ADVERTISEMENT

ಸಂಗತ: ಕನ್ನಡ ಇಷ್ಟ, ಆದರೆ... ಕಷ್ಟ!

ಕನ್ನಡಕ್ಕೆ ಅಗತ್ಯವಿದೆ ಭಾಷಾ ವೈಜ್ಞಾನಿಕವಾದ ಬೋಧನಾ ವಿಧಾನ!

ರಾಹುಲ್‌ ಪುಟ್ಟಿ/ ಪೃಥ್ವೀರಾಜ ಕವತ್ತಾರು
Published 21 ಫೆಬ್ರುವರಿ 2022, 19:30 IST
Last Updated 21 ಫೆಬ್ರುವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕನ್ನಡ ತಿಳಿಯದವನೊಬ್ಬ ತತ್‌ಕ್ಷಣ ಬಂದು ‘ಕನ್ನಡ ಕಲಿಸುತ್ತೀರಾ?’ ಎಂದು ಕೇಳಿದರೆ ನಮ್ಮಲ್ಲಿ ಯಾವ ತಯಾರಿ ಇದೆ?

ಇಂದು ಶಿಕ್ಷಣ ಕ್ಷೇತ್ರ ಬಹಳ ಸುದ್ದಿಯಲ್ಲಿದೆ. ಹೀಗೆಂದ ಕೂಡಲೇ ನಮ್ಮ ಮನಸ್ಸಿಗೆ ಹೊಳೆಯುವುದು, ಶಾಲಾಕಾಲೇಜುಗಳಲ್ಲಿ ಉಡುಪುಸಂಹಿತೆಗೆ ಸಂಬಂಧಿಸಿ ನಡೆಯುತ್ತಿರುವ ವಿದ್ಯಮಾನಗಳು. ಇಂಥ ವಿಚಾರಗಳ ಚರ್ಚೆಯ ನಡುವೆಯೇ ಅಂತರರಾಷ್ಟ್ರೀಯ ಮಾತೃಭಾಷಾ ದಿನವು ಸದ್ದಿಲ್ಲದೆ ಬಂದಿದೆ! ಈ ಒಂದು ದಿನವಾದರೂ ನಾವು ನಮ್ಮ ಭಾಷಾ ಕಲಿಕೆಯ ಕುರಿತು ಮಾತನಾಡುವ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿ- 2020 ಅನುಷ್ಠಾನದ ಹೊಸ್ತಿಲಲ್ಲಿ ನಾವೆಲ್ಲ ನಿಂತಿರುವಾಗ, ನಮ್ಮ ಶಿಕ್ಷಣ ಮಾಧ್ಯಮ (ಮೀಡಿಯಂ ಆಫ್‌ ಇನ್‌ಸ್ಟ್ರಕ್ಷನ್‌) ಮತ್ತು ಭಾಷಾ ಕಲಿಕೆ (ಲ್ಯಾಂಗ್ವೇಜ್‌ ಎಜುಕೇಶನ್‌) ಕುರಿತು ಯೋಚಿಸದಿದ್ದರೆ ಹೇಗೆ? ಪ್ರಸ್ತುತ ದಿನಗಳಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಯಾವುದರ ಬಗ್ಗೆ ಚಿಂತನೆ ಮತ್ತು ಕ್ರಿಯೆಗಳನ್ನು ನಡೆಸಬೇಕಿತ್ತೋ ಅದನ್ನು ಬಿಟ್ಟು ಬೇರೆಯೇ ದಿಕ್ಕಿನತ್ತ ಗಮನವಿರಿಸಿದೆ. ರಾಜಕೀಯ ಮತ್ತು ಧರ್ಮಗಳನ್ನು ಶಾಲೆಯ ಕೊಠಡಿಯೊಳಗೆ ತಂದಿದೆ. ಆ ವಿಷಯವತ್ತ ಇರಲಿ.

