ADVERTISEMENT

ಸಂಗತ: ಬೇಸರದ ಆಗರ ಆಗದಿರಲಿ ಬೇಸಿಗೆ

ಮಕ್ಕಳು ಇಷ್ಟಪಟ್ಟರೆ ಅಂತಹವರನ್ನು ಬೇಸಿಗೆ ಶಿಬಿರಕ್ಕೆ ಸೇರಿಸುವುದು ತಪ್ಪಲ್ಲ. ಆದರೆ ಅವರನ್ನು ಬಲವಂತವಾಗಿ ಅಲ್ಲಿಗೆ ದೂಡುವ ಪ್ರವೃತ್ತಿ ಸರಿಯಲ್ಲ

ಪ್ರಜಾವಾಣಿ ವಿಶೇಷ
Published 3 ಮೇ 2024, 23:43 IST
Last Updated 3 ಮೇ 2024, 23:43 IST
   

ಗೆಳೆಯರೊಬ್ಬರ ಮಗ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ವಾರ್ಷಿಕ ಪರೀಕ್ಷೆ ಮುಗಿಯುತ್ತಲೇ ಅವನನ್ನು ವಾಸ್ತವ್ಯ ಸಹಿತ ಬೇಸಿಗೆ ಶಿಬಿರಕ್ಕೆ ಸೇರಿಸಿದ್ದರು. ‘ರಜೆಯಲ್ಲಿ ಸುಮ್ಮನೆ ಆಟವಾಡಿಕೊಂಡು ತಿರುಗುವ ಬದಲು ಏನನ್ನಾದರೂ ಸ್ವಲ್ಪ ಕಲಿಯಲಿ ಅಂತ ಕಳುಹಿಸಿದ್ದೇನೆ’ ಎಂದು ಗೆಳೆಯ ಹೇಳಿದ್ದ. ಆದರೆ ಶಿಬಿರ ಸೇರಿದ ನಾಲ್ಕೇ ದಿನಗಳಲ್ಲಿ ಹುಡುಗನನ್ನು ಮರಳಿ ಕರೆದೊಯ್ಯುವಂತೆ ಕರೆ ಬಂತು. ಹೋಗಿ ನೋಡಿದರೆ ಹುಡುಗ ಮಂಕಾಗಿದ್ದ. ಸ್ವಲ್ಪ ಜ್ವರ ಬರುತ್ತಿತ್ತು. ಮೈಮೇಲೆ ಸೊಳ್ಳೆ ಕಚ್ಚಿ ದದದ್ದುಗಳಿದ್ದವು. ವೈದ್ಯರು ಚಿಕಿತ್ಸೆ ಮಾಡುತ್ತ, ಮನಸ್ಸಿಗೆ ಒಗ್ಗಿಲ್ಲ ಅಂತ ಕಾಣಿಸುತ್ತದೆ, ಕೆಲವು ದಿನ ಹಳ್ಳಿಯ ವಾತಾವರಣದಲ್ಲಿ ಇರಲು ಬಿಡಿ ಎಂದರು.

ಹುಡುಗನ ಅಜ್ಜಿ ಮನೆ ಮಲೆನಾಡಿನಲ್ಲಿ. ಅವನು ರಜೆ ಮುಗಿಯುವತನಕ ಅಲ್ಲಿಯೇ ಇದ್ದ. ಅಲ್ಲಿ ಬೆಳೆಯುವ ಕಾಡುಹಣ್ಣುಗಳ ರುಚಿ, ಕೋತಿ, ಹಕ್ಕಿಗಳ ಸಾಮೀಪ್ಯ, ತಂಪಾದ ಕೆರೆಯ ಈಜು ಎಲ್ಲವನ್ನೂ ಅನುಭವಿಸಿ ಮರಳಿದಾಗ ಮೊದಲಿನ ಸ್ಥಿತಿಗೇ ಬಂದಿದ್ದ. ದೇಹದ ತೂಕವೂ ಹೆಚ್ಚಾಗಿತ್ತು.

