ADVERTISEMENT

ಸಂಗತ: ಅರಿಯೋಣ ಹಬ್ಬದ ಒಳತಿರುಳು

ಹಬ್ಬ–ಆಚರಣೆಗಳು ಸಂಭ್ರಮ, ಸಾಮರಸ್ಯದ ಪ್ರತೀಕಗಳಾಗಿ ಉಳಿಯಲಿ

ಚನ್ನು ಅ.ಹಿರೇಮಠ ರಾಣಿಬೆನ್ನೂರು
Published 13 ಸೆಪ್ಟೆಂಬರ್ 2024, 19:30 IST
Last Updated 13 ಸೆಪ್ಟೆಂಬರ್ 2024, 19:30 IST
ಸಂಗತ
ಸಂಗತ   

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ವೇಳೆ ಇತ್ತೀಚೆಗೆ ಕೋಮು ಗಲಭೆ ಸಂಭವಿಸಿ, ಜನರ ಆಸ್ತಿಪಾಸ್ತಿ ಅಪಾರ ಪ್ರಮಾಣದಲ್ಲಿ ನಷ್ಟಕ್ಕೀಡಾಗಿರುವುದು ವರದಿಯಾಗಿದೆ. ಹಬ್ಬಹರಿ ದಿನಗಳ ಸಂದರ್ಭದಲ್ಲಿ ಇಂಥ ಪ್ರಕರಣಗಳು ಆಗಾಗ್ಗೆ ಜರುಗುತ್ತಲೇ ಇವೆ. ಹೀಗಾಗಿ, ಯಾವ ಹಬ್ಬ ಬಂದರೆ ಎಲ್ಲಿ, ಯಾವಾಗ ಗಲಾಟೆ ಆರಂಭವಾಗುತ್ತದೋ ಎನ್ನುವ ಆತಂಕ ಆವರಿಸುವಂತಾಗಿದೆ. ಹಬ್ಬ–ಆಚರಣೆಗಳು ಯಾವುದೇ ಬಗೆಯಲ್ಲಿ ಅಸಹನೆಯ ಪ್ರದರ್ಶನಕ್ಕೆ ಅನುವು ಮಾಡಿಕೊಡದಂತೆ ನೋಡಿಕೊಳ್ಳಬೇಕು. 

ಇಂತಹ ಸಂಘರ್ಷಗಳಿಂದ ಅಂತಿಮವಾಗಿ ಬಲಿಪಶುಗಳಾಗುವವರು ಜಾತಿ-ಧರ್ಮಗಳ ಸೋಂಕಿಲ್ಲದೆ ತಮ್ಮ ಪಾಡಿಗೆ ತಾವು ಬದುಕುತ್ತಿರುವ ಅಮಾಯಕರು. ಕೆಲವೆಡೆ ಲಾಂಗ್, ಮಚ್ಚು, ಪೆಟ್ರೋಲ್ ಬಾಂಬ್, ದೊಣ್ಣೆಗಳನ್ನು ಹಿಡಿದು ಹಬ್ಬದ ಮೆರವಣಿಗೆಗಳಲ್ಲಿ ಪಾಲ್ಗೊಳ್ಳಲಾಗುತ್ತದೆ. ಶಾಂತಿ, ನೆಮ್ಮದಿಗೆ ಕಾರಣವಾಗಬೇಕಾದ ಹಬ್ಬದ ಮೆರವಣಿಗೆಯಲ್ಲಿ ಇಂತಹ ಅಸ್ತ್ರಗಳಿಗೆ ಏನು ಕೆಲಸ ಎಂಬುದು ಅರ್ಥವಾಗದ ಸಂಗತಿ. 

ಶತಶತಮಾನಗಳಿಂದಲೂ ಯಾವ ಧರ್ಮಪ್ರವರ್ತಕರೂ ತಮ್ಮ ಧರ್ಮ ಹೆಚ್ಚು, ಬೇರೊಂದು ಧರ್ಮ ಕೀಳು ಎಂಬ ಉಪದೇಶವನ್ನು ಮಾಡಿಲ್ಲ. ಹೀಗಿದ್ದರೂ ಧರ್ಮಾನುಯಾಯಿಗಳ ತಲೆಯಲ್ಲಿ ಮೇಲು–ಕೀಳಿನ ಹುಳ ಬಿಟ್ಟವರು ಮತ್ತು ಬಿಡುತ್ತಿರುವವರು ಯಾರು ಎಂಬುದು ನಿಗೂಢವಾಗಿಯೇ ಇದೆ. ಧಾರ್ಮಿಕ ಆಚರಣೆಗಳು ಅವರವರ ವೈಯಕ್ತಿಕ ಆಸಕ್ತಿ ಮತ್ತು ಆದ್ಯತೆ. ಬೇರೆ ಬೇರೆ ಧರ್ಮದವರ ಭಾವನೆಗಳಿಗೆ, ಸಾಮಾಜಿಕ ಸಾಮರಸ್ಯಕ್ಕೆ ಪರಸ್ಪರ ಗೌರವ ಕೊಡಬೇಕು, ಸೌಹಾರ್ದದ ನಡೆ–ನುಡಿಗಳಿಂದ ಪೂರಕವಾಗಿ ವರ್ತಿಸಬೇಕು. ಅದುಬಿಟ್ಟು ಮತಾಂಧ ಕೃತ್ಯಗಳಿಂದ ಪರಸ್ಪರ ಹಾನಿಗೀಡಾಗಿ, ಮನೋಕ್ಷೋಭೆ, ಸಂಕಷ್ಟಗಳಿಂದ ಬಳಲುವುದು ಯಾರಿಗೂ ಶೋಭೆ ತರುವುದಿಲ್ಲ.

