ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನವೆಂಬರ್ 14ರಿಂದ ಜನವರಿ 24ರವರೆಗೆ ಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಇದು ಹತ್ತು ವಾರಗಳವರೆಗೆ ನಡೆಯುವ ಮಕ್ಕಳ ಹಬ್ಬ. ಈ ಕಾರ್ಯಕ್ರಮದ ಉದ್ದೇಶವು ಈ ಅವಧಿಯಲ್ಲಷ್ಟೇ ಗ್ರಾಮ ಪಂಚಾಯಿತಿಯನ್ನು ಮಕ್ಕಳಸ್ನೇಹಿ ಆಗಿಸುವುದಲ್ಲ. ಇದನ್ನು ನಿತ್ಯದ ನಡೆಯಾಗಿಸುವುದೇ ಆಗಿದೆ. ಇದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಪಂಚಾಯಿತಿ ಗ್ರಂಥಾಲಯಗಳನ್ನು ಮಕ್ಕಳಿಗಾಗಿ ತೆರೆಯುವುದು, ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುವುದು, ಸ್ಥಳೀಯ ಕಲೆಗಳನ್ನು ಮಕ್ಕಳಿಗೆ ಪರಿಚಯಿಸುವಂತಹ ಕಾರ್ಯಕ್ರಮಗಳು, ಕೋವಿಡ್ ಹಿನ್ನೆಲೆಯಲ್ಲಿ ಸಮವಯಸ್ಕರ ಜೊತೆಯ ಒಡನಾಟದಿಂದ ವಂಚಿತರಾಗಿರುವ ಮಕ್ಕಳಿಗೆ ಆಮ್ಲಜನಕವಾಗಬಲ್ಲವು.
ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು. ತನ್ನ ಕಲಿಕೆಯ ಗುರಿಯನ್ನೂ ದಾರಿಯನ್ನೂ ತಾನೇ ಕಂಡುಕೊಳ್ಳಬೇಕು. ಕಲಿಯುವುದನ್ನು ಕಲಿಯಬೇಕು. ಕಲಿಯುವ ದಾರಿಯನ್ನು ಸಂಭ್ರಮಿಸಬೇಕು.
ಅಪರಿಮಿತ ಸ್ವಾತಂತ್ರ್ಯ ಮತ್ತು ಸಂತೋಷ ಮಾತ್ರ ಮಗುವಿಗೆ ಹಬ್ಬದ ಸಡಗರವನ್ನು ಉಂಟುಮಾಡಬಲ್ಲವು. ಹಿರಿಯರ ಪ್ರಪಂಚವು ಬಾಲ್ಯದ ಕೀಲಿಕೈಗಳಾದ ‘ಸೃಜನಶೀಲ ಚೈತನ್ಯ’ ಮತ್ತು ‘ಧಾರಾಳ ಸಂತಸ’ಗಳನ್ನು ಸ್ವಲ್ಪವೂ ಯೋಚಿಸದೆ ಹಾಳುಗೆಡವಬಹುದಾಗಿದೆ ಎನ್ನುತ್ತಾರೆ ಕವಿ ರವೀಂದ್ರನಾಥ ಟ್ಯಾಗೋರ್. ಮಕ್ಕಳ ಸಂತಸ ಮತ್ತು ಚೈತನ್ಯವನ್ನೇ ಇಂಧನವಾಗಿಸಿಕೊಂಡು ಮಕ್ಕಳ ಹಬ್ಬವು ಜೀವತಳೆಯಬೇಕಿದೆ.
ಅನುಭವದ ಬೆಳಕಿನಲ್ಲಿ ತರ್ಕಬದ್ಧವಾಗಿ ತನ್ನ ಅರಿವನ್ನು ಭಾಷೆಯ ಮೂಲಕ ಪೋಣಿಸುವ ಕೌಶಲವೂ ಮಗುವಿನ ವೈಚಾರಿಕ ವಿಕಾಸಕ್ಕೆ ಅಗತ್ಯ. ಸ್ಮರಣೆ ಆಧಾರಿತ ಕಲಿಕೆಯ ವಿಧಾನಗಳಿಂದ ಹೊರಬರಲು ಕಲಿಕೆಯ ಕುರಿತಾದ ಸಮಾಜದ ದೃಷ್ಟಿಕೋನದಲ್ಲೇ ಬದಲಾವಣೆ ಆಗಬೇಕಿದೆ. ಪ್ರಶ್ನಿಸುವ ಸ್ವಭಾವ, ತನ್ನ ಪ್ರಶ್ನೆಗಳಿಗೆ ತಾನೇ ಉತ್ತರವನ್ನು ಹುಡುಕಿಕೊಳ್ಳಬಲ್ಲ ಕಲಿಕಾ ಪರಿಸರ, ಪ್ರಶ್ನೆಗಳ ಮೂಲಕ ಉಂಟಾಗಬಹುದಾದ ಸಂವಾದ-ಚರ್ಚೆಗಳು ಮಗುವಿನ ಕಲಿಕೆಯ ಭಾಗವಾಗಿ ರೂಪುಗೊಳ್ಳಬೇಕಿದೆ.