ಇಂತಹ ಉದಾಹರಣೆಗಳು ಹಲವು. ಬೇಸಿಗೆ ಶಿಬಿರಗಳು ಸಂಪೂರ್ಣ ನಿಷ್ಪ್ರಯೋಜಕ ಎಂದು ಹೇಳಲಾಗದು. ಆದರೆ, ಮಕ್ಕಳಿಗೆ ಬಲವಂತದ ಹೇರಿಕೆ ಎನ್ನುವಂತೆ ಆಗಬಾರದು. ಕೆಲವೆಡೆ ಇಂತಹ ಶಿಬಿರಗಳು ಆಯೋಜಕರಿಗೆ ಕಾಸು ತರುವ ಉದ್ಯಮವಾಗಿ ಪರಿವರ್ತನೆಯಾಗಿವೆ. ಹೆತ್ತವರಿಗಂತೂ ತಮ್ಮ ಮಗು ಎಲ್ಲವನ್ನೂ ಕಲಿತು ಬುದ್ಧಿವಂತನಾಗಲು ಇಂತಹ ಶಿಬಿರಗಳು ಸಹಾಯಕ ಎಂಬುದು ಗಾಢ ನಂಬಿಕೆ. ವರ್ಷವಿಡೀ ಶಾಲೆಯ ಓದು, ಮನೆಪಾಠದಲ್ಲೇ ಸಮಯ ಕಳೆಯುವ ಮಗುವಿನ ಪುಟ್ಟ ಮೆದುಳಿಗೆ ಅರೆಕ್ಷಣವೂ ವಿರಾಮ ಎಂಬುದೇ ಇರಲಾರದು. ಅಂತಹ ಮಗುವಿಗೆ ರಜೆಯ ದಿನಗಳಲ್ಲಿ ಕೂಡ ಸ್ವೇಚ್ಛೆಯಾಗಿ ಇರಲು ಬಿಡದೇ ಇರುವಂಥ ನಡೆಯನ್ನು ಒಪ್ಪಲಾಗದು.

ADVERTISEMENT

ಕುವೆಂಪು, ತೇಜಸ್ವಿಯವರಂತಹ ಲೇಖಕರ ಪ್ರಬಂಧ, ಕಾದಂಬರಿಗಳಲ್ಲಿ ಮಲೆನಾಡಿನ ಮಳೆಕಾಡುಗಳು, ಅಲ್ಲಿ ಉಲಿಯುವ ಹಕ್ಕಿಗಳು, ರುಚಿಕರವಾದ ಕಾಡುಹಣ್ಣುಗಳು, ಕಚಗುಳಿಯಿಡುವ ನೀರ ಝರಿಗಳ ವರ್ಣನೆ ಮೈ ಪುಳಕಗೊಳಿಸುತ್ತವೆ. ದಶಕಗಳ ಹಿಂದಿನ ಎಲ್ಲರೂ ಇಂತಹ ಹಳ್ಳಿ ಸೊಗಡಿನ ಸೌಭಾಗ್ಯವನ್ನು ಅನುಭವಿಸಿದ್ದರು. ಆದರೆ ಇಂದಿನ ಎಷ್ಟು ಮಕ್ಕಳಿಗೆ ಪ್ರಕೃತಿಯ ಮಡಿಲಲ್ಲಿ ಇಂತಹ ಸುಖ ಸವಿಯಲು ಪೋಷಕರು ಅನುವು ಮಾಡಿಕೊಡುತ್ತಾರೆ? ಮಕ್ಕಳು ಸ್ವಚ್ಛಂದವಾಗಿ ನಿಸರ್ಗವನ್ನು ನೋಡಿ, ಅನುಭವಿಸಿ, ಕಲಿತು ಮನಸ್ಸನ್ನು ಪ್ರಫುಲ್ಲಗೊಳಿಸಿಕೊಳ್ಳಲು ಅವಕಾಶವನ್ನೇ ನೀಡುವುದಿಲ್ಲ.