ಹಾಗೆ ನೋಡಿದರೆ ಇಂಥ ಚರ್ಚೆ ಎಂದೋ ಆರಂಭವಾಗಬೇಕಿತ್ತು. ನಮ್ಮ ಶಾಲೆಗಳಿಗೆ ಅಂದಾಜು ನೂರು ವರ್ಷಗಳ ಇತಿಹಾಸವಿದೆ. ನಮ್ಮ ಸುತ್ತಮುತ್ತಲಿನ ಹೆಚ್ಚಿನ ಶಾಲೆಗಳು ಶತಮಾನೋತ್ಸವ ಆಚರಿಸುತ್ತಿರುವುದನ್ನು ಗಮನಿಸಿ. ಅದರೊಂದಿಗೆ ಬಹುಶಃ ‘ಶಿಕ್ಷಣದಲ್ಲಿ ಕನ್ನಡ’ ಎಂಬ ವಿಚಾರಕ್ಕೂ ಅಷ್ಟೇ ಹರೆಯವಾದೀತು. ಆದರೆ, ಆಶ್ಚರ್ಯ ಮತ್ತು ಬೇಸರದ ಸಂಗತಿ ಒಂದಿದೆ; ಅದೆಂದರೆ, ಇವತ್ತು ಶಾಲೆ-ಕಾಲೇಜುಗಳಲ್ಲಿ ಓದುತ್ತಿರುವ ಹೆಚ್ಚಿನ ಮಕ್ಕಳಿಗೆ ಕನ್ನಡ ‘ಕಷ್ಟ’ದ ವಿಷಯವಾಗುತ್ತಿರುವುದು! ಮಗುವಿಗೆ ಕನ್ನಡ ಪರೀಕ್ಷೆಯ ದಿನ ಬಂತೆಂದರೆ ಹೆತ್ತವರು ಕಂಗಾಲಾಗಿ ಬಿಡುತ್ತಾರೆ. ಇದಕ್ಕೆ ಕಾರಣವೇನು? ಬಾಲ್ಯದಲ್ಲಿಯೇ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯುವುದರಿಂದ ಕನ್ನಡ ಕಷ್ಟವಾಗಬಹುದು ಎಂದು ಹೇಳಬಹುದಾದರೂ ‘ಕನ್ನಡ ಬೋಧನೆ’ಯಲ್ಲಿ ಏನಾದರೂ ಸಮಸ್ಯೆಯಿದೆಯೇ ಎಂಬ ಪ್ರಶ್ನೆಯನ್ನು ಯಾಕೆ ಕೇಳಿಕೊಳ್ಳಬಾರದು? ಇಂಥದ್ದೊಂದು ಪ್ರಶ್ನೆ ಇವತ್ತು ಶಿಕ್ಷಣದಲ್ಲಿ ಕನ್ನಡ ಕಲಿಸುವಿಕೆ ಮತ್ತು ಕಲಿಯುವಿಕೆಯ ಸ್ಥಿತಿಗತಿಯನ್ನು ತೆರೆದಿಡಬಹುದು.

