ಒಂದರಿಂದ ಐದನೇ ತರಗತಿವರೆಗಿನ ಮಕ್ಕಳಿಗೆ ಇದೇ 25ರಿಂದ ಶಾಲೆಗಳು ಆರಂಭವಾಗುತ್ತವೆ. ಸ್ವಲ್ಪ ಆತಂಕವೆನ್ನಿಸಿದರೂ ಎಲ್ಲರೂ ಖುಷಿಯಿಂದ ಇದನ್ನು ನಿರೀಕ್ಷಿಸುತ್ತಿದ್ದಾರೆ. ಒಂದು ತಲೆಮಾರಿನ ಮಕ್ಕಳು
ಎರಡು ವರ್ಷ ಬಾಲ್ಯದಿಂದ, ಕಲಿಕೆಯಿಂದ ಹಾಗೂ ಅವರ ಹಕ್ಕಾಗಿರುವ ಅನೇಕ ಖುಷಿಗಳಿಂದ ವಂಚಿತರಾದರು ಎಂದು ನಮಗೆಲ್ಲ ಅನ್ನಿಸಿತ್ತು. ಈಗ ಶಾಲೆಗಳು ಆರಂಭವಾಗುವುದನ್ನು ಒಂದು ಸಮುದಾಯವಾಗಿ, ಪಾಲಕರಾಗಿ ಮತ್ತು ನಾಗರಿಕರಾಗಿ ಉತ್ಸಾಹ ಹಾಗೂ ನಿರೀಕ್ಷೆಯಿಂದ ಸ್ವಾಗತಿಸಬೇಕಿದೆ.
ಆದರೆ ಒಂದೆರಡು ಸಂಗತಿಗಳಿಂದ ಸ್ವಲ್ಪ ಆತಂಕವೆನ್ನಿಸಿದೆ. ಮೊದಲನೆಯದಾಗಿ, ಯಾವ ಕಾರಣಕ್ಕೂ ಪಠ್ಯದಲ್ಲಿ ಕಡಿತವಿಲ್ಲ, ಶಿಕ್ಷಕರು ರಜೆ ದಿನಗಳಂದೂ ಪಾಠ ಮಾಡಿ ಪಠ್ಯವನ್ನು ಪೂರೈಸಬೇಕು ಎಂದು ಶಿಕ್ಷಣ ಸಚಿವರು ಈ ಮೊದಲೇ ಹೇಳಿದ್ದಾರೆ. ಕಷ್ಟವಾದರೂ ಪಠ್ಯವನ್ನು ಪೂರೈಸುತ್ತೇವೆ ಎಂದು ಶಿಕ್ಷಕರು ತಮ್ಮ ಸಂಘಗಳ ಮೂಲಕ ಭರವಸೆ ನೀಡಿದ್ದಾರೆ. ಈ ಮನೋ ಸ್ಥಿತಿ ಹಾಗೂ ಧೋರಣೆಗಳನ್ನು ಮರುಪರಿಶೀಲಿಸಿ
ಕೊಳ್ಳುವುದು ಅವಶ್ಯಕವಾಗಿದೆ.
ಅಂದಾಜು ಎರಡು ವರ್ಷಗಳಿಂದ ಶಾಲೆಗಳಿಂದ ದೂರವಿದ್ದ ಮಕ್ಕಳು ಎಲ್ಲಾ ಹಂತದಲ್ಲೂ ಕಲಿಕೆಯಲ್ಲಿ ಹಿನ್ನಡೆಯನ್ನು ಅನುಭವಿಸಿದ್ದಾರೆ ಎನ್ನುವುದು ಅನೇಕ ಪ್ರಮುಖ ವರದಿಗಳು ಹಾಗೂ ಸಮೀಕ್ಷೆಗಳಿಂದ ಖಚಿತವಾಗಿದೆ. ಅಕ್ಷರಗಳ ಅರಿವು, ಸಂಖ್ಯೆ ಲೆಕ್ಕಗಳ ಬಳಕೆ, ಏಕಾಗ್ರತೆ, ಕಲಿಯುವಿಕೆಯ ಕೌಶಲಗಳೆಲ್ಲವೂ ಗಾಬರಿಯಾಗುವಷ್ಟು ಕುಂಠಿತವಾಗಿವೆ. ಇನ್ನೂ ಹೆಚ್ಚಿನ ಆತಂಕದ ವಿಷಯವೆಂದರೆ, ಮಕ್ಕಳಿಗೆ ಶಾಲೆಯಲ್ಲಿ ಸಿಕ್ಕುವ ಅತಿ ಮುಖ್ಯ ಶಿಕ್ಷಣವೆಂದರೆ ಸಮಾಜೀಕರಣ. ಅಂದರೆ ಇತರರೊಂದಿಗೆ ಬೆರೆತು, ಮಾತನಾಡಿ, ಜೊತೆಗೂಡಿ ಕಲಿಯುವ ಬಹುಮುಖ್ಯ ಶಿಕ್ಷಣವಿದು. ಕೋವಿಡ್ ಪಿಡುಗಿನ ಕಾಲದಲ್ಲಿ ನಮ್ಮ ಸಮಾಜದ ಅಸಮಾನ ಸಾಮಾಜಿಕ ಸ್ಥಿತಿಗಳಿಂದಾಗಿ ಮಕ್ಕಳು ವಿವಿಧ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ.
