ADVERTISEMENT

ಸಂಗತ: ಜಾಲತಾಣದ ಜಗುಲಿಯಲ್ಲಿ ಜಾದೂ

ಸಾಮಾಜಿಕ ಜಾಲತಾಣಗಳು ಉತ್ಪಾದಕ-–ಗ್ರಾಹಕನ ನಡುವೆ ಸೇತುವಾಗುತ್ತಿವೆ

ಡಾ.ಮುರಳೀಧರ ಕಿರಣಕೆರೆ
Published 29 ಜುಲೈ 2021, 19:31 IST
Last Updated 29 ಜುಲೈ 2021, 19:31 IST
Sangata 30.07.2021
Sangata 30.07.2021   

ಕಾಗದವೊಂದನ್ನು ಕಳುಹಿಸಲು ಕೊರಿಯರ್ ಕಚೇರಿಗೆ ಹೋದವನಿಗೆ ಆ ದೃಶ್ಯ ಕಂಡು ಆಶ್ಚರ್ಯದ ಜೊತೆಗೆ ಕುತೂಹಲ. ವಿಳಾಸ ಅಂಟಿಸಿಕೊಂಡ ವಿವಿಧ ಗಾತ್ರದ ಆ ಹತ್ತಾರು ರಟ್ಟಿನ ಪೆಟ್ಟಿಗೆಗಳು ಈ ಪುಟ್ಟ ಪಟ್ಟಣದಿಂದ ಹೊರಟಿದ್ದಾದರೂ ಎಲ್ಲಿಗೆ? ರಸೀತಿ ಹಾಕಿಸುತ್ತಿದ್ದ ಪರಿಚಿತ ಯುವತಿಯನ್ನು ವಿಚಾರಿಸಿದೆ. ಅವಳ ವಿವರಣೆ ಕೇಳುತ್ತಿದ್ದಂತೆ ಗೃಹೋದ್ಯಮದ ಈ ಪರಿ ಕಂಡು ನಿಜಕ್ಕೂ ಅಚ್ಚರಿಯಾಗಿತ್ತು!

ಕೊರೊನಾ ಕಾಲದಲ್ಲಿ ಖಾಲಿ ಕೂರಬಾರದೆಂಬ ಸಂಕಲ್ಪದೊಂದಿಗೆ ಸಾಮಾಜಿಕ ಮಾಧ್ಯಮವನ್ನೇ ವೇದಿಕೆಯಾಗಿಸಿಕೊಂಡ ಆಕೆ, ಹೀಗೊಂದು ಸ್ವಂತ ಉದ್ಯೋಗವನ್ನು ಆರಂಭಿಸಿದ್ದಳು. ಬಗೆ ಬಗೆಯ ಚಟ್ನಿಪುಡಿ, ಉಪ್ಪಿನಕಾಯಿ, ಚಿಪ್ಸ್, ಪುಳಿಯೋಗರೆ ಮಿಕ್ಸ್, ಜೇನುತುಪ್ಪ, ಜೋನಿಬೆಲ್ಲ, ಹಪ್ಪಳ, ಸಂಡಿಗೆ, ಸಾರಿನ ಪುಡಿ, ಗೆಜ್ಜೆವಸ್ತ್ರ ಅಂತೆಲ್ಲಾ ತನ್ನ ಗ್ರಾಹಕರಿಗೆ ಕೊರಿಯರ್ ಮೂಲಕ ಕಳುಹಿಸುತ್ತಾ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಳು.

ಅವಳು ಮಾಡಿದ್ದು ಇಷ್ಟೆ. ಮನೆಯಲ್ಲೇ ತಯಾರಿ ಸಿದ, ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಸ್ಪರ್ಧಾತ್ಮಕ ದರದಲ್ಲಿ ಬಳಕೆದಾರರ ಮನೆ ಬಾಗಿಲಿಗೆ ತಲುಪಿಸುವ ಬಗ್ಗೆ ತನ್ನೆಲ್ಲ ವಾಟ್ಸ್‌ಆ್ಯಪ್ ಗುಂಪುಗಳು, ಫೇಸ್‍ಬುಕ್‍ನಲ್ಲಿ ಮಾಹಿತಿ ನೀಡಿದ್ದಳು. ಬೇಡಿಕೆ ಬಂದಂತೆ ಸಾಮಗ್ರಿಗಳನ್ನು ರವಾನಿಸಿ ಸಕಾಲಿಕ ಸೇವೆ ಯಿಂದ ಗ್ರಾಹಕರ ಮನಗೆದ್ದಳು. ಆರು ತಿಂಗಳ ಹಿಂದೆ ಸ್ನೇಹಿತರಿಗೆ, ಪರಿಚಿತರಿಗೆ ಗೃಹಬಳಕೆಯ ಪದಾರ್ಥ ಗಳನ್ನು ಕಳುಹಿಸುತ್ತಾ ಸಣ್ಣದಾಗಿ ಕಂಡುಕೊಂಡ ದುಡಿಮೆಯ ಹಾದಿಯಲ್ಲಿ ಈಗ ಬಿಡುವಿರದಷ್ಟು ದಟ್ಟಣೆ!