ADVERTISEMENT

ನೀವು ಸುಮ್ಮನೆ ಗೂಗಲ್‌ನಲ್ಲಿ ‘ಟೀಚಿಂಗ್‌ ಇಂಗ್ಲಿಷ್‌ ಆ್ಯಸ್‌ ಸೆಕೆಂಡ್‌ ಲ್ಯಾಂಗ್ವೇಜ್‌’ ಎಂದು ಹಾಕಿಬಿಡಿ. ನಿಮ್ಮ ಮುಂದೆ ಮಾಹಿತಿಯ ಮಳೆ ಸುರಿಯುತ್ತದೆ. ಗೂಗಲ್‌ ಸ್ಕಾಲರ್‌ನಲ್ಲಿ ಇಣುಕಿ ನೋಡಿ, ಅಲ್ಲಿಯೂ ಮಾಹಿತಿಯ ಹೊಳೆಯೇ ಇದೆ. ಅದರ ಬದಲಿಗೆ ‘ಟೀಚಿಂಗ್‌ ಕನ್ನಡ ಆ್ಯಸ್‌ ಸೆಕೆಂಡ್‌ ಲ್ಯಾಂಗ್ವೇಜ್‌’ ಎಂದು ಬರೆಯಿರಿ; ನಿಮಗೆ ಶೈಕ್ಷಣಿಕ ಮಹತ್ವದ ಮಾಹಿತಿಗಳು ಸಿಗುವುದೇ ಇಲ್ಲ. ಅದರ ಬದಲಿಗೆ ಒಂದಷ್ಟು ಪತ್ರಿಕಾ ವರದಿಗಳ ಭಾಗಗಳಷ್ಟೇ ಲಭ್ಯವಿರುತ್ತವೆ. ಅದರಲ್ಲಿಯೂ ಕೆಲವು ಲೇಖನಗಳಲ್ಲಿ ಅಥವಾ ಬ್ಲಾಗ್‌ಗಳಲ್ಲಂತೂ ಪೋಷಕರು, ಅಧ್ಯಾಪಕರು, ಶಾಲಾ ಮುಖ್ಯಸ್ಥರು, ಅಧಿಕಾರಿಗಳ ಬಿರುಸು ಧಾಟಿಯ ಪ್ರತಿಕ್ರಿಯೆಗಳಿರುತ್ತವೆ.

ಕನ್ನಡ ಒಂದು ವೇಳೆ ಕಡ್ಡಾಯವಾಗಿ ಶಾಲೆಯಲ್ಲಿ ಕಲಿಕೆಯ ವಿಷಯವಾದರೆ ಪೋಷಕರಿಗೆ ಮಕ್ಕಳ ಅಂಕದ ಚಿಂತೆ! ಶಿಕ್ಷಣ ಸಂಸ್ಥೆಗಳಲ್ಲಿ ಭಾಷಾ ಬಳಕೆಗೆ ಸಂಬಂಧಿಸಿದ ವಿಷಯವು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿಯೇ ಇದೆ. ಕರ್ನಾಟಕದಲ್ಲಿ ಕನ್ನಡದ ಪರವೇ ನ್ಯಾಯ ಕೇಳಬೇಕಾಗಿ ಬಂದಿರುವ ಸ್ಥಿತಿಯ ವ್ಯಂಗ್ಯವೇನೇ ಇರಲಿ, ಆದರೆ, ದಶಕಗಳ ದೀರ್ಘಹಾದಿಯಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿ ಇತ್ತೀಚೆಗಿನ ಬೆಳವಣಿಗೆಗಳನ್ನು ಮಹತ್ವದ್ದನ್ನಾಗಿ ಪರಿಗಣಿಸುವ ಅಗತ್ಯವಿದೆ.

