ADVERTISEMENT

ಸಂಗತ: ರೈನೊ ರಕ್ಷಣೆಗೆ ಪಣ ತೊಡೋಣ

ಜೀವಿವೈವಿಧ್ಯದ ಈ ಪ್ರಮುಖ ಕೊಂಡಿಗಳ ಬೇಟೆ ಅನಿಯಂತ್ರಿತವಾಗಿ ಸಾಗುತ್ತಿದೆ

ಶ್ರೀಗುರು
Published 21 ಸೆಪ್ಟೆಂಬರ್ 2021, 20:15 IST
Last Updated 21 ಸೆಪ್ಟೆಂಬರ್ 2021, 20:15 IST
ಸಂಗತ
ಸಂಗತ   

ದಡೂತಿ ದೇಹ, ಕಂಬದಂಥ ಕಾಲು, ಭಾರಿ ತೂಕ ಮತ್ತು ಮೂಗಿನ ಮೇಲಿನ ಕೊಂಬುಗಳಿಂದ ವಿಶಿಷ್ಟವಾಗಿ ಕಾಣಿಸುವ ಘೇಂಡಾಮೃಗದ (ರೈನೊ) ಸಂತತಿಯು ಅದರ ಆವಾಸ ನಾಶ ಮತ್ತು ಮಾನವ ಬೇಟೆಯಿಂದಾಗಿ ವಿನಾಶದ ಭೀತಿಯಲ್ಲಿದೆ. ಆಫ್ರಿಕಾ ಮತ್ತು ಏಷ್ಯಾದ ಕಾಡುಗಳಲ್ಲಿ ಮಾತ್ರ ಇರುವ ರೈನೊಗಳು ಜೀವಿವೈವಿಧ್ಯದ ಪ್ರಮುಖ ಕೊಂಡಿಗಳೆನಿಸಿದ್ದರೂ ಅವುಗಳ ಕೊಂಬಿನಲ್ಲಿ ಮನುಷ್ಯನ ಕ್ಯಾನ್ಸರ್ ಮತ್ತು ನಿಮಿರು ದೌರ್ಬಲ್ಯ ಗುಣಪಡಿಸುವ ರಾಸಾಯನಿಕಗಳಿವೆ ಎಂಬ ತಪ್ಪುಗ್ರಹಿಕೆಯಿಂದಾಗಿ ಅವುಗಳ ಬೇಟೆ ಅನಿಯಂತ್ರಿತವಾಗಿ ನಡೆಯುತ್ತಿದೆ.

ಕಳೆದ ಶತಮಾನದ ಆರಂಭದಲ್ಲಿ ಐದು ಲಕ್ಷದಷ್ಟಿದ್ದ ಅವುಗಳ ಸಂಖ್ಯೆ ಈಗ ಬರೀ ಮೂವತ್ತು ಸಾವಿರಕ್ಕಿಳಿದಿದೆ. ನಮ್ಮಲ್ಲಿ ಸುಮಾರು 3,300 ಇರಬಹುದೆಂಬ ಅಂದಾಜಿದ್ದು, ಅಪಾಯದಲ್ಲಿರುವ ಪ್ರಾಣಿ ಎಂದು ಐಯುಸಿಎನ್‌ (ಇಂಟರ್‌ನ್ಯಾಷನಲ್‌ ಯೂನಿಯನ್‌ ಫಾರ್‌ ಕನ್ಸರ್ವೇಷನ್‌ ಆಫ್‌ ನೇಚರ್‌) ಕೆಂಪುಪಟ್ಟಿಗೆ ಸೇರಿಸಲಾಗಿದೆ.

ಆಫ್ರಿಕಾದ ಡೈಸೆರಾಸ್ ಬೈಕಾರ್ನಿಸ್ (ಕಪ್ಪು), ಸೆರೆಟೊತೀರಿಯಂ ಸೈಮಮ್‌ (ಬಿಳಿ), ಅಸ್ಸಾಂನ ರೈನಾಸರಾಸ್ ಯೂನಿಕಾರ್ನಿಸ್, ಜಾವಾದ ರೈನಾಸರಾಸ್ ಸೊಂಡೇಕಸ್ ಮತ್ತು ಸುಮಾತ್ರಾದ ಡಿಸೆರೊರೈನಸ್‌ ಸುಮಾತ್ರೆನ್ಸಿಸ್ ಎಂಬ ಐದು ಪ್ರಭೇದಗಳಿವೆ. ಆಫ್ರಿಕಾ ಮತ್ತು ಸುಮಾತ್ರಾದ ಘೇಂಡಾಮೃಗಗಳಿಗೆ ಮೂಗಿನ ಮೇಲೆ ಒಂದರ ಹಿಂದೊಂದು ಎರಡು ಕೊಂಬುಗಳಿರುತ್ತವೆ. ನಮ್ಮ ಮತ್ತು ಜಾವಾದ ಪ್ರಭೇದಗಳಲ್ಲಿ ಒಂದೇ ಕೊಂಬು ಇರುತ್ತದೆ. ಕೆಲವು ಬಗೆಯ ವಿಶೇಷ ಕೂದಲುಗಳು ಒತ್ತೊತ್ತಾಗಿ ಕೂಡಿಕೊಂಡು, ಬಿರುಸುಗೊಂಡು ರಚನೆಯಾದ ಈ ಕೊಂಬುಗಳ ಕಳ್ಳಮಾರಾಟದ ಬೃಹತ್ ಜಾಲ ಚೀನಾ, ವಿಯೆಟ್ನಾಂನಲ್ಲಿದೆ.