ADVERTISEMENT

ಪಟ್ಟಣದಲ್ಲಿನ ಉದ್ಯೋಗವನ್ನು ಕೋವಿಡ್ ಕಾರಣದಿಂದ ಕಳೆದುಕೊಂಡು ಹುಟ್ಟೂರಿಗೆ ಮರಳಿ ರುವ ಆ ಯುವಕ ಸಣ್ಣ ಬಂಡವಾಳದೊಂದಿಗೆ ಪಾಲಿ ಹೌಸ್ ಮಾಡಿಕೊಂಡು ತರಾವರಿ ತರಕಾರಿಗಳನ್ನು ಬೆಳೆಯುತ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಸಾವಯವ ತರಕಾರಿಗಳ ಬಗ್ಗೆ ಮಾಹಿತಿ ಹಾಕಿಕೊಂಡು ಆಸಕ್ತ ಗ್ರಾಹಕರ ಮನೆ ಬಾಗಿಲಿಗೆ ತಂದುಕೊಡುತ್ತಾನೆ. ಹೀರೇಕಾಯಿ, ಬೀನ್ಸ್, ಹಸಿಮೆಣಸು, ಬೆಂಡೆಕಾಯಿ, ಪಾಲಕ್, ಹರಿವೆ, ಕೊತ್ತಂಬರಿಗೆ ನನ್ನ ಮಡದಿ, ಅವಳ ಗೆಳತಿಯರು ಸೇರಿದಂತೆ ಹಲವರು ಸಂತೃಪ್ತ ಗ್ರಾಹಕರು! ವಾರವಿಟ್ಟರೂ ತರಕಾರಿಗಳ ತಾಜಾತನ ಕುಂದದು ಎಂಬ ಪ್ರಶಂಸೆಯ ನುಡಿ ಬಾಯಿಂದ ಬಾಯಿಗೆ ಹರಡಿ ಬಳಕೆದಾರರ ಬಳಗ ಬೆಳೆಯುತ್ತಲೇ ಇದೆ!

ಹೌದು, ಸಾಂಕ್ರಾಮಿಕದಿಂದಾಗಿ ಜೀವನೋಪಾಯಗಳೇ ನೆಲ ಕಚ್ಚಿ ಮುಂದೆ ಹೇಗೆಂಬ ಹತಾಶೆಯ ನಡುವೆ ಇಂತಹ ನೂರಾರು ಯಶೋಗಾಥೆಗಳು ಅಲ್ಲಲ್ಲಿ ಬಿಚ್ಚಿಕೊಳ್ಳುತ್ತಾ ಭವಿಷ್ಯದ ಬಗ್ಗೆ ಹೊಸ ಭರವಸೆ ಮೂಡಿಸುತ್ತಿವೆ. ಸಾಮಾಜಿಕ ಮಾಧ್ಯಮ, ಜಾಲತಾಣಗಳನ್ನು ರಚನಾತ್ಮಕವಾಗಿ ಬಳಸಿಕೊಂಡು ಗುಣಮಟ್ಟದ ಪದಾರ್ಥಗಳನ್ನು ಸ್ಪರ್ಧಾತ್ಮಕ ದರ ದಲ್ಲಿ ಸಮಯಕ್ಕೆ ಸರಿಯಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಹಲವರು ಬದುಕಿನ ಮಾರ್ಗ ಕಂಡುಕೊಂಡಿದ್ದಾರೆ. ಕೊರೊನಾ ಕಗ್ಗತ್ತಲಿನಲ್ಲಿ ಮೂಡುತ್ತಿರುವ ಈ ಬೆಳ್ಳಿಗೆರೆಗಳು ನಿಜಕ್ಕೂ ಸ್ಫೂರ್ತಿ ದಾಯಕ.