ಒಂದು ಬಗೆಯಲ್ಲಿ ಭಾರತದಲ್ಲಿ ‘ಶಿಕ್ಷಣದಲ್ಲಿ ಯಾವ ಭಾಷೆಯನ್ನು ಬಳಸಬೇಕು’ ಎಂಬ ವಿಷಯದ ಕುರಿತ ದೀರ್ಘಕಾಲೀನ ಚರ್ಚೆಗೆ ‘ತ್ರಿಭಾಷಾ ಸೂತ್ರ’ದ ಮೂಲಕ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ನಡೆಯಿತು. ಹಾಗೆಂದು, ಇದರಲ್ಲಿಯೂ ಸಾಕಷ್ಟು ಸಮಸ್ಯೆಗಳಿವೆ. ಈ ಮಧ್ಯೆ ಕೆಲವು ವರ್ಷಗಳಿಂದೀಚೆಗೆ ದೇಶದುದ್ದಕ್ಕೂ ಇಂಗ್ಲಿಷ್‌ ಮೀಡಿಯಂ ಶಾಲೆಗಳಿಗೆ ಬೇಡಿಕೆ ಬರಲಾರಂಭಿಸಿತ್ತು. ನಮ್ಮ ಭಾಷಾ ಶ್ರೇಣೀಕರಣ ವಿಚಿತ್ರವಾಗಿದೆ. ಕಲಿಕೆಯ ಮಾಧ್ಯಮದಲ್ಲಿರುವ ಭಾಷೆಯೇ ‘ಪ್ರಥಮ ಭಾಷೆ’. ಕಲಿಕೆಯ ಮಾಧ್ಯಮದಲ್ಲಿ ಕನ್ನಡವಿದ್ದರೆ ಅದೇ ಪ್ರಥಮ ಭಾಷೆ. ಇಂಗ್ಲಿಷ್‌ ಆದರೆ, ಅದೇ ಪ್ರಥಮ ಭಾಷೆ. ಅದಕ್ಕೆ ಅನುಗುಣವಾಗಿ ಮತ್ತೊಂದು ‘ದ್ವಿತೀಯ ಭಾಷೆ’. ಅದು ಆಯಾ ರಾಜ್ಯದ ಅಧಿಕೃತ ಭಾಷೆಯೇನೂ ಆಗಿರಬೇಕಾಗಿರಲಿಲ್ಲ. ಮೂರನೆಯ ಭಾಷೆಯು ಹಿಂದಿ ಅಥವಾ ಸಂಸ್ಕೃತ. ಇನ್ನು ಕೆಲವೊಮ್ಮೆ ಭಾರತದ ಯಾವುದೇ ಭಾಷೆ ಅಥವಾ ಕೆಲವು ಶಾಲೆಗಳಲ್ಲಿ ವಿದೇಶಿ ಭಾಷೆಯೂ ತೃತೀಯ ಭಾಷೆಯಾಗಿರುತ್ತಿತ್ತು (ಎಲ್ಲ ಕಡೆ ಭಾಷೆಗಳ ವಿಭಾಗೀಕರಣ ಹೀಗಿದೆ ಎಂದು ಹೇಳಲಾಗದು). ಇದು ಭಾರತೀಯ ಭಾಷೆಗಳ ಸಂದರ್ಭದಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸಿತೇ ಹೊರತು ಕಡಿಮೆ ಮಾಡಲಿಲ್ಲ.

