ರವಿ ಜೋಷಿ
ಹಿಂದುತ್ವ ರಾಜಕಾರಣವು ಕರ್ನಾಟಕದ ಮತದಾರರಿಗೆ ಆಪ್ತವೆನಿಸುತ್ತದೆಯೇ? ಕರ್ನಾಟಕದ ರಾಜಕೀಯ ಸಂಸ್ಕೃತಿ ಮತ್ತು ಇಲ್ಲಿನ ಪ್ರಜಾತಂತ್ರದ ಇತಿಹಾಸ ಈ ಬಗ್ಗೆ ಹೇಳುವುದು ಏನು?
ಕರ್ನಾಟಕವು ವೈಚಾರಿಕವಾಗಿ ನಡುಪಂಥವನ್ನು ಅನುಸರಿಸಿಕೊಂಡು ಬಂದ ಇತಿಹಾಸವನ್ನು, ಸಂಪ್ರದಾಯವನ್ನು ಹೊಂದಿದೆ. ರಾಜ್ಯದ ನೀತಿಗಳು ಪ್ರಮುಖವಾಗಿ, ನಡುಪಂಥದಿಂದ ತುಸು ಎಡಕ್ಕೆ ವಾಲಿಕೊಂಡ ಬಗೆಯಲ್ಲಿ ಇವೆ. ಇವು ಸಾಮಾನ್ಯವಾಗಿ ಬಡವರ ಪರವಾಗಿ ಮತ್ತು ಸಮಾಜವಾದಿ ನೆಲೆಯಲ್ಲಿ ರೂಪುಗೊಂಡವು.
ಕರ್ನಾಟಕದ ನೆಲದಲ್ಲಿ ಮಹಾತ್ಮ ಗಾಂಧಿ ಮತ್ತು ಕಾರ್ಲ್‌ಮಾರ್ಕ್ಸ್ ಪ್ರಭಾವ ಇದೆ. ಆದರೆ, ಅವರಿಗಿಂತ ಹೆಚ್ಚಿನ ಪ್ರಭಾವವನ್ನು ಉದಾರವಾದಿ ಪ್ರಜಾತಂತ್ರದಲ್ಲಿ ನಂಬಿಕೆ ಇರಿಸಿದ್ದ ಜವಾಹರಲಾಲ್ ನೆಹರೂ, ಅಂಬೇಡ್ಕರ್, ಸಮಾಜವಾದಿಗಳಾದ ರಾಮ ಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ ಅವರು ಇಲ್ಲಿ ಬೀರಿದ್ದಾರೆ. ಅಲ್ಲದೆ ಜಯಪ್ರಕಾಶ ನಾರಾಯಣ ಅವರ ವಿರೋಧಿಯಾಗಿದ್ದ, ತಮಗೆ ಸೂಕ್ತವೆನಿಸಿದಾಗ ಸಮಾಜವಾದಿ ನೀತಿಯನ್ನು ಅನುಸರಿಸಿದ್ದ ಇಂದಿರಾ ಗಾಂಧಿ ಅವರ ಪ್ರಭಾವವೂ ಇಲ್ಲಿದೆ.
ಲೋಹಿಯಾ ಅವರ ಸಮಾಜವಾದಿ ಚಿಂತನೆಗಳು ಶಾಂತವೇರಿ ಗೋಪಾಲಗೌಡ, ಕೆ.ಎಚ್. ರಂಗನಾಥ್, ಜೆ.ಎಚ್. ಪಟೇಲ್, ಎಸ್.ಆರ್. ಬೊಮ್ಮಾಯಿ, ರಾಮಕೃಷ್ಣ ಹೆಗಡೆ ಅವರ ಮೇಲೆ ಪ್ರಭಾವ ಬೀರಿದ್ದವು. ಅಲ್ಲದೆ, ಬಹಳ ಮಹತ್ವವಾದ ಭೂಸುಧಾರಣಾ ಕ್ರಮವನ್ನು ಜಾರಿಗೆ ತಂದ ದೇವರಾಜ ಅರಸು ಅವರೂ ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಅದೇ ತಲೆಮಾರಿನ ರಾಜಕಾರಣಿಯಾಗಿರುವ ಎಚ್.ಡಿ. ದೇವೇಗೌಡ ಅವರೂ ಸಮಾಜವಾದ ಮತ್ತು ಧರ್ಮನಿರಪೇಕ್ಷ ತತ್ವದಲ್ಲಿ ಬದ್ಧತೆ ಹೊಂದಿರುವ ವ್ಯಕ್ತಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅವರ ಮಗ ಮಾತ್ರ ಧರ್ಮನಿರಪೇಕ್ಷತೆಯ ವಿಚಾರದಲ್ಲಿ ಈ ಬಗೆಯ ಬದ್ಧತೆಯನ್ನು ತೋರಿಸಿಲ್ಲ.
