‘ನೋಟಾ’ ಮತದಾನಕ್ಕೆ ಸಂಬಂಧಿಸಿದ ‘ನೀನಲ್ಲ, ಅವನಲ್ಲ, ಇವನೂ ಅಲ್ಲ’ ಎಂಬ ಪ.ರಾಮಕೃಷ್ಣ ಶಾಸ್ತ್ರಿ ಅವರ ಲೇಖನ (ಸಂಗತ, ಏ. 17) ಮೇಲ್ನೋಟಕ್ಕೆ ಆದರ್ಶವಾಗಿ ಕಂಡರೂ ಪ್ರಸ್ತುತ ಸಂಕೀರ್ಣವಾದ ಚುನಾವಣಾ ಸಂದರ್ಭ ಮತ್ತು ಮತದಾನ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಪರಿಗಣಿಸಿದರೆ, ಲೇಖಕರ ಉದ್ದೇಶವನ್ನು ಈಡೇರಿಸಲಾರದು ಎನಿಸುತ್ತದೆ.
ನೋಟಾ ಮತದಾನ ಸಹ ಮತದಾನ ಮಾಡದಿರು ವಷ್ಟೇ ಪರಿಣಾಮವನ್ನು ಉಂಟುಮಾಡುತ್ತದೆ. ಏಕೆಂದರೆ ಸದ್ಯಕ್ಕೆ ನಮ್ಮ ಮತದಾರ ಪ್ರಭುಗಳಾಗಲಿ, ಸ್ಪರ್ಧಿಗಳಾಗಲಿ, ಪಕ್ಷಗಳಾಗಲಿ ಅಂತಹ ಸೂಕ್ಷ್ಮ ಸಂವೇದಿಗಳಾಗಿಲ್ಲ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಮತದಾರರು ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ರಾಜಕೀಯ ಬೆಳವಣಿಗೆಗಳ ಬಗೆಗೆ ಅರಿವು ಪಡೆಯುತ್ತಿದ್ದಾರೆ ಎಂಬುದು ನಿಜವಾದರೂ ಅವು ಅವರಲ್ಲಿ ಆಳವಾದ ಪ್ರಜ್ಞೆಯನ್ನು ಉಂಟುಮಾಡುತ್ತಿಲ್ಲ ಎಂದೇ ಹೇಳಬೇಕಾಗುತ್ತದೆ. ಮತದಾರ ಬಹಳಷ್ಟು ಗೊಂದಲಕ್ಕೂ ಗುರಿಯಾಗಿದ್ದಾನೆ.
ನಮ್ಮದು ಅಮೆರಿಕದ ಹಾಗೆ ಅಧ್ಯಕ್ಷೀಯ ಮಾದರಿಯ ಚುನಾವಣೆ ಅಲ್ಲದಿದ್ದರೂ ಆ ಮಾದರಿಯಲ್ಲಿಯೇ ಚುನಾವಣಾ ಪ್ರಚಾರ ಸಾಗಿದೆ. ಮೊದಲಿನ ಹಾಗೆ ಭಿನ್ನ ರಾಜಕೀಯ ಪಕ್ಷಗಳಿಗೆ ಸೇರಿದ ವ್ಯಕ್ತಿಗಳ ನಡುವಿನ ಹೋರಾಟವಷ್ಟೇ ಆಗಿಲ್ಲದೆ ಪಕ್ಷಗಳ ಭಿನ್ನ ಸೈದ್ಧಾಂತಿಕ ಸಂಘರ್ಷವೂ ಆಗಿದೆ. ಹೀಗಾಗಿ, ಚುನಾವಣಾ ಕಣದಲ್ಲಿರುವ ವ್ಯಕ್ತಿಗಳ ಮೌಲ್ಯಮಾಪನವಷ್ಟೇ ಮುಖ್ಯವಾಗದೆ ಆ ವ್ಯಕ್ತಿಯ ಪಕ್ಷದ ತಾತ್ವಿಕತೆಯ ಔಚಿತ್ಯವನ್ನೂ ಅಳೆಯಬೇಕಾಗು ತ್ತದೆ. ಹೀಗಾಗಿ, ವ್ಯಕ್ತಿಯ ಗುಣಾವಗುಣಗಳ ಜೊತೆಗೆ ಯಾವ ಪಕ್ಷವು ದೇಶದ ಭವಿಷ್ಯದ ದೃಷ್ಟಿಯಿಂದ ಎಷ್ಟು ಉತ್ತಮವಾದುದು ಎಂಬುದಕ್ಕಿಂತ, ಎಷ್ಟು ಅಪಾಯಕಾರಿ ಅಥವಾ ಎಷ್ಟು ಕಡಿಮೆ ಅಪಾಯಕಾರಿ ಎಂದು ಯೋಚಿಸಬೇಕಾದಂತಹ ಸಂದರ್ಭ ಒದಗಿಬಂದಿದೆ.