ಭಾರತೀಯ ಭಾಷೆಗಳ ಸಂದರ್ಭದಲ್ಲಿ ಗೊಂದಲದ ಮತ್ತೊಂದು ವಿಚಾರವಿದೆ. ಇಲ್ಲಿ ಮಾತೃಭಾಷೆ ಒಂದಿದೆ. ವ್ಯವಹಾರ ಮಾಧ್ಯಮವಾಗಿ ಮತ್ತೊಂದು ಭಾಷೆ ಇದೆ. ಅಧಿಕೃತ ಸ್ಥಾನದಲ್ಲಿ, ಅಂದರೆ ರಾಜಕೀಯವಾಗಿ, ಆಡಳಿತಾತ್ಮಕವಾಗಿ, ಶೆಕ್ಷಣಿಕವಾಗಿ ಬೇರೊಂದೇ ಭಾಷೆ ಇದೆ. ಕೆಲವೊಮ್ಮೆ ಈ ಮೂರು ಭಾಷೆಗಳನ್ನು ಸುಲಭವಾಗಿ ಪ್ರಥಮ, ದ್ವಿತೀಯ ಮತ್ತು ಕೆಲವೊಮ್ಮೆ ತೃತೀಯ ಎಂದು ವಿಭಾಗಿಸುವ ಕುರಿತು ಯೋಚಿಸುತ್ತೇವೆ. ಪ್ರಸ್ತುತ ವಿಭಾಗೀಕರಣವೇ ಅವೈಜ್ಞಾನಿಕವಾದುದು. ಭಾಷೆಯ ವಿಭಾಗೀಕರಣವು ತಾತ್ವಿಕವಾಗಿ ಕಲಿಯುವಿಕೆಯ ಪ್ರಕ್ರಿಯೆ ಮತ್ತು ಇತರ ವಿಚಾರಗಳಾದ ಹರೆಯ, ಕಲಿಯುವ ವೇಗ, ಕಲಿಯುವ ಪ್ರಕ್ರಿಯೆ ಮತ್ತು ಪ್ರಾವೀಣ್ಯವನ್ನು ಅವಲಂಬಿಸಿರುತ್ತದೆ. ಇದನ್ನು ಇನ್ನಷ್ಟು ಸ್ಪಷ್ಟಗೊಳಿಸಿ ಹೇಳುವುದಾದರೆ, ಈ ವಿಭಾಗೀಕರಣವು ಭಾಷೆಯ ಕುರಿತ ಭಾಷಾ ವೈಜ್ಞಾನಿಕ ವಿಧಾನವನ್ನು ಪರಿಗಣಿಸಿ ರೂಪುಗೊಂಡದ್ದಲ್ಲ. ಭಾಷಾ ಪ್ರಾವೀಣ್ಯ ಎಂಬುದು ಕಲಿಯುವವನ ಕೇಳ್ಮೆ, ಓದು, ಮಾತು ಮತ್ತು ಬರಹಗಳ ಮೇಲೆ ಅವಲಂಬಿತವಾಗಿರುತ್ತದೆ. ಕಲಿಕೆ ಎಂಬುದು ‘ಬೋಧಕ ಕೇಂದ್ರಿತ’ವಾಗಿಯಷ್ಟೇ ಇದ್ದರೆ ಸಾಲದು ‘ವಿದ್ಯಾರ್ಥಿ ಕೇಂದ್ರಿತ’ವಾಗಿಯೂ ಇರಬೇಕು. ಅಂತರರಾಷ್ಟ್ರೀಯವಾಗಿಯೂ ಇದಕ್ಕೆ ಅನುಗುಣವಾದ ವೈಧಾನಿಕತೆಯಲ್ಲಿಯೇ ಭಾಷೆಯನ್ನು ಕಲಿಸಲಾಗುತ್ತದೆ. ಕನ್ನಡಕ್ಕೆ ಕೂಡ ನವೀನ ರೀತಿಯ ಬೋಧನಾ ವಿಧಾನವನ್ನು ಶೋಧಿಸುವುದು ಇಂದಿನ ಅವಶ್ಯಕತೆಯಾಗಿದೆ. ಅಂದರೆ ಒಂದು ರೀತಿಯ ಭಾಷಾ ವೈಜ್ಞಾನಿಕ ವಿಧಾನವನ್ನು ರೂಪಿಸಬೇಕಾಗಿದೆ. ಅದಕ್ಕನುಗುಣವಾದ ಪಠ್ಯಗಳನ್ನು ಸಿದ್ಧಗೊಳಿಸಬೇಕಾಗಿದೆ. ಸಮಾಜದ ಬಹುಆಸಕ್ತಿಗಳಿಗೆ, ವೈವಿಧ್ಯಮಯ ಅಗತ್ಯಗಳಿಗೆ ಸ್ಪಂದಿಸುವ ಭಾಷೆಯ ಆಕರಗಳನ್ನು ಒದಗಿಸಬೇಕಾಗಿದೆ. ಜಪಾನಿ, ಚೀನಿ, ಕೊರಿಯಾಗಳಂಥ ಭಾಷೆಗಳು ಭಾಷಾಪ್ರಾವೀಣ್ಯವನ್ನು ಅಳೆಯುವ ಅಂತರರಾಷ್ಟ್ರೀಯ ಮಾನದಂಡಕ್ಕೆ ತಮ್ಮನ್ನು ತಾವು ಹೊಂದಿಸಿಕೊಂಡಿರುವುದನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ.

