ಮನೆಯ ಗೀಸರ್ ಕೆಟ್ಟು ಹೋಗಿತ್ತು. ದುರಸ್ತಿ ಮಾಡಲು ಬಂದ ವ್ಯಕ್ತಿ ದುರಸ್ತಿಗೆ ₹ 200 ಹಾಗೂ ಸಂಪರ್ಕಿಸುವ ಪೈಪ್‌ಗೆ ₹ 500 ಎಂದು ತಿಳಿಸಿ, ಹಣ ನೀಡಿದರೆ ತಾನೇ ತರುವುದಾಗಿ ಹೇಳಿದ. ಗೂಗಲ್ ಮಾಡಿದಾಗ, ಪೈಪ್‌ನ ಬೆಲೆ ₹ 200 ಮಾತ್ರ ಎಂದು ತಿಳಿಯಿತು. ಅವನಿಗೆ ‘ನಾವೇ ಪೈಪ್ ತರುತ್ತೇವೆ’ ಎಂದು ಹೇಳಿ, ಸ್ವಲ್ಪ ಸಮಯ ಬಿಟ್ಟು ಬರಲು ತಿಳಿಸಿದೆವು.
ಪೈಪ್ ತಂದು ಹಲವು ಬಾರಿ ಕರೆ ಮಾಡಿ ಕೋರಿಕೊಂಡಾಗ್ಯೂ ಅವನು ಬರಲೇ ಇಲ್ಲ. ಸ್ವಲ್ಪ ದಿನಗಳ ನಂತರ ಪರಿಚಿತರ ಮೂಲಕ ಉತ್ತರ ಭಾರತ ಮೂಲದ ಒಬ್ಬ ವ್ಯಕ್ತಿಯನ್ನು ದುರಸ್ತಿ ಮಾಡಲು ಕರೆದೆವು. ಅವನು ಬಂದು ಕೆಲ ನಿಮಿಷಗಳಲ್ಲೇ ಪೈಪ್ ಅನ್ನು ಗೀಸರ್‌ಗೆ ಸಂಪರ್ಕಿಸಿ, ಕೇವಲ ₹ 100 ಸೇವಾ ಶುಲ್ಕ ಪಡೆದು ತೆರಳಿದ. ಮೊದಲು ದುರಸ್ತಿ ಮಾಡಲು ಬಂದಿದ್ದ ನಮ್ಮದೇ ನೆಲದ ವ್ಯಕ್ತಿ ₹ 500 ಹೆಚ್ಚಿಗೆ ಪಡೆಯುವ ಇರಾದೆ ಹೊಂದಿದ್ದ. ಅದು ಫಲಿಸದೇ ಇದ್ದಾಗ ಸೇವೆಯನ್ನೇ ನೀಡುವ ಇಚ್ಛೆ ತೋರಲಿಲ್ಲ.
ನೀವು ಬೆಂಗಳೂರಿಗರಾಗಿದ್ದರೆ ಇದನ್ನು ನೀವು ಸಹ ಗಮನಿಸಿರುತ್ತೀರಿ. ನಿಮ್ಮ ತಲೆಕೂದಲು ಕತ್ತರಿಸಿಕೊಳ್ಳಲು ಸಲೂನ್‌ಗೆ ಹೋದರೆ, ಅಲ್ಲಿ ನಿಮಗೆ ಸೇವೆ ನೀಡಲು ಉತ್ತರ ಭಾರತೀಯನೊಬ್ಬ ಸಿಗುತ್ತಾನೆ. ಅದೇ ರೀತಿ ಮನೆಯ ಇಂಟೀರಿಯರ್ ಕೆಲಸ, ಬಣ್ಣ ಹಚ್ಚುವುದು, ಮರಗೆಲಸ, ಕಟ್ಟಡ ನಿರ್ಮಾಣ ಇತ್ಯಾದಿಗಳಲ್ಲಿ ಹೆಚ್ಚಾಗಿ ತೊಡಗಿರುವವರು ಉತ್ತರ ಪ್ರದೇಶ, ಬಿಹಾರ, ಒಡಿಶಾದಂತಹ ರಾಜ್ಯಗಳವರು. ಇದಕ್ಕೆ ಕಾರಣ ಹುಡುಕಿದರೆ, ಕೆಲವರು ತಿಳಿಸಿದಂತೆ, ಅಲ್ಲಿನ ಕಾರ್ಮಿಕರು ಕಡಿಮೆ ಕೂಲಿ ಅಥವಾ ಸೇವಾ ಶುಲ್ಕ ಪಡೆಯುತ್ತಾರೆ ಹಾಗೂ ಕೆಲಸವನ್ನು ಹೇಳಿದ ಸಮಯಕ್ಕೆ ಮಾಡಿಕೊಡುತ್ತಾರೆ. ಅವರಿಗೆ ಇದು ಅಪರಿಚಿತ ಪ್ರದೇಶವಾದ ಕಾರಣ ಹೆಚ್ಚಿನ ಸ್ನೇಹಿತರೂ ಇರುವುದಿಲ್ಲ. ಇದರಿಂದ ಹೊರಗಡೆ ಸುತ್ತಾಟವೂ ಕಡಿಮೆಯೇ. ತಮ್ಮ ಪೂರ್ಣ ಸಮಯವನ್ನು ಕೆಲಸಕ್ಕೆ ಉಪಯೋಗಿಸುತ್ತಾರೆ. ಒಂದಷ್ಟು ಪ್ರಕರಣ ಹೊರತು ಪಡಿಸಿದರೆ, ಹೆಚ್ಚು ಕಡಿಮೆ ಉತ್ತರ ಭಾರತದ ಕಾರ್ಮಿಕರ ಸೇವೆ ಉತ್ತಮ ಎಂದೇ ಹೇಳಲಾಗುತ್ತದೆ.