ಮತದಾನದ ಮೂಲ ಉದ್ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಾಪನೆ ಮತ್ತು ಮುಂದುವರಿಕೆ. ಇಂದು ಭಾರತದ ಪ್ರಜಾಪ್ರಭುತ್ವ ಆತಂಕದ ಹಂತವನ್ನು ತಲುಪಿದೆ ಎಂದು ಹಲವಾರು ರಾಜಕೀಯ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
ಸ್ವೀಡನ್‌ನ ಗೊಥೆನ್‌ಬರ್ಗ್ ಮೂಲದ ವಿ- ಡೆಮ್ ಸಂಸ್ಥೆ ಪ್ರಕಟಿಸಿರುವ ‘ಪ್ರಜಾಪ್ರಭುತ್ವ ವರದಿ- 2024’ರ ಪ್ರಕಾರ, ಭಾರತವು ಪ್ರಜಾಪ್ರಭುತ್ವದ ಹಲವಾರು ಮಾನದಂಡಗಳಲ್ಲಿ ಕೆಟ್ಟ ಸರ್ವಾಧಿಕಾರದ ಕಡೆಗೆ ಸಾಗುತ್ತಿರುವ ದೇಶಗಳಲ್ಲಿ ಒಂದು ಎಂದು ಅನಿಸಿಕೊಂಡಿದೆ. ಇದೇ ಸಂಸ್ಥೆಯ 2018ರ ವರದಿಯು ಭಾರತವು ‘ಚುನಾವಣಾ ಸರ್ವಾಧಿಕಾರ’ದ ಹಂತದಲ್ಲಿದೆ ಎಂದು ಸೂಚಿಸಿತ್ತು. ಪ್ರಜಾಪ್ರಭುತ್ವವನ್ನು ಉಳಿಸುವ, ಬಲಪಡಿಸುವ ದಿಸೆಯಲ್ಲಿ ನಿರ್ಣಾಯಕ ಹಂತದಲ್ಲಿ ಈಗ ನಾವು ಇದ್ದೇವೆ. ಆದ್ದರಿಂದ ಇಂದು ಯಾವ ವ್ಯಕ್ತಿ ಕೆಟ್ಟವನು, ಯಾವ ವ್ಯಕ್ತಿ ಒಳ್ಳೆಯವನು ಎನ್ನುವುದಕ್ಕಿಂತ ಯಾವ ಪಕ್ಷ ಕಡಿಮೆ ಅಪಾಯಕಾರಿ ಎಂದು ಯೋಚಿಸಿ ಮತದಾನ ಮಾಡುವುದು ಅತ್ಯಗತ್ಯವಾಗಿದೆ.
ಇಂತಹ ಸಂದರ್ಭದಲ್ಲಿ, ಪಕ್ಷ ಪರವಾಗಿಲ್ಲ ಆದರೆ ವ್ಯಕ್ತಿ ಸರಿಯಿಲ್ಲ ಎಂದು ಯೋಚಿಸಿ ನೋಟಾ ಮತ ಚಲಾವಣೆ ಮಾಡಿದರೆ, ಕಡಿಮೆ ಅಪಾಯಕಾರಿ ಪಕ್ಷದ ಮತಗಳು ವಿಭಜನೆಗೆ ಒಳಪಟ್ಟು, ಹೆಚ್ಚು ಅಪಾಯಕಾರಿ ಪಕ್ಷವು ಗದ್ದುಗೆಯನ್ನು ಆಕ್ರಮಿಸಿಕೊಳ್ಳುವುದಕ್ಕೆ ನಮ್ಮ ಮತ ಸಹಕಾರಿಯಾಗಿರುತ್ತದೆ. ಆದ್ದರಿಂದ ನೋಟಾ ಮತದಾನವು ಪಲಾಯನವಾದಿ ಮಾತ್ರ ಆಗದೆ ನಕಾರಾತ್ಮಕ ನಿಲುವು ಕೂಡ ಆಗುವ ಸಂಭವ ಇರುತ್ತದೆ.