ADVERTISEMENT

ನಮ್ಮಲ್ಲಿರುವ ಘೇಂಡಾಮೃಗಗಳ ಪೈಕಿ ಎರಡು ಸಾವಿರಕ್ಕೂ ಹೆಚ್ಚು ‘ರೈನೊಗಳ ಸ್ವರ್ಗ’ ಎಂದೇ ಕರೆಯಲಾಗುವ ಅಸ್ಸಾಂನ ‘ಕಾಜಿರಂಗ’ ರಾಷ್ಟ್ರೀಯ ಉದ್ಯಾನವನದಲ್ಲೇ ಇವೆ. ಅದಕ್ಕೆ ಕಾರಣ, ಜಾರಿಯಲ್ಲಿರುವ ಅತ್ಯಂತ ಕಠಿಣ ಹಾಗೂ ವಿಚಿತ್ರ ಕಾನೂನು. ಕಾಜಿರಂಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ– ವಾಚರ್– ಗಾರ್ಡ್‌ಗಳನ್ನು ಹೊರತುಪಡಿಸಿ ಬೇರೆ ಯಾರೂ ಕಾಲ್ನಡಿಗೆಯಲ್ಲಿ ಸಂಚರಿಸುವಂತಿಲ್ಲ, ಅಂಥವರ ಮೇಲೆ ಕಂಡಲ್ಲಿ ಗುಂಡು ಹಾರಿಸುವ ಕಾನೂನು ಜಾರಿಯಲ್ಲಿದೆ ಎಂದು ಬಿಬಿಸಿ ಮತ್ತು ನಮ್ಮ ಹಲವು ಪತ್ರಿಕೆಗಳು ವರದಿ ಮಾಡಿದ್ದವು.

ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿದ್ದ ಬಿಬಿಸಿ, ‘ಇದು ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆ’ ಎಂದಿತ್ತು. ಸ್ಥಳೀಯ ಸಂರಕ್ಷಣಾ ತಂಡದವರು, ಇದು ಅರಣ್ಯ ಹಕ್ಕು ಕಾಯ್ದೆಗೆ ವಿರುದ್ಧ ಎಂದಿದ್ದರು. 2013ರಲ್ಲಿ 27 ರೈನೊಗಳು ಬೇಟೆಗೆ ಬಲಿಯಾಗಿದ್ದವು. ಕಾಡಿಗೆ ಕಾಲ್ನಡಿಗೆಯಲ್ಲಿ ಅನಧಿಕೃತ ಪ್ರವೇಶ ಪಡೆಯುವವರ ವಿರುದ್ಧ ಅರಣ್ಯ ಇಲಾಖೆಯು ಗುಂಡು ಹಾರಿಸಲು ಶುರು ಮಾಡಿದಾಗ ರೈನೊ ಹತ್ಯೆಗೆ ಕಡಿವಾಣ ಬಿತ್ತು ಎಂದು ವರದಿಯಾಗಿತ್ತು.