ಹಿಂದೆಲ್ಲ ಆಂಧ್ರಪ್ರದೇಶ, ತಮಿಳುನಾಡಿನ ಕಾರ್ಮಿಕರು ನಮ್ಮ ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದು ಕೆಲಸ ಮಾಡುತ್ತಿದ್ದರು. ಅಲ್ಲಿನ ಸರ್ಕಾರಗಳು ತಳಮಟ್ಟದ ಜನರಿಗಾಗಿ ಅನುಷ್ಠಾನ ಮಾಡುತ್ತಿರುವ ಕಲ್ಯಾಣ ಕಾರ್ಯಕ್ರಮಗಳ ಪರಿಣಾಮವೋ ಏನೋ ಇತ್ತೀಚೆಗೆ ಆ ರಾಜ್ಯಗಳ ಕಾರ್ಮಿಕರು ನಮ್ಮಲ್ಲಿ ಹೆಚ್ಚಾಗಿ ಕಂಡುಬರುತ್ತಿಲ್ಲ.
ನಮ್ಮ ರಾಜ್ಯದ ಜನರು ಮಾಡಬಹುದಾದ ಕೆಲಸಗಳನ್ನು ಉತ್ತರ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ನಿರ್ವಹಿಸುತ್ತಿರುವುದು ಏಕೆ? ನಮ್ಮ ಜನ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿಲ್ಲವೇ ಎಂಬ ಕುರಿತು ಅಧ್ಯಯನ ನಡೆಯಬೇಕಿದೆ. ಬೆಂಗಳೂರಿನಂತಹ ನಗರಗಳಲ್ಲಿ ಕಾರ್ಮಿಕರ ಅಗತ್ಯವು ರಾಜ್ಯದಲ್ಲಿರುವ ಕಾರ್ಮಿಕರ ಸಂಖ್ಯೆಗಿಂತ ಹೆಚ್ಚು ಇದೆಯೇ ಅಥವಾ ನಮ್ಮ ಜನರು ಉದ್ಯೋಗ ನಿರ್ವಹಣೆಯಲ್ಲಿ ವಿಮುಖರಾಗಿದ್ದಾರೆಯೇ? ಈ ಕುರಿತು ಜನಗಣತಿಯ ವಿಶ್ಲೇಷಣೆಯಲ್ಲಿ ಒಂದಷ್ಟು ಮಾಹಿತಿ ದೊರೆಯುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಆರ್ಥಿಕ ಸಲಹೆಗಾರರಾದ ಡಾ. ಸೌಮ್ಯಕಾಂತಿ ಘೋಷ್ ಅವರು ದೇಶದ ಜನಗಣತಿ 1991 ಹಾಗೂ 2011ರ ವಿಶ್ಲೇಷಣೆಯ ಆಧಾರದ ಮೇಲೆ ಕೆಲವು ಕುತೂಹಲಕಾರಿ ಅಂಶಗಳನ್ನು 2019ರಲ್ಲಿ ಹೊರಗೆಡವಿದ್ದಾರೆ. ಅದರಂತೆ, ಉತ್ತರಪ್ರದೇಶ, ಬಿಹಾರ ಹಾಗೂ ಒಡಿಶಾದಲ್ಲಿ ಜನಸಂಖ್ಯಾ ಬೆಳವಣಿಗೆಯ ದರವು ದಕ್ಷಿಣ ಭಾರತದ ರಾಜ್ಯಗಳಿಗಿಂತ ಹೆಚ್ಚಾಗಿದೆ. ಕೇರಳ, ತಮಿಳುನಾಡು, ಪಂಜಾಬ್ ಹಾಗೂ ಕರ್ನಾಟಕದಲ್ಲಿ ಕಾರ್ಮಿಕರ ಕೂಲಿ ದರ ಹೆಚ್ಚು. ಆದರೆ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಜನಸಂಖ್ಯಾ ಬೆಳವಣಿಗೆಯ ದರ ಹೆಚ್ಚು ಮತ್ತು ಕಾರ್ಮಿಕರ ಕೂಲಿ ದರ ಕಡಿಮೆ. ಹೀಗಾಗಿ ಉತ್ತರದಿಂದ ದಕ್ಷಿಣಕ್ಕೆ ಕಾರ್ಮಿಕರ ವಲಸೆಯ ಪ್ರಮಾಣ ಹೆಚ್ಚು ಎನ್ನಲಾಗಿದೆ. ಆದರೆ ಇದು ಭವಿಷ್ಯದಲ್ಲಿ ಭಾಷೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರಣಗಳಿಂದ ವ್ಯತ್ಯಾಸಗಳನ್ನು ಉಂಟು ಮಾಡುವ, ಸಂಘರ್ಷಗಳು ನಡೆಯುವ ಅಪಾಯಗಳ ಕುರಿತು ಸೌಮ್ಯಕಾಂತಿ ಆತಂಕಪಡುತ್ತಾರೆ. ಈಗಾಗಲೇ ಸಾಂಸ್ಕೃತಿಕ ಕಾರಣಗಳಿಂದ ಈಶಾನ್ಯ ರಾಜ್ಯಗಳ ಜನರು ಹಾಗೂ ಸ್ಥಳೀಯ ರಾಜ್ಯದ ಜನರ ನಡುವೆ ಸಂಘರ್ಷಗಳು ನಡೆದ ಉದಾಹರಣೆಗಳಿವೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯದ ಜನರು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಪ್ರಮಾಣ ಹಾಗೂ ಆ ಪ್ರಮಾಣವನ್ನು ಹೆಚ್ಚು ಮಾಡುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಆಯಾಮಗಳಲ್ಲಿ ಅಧ್ಯಯನ ನಡೆಯಬೇಕಿದೆ. ಜಾತಿ, ಧರ್ಮಗಳ ಕಟ್ಟುಪಾಡುಗಳಾಚೆ ಸ್ಥಾಪಿತ ಮಡಿವಂತಿಕೆಯನ್ನು ದೂರ ಸರಿಸಿ, ಎಲ್ಲಾ ಉದ್ಯೋಗಗಳನ್ನು ಮುಕ್ತವಾಗಿ ಸ್ವೀಕರಿಸುವ ಕಡೆಗೆ ಜನಜಾಗೃತಿ ಮೂಡಿಸಬೇಕಿದೆ. ಎಲ್ಲಾ ಉದ್ಯೋಗಗಳನ್ನು ವೃತ್ತಿಪರವಾಗಿ ನಿರ್ವಹಣೆ ಮಾಡುವತ್ತ ಜನರನ್ನು ಸಜ್ಜುಗೊಳಿಸಬೇಕಿದೆ. ಜೊತೆಗೆ ವಿವಿಧ ವೃತ್ತಿಗಳಿಗೆ ಅಗತ್ಯವಾದ ಕೌಶಲವನ್ನು ಬೆಳೆಸಿಕೊಳ್ಳಲು ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಜನರು ಸದುಪಯೋಗಪಡಿಸಿಕೊಳ್ಳುವೆಡೆ ಸೂಕ್ತ ಕಾರ್ಯತಂತ್ರಗಳನ್ನು ಹೆಣೆಯಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.