ಇದಕ್ಕಿಂತ ಮುಖ್ಯವಾದ ಕಾರಣವೆಂದರೆ, ನಮ್ಮಲ್ಲಿ ನೋಟಾದ ಪರಿಕಲ್ಪನೆ ಇನ್ನೂ ಬಹುಜನರಲ್ಲಿ ಮೂಡಿಲ್ಲ. ಎಲ್ಲೋ ಕೆಲವು ನೋಟಾ ಮತಗಳು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಾಗುತ್ತವೆ ಅಷ್ಟೆ. ಅನೇಕ ಸಂದರ್ಭಗಳಲ್ಲಿ ಬರೀ ಶೇ 30ರಿಂದ 35ರಷ್ಟು ಮತಗಳನ್ನು ಪಡೆದವರು ಗೆಲುವನ್ನು ಪಡೆಯುತ್ತಾರೆ. ಉಳಿದ ಮತಗಳು ಬೇರೆ ಬೇರೆ ವ್ಯಕ್ತಿಗಳಿಗೆ ಹರಿದು ಹಂಚಿಹೋಗಿರುತ್ತವೆ. ಅಂತಹ ಸಂದರ್ಭದಲ್ಲಿ ಕೂಡ ತಾನು ಗೆದ್ದೆನೆಂಬ ಸಂಭ್ರಮಾಚರಣೆಯಲ್ಲಿ ಮುಳುಗಿರು ತ್ತಾರೆಯೇ ವಿನಾ ವಾಸ್ತವದಲ್ಲಿ ತನ್ನನ್ನು ಬಹುಮಂದಿ ತಿರಸ್ಕರಿಸಿದ್ದಾರೆ ಎಂಬ ಅಳುಕು ಅವರನ್ನು ಕಾಡುವುದೇ ಇಲ್ಲ. ಅಷ್ಟರಮಟ್ಟಿಗೆ ಬಹುಮಂದಿ ರಾಜಕಾರಣಿಗಳು ಪಾಷಾಣಹೃದಯಿಗಳಾಗಿದ್ದಾರೆ. ಆದ್ದರಿಂದ ಮತದಾರ ಇಂದು ಹಿಂದೆಂದಿಗಿಂತಲೂ ಹೆಚ್ಚು ವಿವೇಚನಾ ಶೀಲನಾಗಬೇಕಾಗಿದೆ.
ಸೂಕ್ಷ್ಮ, ಸಂವೇದನಾಶೀಲ ವ್ಯಕ್ತಿಗಳನ್ನು ಒಳಗೊಂಡ ವಾತಾವರಣ ಇದ್ದಲ್ಲಿ ಮಾತ್ರ ನೋಟಾ ಮತಗಳಿಗೂ ಮಾನ್ಯತೆ ಇರುತ್ತದೆಯೇ ವಿನಾ ಪ್ರಸಕ್ತ ಅಧಿಕಾರದಾಹಿ ರಾಜಕೀಯ ಅಲೆಗಳ ಹೊಡೆತಕ್ಕೆ ಈ ಸೂಕ್ಷ್ಮ ಮನಸ್ಸಿನ ಪ್ರಾಮಾಣಿಕ ಅಭಿವ್ಯಕ್ತಿಯ ನೋಟಾಗಳು ಕೊಚ್ಚಿ ಹೋಗುವುದು ಖಂಡಿತ. ಆದಕಾರಣ, ಇದ್ದುದರಲ್ಲಿ ಯಾವುದು ಲೇಸು ಎಂದು ತಿಳಿದು ಮತದಾನ ಮಾಡುವುದು ಪ್ರಜ್ಞಾಪೂರ್ವಕ ಹೆಜ್ಜೆಯಾದೀತು.
‘ಮತದಾನ ಮಾಡದ ಒಳ್ಳೆಯ ವ್ಯಕ್ತಿಗಳಿಂದಾಗಿ ಕೆಟ್ಟ ರಾಜಕಾರಣಿಗಳು ಸೃಷ್ಟಿಯಾಗುತ್ತಾರೆ’ ಎಂಬ ಮಾತಿದೆ. ಪ್ರಸ್ತುತ ಲೋಕಸಭಾ ಚುನಾವಣೆಯು ಭಾರತದ ಪ್ರಜಾ ಪ್ರಭುತ್ವ ವ್ಯವಸ್ಥೆಯ ಭವಿಷ್ಯವನ್ನು ನಿರ್ಧರಿಸುವಂತಹ ದ್ದಾಗಿದೆ. ಹೀಗಾಗಿ, ಸಜ್ಜನರ ನೋಟಾ ಮತಗಳು, ಮತದಾನ ಮಾಡದಿರುವಂತಹ ಜವಾಬ್ದಾರಿಯುತ ವಲ್ಲದ ನಿರ್ಲಿಪ್ತ ಮನೋಭಾವದಂತೆಯೇ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.