ADVERTISEMENT

ಗ್ರಂಥಾಲಯ ಎಂಬ ಸಂಸ್ಕಾರ

ಮಕ್ಕಳಲ್ಲಿ ಗ್ರಂಥಾಲಯ ಸಂಸ್ಕೃತಿ ಬೆಳೆಸದಿದ್ದರೆ, ಬುಡ ಭದ್ರವಿಲ್ಲದ ಸುಂದರ ಮನೆಗಳನ್ನು ನಿರ್ಮಾಣ ಮಾಡಿದಂತೆ

ಡಾ.ಬಿ.ಆರ್.‌ ಸತ್ಯನಾರಾಯಣ
Published 22 ಸೆಪ್ಟೆಂಬರ್ 2019, 19:45 IST
Last Updated 22 ಸೆಪ್ಟೆಂಬರ್ 2019, 19:45 IST
   

ಸಾರ್ವಜನಿಕ ಗ್ರಂಥಾಲಯಗಳನ್ನು ನಿರ್ವಹಿಸುತ್ತಿರುವ ಶಿಕ್ಷಕರಿಗಾಗಿ ನೀಡುವ ತರಬೇತಿ ಕಾರ್ಯಕ್ರಮ
ಗಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದೇನೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)‌ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತದೆ.

ತರಬೇತಿಗೆಂದು ಬರುವ ಶಿಕ್ಷಕರ ಒಡನಾಟದಲ್ಲಿ ನನ್ನ ಅನುಭವಕ್ಕೆ ಬಂದ ಕೆಲವು ಅಪ್ರಿಯ ಸತ್ಯಗಳು, ಭವಿಷ್ಯದ ಬಗ್ಗೆ ಆತಂಕದ ಸೂಚನೆ ನೀಡುವಂತಿವೆ. ಈಗ ಬಹುತೇಕ ಎಲ್ಲ ಪ್ರೌಢಶಾಲೆಗಳಲ್ಲಿಯೂ ಗ್ರಂಥಾಲಯಗಳು ಇವೆ. ಕೆಲವು ಶಾಲೆಗಳಲ್ಲಿ ಒಂದು ಸಾವಿರದಿಂದ ಸುಮಾರು ಹತ್ತು ಸಾವಿರ ಪುಸ್ತಕಗಳಿರುವ ಗ್ರಂಥಾಲಯಗಳು ಇವೆಯಂತೆ! ಆದರೆ ಯಾವುದೇ ಶಾಲೆಯಲ್ಲಿ, ಪೂರ್ಣಾವಧಿಗೆ ತರಬೇತಿ ಹೊಂದಿದ ಅರ್ಹ ಗ್ರಂಥಪಾಲಕರ ನೇಮಕವಾಗಿಲ್ಲ. ಮುಖ್ಯೋಪಾಧ್ಯಾಯರ ಆದೇಶದಂತೆ ಯಾರೋ ಒಬ್ಬ ಶಿಕ್ಷಕರು ಗ್ರಂಥಾಲಯದ ಜವಾಬ್ದಾರಿ ಹೊರುತ್ತಿದ್ದಾರೆ. ತರಗತಿ, ಪಾಠ ಪ್ರವಚನ ಮಾಡಿಕೊಂಡು, ಪರೀಕ್ಷೆ, ಮೌಲ್ಯಮಾಪನ ಮುಂತಾದವುಗಳ ಜವಾಬ್ದಾರಿ ನಿರ್ವಹಿಸುತ್ತಿರುವ ಶಿಕ್ಷಕರಿಗೆ, ಗ್ರಂಥಾಲಯದ ಕೆಲಸಗಳತ್ತ ಗಮನ ಕೊಡಲು ಸಮಯವೆಲ್ಲಿದೆ?