ಆನ್‍ಲೈನ್ ಕಲಿಕೆ ಲಭ್ಯವಿದ್ದ ಮಕ್ಕಳಿಗೆ ಸ್ಮಾರ್ಟ್‌ಫೋನ್ ವ್ಯಸನ ಬಾಧಿಸುತ್ತಿದೆ. ಜೊತೆಗೆ ಒಬ್ಬಂಟಿತನದ ಪ್ರಜ್ಞೆ ಕೂಡ. ಆನ್‍ಲೈನ್ ಸೌಲಭ್ಯ ಇಲ್ಲದ ಮನೆಗಳಲ್ಲಿ ಬಡತನ, ಕೆಲಸ, ಮಧ್ಯಾಹ್ನದ ಬಿಸಿಯೂಟ ಇಲ್ಲದ ಕಾರಣಕ್ಕೆ ಅಪೌಷ್ಟಿಕತೆ, ಕುಟುಂಬದೊಳಗಿನ ಸಮಸ್ಯೆಗಳಿಂದ ಮಕ್ಕಳು ಮಂಕಾಗಿದ್ದಾರೆ. ಅವರ ಮನಸ್ಸುಗಳಿಗೆ ಹೇಳಿಕೊಳ್ಳಲಾಗದ ಗಾಯಗಳಾಗಿವೆ. ಅಭದ್ರತೆ, ಸಾಮರ್ಥ್ಯ ಇಲ್ಲವೆನ್ನುವ ಹೆದರಿಕೆಯಿಂದ ಶಾಲೆಗೆ ಬರುವ ಮಕ್ಕಳಿಗೆ ಸಿಕ್ಕಬೇಕಾದ ಮೊದಲ ಪಾಠವೆಂದರೆ ಪ್ರೀತಿ ಹಾಗೂ ಕಾಳಜಿಯದು. ಬೋಧನೆಗಿಂತ ಮೊದಲು ಕಲಿಯುವಿಕೆಯ ಪ್ರೇರಣೆ, ಉತ್ಸಾಹ ಮೂಡಿಸಬೇಕಿದೆ.
ಇದನ್ನು ಕರ್ನಾಟಕದ ಶಿಕ್ಷಕರು ಮಾಡ ಬಲ್ಲರು. ಅವರು ದೇಶದ ಅತ್ಯುತ್ತಮ ಶಿಕ್ಷಕರಾಗಿದ್ದಾರೆ. ಆದರೆ ಈಗಲೇ ಅವರೆದುರಿಗೆ ಪಠ್ಯ ವಸ್ತುವಿನ ಖಡ್ಗವನ್ನು ಝಳಪಿಸುವುದು ಬೇಡ. ವಿದ್ಯಾರ್ಥಿಗಳಿಗೆ ಕಲಿಯಬೇಕಾದ ಸಂಗತಿಗಳನ್ನು ತುರ್ತಾಗಿ ನುಂಗಿಸುವಂತೆ ಅವರ ಮೇಲೆ ಒತ್ತಡ ತರುವುದು ಬೇಡ. ನಮ್ಮ ಶಿಕ್ಷಣ ವ್ಯವಸ್ಥೆಯು
ಅಧಿಕಾರಶಾಹಿಯ ಕೈಯಲ್ಲಿ ಸಿಲುಕಿ ದಿನದಿನಕ್ಕೂ ಅಮಾನವೀಯವಾಗುತ್ತಿದೆ. ಈ ಸೂಕ್ಷ್ಮಗಳು ಶಿಕ್ಷಣ ಇಲಾಖೆಗೆ ಅರ್ಥವಾಗುವುದಿಲ್ಲ. ಮಕ್ಕಳಿಗೆ ಬೇಕಾಗಿರು ವುದು ಸಂಗಾತಿತನ, ಕಾಳಜಿ ಮತ್ತು ಆತ್ಮವಿಶ್ವಾಸ. ಪ್ರಾಥಮಿಕ ತರಗತಿಗಳಲ್ಲಿ ಅಕ್ಷರಜ್ಞಾನ ಹಾಗೂ ಅಂಕಿಸಂಖ್ಯೆ, ಲೆಕ್ಕಗಳ ಪ್ರಾಥಮಿಕ ಜ್ಞಾನ, ಜೊತೆಗೆ ಪದ್ಯಗಳು, ಕತೆಗಳು. ಈ ವಿಶೇಷ ಸಂದರ್ಭದಲ್ಲಿ ಆಪ್ತ ಸಲಹೆ ಮತ್ತು ತಂದೆತಾಯಿಗಳ ಜೊತೆಗಾರಿಕೆ ಕೂಡ.