ನಾಟಕ, ಚರ್ಚೆ, ಸಂವಾದ, ಯೋಜನೆ, ಪ್ರಯೋಗದಂತಹ ಕ್ರಿಯಾತ್ಮಕ ಚಟುವಟಿಕೆಗಳು ಕಲಿಕೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತವೆ. ಮಗು ತನ್ನ ಇಂದ್ರಿಯಗಳ ಮೂಲಕ ಪಡೆದ ಅನುಭವಗಳನ್ನು ವಿಶ್ಲೇಷಣೆಯ ನಿಕಷಕ್ಕೆ ಒಡ್ಡಿ ತೀರ್ಮಾನ ತೆಗೆದುಕೊಳ್ಳುವಂತಹ ಕಲಿಕೆಯ ಪರಿಸರವನ್ನು ರೂಪಿಸುವ ಜವಾಬ್ದಾರಿ ನಮ್ಮದು.
ಮಗುವೆಂದರೆ ಆಲಿಸುವ, ನೆನಪಿಟ್ಟುಕೊಳ್ಳುವ ಮತ್ತು ಬೇಕೆಂದಾಗ ಉತ್ತರ ಪತ್ರಿಕೆಯಲ್ಲಿ ಬರೆಯಬಲ್ಲ ಯಂತ್ರವಲ್ಲ. ಮಾಹಿತಿ ತಂತ್ರಜ್ಞಾನವು ನಮಗೆ ಜಗತ್ತನ್ನೇ ಸಂಪರ್ಕಿಸುವ ಸೌಕರ್ಯಗಳನ್ನು ಒದಗಿಸಿದೆ. ಆದರೆ, ಮಕ್ಕಳ ಒಡನಾಟದ ಅನುಭವಗಳಿಗೆ ಕಂಪ್ಯೂಟರುಗಳು ಬದಲಿಯಾಗಲಾರವು. ಸ್ಮಾರ್ಟ್ ಕ್ಲಾಸ್‍ಗಳು, ಆನ್‌ಲೈನ್ ಕ್ಲಾಸ್‍ಗಳು ನೀಡುವ ವರ್ಚುವಲ್ ಅನುಭವಗಳು ನೈಜ ಅನುಭವಗಳಿಗೆ ಪರ್ಯಾಯಗಳಲ್ಲ. ಕೋವಿಡ್ ಉಂಟುಮಾಡಿರುವ ಪರಿಸ್ಥಿತಿಯಲ್ಲೂ ಅನಿವಾರ್ಯವಲ್ಲ. ನೈಜ ಬದುಕಿನೊಂದಿಗೆ ಮುಖಾಮುಖಿಯಾಗುವುದರಿಂದ ಮಾತ್ರವೇ ಜಗತ್ತನ್ನು ಗ್ರಹಿಸಲು ಸಾಧ್ಯ. ಗಾಳಿಗೆ ತೂಕವಿದೆ ಎಂಬ ಮಾಹಿತಿಯನ್ನು ಗೂಗಲ್‌ನಿಂದ ಪಡೆಯಬಹುದು. ಆದರೆ, ತಂಗಾಳಿ ಮೈಸೋಂಕಿದಾಗಿನ ಅನುಭವವನ್ನು ವರ್ಚುವಲ್ ತರಗತಿ ನೀಡದು.