ಇದು ಅಂತರರಾಷ್ಟ್ರೀಯ ವಲಯದಲ್ಲಿ ಭಾರಿ ವಿವಾದ ಸೃಷ್ಟಿಸಿತ್ತು. ರೈನೊಗಳ ಬೇಟೆಗಿಂತ ಅರಣ್ಯ ಇಲಾಖೆ ಹಾರಿಸಿದ ಗುಂಡುಗಳಿಗೆ ಸಿಕ್ಕಿ ಸತ್ತವರ ಸಂಖ್ಯೆ ಹೆಚ್ಚಾಗಿತ್ತು. ‘ಕಾಡಿನ ಮಧ್ಯ ಯಾವುದೇ ಹಳ್ಳಿಯಾಗಲೀ ಜನವಸತಿಯಾಗಲೀ ಇಲ್ಲ. ಹಾಗಾಗಿ ಅರಣ್ಯ ಇಲಾಖೆ ಮತ್ತು ಸಂಶೋಧಕರನ್ನು ಹೊರತುಪಡಿಸಿದರೆ ಕಾಡಿನ ಒಳಗೆ ಓಡಾಡುವವರು ಯಾರೂ ಇಲ್ಲ. ಎದುರಿಗೆ ಬಂದವರನ್ನೆಲ್ಲ ಕೊಂದಿಲ್ಲ, ಅನುಮಾನ ಹುಟ್ಟಿಸುವ ಇಲ್ಲವೇ ಬೇಟೆಯಲ್ಲಿ ಭಾಗಿಯಾದವರ ಮೇಲಷ್ಟೇ ಗುಂಡು ಹಾರಿಸುತ್ತೇವೆ. ಅದಕ್ಕೆ ನಮಗೆ ಪರವಾನಗಿ ಇದೆ’ ಎಂದು ಗಾರ್ಡ್‌ಗಳು ಬಿಬಿಸಿಗೆ ಹೇಳಿದ್ದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಂಬಿಗೆ ಮತ್ತು ಕೂದಲಿಗೆ ಭಾರಿ ಬೆಲೆ ಇರುವುದರಿಂದ ರೈನೊಗಳ ಹತ್ಯೆ ನಡೆಯುತ್ತಿದೆ. ಕಾಜಿರಂಗದ ಒಳಗೆ ಮತ್ತು ಸುತ್ತಮುತ್ತ ಉಗ್ರವಾದಿಗಳ ಉಪಟಳವಿದ್ದು, ಶಸ್ತ್ರಾಸ್ತ್ರ ಖರೀದಿಗೆ ಹಣ ಹೊಂದಿಸಲು ಪರದಾಡುವ ಉಗ್ರರು ಸ್ಥಳೀಯರ ಸಹಾಯದಿಂದ ರೈನೊದ ಬೇಟೆಯಾಡಿ ಅದರ ಭಾಗಗಳನ್ನೇ ಕರೆನ್ಸಿಯನ್ನಾಗಿ ಬಳಸುತ್ತಾರೆ ಎಂಬುದು ತಜ್ಞರ ಮಾತು.

ಈ ಬಾರಿಯ ರೈನೊ ದಿನಾಚರಣೆಯ ಧ್ಯೇಯವಾಕ್ಯ ‘ಫೈವ್ ರೈನೊ ಸ್ಪೀಶೀಸ್ ಫಾರ್‌ಎವರ್’. ದೇಶದ ಒಟ್ಟು ರೈನೊಗಳ ಪೈಕಿ ಶೇ 95ರಷ್ಟು ಕಾಜಿರಂಗ, ಮರಿಗಾಂನ ಪೊಬಿಟೊರ ಮತ್ತು ಓರಾಂಗ್ ರಾಷ್ಟ್ರೀಯ ಉದ್ಯಾನವನಗಳಲ್ಲಿ ಇವೆ. 1966ರಲ್ಲಿ ಕೇವಲ 366ರಷ್ಟಿದ್ದ ರೈನೊಗಳ ಸಂಖ್ಯೆ ಈಗ 2,329ಕ್ಕೇರಿದೆ. ಪ್ರತೀ ಮೂರು ವರ್ಷಗಳಿಗೊಮ್ಮೆ ಗಣತಿ ನಡೆಯುತ್ತದೆ. ಬ್ರಹ್ಮಪುತ್ರಾ ನದಿಯ ಪ್ರವಾಹದಲ್ಲಿ ತಾಯಿಯಿಂದ ಬೇರ್ಪಡುವ ಮರಿ ರೈನೊಗಳನ್ನು ರಕ್ಷಿಸುವ ಕೆಲಸ ತಪ್ಪದೇ ನಡೆಯುತ್ತಿದೆ.

ಬೇಟೆಯಿಂದ ರೈನೊಗಳನ್ನು ಉಳಿಸಲು ಸ್ಥಳೀಯ ಸಮುದಾಯಗಳ ಸಹಭಾಗಿತ್ವ ಬೇಕೇ ಬೇಕು ಎನ್ನುವ ಕೊಯಮತ್ತೂರಿನ ಜೂ ಔಟ್‍ರೀಚ್ ಸಂಸ್ಥೆಯು ಹಲವು ಕ್ಷೇತ್ರ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ. ಅಸ್ಸಾಂ ಸರ್ಕಾರ 2005ರಲ್ಲಿ ಇಂಡಿಯಾ ರೈನೊ ವಿಶನ್– 2020 ಪ್ರಾರಂಭಿಸಿದ್ದು, ಕಠಿಣ ಸಂರಕ್ಷಣಾ ಕ್ರಮಗಳನ್ನು ಅನುಸರಿಸಿ ಘೇಂಡಾಮೃಗಗಳು ಮತ್ತು ಅವುಗಳ ಆವಾಸ ಎರಡನ್ನೂ ಉಳಿಸುವಲ್ಲಿ ಭಾಗಶಃ ಯಶಸ್ವಿಯಾಗಿದೆ. ರೈನೊಗಳ ಸಂರಕ್ಷಣೆಗೆ ಡಬ್ಲ್ಯುಡಬ್ಲ್ಯುಎಫ್ ಮತ್ತು ಟೆಕ್ಸಾಸ್ ಮೂಲದಇಂಟರ್‌ನ್ಯಾಷನಲ್ ರೈನೊ ಫೌಂಡೇಶನ್ ನಿರಂತರವಾಗಿ ಕೆಲಸ ಮಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.