ಭೂ ಒಡೆತನ ಹೊಂದಿರುವವರು ತಮ್ಮ ಜಮೀನಿನ ಪೋಡಿ ನಕ್ಷೆಯನ್ನು (ಸ್ಕೆಚ್) ತಾವೇ ತಯಾರಿಸಿಕೊಳ್ಳಬಹುದಾದ ಸ್ವಯಂ ಸೇವೆಯ ಹೊಸ ವ್ಯವಸ್ಥೆಯನ್ನು ಕಂದಾಯ ಇಲಾಖೆ ಸಿದ್ಧಪಡಿಸಿದ್ದು, ಏಪ್ರಿಲ್ 25ರಿಂದ ಜಾರಿಗೆ ಬಂದಿದೆ. ಭೂ ದಾಖಲಾತಿಯಲ್ಲಿ ನಿಜಕ್ಕೂ ಇದು ಒಂದು ಮಹತ್ವದ ಹೆಜ್ಜೆ.
ಇದಕ್ಕಾಗಿ ಕಂದಾಯ ಇಲಾಖೆ ‘ಸ್ವಾವಲಂಬಿ’ ಎಂಬ ಹೆಸರಿನ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ನಿರ್ವಹಣೆ ಕೂಡ ಸರಳವಾಗಿದೆ. ಇದನ್ನು ಕಲಿತುಕೊಂಡರೆ ರೆವಿನ್ಯೂ ಸ್ಕೆಚ್ ಸ್ವತಃ ತಯಾರಿಸಬಹುದು ಅಥವಾ ಬಲ್ಲವರಿಂದ ಸ್ಕೆಚ್ ತಯಾರಿಸಿಕೊಳ್ಳಬಹುದು.
ಭೂಮಿಯ ಬಗ್ಗೆ ಎಲ್ಲರಿಗೂ ಭಾವನಾತ್ಮಕ ಗೌರವ ಇದೆ. ಆದರೆ ಅದು ಭೌತಿಕವಾಗಿ ದೊಡ್ಡ ಸಂಪತ್ತು ಎಂಬುದನ್ನು ಮರೆಯಬಾರದು. ಕುಟುಂಬದ ಸದಸ್ಯರ ಪಾಲುಗಾರಿಕೆ, ಭೂ ಆಸ್ತಿಯ ಕೆಲವು ಭಾಗ ಮಾರಾಟ, ದಾನಪತ್ರ, ನಿವೇಶನಕ್ಕೆ ಬಳಕೆ, ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಹೀಗೆ ಅನೇಕ ಚಟುವಟಿಕೆಗಳಿಗೆ ನಕ್ಷೆ ತೀರಾ ಅವಶ್ಯ. ಅದಿಲ್ಲದೆ ಯಾವುದೇ ದಾಖಲೆ ಸಿದ್ಧವಾಗುವುದಿಲ್ಲ.
ಸಹೋದರರು, ಸಂಬಂಧಿಕರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಭಾಗ ಮಾಡಿಕೊಳ್ಳಲು ಇದು ಅವಕಾಶ ಕಲ್ಪಿಸಿದೆ. ಉದಾಹರಣೆಗೆ, ಮನೆಯಲ್ಲಿ ಇಬ್ಬರು ಸಹೋದರರು, ಒಬ್ಬ ಸಹೋದರಿ, ತಮ್ಮ 5 ಎಕರೆ ಭೂಮಿಯನ್ನು ಯಾರಿಗೆ ಎಷ್ಟು ಭಾಗ ಎಂಬುದನ್ನು ನಿರ್ಧರಿಸಿ ಸ್ಕೆಚ್ ಸಿದ್ಧಪಡಿಸಬಹುದು. ಎಲ್ಲರೂ ಒಪ್ಪಿದ ನಂತರ ಸ್ಕೆಚ್ ಅನ್ನು ತಹಶೀಲ್ದಾರ್ ಕಚೇರಿಯ ಭೂ ದಾಖಲೆಗಳ ವಿಭಾಗಕ್ಕೆ ಅಪ್‍ಲೋಡ್ ಮಾಡಿದರೆ ಸಾಕು. ನಂತರ ನೋಂದಣಿ ಇಲಾಖೆಯಲ್ಲಿ ಆ ಸ್ಕೆಚ್‍ನ ಗಡಿಗಳಿಗೆ (ಬೌಂಡರಿ) ಅನುಗುಣವಾಗಿ ನೋಂದಣಿ ಮಾಡಲಾಗುತ್ತದೆ.