ಕನ್ನಡವಲ್ಲದೆ ಬೇರೆ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ನೀಡುವ ಒಂದು ಕಾರಣವೆಂದರೆ ಕನ್ನಡ ಕಷ್ಟ! ಮನೆಯಲ್ಲಿ ಕನ್ನಡ ಮಾತನಾಡುವವರೇ ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಕಲಿಸಲು ಅಥವಾ ಕನ್ನಡದಲ್ಲಿ ಕಲಿಯಲು ಹಿಂದೇಟು ಹಾಕುತ್ತಿರುವುದಕ್ಕೆ ಏನೆನ್ನಬೇಕು?! ‘ಇದಕ್ಕೆ ಅವರು ನೀಡುವ ಒಂದು ಕಾರಣ- ‘ಕನ್ನಡದಲ್ಲಿ ಒಳ್ಳೆಯ ಮಾರ್ಕು ತೆಗೆಯಲು ಆಗುವುದಿಲ್ಲ’ ಎಂಬುದು. ಅದು ಹಾಗಿರಲಿ.

ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕನ್ನಡ ಭಾಷೆಯನ್ನು ಕಲಿಸುವ ವಿಧಾನವು ಪಠ್ಯಕೇಂದ್ರಿತವಾಗಿದೆ. ಸಾಹಿತ್ಯ ಕಲಿಕೆಯನ್ನೇ ಭಾಷೆಯ ಕಲಿಕೆ ಎಂಬುದಾಗಿ ನಾವು ಭಾವಿಸಿದ್ದೇವೆ. ಭಾಷಾಪ್ರಾವೀಣ್ಯವನ್ನು ಅಳೆಯುವುದಕ್ಕೆ ನಾವು ಬರಹದ ಮಾರ್ಗವನ್ನು ಅನುಸರಿಸುತ್ತೇವೆ. ಭಾಷೆಯ ಪರಿಣಾಮಕಾರಿಯಾದ ಮತ್ತು ಪ್ರಾಯೋಗಿಕವಾದ ಬಳಕೆಯ ಕುರಿತು ನಾವು ಗಮನಹರಿಸುತ್ತಿಲ್ಲ. ಸಾಮಾಜಿಕ ಸಂದರ್ಭದಲ್ಲಿ ಕನ್ನಡದ ಬಳಕೆಯ ಕುರಿತ ಬಹುನೆಲೆಯ ಸಾಧ್ಯತೆಗಳ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲ. ಭಾಷೆಯ ಕಲಿಕೆ ಎಂದರೆ ಕೇವಲ ಸಾಹಿತ್ಯದ ಓದುವಿಕೆ ಮಾತ್ರವಲ್ಲ, ಕೇಳುವ, ಓದುವ, ಮಾತನಾಡುವ ಮತ್ತು ಬರವಣಿಗೆಯ ಪ್ರಾವೀಣ್ಯವನ್ನು ಹೊಂದುವಂತೆ ಮಾಡುವುದು ಕೂಡ ಭಾಷೆಯ ಕಲಿಕೆಯೇ.

ಹಾಗಾಗಿ, ಕನ್ನಡವನ್ನು ನೀವು ಯಾರಿಗಾದರೂ ಕಲಿಸುತ್ತಿದ್ದೀರಿ ಎಂದರೆ ನೀವು ಎಷ್ಟು ಕಲಿಸಿದ್ದೀರಿ ಮತ್ತು ಏನನ್ನು ಕಲಿಸುತ್ತಿದ್ದೀರಿ ಎಂಬಷ್ಟೇ, ಕಲಿಯುವ ವಿದ್ಯಾರ್ಥಿಯು ಎಷ್ಟನ್ನು ಮತ್ತು ಏನನ್ನು ಕಲಿತಿದ್ದಾನೆ ಎಂಬುದು ಕೂಡ ಮುಖ್ಯ. ಒಬ್ಬ ವಿದ್ಯಾರ್ಥಿಯು ತಾನು ಕಲಿತಿದ್ದೇನೆ ಎಂಬ ಪುಳಕವನ್ನುಂಟು ಮಾಡದಂಥ ಪಾಠಗಳು ನಿರರ್ಥಕವೆನಿಸುತ್ತವೆ. ಕರ್ನಾಟಕದಲ್ಲಿ ಕನ್ನಡ ಕಷ್ಟವಾಗುವಂಥ ಸ್ಥಿತಿಯ ಹಿಂದೆ ಇಂಥ ಕಾರಣವಿರಬಹುದೇ? ಚಿಂತಿಸಬೇಕಾಗಿದೆ.