ಉದಾರವಾದ, ಧರ್ಮನಿರಪೇಕ್ಷ ಮೌಲ್ಯಗಳಿಂದ ಹಾಗೂ ಎಂ.ಎನ್. ರಾಯ್ ಅವರ ‘ರ್‍ಯಾಡಿಕಲ್ ಹ್ಯೂಮನಿಸಂ’ ಸಿದ್ಧಾಂತದಿಂದ ಸ್ಫೂರ್ತಿ ಪಡೆದ ಬೌದ್ಧಿಕ ಚಳವಳಿಯೊಂದನ್ನು ಕರ್ನಾಟಕ ಕಂಡಿದೆ. ಈ ಉದಾರವಾದಿ, ಧರ್ಮನಿರಪೇಕ್ಷ ಮತ್ತು ವೈಶ್ವಿಕ ಮೌಲ್ಯಗಳು ಕವಿ ಗೋಪಾಲಕೃಷ್ಣ ಅಡಿಗ, ದ.ರಾ. ಬೇಂದ್ರೆ ಮತ್ತು ಕುವೆಂಪು ಅವರ ಕಾವ್ಯಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿವೆ. ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ ಅವರ ಬರಹಗಳಲ್ಲಿ, ಪಿ. ಲಂಕೇಶ್ ಅವರ ಪತ್ರಿಕಾ ಬರಹಗಳಲ್ಲಿ ಕೂಡ ಇವು ಕಾಣಿಸಿಕೊಂಡಿವೆ. ಲಂಕೇಶ್ ಅವರ ಚಿಂತನೆಗಳನ್ನು ಅವರ ಮಗಳು ಗೌರಿ ಲಂಕೇಶ್, ಕೊಲೆಯಾಗುವವರೆಗೂ ಮುಂದಕ್ಕೆ ಒಯ್ಯುವ ಕೆಲಸ ಮಾಡಿದರು.
ಕರ್ನಾಟಕದಲ್ಲಿ ವಿಚಾರವಾದಿಗಳು ಮುನ್ನಡೆಸಿದ ಬಹುಮುಖ್ಯ ಆಂದೋಲನವೊಂದು ನಡೆದಿದೆ. ಅವರು ದೇವಮಾನವರನ್ನು ಬೆತ್ತಲುಗೊಳಿಸಿದರು, ಮೂಢನಂಬಿಕೆಗಳನ್ನು ಬಯಲುಗೊಳಿಸುವ ಕೆಲಸ ಮಾಡಿದರು. ಡಾ. ಅಬ್ರಹಾಂ ಕೋವೂರ್, ಪ್ರೊ.ಎಚ್. ನರಸಿಂಹಯ್ಯ ಅವರು ಈ ಕೆಲಸ ಮಾಡಿದವರ ಪೈಕಿ ಪ್ರಮುಖರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದ ಪ್ರೊ.ಎಂ.ಎಂ. ಕಲಬುರ್ಗಿ ಅವರೂ ಕನ್ನಡ ನಾಡಿನವರು. ವೈಚಾರಿಕತೆ ಹಾಗೂ ಪ್ರಶ್ನಿಸುವ ಮನೋಭಾವವನ್ನು ವಿರೋಧಿಸುವ ವ್ಯಕ್ತಿಗಳಿಂದ ಕಲಬುರ್ಗಿ ಅವರ ಹತ್ಯೆಯಾಯಿತು. ಸುಳ್ಳು ಸುದ್ದಿಗಳು, ಪೂರ್ವಗ್ರಹಗಳು, ದ್ವೇಷ ಭಾಷಣಗಳು ಇಂದಿನ ರಾಜಕಾರಣದಲ್ಲಿ ಬಹಳ ಸಾಮಾನ್ಯವಾಗಿರುವ ಈ ಹೊತ್ತಿನಲ್ಲಿ ಇಂತಹ ವ್ಯಕ್ತಿಗಳ ಕೊಡುಗೆಗಳನ್ನು ನೆನಪು ಮಾಡಿಕೊಳ್ಳುವುದು ಬಹಳ ಮುಖ್ಯ.
ಕರ್ನಾಟಕದಲ್ಲಿ ಜಾತಿ ರಾಜಕಾರಣವು ಧರ್ಮ ಆಧಾರಿತ ರಾಜಕಾರಣಕ್ಕಿಂತ ಹೆಚ್ಚು ಮುಖ್ಯವಾಗಿದೆ. ಇಲ್ಲಿನ ರಾಜಕಾರಣದಲ್ಲಿ ಜಾತಿಯು ವಿಭಜಕ ಶಕ್ತಿಯಾಗಿ ಕಾಣಿಸಿಕೊಂಡಿಲ್ಲ. ಇದು ಇಲ್ಲಿ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ನೀತಿಗಳನ್ನು ಮುಂದಕ್ಕೆ ಒಯ್ಯಲು ನಾಯಕರಿಗೆ ಸಂಘಟನಾ ಶಕ್ತಿಯ ರೂಪದಲ್ಲಿ ನೆರವಿಗೆ ಬಂದಿದೆ.