ಸುಮ್ಮನೆ ಮನೆಯಲ್ಲಿ ಇದ್ದುಕೊಂಡು ತಂಟೆ ಮಾಡುವುದಕ್ಕಿಂತ ಬೇಸಿಗೆ ಶಿಬಿರಕ್ಕೆ ಹೋಗಿ ಬೇರೆ ಬೇರೆ ವಿಷಯಗಳಲ್ಲಿ ಪರಿಣತಿ ಸಂಪಾದಿಸಿ ಬರಲಿ, ಇದರಿಂದ ಗೆಳೆಯರ ಒಡನಾಟವೂ ಸಿಗುತ್ತದೆ ಎಂಬುದು ಪೋಷಕರ ಒತ್ತಾಸೆಗೆ ಕಾರಣ. ಅವರ ಮಗುವಿಗೆ ಅದು ಇಷ್ಟವೇ ಆಗಿದ್ದರೆ ಅಡ್ಡಿಯಿಲ್ಲ. ಆದರೆ ಅವನ ಅಥವಾ ಅವಳ ಮನೋಧರ್ಮಕ್ಕೆ ಒಗ್ಗದ ವಿಷಯದಲ್ಲಿ ಎಷ್ಟೇ ಮಾಹಿತಿ ಕೊಟ್ಟರೂ ಪರಿಣತಿ ಗಳಿಸಲು ಸಾಧ್ಯವಾಗದೇ ಇರಬಹುದು. ‘ಏನಾದ್ರೂ ಕಲಿಯಲಿ ಅಂತ ನಾವು ಆಸೆಪಟ್ಟು ಶಿಬಿರಕ್ಕೆ ಕಳುಹಿಸಿದರೆ, ಈ ದಡ್ಡ ಶಿಖಾಮಣಿ ಸುಖಾಸುಮ್ಮನೆ ಕಾಲ ಕಳೆದು ಬಂದಿದ್ದಾನೆ’ ಎಂದು ದೂರುವ ಪೋಷಕರೂ ಇದ್ದಾರೆ.

ಮಗುವಿನ ಮನಸ್ಸನ್ನು ಅರಿತುಕೊಳ್ಳದೆ, ಯಾವ ವಿಷಯವಾದರೂ ಸರಿ ಅವನು ಕಲಿಯಲಿ ಎಂದು ಪೋಷಕರೇ ತೀರ್ಮಾನಕ್ಕೆ ಬರುವುದು ಮಗುವಿನ ಸೂಕ್ಷ್ಮ ಮನಸ್ಸಿಗೆ ಗಾಸಿ ಉಂಟು ಮಾಡಬಹುದು. ಅದಕ್ಕೆ ಏನು ಇಷ್ಟ ಎಂದು ನೋಡಿಕೊಂಡು ಅದಕ್ಕೆ ಒಪ್ಪುವಂಥ ಶಿಬಿರಗಳಿಗೆ ಸೇರಿಸುವುದು ಉತ್ತಮ. ಬೇಸಿಗೆ ರಜೆ ಅವಧಿಯಲ್ಲಿ ತಿಂಗಳುಗಟ್ಟಲೆ  ಈ ಶಿಬಿರಗಳನ್ನು ನಡೆಸುವವರಿದ್ದಾರೆ. ದೀರ್ಘಕಾಲ ಮನೆ ಬಿಟ್ಟು ಮಕ್ಕಳು ಅಲ್ಲಿ ಕಲಿಸಿದುದನ್ನು ಕಲಿಯಲೇಬೇಕಾದ ಅನಿವಾರ್ಯಕ್ಕೆ ಒಳಗಾಗುತ್ತಾರೆ. ಆಹಾರ, ವಿಹಾರಗಳಲ್ಲಿ ವ್ಯತ್ಯಯ ಬರಬಹುದು. ಪ್ರೀತಿಪಾತ್ರರ ಜೊತೆಗೇ ಬೆಳೆದ ಮಕ್ಕಳಿಗೆ ಖಿನ್ನತೆ ಕಾಡಬಹುದು. 