ನಮ್ಮ ಶಿಕ್ಷಕರ ಮೇಲೆ ನಂಬಿಕೆಯಿಡುವುದನ್ನು ಸಚಿವರು ಮತ್ತು ಶಿಕ್ಷಣ ಇಲಾಖೆಯು ಕಲಿಯಬೇಕಿದೆ. ಜಗತ್ತೇ ಕಂಡರಿಯದ ಪಿಡುಗಿನಿಂದ ಚೇತರಿಸಿಕೊಳ್ಳುವ ಸಂದರ್ಭವಿದು. ಹಾಗೆಂದರೆ ಪಠ್ಯಕ್ರಮವೇ ಬೇಡವೆ? ಪರೀಕ್ಷೆಗಳೇ ಬೇಡವೆ? ಹಾಗಲ್ಲ, ಈಗ ಶಾಲೆಗಳಿಗೆ ಮರಳುತ್ತಿರುವ ಮಕ್ಕಳ ಮನೋಸ್ಥಿತಿಯೇ ಬೇರೆ. ಮೊದಲ ತಿಂಗಳಂತೂ ಅವರು ಕಳೆದುಕೊಂಡಿದ್ದ ಖುಷಿ, ಸ್ವಾತಂತ್ರ್ಯ ಇವುಗಳನ್ನು ಎಚ್ಚರಿಕೆಯಿಂದಾ
ದರೂ ಸರಿ ಕೊಡಬೇಕಿದೆ. ಪಠ್ಯ ವಸ್ತುವನ್ನು ಗುಮ್ಮನನ್ನಾ ಗಿಸುವುದು ಬೇಡ. ಕಲಿಕೆಗೆ ಆಧಾರವಾದ ಮೂಲ ಕೌಶಲಗಳನ್ನು ತಾಳ್ಮೆಯಿಂದ ಹೇಳಿಕೊಡುವುದು ಈಗಿನ ಅವಶ್ಯಕತೆಯಾಗಿದೆ.
ಕೊರೊನಾ ಕಾಲದಲ್ಲಿ ಕೂಡ ನಮ್ಮ ಶಿಕ್ಷಕರು ತಮ್ಮ ಸೃಜನಶೀಲತೆಯನ್ನು ತೋರಿದ್ದಾರೆ. ಅವರಿಗೆ ಸ್ವಲ್ಪ ಸ್ವಾಯತ್ತತೆ, ಉತ್ತೇಜನ ನೀಡಬೇಕಿದೆ. ಕೋವಿಡ್ ಪಿಡುಗಿನಿಂದಾಗಿ ಮಕ್ಕಳ ಕಲಿಕೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಬಂದಿರುವ ವಿವಿಧ ಸಮೀಕ್ಷಾ ವರದಿಗಳ ಕುರಿತು ಗಂಭೀರ ಚರ್ಚೆಯಾದಂತೆ ಕಾಣು ವುದಿಲ್ಲ. ಈ ವರದಿಗಳಲ್ಲಿರುವ ಸಂಗತಿಗಳು ಆತಂಕ ಕಾರಿಯಾಗಿವೆ. ಅನೇಕ ಮಕ್ಕಳು ತಾವು ಹಿಂದೆ ಕಲಿತಿದ್ದ ಅಕ್ಷರ ಹಾಗೂ ಸಂಖ್ಯೆಗಳನ್ನೇ ಮರೆತಿದ್ದಾರೆ. ಅನೇಕ ಮನೋವೈದ್ಯರ ಮಾತು ಹಾಗೂ ಬರಹಗಳ ಪ್ರಕಾರ, ಶಿಕ್ಷಣ ನೀಡುವ ಸಮಾಜೀಕರಣವಿಲ್ಲದೆ ಮಕ್ಕಳ ಮನಸ್ಸಿನ ಬೆಳವಣಿಗೆಗೆ ಆಗಿರುವ ಹಾನಿಯ ಸರಿಯಾದ ಅಂದಾಜು ಕೂಡ ನಮಗಿಲ್ಲ. ಇದೆಲ್ಲವನ್ನೂ ಸರಿಪಡಿಸಲು ಸಾಧ್ಯವಿದೆ. ಆದರೆ ನಮ್ಮ ಮನೋಭಾವ ಹಾಗೂ ಧೋರಣೆಗಳಲ್ಲಿ ಬದಲಾವಣೆ ಆದರೆ ಮಾತ್ರ ಇದು ಸಾಧ್ಯ. ನಾಗರಿಕ ಸಮುದಾಯವು ಶಿಕ್ಷಣದಲ್ಲಿಯಾದರೂ ಸಹಭಾಗಿಯಾಗುವಂತೆ ಯೋಚಿಸುವುದು, ಕ್ರಿಯಾಶೀಲವಾಗುವುದು ಅಸಾಧ್ಯವೆ?
ಶಿಕ್ಷಣವು ಒಂದು ಇಲಾಖೆಯೋ ಮಾನವ ಸಮಾಜದ ಅತ್ಯಮೂಲ್ಯವಾದ ವಿದ್ಯಮಾನವೋ ಎನ್ನುವ ಪ್ರಶ್ನೆ ಕೇಳುವ ಸಂದರ್ಭವಿದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.