ಕನ್ನಡ ತಿಳಿಯದವನೊಬ್ಬ ತತ್‌ಕ್ಷಣ ಬಂದು ‘ಕನ್ನಡ ಕಲಿಸುತ್ತೀರಾ?’ ಎಂದು ಕೇಳಿದರೆ ನಮ್ಮಲ್ಲಿ ಯಾವ ತಯಾರಿ ಇದೆ? ಇಂಥ ಸಿದ್ಧತೆಯನ್ನು ಯುರೋಪಿಯನ್‌ ಮತ್ತು ಹೆಚ್ಚಿನ ವಿದೇಶಿ ಭಾಷೆಗಳು ಮಾಡಿಕೊಂಡಿವೆ. ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಹಾದಿಯಲ್ಲಿಯೇ ‘ಕನ್ನಡ ಕಷ್ಟ’ ಎನ್ನುವ ವಿದ್ಯಾರ್ಥಿಗಳಿಗೂ ಕನ್ನಡವನ್ನು ಇಷ್ಟವಾಗಿಸುವ ಕವಲುಹಾದಿಗಳಿರಬಹುದು. ಅದನ್ನೂ ಶೋಧಿಸಬೇಕಾಗಿದೆ.

ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಸಂಸ್ಥೆಯ ಭಾಷಾಧ್ಯಯನ ವಿಭಾಗವು ಕನ್ನಡ ಭಾಷಾ ಬೋಧನೆಯ ಹೊಸ ಸಾಧ್ಯತೆಗಳ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುತ್ತಿದೆ. ಮಂಗಳೂರಿನ ಸಂತ ಎಲೋಶಿಯಸ್‌ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ‘ಕನ್ನಡ ಬೋಧನೆಯ ನವೀನ ಸಾಧ್ಯತೆಗಳ ಶೋಧನೆ’ಯ ಕುರಿತ ಸಂವಾದ ಮತ್ತು ಕಾರ್ಯಾಗಾರವನ್ನು ಇತ್ತೀಚೆಗೆ ಏರ್ಪಡಿಸಿದ್ದುದು ಈ ನಿಟ್ಟಿನ ಪ್ರಮುಖ ಹೆಜ್ಜೆಯಾಗಿದೆ.

ಕನ್ನಡ ಬೋಧನಾ ಶಾಸ್ತ್ರದ ಸಂಶೋಧನೆಯ ಮುಂದುವರಿದ ಭಾಗವಾಗಿ, ಫೆಬ್ರುವರಿ 21ರ ಮಾತೃಭಾಷಾ ದಿನದಂದು ‘ಕನ್ನಡ ಬೋಧನಾಶಾಸ್ತ್ರದ ಬೆಳವಣಿಗೆ ಮತ್ತು ಸಾಧ್ಯತೆಗಳು’ ಕುರಿತ ಸಂವಾದಗೋಷ್ಠಿಯನ್ನು ಏರ್ಪಡಿಸಿದ್ದುದು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ಈ ಸಂವಾದಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತ ವಿದ್ವಾಂಸ, ಡಚ್‌-ಕೆನಡಿಯನ್‌ ಮೂಲದ ಡಾ. ರಾಬರ್ಟ್‌ ಜೆ. ಝೆದನ್‌ಬೋಸ್‌, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಆರ್‌.ವಿ.ಎಸ್‌. ಸುಂದರಂ, ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಮಣಿಪಾಲ್‌ ಸೆಂಟರ್‌ ಫಾರ್‌ ಯುರೋಪಿಯನ್ ಸ್ಟಡೀಸ್‌ನ ಡಾ. ನೀತಾ ಇನಾಂದಾರ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.