಕಾರ್ಯಕರ್ತ ರಾಥೆರ್ ‘ರಸ್ತೆ ನಿರ್ಮಿಸಲು ಫಲವತ್ತಾದ ಮಣ್ಣೇ ಏಕೆ ಬೇಕು? ಬಹುಪಾಲು ರೈತರು ಈ ಫಲವತ್ತಾದ ಮಣ್ಣಿನಿಂದ ಬದುಕು ಕಟ್ಟಿಕೊಂಡಿದ್ದಾರೆ. ಒಮ್ಮೆ ನಾಶವಾದ ಕರೆವಗಳು ಮತ್ತೆ ಸೃಷ್ಟಿಯಾಗುವುದಿಲ್ಲ ಎಂಬುದು ಇವರಿಗೆ ತಿಳಿದಿಲ್ಲವೇ?’ ಎಂದು ಪ್ರಶ್ನಿಸುತ್ತಾರೆ. ಅಗೆದ ಮಣ್ಣನ್ನು ಸಾಗಿಸಲು ದಿನವಿಡೀ ಸಂಚರಿಸುವ ಡೀಸೆಲ್ ಲಾರಿಗಳಿಂದ ಏಳುವ ಹೊಗೆ ಮತ್ತು ದೂಳಿನಿಂದ ಮನೆಮನೆಯಲ್ಲೂ ಉಸಿರಾಟದ ಸಮಸ್ಯೆಯಿಂದ ಬಳಲುವವರಿದ್ದಾರೆ. ಕಾಶ್ಮೀರ ಕಂದಾಯ ಕಾಯ್ದೆ- 1996ರ ಪ್ರಕಾರ, ಕರೆವಗಳ ಸ್ವರೂಪವನ್ನು ಯಾವ ಕಾರಣಕ್ಕೂ ಬದಲಾಯಿಸುವಂತಿಲ್ಲ. ಜಮ್ಮು ಕಾಶ್ಮೀರ ಮೈನರ್ ಮಿನರಲ್ ಕಾಯ್ದೆ– 2016ರಂತೆ, ಮಣ್ಣಿನ ಗಣಿಗಾರಿಕೆಗೆ ನಿಷೇಧವಿದೆ. ಮಾಡಲೇಬೇಕೆಂದಿದ್ದರೆ ಸ್ಥಳೀಯ ಪಂಚಾಯಿತಿಯ ಒಪ್ಪಿಗೆ ಬೇಕು. ಆದರೂ ಖಾಸಗಿ ಒಡೆತನದಲ್ಲಿರುವ ಜಾಗಗಳಿಂದ ಮಣ್ಣಿನ ಗಣಿಗಾರಿಕೆ ತಡೆಯಿಲ್ಲದೆ ನಡೆಯುತ್ತಿದೆ.

ಕರೆವಗಳ ನಾಶದಿಂದ ಅಗಾಧ ಪ್ರಮಾಣದ ಹೂಳು ಝೀಲಂ ನದಿಯನ್ನು ಸೇರುತ್ತಿದೆ. ನದಿಗೆ ಸಮಾನಾಂತರವಾಗಿ ನಿರ್ಮಿಸಲಾಗಿರುವ 42 ಕಿ.ಮೀ ಉದ್ದದ ಕಾಲುವೆಯೊಂದು ಪ್ರವಾಹದ ನೀರು, ರಾಡಿಯನ್ನು ಶ್ರೀನಗರದ ಹೊರ ಭಾಗದಿಂದ ಉತ್ತರ ಕಾಶ್ಮೀರದ ವುಲಾರ್ ಸರೋವರಕ್ಕೆ ಸಾಗಿಸುತ್ತಿತ್ತು. ಪ್ರವಾಹವುಂಟಾದಾಗ ಶ್ರೀನಗರವನ್ನು ಕಾಪಾಡಲು ಈ ಕಾಲುವೆಯನ್ನು 1920ರಲ್ಲಿಯೇ ನಿರ್ಮಿಸ
ಲಾಗಿತ್ತು. ಜಲಾನಯನ ಪ್ರದೇಶಗಳ ನಾಶದಿಂದಾಗಿ ಹೆಚ್ಚಿನ ಹೂಳು ನದಿಯಲ್ಲಿ ಸಂಗ್ರಹಗೊಳ್ಳುತ್ತಿದೆ, ಸರ್ಕಾರ ಈ ಕೂಡಲೇ ವುಲಾರ್ ಸರೋವರದ ಹೂಳು ಎತ್ತಿ ಅದನ್ನೇ ಅಭಿವೃದ್ಧಿ ಕೆಲಸಗಳಿಗೆ ಬಳಸಬೇಕು ಎಂದು ಪರಿಸರವಾದಿ ಅಜಾಜ್ ರಸೂಲ್ ಒತ್ತಾಯಿಸುತ್ತಿದ್ದಾರೆ.

ಕರೆವಗಳನ್ನು ಭೂಐಸಿಹಾಸಿಕ ತಾಣಗಳೆಂದು ಘೋಷಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು ಎಂಬುದು ಸುತ್ತಲಿನ ಜನರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.