ಹೀಗೇಕೆ ಆಗುತ್ತಿದೆ? ನಮ್ಮಲ್ಲಿ ಗ್ರಂಥಾಲಯ ಸಂಸ್ಕಾರವೆಂಬುದೇ ಇಲ್ಲ. ಗ್ರಂಥಾಲಯ ಸಂಸ್ಕೃತಿ ಅಥವಾ ಸಂಸ್ಕಾರ ಎಂದರೆ, ಗ್ರಂಥಾಲಯ ನಮ್ಮ ಬದುಕಿನ ಅವಿಭಾಜ್ಯ ಅಂಗ ಎಂಬಂತೆ ಬಿಂಬಿತವಾಗುವುದು. ಆದರೆ ನಮ್ಮಲ್ಲಿ ಗ್ರಂಥಾಲಯವೆಂದರೆ, ದೂಳು ಹಿಡಿದ ಪುಸ್ತಕಗಳ ರಾಶಿ ಎಂಬಂತಾಗಿದೆ. ಬೆಳೆಯುವ ಮಕ್ಕಳಿಗೆ ಗ್ರಂಥಾಲಯದ ಪರಿಚಯವನ್ನೇ ನಾವು ಮಾಡಿಕೊಡುತ್ತಿಲ್ಲ. ಬೆಂಗಳೂರಿನ ಕಬ್ಬನ್‌ ಉದ್ಯಾನದಲ್ಲಿರುವ ಮಕ್ಕಳ ಗ್ರಂಥಾಲಯದ ದುಃಸ್ಥಿತಿ ಇದಕ್ಕೆ ಕೈಗನ್ನಡಿ. ಕೆಲವು ಖಾಸಗಿ ಶಾಲೆಗಳಲ್ಲಿ ಉತ್ತಮ ಗ್ರಂಥಾಲಯಗಳು, ಗ್ರಂಥಪಾಲಕರು ಇದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಾತ್ರ, ಪುಸ್ತಕಗಳಿದ್ದರೂ ಅವುಗಳ ಪ್ರಯೋಜನ ಮಕ್ಕಳಿಗೆ ತಲುಪುತ್ತಿಲ್ಲ. ಕಾರಣ, ನಮ್ಮನ್ನಾಳುವವರಿಗೆ ಗ್ರಂಥಾಲಯಗಳ ಮಹತ್ವದ ಅರಿವಿಲ್ಲದಿರುವುದು. ಕ್ರಾಫ್ಟ್‌, ದೈಹಿಕ ಶಿಕ್ಷಣ, ಇಂಗ್ಲಿಷ್‌, ಕಂಪ್ಯೂಟರ್‌ ಎಲ್ಲವನ್ನೂ ಮಕ್ಕಳಿಗೆ ಬೋಧಿಸಬೇಕು ಎಂದು ಕಾನೂನು ರೂಪಿಸುವವರಿಗೆ, ಅದಕ್ಕೆ ಬೇಕಾದ ಸಂಪನ್ಮೂಲ ವ್ಯಕ್ತಿಗಳನ್ನು ಮೊದಲು ನಿಯೋಜಿಸಬೇಕೆಂದು ಅನ್ನಿಸುವುದಿಲ್ಲ! ಇನ್ನು, ಗ್ರಂಥಾಲಯವಿದ್ದ ಮೇಲೆ ಗ್ರಂಥಪಾಲಕರೂ ಇರಬೇಕು ಎಂದು ಯೋಚಿಸುತ್ತಾರೆಯೇ?

ADVERTISEMENT

ಅಭಿವೃದ್ಧಿ ಹೊಂದಿದ, ಹೊಂದುತ್ತಿರುವ ಹಲವು ರಾಷ್ಟ್ರಗಳಲ್ಲಿ, ಮಕ್ಕಳ ಗ್ರಂಥಾಲಯ ಪರಿಕಲ್ಪನೆಯಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳಾಗಿವೆ. ಮಕ್ಕಳು ರಜಾ ದಿನಗಳಲ್ಲೂ ಗ್ರಂಥಾಲಯಗಳಲ್ಲಿ ಉಲ್ಲಾಸದಾಯಕ
ವಾಗಿ ಕಾಲ ಕಳೆಯಬಹುದು. ಆಡಿಯೊ, ವಿಡಿಯೊ, ಚಿತ್ರಕಲೆ, ಕಥೆ ಹೇಳುವ, ಹೇಳಿಸುವ ಕಾರ್ಯ
ಕ್ರಮಗಳು, ಮಕ್ಕಳು ಊಟ ನಿದ್ದೆ ಮಾಡಲು, ಬೇರೆ ಆಟವಾಡಲು ವ್ಯವಸ್ಥೆ ಎಲ್ಲವೂ ಇರುತ್ತವೆ. ನಮ್ಮಲ್ಲಿ 12ನೇ ತರಗತಿಯ ವಿದ್ಯಾರ್ಥಿಯೂ ಗ್ರಂಥಾ ಲಯದ ವಿಚಾರದಲ್ಲಿ ಅನಕ್ಷರಸ್ಥನಾಗಿರುತ್ತಾನೆ! ಪದವಿ ಕಾಲೇಜುಗಳಲ್ಲಿ ಸಮರ್ಪಕ ಗ್ರಂಥಾಲಯ ವ್ಯವಸ್ಥೆಯೇ ರೂಪಿತವಾಗಿಲ್ಲ. ಇಲ್ಲಿ ಕೆಲಸ ಮಾಡುವ ಗ್ರಂಥಪಾಲಕರು ಸಹ, ಬಡ್ತಿ, ಭತ್ಯೆ ವಿಷಯಗಳಿಗೆ ತಲೆಕೆಡಿಸಿಕೊಂಡಷ್ಟು, ಕಾರ್ಯನಿರ್ವಹಣೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕೆಲವು ಗ್ರಂಥಪಾಲಕರು ಸೀಮಿತ ಸಂಪನ್ಮೂಲದಲ್ಲೇ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರೂ ಅವರ ಸಂಖ್ಯೆ ಅತ್ಯಂತ ಕಡಿಮೆ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಮ್ಮದು 130ನೇ ರ‍್ಯಾಂಕ್‌!‌ ಒಂದು ದೇಶದ ಸಾಮಾನ್ಯ ಅಭಿವೃದ್ಧಿ ಸೂಚ್ಯಂಕದ ಲೆಕ್ಕಾಚಾರದಲ್ಲಿ ಗ್ರಂಥಾಲಯ ಅಭಿವೃದ್ಧಿ ಸೂಚ್ಯಂಕವನ್ನೂ ಪರಿಗಣಿಸುವ ಪದ್ಧತಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿದೆ. ಆದರೆ, ಪ್ರತಿಯೊಂದಕ್ಕೂ ಪಾಶ್ಚಾತ್ಯರ ಅನುಕರಣೆ ಮಾಡುವ ನಾವು ಇಂತಹುದಕ್ಕೆ ಮಾತ್ರ ಜಾಣಕುರುಡು ಪ್ರದರ್ಶಿಸುತ್ತೇವೆ.