ಮಕ್ಕಳ ಭಾಗವಹಿಸುವಿಕೆಯನ್ನು ಕಡಿಮೆ ಮಾಡುವ ಯಾವ ವಿಧಾನವೂ ಪ್ರಜಾಸತ್ತಾತ್ಮಕ ಪರಿಸರವನ್ನು ರೂಪಿಸದು. ಪ್ರಜಾಸತ್ತಾತ್ಮಕವಲ್ಲದ ಯಾವ ವಿಧಾನದಿಂದಲೂ ವೈಜ್ಞಾನಿಕ ಮನೋಧರ್ಮವಾಗಲೀ ಅದರ ಪ್ರಕಟರೂಪಗಳಾದ ತಾರ್ಕಿಕ ಚಿಂತನೆ, ಸಹನೆ, ಭಿನ್ನಾಭಿಪ್ರಾಯಗಳನ್ನು ಆಲಿಸುವ ಮತ್ತು ಗೌರವಿಸುವ ಸ್ವಭಾವ, ಪೂರ್ವಗ್ರಹಗಳಿಂದ ಮುಕ್ತವಾದ ಚಿಂತನಾಕ್ರಮ, ಒಳಗೊಳ್ಳುವಿಕೆ, ತಂಡವಾಗಿ ಕಾರ್ಯನಿರ್ವಹಿಸುವಲ್ಲಿ ತೋರುವ ಆಸಕ್ತಿಯ ಬೆಳವಣಿಗೆಯಾಗಲೀ ಸಾಧ್ಯವಿಲ್ಲ. ಪ್ರಶ್ನಿಸುವ ಮತ್ತು ಆಲೋಚಿಸುವ ಮನಸ್ಸು ನಿಸರ್ಗದ ಅದ್ಭುತಗಳನ್ನು ಬೆರಗುಗಣ್ಣಿನಿಂದ ನೋಡುವುದಷ್ಟಕ್ಕೆ ತೃಪ್ತಿಗೊಳ್ಳದೆ ಅದಕ್ಕೆ ಸ್ಪಂದಿಸುತ್ತದೆ. ಪರಿಕಲ್ಪನಾತ್ಮಕ ಮತ್ತು ಗಣಿತೀಯ ಮಾದರಿಗಳನ್ನು ಭಾಷೆಯ ಸಹಾಯದಲ್ಲಿ ರಚಿಸಿಕೊಳ್ಳುತ್ತಾ ಈ ಅದ್ಭುತ ಜಗತ್ತನ್ನು ಅರಿಯಲು ಪ್ರಯತ್ನಿಸುತ್ತದೆ. ಇದೇ ಕಲಿಕೆ.
ಎಳವೆಯಲ್ಲೇ ಓದಿನ ಪ್ರೀತಿಯನ್ನು ಬೆಳೆಸುವುದು ಬಹಳ ಮುಖ್ಯ. ಪ್ರತೀ ಪಂಚಾಯಿತಿಯ, ಶಾಲೆಯ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಹುಡುಕಿಕೊಂಡು ಹೋಗುವಂತೆ ‘ಓದಿನ ಬೆಳಕು’ ಚಟುವಟಿಕೆಗಳಿವೆ. ಪುಸ್ತಕಗಳನ್ನು ಕೈದೀವಿಗೆಯಾಗಿಸಿಕೊಂಡು ಮಗು ಕಲಿಯಬೇಕು, ತನ್ನನ್ನೂ ತನ್ನ ಸುತ್ತಲಿನ ಜಗತ್ತನ್ನೂ ಬೆಳಗಬೇಕೆಂಬ ಸದಾಶಯವನ್ನು ಈಡೇರಿಸಿಕೊಳ್ಳುವುದಕ್ಕೆ ಇದಕ್ಕಿಂತ ಒಳ್ಳೆಯ ಅವಕಾಶ ಸಿಗದು.
ಪಂಚಾಯತ್ ಮಕ್ಕಳ ಹಬ್ಬದಲ್ಲಿ ಅನೇಕ ಚಟುವಟಿಕೆಗಳನ್ನು ಮಕ್ಕಳು ಸ್ವತಃ ಮಾಡುವಂತೆ ವಿನ್ಯಾಸಗೊಳಿಸಬಹುದಾಗಿದೆ. ಅನೇಕ ತರಗತಿ ಮತ್ತು ವಿಷಯಗಳಲ್ಲಿ ಹಂಚಿಹೋಗಿರುವ ವಿಷಯಗಳನ್ನು ಇಲ್ಲಿ ಸೃಜನಶೀಲವಾಗಿ ಜೋಡಿಸಿದರೆ, ಕೃತಕ ಗಡಿರೇಖೆಗಳನ್ನು ನಾಜೂಕಾಗಿ ಅಳಿಸಿಹಾಕಿ ಕಲಿಕೆಯ ದಾರಿಯನ್ನು ಸರಳಗೊಳಿಸಿದರೆ ಕಲಿಕೆ ನಿಜಕ್ಕೂ ಹಬ್ಬವಾಗಬಲ್ಲದು. ಅಂತಹ ಚಟುವಟಿಕೆಗಳನ್ನು ಚಿಕ್ಕವರಷ್ಟೇ ಅಲ್ಲ, ದೊಡ್ಡವರೂ ಆನಂದಿಸಬಲ್ಲರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.