ಬೇಸಿಗೆ ಶಿಬಿರಕ್ಕೆ ಸ್ವಯಂಪ್ರೇರಿತರಾಗಿ ಮಕ್ಕಳು ಹೋಗಲಿಚ್ಛಿಸಿದರೆ ಪ್ರೋತ್ಸಾಹಿಸಬಹುದು. ಆದರೆ ಅಲ್ಲಿಗೆ ಬಲವಂತವಾಗಿ ದೂಡುವ ಪ್ರವೃತ್ತಿ ಮಕ್ಕಳ ಆಸೆಯನ್ನು ಅದುಮಲು ಕಾರಣವಾಗುತ್ತದೆ.
ಶಾಲೆ ಮತ್ತು ಮನೆ ಎರಡರಲ್ಲೂ ವ್ಯತ್ಯಾಸವನ್ನೇಕಾಣದಷ್ಟು ಮಟ್ಟಿಗೆ ಕಲಿಕೆಯ ಪ್ರಪಂಚದಲ್ಲಿ ತಲ್ಲೀನ ವಾಗುವ ಮಗುವನ್ನು ಚಿನ್ನದ ಮೊಟ್ಟೆಯಿಡುವ ಕೋಳಿಯಾಗಬೇಕೆಂಬ ಆಕಾಂಕ್ಷೆಯಿಂದ ಬೆಳೆಸಲಾಗು ತ್ತದೆ. ಓದು ಓದು ಓದು. ಇದನ್ನು ಬಿಟ್ಟರೆ ಟಿ.ವಿ. ನೋಡುವಂತಿಲ್ಲ, ಗೆಳೆಯರೊಂದಿಗೆ ಬೆರೆಯುವಂತಿಲ್ಲ, ಸಮಾರಂಭಗಳಿಗೆ ಹೋಗಿ ಬಂಧುಮಿತ್ರರ ಪರಿಚಯ ಮಾಡಿಕೊಳ್ಳಲು ಅವಕಾಶವಿಲ್ಲ, ಪರಿಸರದಿಂದ, ಸಮಾಜದಿಂದ, ಬಂಧುತ್ವದಿಂದ ದೂರವಿಟ್ಟು ಬೆಳೆಸುವ ಭವಿಷ್ಯದ ಕುಡಿಗೆ ಬೇಸಿಗೆ ರಜೆಯಲ್ಲೂ ಅದೇ ಬಂಧನ ಮುಂದುವರಿದರೆ ಪರಿಣಾಮ ಏನಾಗಬಹುದು?

ಮಗು ಇಷ್ಟಪಟ್ಟರೆ ಶಿಬಿರಗಳಿಗೆ ಸೇರಿಕೊಂಡು ಹೊಸದೊಂದನ್ನು ಕಲಿಯಲು ಆಸ್ಪದ ನೀಡಬಹುದು. ಆದರೆ ವಿರಾಮವೇ ಇಲ್ಲದೆ ಶಿಕ್ಷಣದ ಏರೊತ್ತಡಗಳಿಂದ ಬೆಂದುಹೋಗುವ ಮನಸ್ಸು ಮತ್ತು ಮೆದುಳಿಗೆ ವಿಶ್ರಾಂತಿ, ನೆಮ್ಮದಿ ಇರುವಲ್ಲಿಗೆ ಕಳುಹಿಸಿಕೊಡುವುದು ಹೆಚ್ಚು ಆರೋಗ್ಯಕರ ಅನಿಸುತ್ತದೆ. ಶಿಬಿರಗಳಿಂದ ಮಕ್ಕಳ ಪ್ರತಿಭಾ ವಿಕಸನಕ್ಕೆ ಪ್ರಯೋಜನವಾಗಲಿದೆ ಎಂದು ಭಾವಿಸುವುದರ ಬಗ್ಗೆ ಆಕ್ಷೇಪ ಇಲ್ಲವಾದರೂ ಮಗುವಿಗೆ ಏನು ಬೇಕು ಎಂಬ ಸೂಕ್ಷ್ಮವನ್ನು ಅರಿತುಕೊಂಡು ನಿರ್ಧಾರ ತೆಗೆದುಕೊಂಡಾಗ ಬೇಸಿಗೆ ಶಿಬಿರ ಬೇಸರ ತರಲಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.