ADVERTISEMENT

ಇಂಥವೆಲ್ಲ ಅಪಸವ್ಯಗಳ ಮಧ್ಯೆ ಕೊಡಗು ಜಿಲ್ಲೆಯ ಬೋಯಿಕೇರಿಯಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಅಚ್ಚರಿಯ ಜೊತೆಗೆ ಆನಂದವನ್ನೂ ಉಂಟು ಮಾಡುವಂತಹುದಾಗಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲ ಧರ್ಮೀಯರೂ ಸೇರಿ ಸಮಿತಿ ರಚಿಸಿಕೊಂಡು, ಸಂತಸ, ಸಂಭ್ರಮದಿಂದ ಗಣೇಶೋತ್ಸವ ಆಚರಿಸಿದ್ದಾರೆ. ಹೀಗೆ ಸರ್ವಧರ್ಮದವರೂ ಸಮಸ್ತ ಸಮುದಾಯದವರೂ ಸಂಘಟಿತರಾಗಿ ಆಚರಿಸುವ ಹಬ್ಬಗಳು ನಿಜಕ್ಕೂ ಮನಕ್ಕೆ ಮುದ ನೀಡುತ್ತವೆ, ಬಾಂಧವ್ಯ ವರ್ಧಿಸುತ್ತವೆ, ಬಂಧುರತೆಯನ್ನು ಹೆಚ್ಚಿಸುತ್ತವೆ. ಮುಖ್ಯವಾಗಿ, ಸುರಕ್ಷತಾ ಭಾವವನ್ನು ಉದ್ದೀಪಿಸುತ್ತವೆ. ಅದರ ಸಂಭ್ರಮ, ಸುಖವನ್ನು ಬಣ್ಣಿಸುವುದು ಸಾಧ್ಯವೇ ಇಲ್ಲ, ಅನುಭವಿಸಿದಾಗಷ್ಟೇ ಅದು ನಮ್ಮ ಅರಿವಿಗೆ ಬರುವುದು. ಹೀಗಾದಾಗ ಹಬ್ಬದ ಒಳತಿರುಳು ಅರ್ಥವಾಗುತ್ತದೆ. 

ವಿಚಿತ್ರವೆಂದರೆ, ಇಂತಹ ಸುಖವನ್ನು ಎಲ್ಲೆಡೆ, ಸಾರ್ವತ್ರಿಕವಾಗಿ ಅನುಭವಿಸಿ ಸಾಮರಸ್ಯ, ಸಂಭ್ರಮದ ಸುಖಾನುಭೂತಿಯನ್ನು ಪಡೆದ ವರದಿಗಳು ‘ಅಚ್ಚರಿ’ಯ ಸಂಗತಿಗಳಾಗಿ ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಬದಲಾಗಿ ಅನುದಿನವೂ ‘ಎಲ್ಲರನ್ನೂ ಒಳಗೊಂಡ’ ಆಚರಣೆಗಳು ನಮ್ಮ ಸಮಾಜದಲ್ಲಿ ನಡೆಯುವಂತಾದರೆ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಕವಿವಾಣಿಯ ಆಶಯ ಸಾಕಾರಗೊಳ್ಳುತ್ತದೆ.

ಧಾರ್ಮಿಕ ಸಂಗತಿಗಳನ್ನು ನಮ್ಮ ಸಮುದಾಯಗಳು ರಾಜಕೀಯ ಹಿನ್ನೆಲೆಯಲ್ಲಿಯೇ ಪರಿಗಣಿಸುವುದಾದರೆ ಅದಕ್ಕೆ ಅರ್ಥವೇ ಇರುವುದಿಲ್ಲ. ಏಕೆಂದರೆ, ರಾಜಕೀಯವು ಸಂಘರ್ಷಗಳಿಂದಲೇ ಶುರುವಾಗುತ್ತದೆ. ಪ್ರಬುದ್ಧ ರಾಜಕಾರಣಿ ಅಥವಾ ಸಮಷ್ಟಿಪ್ರಜ್ಞೆಯ ರಾಜಕಾರಣ ಇಂದು ಕಾಣಸಿಗುವುದು ಅತಿ ದುರ್ಲಭ. ಬಹುತೇಕ ರಾಜಕೀಯ ಧುರೀಣರು ನೇರವಾಗಿ ಕೋಮು ಸಂಘರ್ಷಕ್ಕೆ ಇಳಿಯುವುದಿಲ್ಲ. ಏಕೆಂದರೆ ಅವರಿಗೆ ಚುನಾವಣೆಯ ಸಮಯದಲ್ಲಿ ಎಲ್ಲ ಕೋಮಿನವರೂ ಬೇಕು. ಇದುವರೆಗಿನ ಯಾವುದೇ ಕೋಮು ಸಂಘರ್ಷದಲ್ಲಿ ಒಬ್ಬ ರಾಜಕಾರಣಿ ಅಥವಾ ಅವನ ಕುಟುಂಬಸ್ಥರು ಭಾಗಿಯಾಗಿರುವುದನ್ನು ಅಥವಾ ಬಂಧನಕ್ಕೆ ಒಳಗಾಗಿರುವುದನ್ನು ನಾವು ಗಮನಿಸಿದ್ದೇವೆಯೇ, ಪ್ರಾಯಶಃ ಇಲ್ಲ!