1952ರ ನಂತರ ನಡೆದ 15 ವಿಧಾನಸಭಾ ಚುನಾವಣೆಗಳಲ್ಲಿ ನಡುಪಂಥೀಯ ಶಕ್ತಿಯಾಗಿರುವ ಕಾಂಗ್ರೆಸ್ ಪಕ್ಷವು ಒಂಬತ್ತು ಬಾರಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ನಡುಪಂಥೀಯ ಎಂದೇ ಗುರುತಿಸಬಹುದಾದ ಜನತಾದಳ ಮೈತ್ರಿಕೂಟವು ಎರಡು ಬಾರಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಇನ್ನುಳಿದ ಮೂರು ಚುನಾವಣೆಗಳಲ್ಲಿ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಅದು ಸ್ಪಷ್ಟ ಬಹುಮತ ಪಡೆದಿರಲಿಲ್ಲ. 2008ರಲ್ಲಿ ಬಹುಮತಕ್ಕೆ ಒಂದು ಸ್ಥಾನ ಕಡಿಮೆ ಪಡೆದಿದ್ದ ಬಿಜೆಪಿ ಸರ್ಕಾರ ರಚಿಸಿತು. 2019ರಲ್ಲಿ ಬಿಜೆಪಿಯು ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಿ ಸರ್ಕಾರ ರಚಿಸಿದ್ದು ಹೇಗೆ ಎಂಬುದು ಎಲ್ಲರಿಗೂ ಗೊತ್ತಿದೆ.
ಕರ್ನಾಟಕದಲ್ಲಿ ‘ಹಿಂದುತ್ವ ರಾಜಕಾರಣ’ವು ಯಾವ ಸಂದರ್ಭದಲ್ಲಿಯೂ ಅಗತ್ಯ ಪ್ರಮಾಣದ ಬೆಂಬಲವನ್ನು ಪಡೆದಿಲ್ಲ ಎಂಬುದು ಸ್ಪಷ್ಟ. ಹಿಂದುತ್ವದ ವಿಭಜನಕಾರಿ ರಾಜಕಾರಣವು ಕರ್ನಟಕದ ರಾಜಕಾರಣದ ಸಂಪ್ರದಾಯಕ್ಕೆ ಹಾಗೂ ಇಲ್ಲಿನ ಜನರ ಸಂಸ್ಕೃತಿಗೆ ಪೂರಕವಾಗಿ ಇಲ್ಲ. ಇನ್ನೊಂದು ಅಂಶವೆಂದರೆ, ಈ ರಾಜ್ಯವು ಬಿಜೆಪಿಗಿಂತ ಹೆಚ್ಚಾಗಿ, ಬಿ.ಎಸ್. ಯಡಿಯೂರಪ್ಪ ಅವರನ್ನು ಒಪ್ಪಿಕೊಂಡಿದೆ. ಅವರು ಬಿಜೆಪಿಯನ್ನು ತಮ್ಮ ‘ಲಿಂಗಾಯತ ಸಮುದಾಯದ ಬಲ’ ಆಧರಿಸಿ ಅಧಿಕಾರಕ್ಕೆ ತಂದರು. ಕರ್ನಾಟಕದಲ್ಲಿ ಹಿಂದುತ್ವ ರಾಜಕಾರಣಕ್ಕಿಂತ ಲಿಂಗಾಯತ ರಾಜಕಾರಣವು ಹೆಚ್ಚು ಬಲ ಹೊಂದಿದೆ.
ಲಿಂಗಾಯತ ಮತಬ್ಯಾಂಕ್ ಆಚೆಗೂ ನೆಲೆಯನ್ನು ವಿಸ್ತರಿಸಬೇಕಿದ್ದ ಕಾರಣ, ಯಡಿಯೂರಪ್ಪ ಅವರು ಹೆಚ್ಚು ಒಳಗೊಳ್ಳುವ ರಾಜಕಾರಣವನ್ನು ಅನುಸರಿಸಿದರು. ಅದು ಇತರ ಜಾತಿಗಳನ್ನು, ಧಾರ್ಮಿಕ ಸಮುದಾಯಗಳನ್ನು ಮತ್ತು ಪ್ರಾದೇಶಿಕ ಸಮುದಾಯಗಳನ್ನು ಜೊತೆಯಲ್ಲಿ ಕರೆದೊಯ್ಯುವಂಥದ್ದು. ಹೀಗಾಗಿ ಅವರು ತೀವ್ರಗಾಮಿ ಭಾಷೆಯಲ್ಲಿ ಮಾತನಾಡುವುದಿಲ್ಲ. ಅವರು ಮುಖ್ಯಮಂತ್ರಿ ಆಗಿದ್ದಾಗ ಯಾರೊಬ್ಬರೂ ‘ಹಲಾಲ್, ಹಿಜಾಬ್, ನಮಾಜ್, ಲವ್ ಜಿಹಾದ್’ನಂತಹ ವಿಷಯಗಳನ್ನು ಹೆಚ್ಚು ಪ್ರಸ್ತಾಪಿಸದಂತೆ ನೋಡಿಕೊಂಡರು.
ಲೇಖಕ: ಕ್ಯಾಬಿನೆಟ್ ಸಚಿವಾಲಯದ ಮಾಜಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.