ಈ ನ್ಯೂ ನಾರ್ಮಲ್ ಕಾಲದಲ್ಲಿ ಆರೋಗ್ಯದ ಕುರಿತು ಎಲ್ಲಿಲ್ಲದ ಕಾಳಜಿ. ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ದಿಕ್ಕಿನತ್ತ ನೆಟ್ಟಿರುವ ನೋಟ, ಅದರತ್ತಲೇ ಓಟ. ಕಳೆನಾಶಕ, ಪೀಡೆನಾಶಕ ರಾಸಾಯನಿಕಮುಕ್ತ ಆಹಾರವೇ ಎಲ್ಲರ ಆದ್ಯತೆ. ಈ ಖಾತರಿ ನೀಡುವವರ ವಸ್ತುಗಳಿಗೆ ಸಹಜವಾಗಿಯೇ ಉತ್ತಮ ಬೇಡಿಕೆಯಿದೆ. ವ್ಯಾಪಾರ, ವ್ಯವಹಾರಗಳ ರೂಢಿಗತ ಶೈಲಿಯನ್ನು ಬದಿಗೊತ್ತಿ ‘ಡೋರ್ ಸರ್ವಿಸ್’ ಕಡೆಗೆ ಹೊರಳಬೇಕಿರುವ ಈ ಹೊತ್ತಿನಲ್ಲಿ, ಸಾಮಾಜಿಕ ಜಾಲತಾಣಗಳು ಮಧ್ಯವರ್ತಿಯನ್ನು ಬದಿಗೊತ್ತಿ ಉತ್ಪಾದಕ-ಗ್ರಾಹಕನ ನಡುವೆ ಸೇತುವೆಯಾಗುತ್ತಿರುವ ವಿದ್ಯಮಾನ ಎದ್ದು ಕಾಣುತ್ತಿದೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಮಾಹಿತಿಯಂತೆ, ಕೊರೊನಾ ಎರಡನೇ ಅಲೆಯಿಂದ ರಾಜ್ಯದಲ್ಲಿ ಅಂದಾಜು 30 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ತಮ್ಮ ಹಳ್ಳಿಗಳಿಗೆ ಮರಳಿ ಭವಿಷ್ಯದ ಚಿಂತೆಯಿಂದ ತಲೆ ಮೇಲೆ ಕೈ ಹೊತ್ತು ಕುಳಿತ ಬಹುತೇಕರಿಗೆ ಸದ್ಯಕ್ಕೆ ಸರ್ಕಾರದ ಉದ್ಯೋಗ ಖಾತರಿ ಯೋಜನೆಯೊಂದೇ ಆಧಾರ. ತಮ್ಮ ವಿದ್ಯಾರ್ಹತೆ, ಪದವಿಗಳನ್ನು ಬದಿಗಿಟ್ಟು ದೊಡ್ಡ ಸಂಖ್ಯೆಯಲ್ಲಿ ಯುವಕರು ಈ ಕಾಯಕದಲ್ಲಿ ತೊಡಗಿಸಿ ಕೊಂಡಿದ್ದಾರೆ. ಇದೆಲ್ಲಾ ತಾತ್ಕಾಲಿಕ ಪರಿಹಾರವೆಂಬ ಅರಿವೂ ಇದೆ. ಹೆದ್ದಾರಿಯ ಹಾದಿಯಲ್ಲಿ ಕೂಗಳತೆಯ ದೂರಕ್ಕೆಲ್ಲಾ ಸಣ್ಣ ಹೋಟೆಲ್‍ಗಳು, ಗುಟ್ಕಾ, ಸಿಗರೇಟ್ ದುಕಾನುಗಳು ಎದ್ದಿವೆ. ಪೈಪೋಟಿಯ ಪುಡಿಗಾಸಿನ ಈ ಆದಾಯ ಹೊಟ್ಟೆ ಹೊರೆಯಲು ಸಾಲದೆಂಬ ಚಿಂತೆ ಕಾಡುತ್ತಿದೆ.

ಹೌದು, ಸಂಕಷ್ಟದ ಈ ಸಮಯದಲ್ಲಿ ಕೋವಿಡ್ ಸಂತ್ರಸ್ತರಿಗೆ ತರಬೇತಿ, ಮಾಹಿತಿ, ಮಾರ್ಗದರ್ಶನದ ಮೂಲಕ ಮತ್ತೆ ಬದುಕು ಕಟ್ಟಿಕೊಳ್ಳಲು ಬೆಂಬಲವಾಗಿ ನಿಲ್ಲುವ ಹೊಣೆ ಎಲ್ಲರ ಮೇಲಿದೆ. ಹಾಗೆಯೆ ಸಾಮಾಜಿಕ ಮಾಧ್ಯಮಗಳನ್ನು ಸಕಾರಾತ್ಮಕವಾಗಿ ದುಡಿಸಿಕೊಳ್ಳುವ ಕೌಶಲವನ್ನೂ ಕಲಿಸಬೇಕಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವಯಂ ಉದ್ಯೋಗ ಕೈಗೊಳ್ಳುವ ಯುವಕ, ಯುವತಿಯರಿಗೆ ವಸತಿಸಹಿತ ಉಚಿತ ತರಬೇತಿಯನ್ನು ನೀಡುತ್ತಿರುವುದು ಇಲ್ಲಿ ಉಲ್ಲೇಖಾರ್ಹ.

ನಮ್ಮ ಯುವ ಸಂಪನ್ಮೂಲವನ್ನು ಸಂಪತ್ತು ಸೃಷ್ಟಿಗಾಗಿ ಅಣಿಗೊಳಿಸುವ ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ (ಸ್ಕಿಲ್ ಇಂಡಿಯಾ), ಆತ್ಮನಿರ್ಭರ ಭಾರತದಂತಹ ಯೋಜನೆಗಳನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸುವುದು ಈ ಸಂಧಿಕಾಲದ ಜರೂರು ಕೂಡ. ಸಂಘ-ಸಂಸ್ಥೆಗಳು ಈ ದಿಸೆಯಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸುವುದು ಅಪೇಕ್ಷಣೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.