ದಯನೀಯ ಸ್ಥಿತಿಯಲ್ಲಿರುವ, ಅಂದಂದಿನ ದುಡಿಮೆಯಿಂದಲೇ ಅವರವರ ಜೀವನ ನಡೆಯುವಂಥ ಯುವಕರನ್ನು ರಾಜಕೀಯ ನೇತಾರರು ಪರಸ್ಪರ ಎತ್ತಿ ಕಟ್ಟುತ್ತಾರೆ. ಅದು, ಕೋಮುಸಂಘರ್ಷಕ್ಕೆ ದಾರಿ ತೆಗೆಯುತ್ತದೆ. ರಾಜಕೀಯ ಪಕ್ಷಗಳ ನಿಯೋಗಗಳ ಭೇಟಿ, ನಷ್ಟ ಪರಿಹಾರದ ಭರ್ತಿ, ಗಲಭೆಕೋರರ ವಿರುದ್ಧ ಕಠಿಣ ಕ್ರಮದಂತಹ ಮಾತುಗಳು ಬರೀ ಕಣ್ಣೊರೆಸುವ ತಂತ್ರಗಳು. ನಮ್ಮ ಯುವಪೀಳಿಗೆ ಇಂತಹ ಮಾತುಗಳಿಗೆ ಮರುಳಾಗದೆ, ತಮ್ಮ ಬದುಕು, ಭವಿಷ್ಯವನ್ನು ಗಮನದಲ್ಲಿಟ್ಟು, ಕುಟುಂಬದ ಸದಸ್ಯರ ಕ್ಷೇಮ, ತಮ್ಮ ವಿದ್ಯಾಭ್ಯಾಸದಂತಹ ಸಂಗತಿಗಳಿಗೆ ಗಮನ ನೀಡಬೇಕು. ಯಾರದೋ ಮಾತು ಕೇಳಿ, ಯಾರದೋ ಮನೆ, ಅಂಗಡಿಗೆ ಕಲ್ಲು ತೂರಾಡಿ, ಬೆಂಕಿ ಹಚ್ಚಿ, ತಾನು ಕಾರಾಗೃಹದಲ್ಲಿ ಕೈದಿಯಾಗುವುದರಿಂದ ತನ್ನ ಕುಟುಂಬಕ್ಕೆ ಹೊರೆ ಆಗಬಲ್ಲನೇ ವಿನಾ ಕುಟುಂಬದ ಭಾರ ಹೊರುವ ಜವಾಬ್ದಾರಿಯ ಮಗನಂತೂ ಆಗಲಾರ.

ಈ ಮಧ್ಯೆ ಕೋಮು ಘರ್ಷಣೆಗೆ ಕಾರಣವಾಗಬಹುದಾದ ಸಂಗತಿಗಳನ್ನು ಆಯಾ ಸಮುದಾಯದ ಮುಖಂಡರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಗ್ರಹಿಸಿ, ಗುರುತಿಸಿ, ಪ್ರಬುದ್ಧತೆಯಿಂದ ಕೂತು ಬಗೆಹರಿಸಿಕೊಳ್ಳಬೇಕು. ನಮ್ಮಷ್ಟಕ್ಕೆ ನಾವೇ ಸರಿತಪ್ಪುಗಳನ್ನು ವಿಶ್ಲೇಷಿಸಿಕೊಂಡು, ಸಮಷ್ಟಿ ಪ್ರಜ್ಞೆಯಿಂದ ಬಾಳಿದರೆ ರಾಜಕಾರಣಿಗಳು ಸಮುದಾಯಗಳ ತಂಟೆಗೆ ಬರುವುದಿಲ್ಲ. ಸಮಾಜವು ಸುರಕ್ಷಿತವಾಗುವುದಲ್ಲದೆ, ಸುಭದ್ರವಾಗಿ ಜೀವನ ಸಾಗಿಸಲು ಸಹಾಯವಾಗುತ್ತದೆ.

ದೈನಂದಿನ ಬದುಕು ಮುಖ್ಯವೇ ವಿನಾ ಎಂದೋ ಒಂದು ದಿನ ಯಾರಿಗೋ ಹಾನಿ ಮಾಡಿ ಸುಖದ ಭ್ರಮೆಯಲ್ಲಿ ತೇಲಾಡುವುದು ಯಾರಿಗೂ ಒಳಿತಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.