ಆಸ್ತಿ ಸರ್ವೆ ನಡೆಸಿ, ಸ್ಕೆಚ್ ಸಿದ್ಧಪಡಿಸಲು ಹಿಂದೆ 6 ತಿಂಗಳಿನಿಂದ ಒಂದು ವರ್ಷ ಬೇಕಾಗುತ್ತಿತ್ತು. ಈ ಕೆಲಸ ಮಾಡಿಸಿಕೊಳ್ಳಲು ಸಿಬ್ಬಂದಿಗೆ ದೊಡ್ಡ ಮೊತ್ತದಲ್ಲಿ ‘ಖುಷಿ’ ಕೊಡಬೇಕಾಗುತ್ತಿತ್ತು.
ಈ ಗೋಜಲು, ರಗಳೆಯಿಂದ ಬೇಸತ್ತು ಅನೇಕ ಕುಟುಂಬಗಳು ಮೌಖಿಕ ಒಪ್ಪಂದ ಮಾಡಿಕೊಂಡು ಸಾಗುವಳಿ ಮಾಡುತ್ತಿವೆ. ದಿನ ಕಳೆದಂತೆ ಅಧಿಕೃತ ದಾಖಲೆ ಇಲ್ಲದ್ದಕ್ಕೆ ಬಹಳಷ್ಟು ವ್ಯಾಜ್ಯಗಳು ಹುಟ್ಟಿಕೊಂಡಿವೆ. ನ್ಯಾಯಾಲಯಗಳಲ್ಲಿ ಪ್ರತಿಶತ 60ರಷ್ಟು ವ್ಯಾಜ್ಯಗಳು ಭೂಮಿಯ ಪಾಲುದಾರಿಕೆಗೆ ಸಂಬಂಧಿಸಿವೆ ಎಂದು ವರದಿಯೊಂದು ಹೇಳಿದೆ. ಇದು ಈ ಸಮಸ್ಯೆಯ ಗಂಭೀರತೆಗೆ ಸಾಕ್ಷಿಯಾಗಿದೆ.
ಭೂ ಒಡೆತನದ ಮುಖ್ಯ ದಾಖಲೆಯಾದ ಉತಾರದಲ್ಲಿ (ಆರ್‌ಟಿಸಿ) ಮಾಲೀಕ ಹೊಂದಿದ ಭೂಮಿಯ ವ್ಯಾಪ್ತಿಯು ಎಕರೆ ಮತ್ತು ಗುಂಟೆಯಲ್ಲಿ ದಾಖಲಾಗಿರುತ್ತದೆ. ಆದರೆ ವಾಸ್ತವದಲ್ಲಿ ಅಳತೆ ಹೆಚ್ಚು ಅಥವಾ ಕಡಿಮೆಯಾಗಿರುತ್ತದೆ. ಅನಧಿಕೃತ ಒತ್ತುವರಿಯಿಂದ ಈ ವ್ಯತ್ಯಾಸ ಉಂಟಾಗಿರುತ್ತದೆ. ಇದನ್ನು ಸರಿಪಡಿಸದೆ ಪೋಡಿ ನಕ್ಷೆ ಸಿದ್ಧಪಡಿಸಲು ಸಾಧ್ಯವಾಗುವುದಿಲ್ಲ. ಇದೊಂದು ದೊಡ್ಡ ಸವಾಲು. ಇದನ್ನು ಪರಿಹರಿಸುವ ವಿಧಾನವನ್ನೂ ಸರಳೀಕರಣಗೊಳಿಸಬೇಕು.
ಭೂ ಮಾಪನದಲ್ಲಿ ತೀರಾ ಅಲ್ಪಸ್ವಲ್ಪ ವ್ಯತ್ಯಾಸ ಇದ್ದರೆ ಅದನ್ನು ಪರಿಗಣಿಸದೇ ಇರುವುದು, ಹೆಚ್ಚು ವ್ಯತ್ಯಾಸ ಕಂಡುಬಂದಾಗ ಖರಾಬು ಭೂಮಿ ಎಂದು ಪರಿಗಣಿಸುವ ವಿಧಾನವನ್ನು ಕಾನೂನುಬದ್ಧಗೊಳಿಸಬೇಕು. ಅಂದರೆ ಮಾತ್ರ ನಿಜವಾದ ಸರಳ ಪೋಡಿಗೆ ಅರ್ಥ ಬರುತ್ತದೆ.