ಕಂಪ್ಯೂಟರಿನಲ್ಲೇ ಎಲ್ಲಾ ಸಿಗುವಾಗ ಮತ್ತದೇ ಹಳೆಯ ಪುಸ್ತಕಗಳ ಸಹವಾಸ ಬೇಕೇ ಎಂದು ಕೇಳುವ ಅಜ್ಞಾನಿಗಳೂ ಇದ್ದಾರೆ. ಆದರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಸಾಧಿಸಿರುವ ದೇಶಗಳೂ ಗ್ರಂಥಾಲಯ ಕ್ಷೇತ್ರಕ್ಕೆ ಮುಂಚಿಗಿಂತಲೂ ಹೆಚ್ಚಿನ ಪ್ರಾಧಾನ್ಯ ಕೊಡುತ್ತಿವೆ. ನಮ್ಮಲ್ಲಿನ ಪ್ರಾಜ್ಞರು ಕಾಗದರಹಿತ ಸಮಾಜದ ವಿಷಯ ಪ್ರಸ್ತಾಪಿಸಿ ಸೆಮಿನಾರುಗಳಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಈಗಿರುವ ಗ್ರಂಥಾಲಯ ವ್ಯವಸ್ಥೆಯನ್ನೂ ಪೂರ್ಣ ಮುಳುಗಿಸುವ ಹುನ್ನಾರಗಳು ನಡೆಯುತ್ತಿವೆ. ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿರುವ ಗ್ರಂಥಾಲಯಗಳನ್ನು ಪಂಚಾಯಿತಿಗಳಿಗೆ ವಹಿಸಿ, ಗ್ರಂಥಾಲಯ ಇಲಾಖೆಯನ್ನೇ ಮುಚ್ಚುವ ಪ್ರಯತ್ನವೂ ನಡೆಯುತ್ತಿದೆ. ತೆರಿಗೆದಾರರಿಂದ ಪ್ರತ್ಯೇಕ ಗ್ರಂಥಾಲಯ ಸೆಸ್‌ ಸಂಗ್ರಹಿಸುವ ಬಿಬಿಎಂಪಿ, ಸಮರ್ಪಕವಾದ ಒಂದೂ ಮಕ್ಕಳ ಗ್ರಂಥಾಲಯವನ್ನು ರೂಪಿಸಿಲ್ಲ!

ಕಂಪ್ಯೂಟರ್‌ ಒದಗಿಸಿ, ಅದನ್ನು ಕಲಿಸುವ ಶಿಕ್ಷಕ ರಿಲ್ಲದಿದ್ದರೆ ಏನು ಪ್ರಯೋಜನ? ಬಿಸಿಯೂಟದ ಯೋಜನೆಗೆ ಅಡುಗೆ ಸಹಾಯಕರನ್ನು ನೇಮಿಸಿದಂತೆ, ಪ್ರತಿ ಶಾಲೆಗೂ, ಗ್ರಂಥಾಲಯ ಸಹಾಯಕರನ್ನು ನೇಮಿಸ ಬೇಕು. ಮಕ್ಕಳಲ್ಲಿ ಗ್ರಂಥಾಲಯ ಸಂಸ್ಕೃತಿಯನ್ನು ಬೆಳೆಸುವ ಕಾರ್ಯಕ್ಕೆ ಆದ್ಯತೆ ಕೊಡಲೇಬೇಕಾಗಿದೆ. ಇಲ್ಲದಿದ್ದರೆ, ಬುಡ ಭದ್ರವಿಲ್ಲದ ಸುಂದರ ಮನೆಗಳನ್ನು ನಿರ್ಮಾಣ ಮಾಡಿದಂತೆ ಆಗುತ್ತದೆ.

ಲೇಖಕ: ಗ್ರಂಥಪಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.