ಪ್ರತೀ ಭೂ ನಿವೇಶನದ ನಾಲ್ಕು ಬದಿಗಳಲ್ಲಿ ಕನಿಷ್ಠ ಒಂದು ಬದಿಯಲ್ಲಿ ಅತಿಕ್ರಮಣ ಅಥವಾ ಬೇರೆಯವರಿಂದ ಆಕ್ರಮಣ ಆಗಿರುವ ತಕರಾರು ಬಹಳ ಇವೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವುದರಿಂದ ಇದನ್ನು ಸರಿಪಡಿಸಬಹುದು.
ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಕೇವಲ 3 ದಿನಗಳಲ್ಲಿ ಪರಿವರ್ತಿಸುವ ಸರಳ ವಿಧಾನವನ್ನೂ ಜಾರಿಗೆ ತರಲು ಕಂದಾಯ ಇಲಾಖೆಯು ಕರ್ನಾಟಕ ಲ್ಯಾಂಡ್ ರೆವಿನ್ಯೂ ಕಾನೂನು ಸೆಕ್ಷನ್ 95ಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಇದು ಇನ್ನೊಂದು ಮಹತ್ವದ ಬೆಳವಣಿಗೆಯಾಗಿದೆ.
ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸುವುದಕ್ಕೆ ಬಹಳಷ್ಟು ಪರದಾಡಬೇಕಾಗುತ್ತಿತ್ತು. ದೊಡ್ಡ ಪ್ರಮಾಣದಲ್ಲಿ ‘ಖುಷಿ’ ಕೊಡಬೇಕಾಗುತ್ತಿತ್ತು. ಉದ್ದೇಶಿತ ಈ ಹೊಸ ವಿಧಾನವು ಉದ್ಯಮಿಗಳಿಗೆ, ವಾಣಿಜ್ಯ ವಹಿವಾಟು ಮಳಿಗೆಗಳನ್ನು ಕಟ್ಟುವುದಕ್ಕೆ ಬಹಳ ಅನುಕೂಲಕರವಾಗಿದೆ.
ತಮ್ಮ ಭೂಮಿಯನ್ನು ಯಾವ ಉದ್ದೇಶಕ್ಕೆ (ಉದಾಹರಣೆಗೆ, ಕೈಗಾರಿಕೆ, ಶಿಕ್ಷಣ ಸಂಸ್ಥೆ, ವಾಣಿಜ್ಯ ಮಳಿಗೆ, ಆಸ್ಪತ್ರೆ ಇತ್ಯಾದಿ ಕಾರ್ಯಗಳಿಗಾಗಿ) ಪರಿವರ್ತನೆ ಮಾಡಬಯಸಿದ್ದೇವೆ ಎಂದು ಸ್ವತಃ ಅಫಿಡವಿಟ್ ಬರೆದುಕೊಟ್ಟು ಅನುಮತಿ ಪಡೆಯಬಹುದಾಗಿದೆ.
ಅಫಿಡವಿಟ್ ಬರೆದುಕೊಟ್ಟ ಮೂರು ದಿನಗಳಲ್ಲಿ ಜಿಲ್ಲಾ ಆಡಳಿತ ಒಪ್ಪಿಗೆ ಪತ್ರ ನೀಡುತ್ತದೆ. ಅಫಿಡವಿಟ್ ಬರೆದುಕೊಟ್ಟದ್ದಕ್ಕೆ ವ್ಯತಿರಿಕ್ತವಾಗಿ ಭೂಮಿಯನ್ನು ಅನ್ಯಕಾರ್ಯಗಳಿಗೆ ಬಳಸಿರುವುದು ಏನಾದರೂ ಕಂಡುಬಂದರೆ ಸರ್ಕಾರ ಆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು ವಶಪಡಿಸಿಕೊಳ್ಳುವ ಕಠಿಣ ಕಾನೂನು ಹಾಗೂ ಹಸಿರು ವಲಯಕ್ಕೆ ಸೇರಿರಬಾರದು ಎಂಬ ಹಿಂದಿನ ನಿಯಮಗಳನ್ನು ಕಡ್ಡಾಯಗೊಳಿಸಿರುವುದು ಸೂಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.