ADVERTISEMENT

ಸಂಗತ: ಧ್ಯಾನ ಎಂಬ ಪ್ರೀತಿಯ ಲಗಾಮು

ಡಾ.ಎಚ್.ಬಿ.ಚಂದ್ರಶೇಖರ್‌
Published 8 ನವೆಂಬರ್ 2022, 19:31 IST
Last Updated 8 ನವೆಂಬರ್ 2022, 19:31 IST
   

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನವನ್ನು ಅಭ್ಯಾಸ ಮಾಡಿಸುವ ಕುರಿತು ಚರ್ಚೆ ನಡೆಯುತ್ತಿದೆ. ವೈದ್ಯಕೀಯ ಸಂಶೋಧನೆ ಹಾಗೂ ನರವಿಜ್ಞಾನದ ಪ್ರಕಾರ, ಮನಸ್ಸನ್ನು ಶಾಂತಗೊಳಿಸಿ ಗಮನ ಕೇಂದ್ರೀಕರಿಸಲು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಧ್ಯಾನವು ಪರಿಣಾಮಕಾರಿ ಎಂಬುದು ನಿರ್ವಿವಾದ. ಯಾವು ದಾದರೂ ಒಂದು ವಿಷಯ ಅಥವಾ ವಸ್ತುವಿನ ಬಗ್ಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸುವುದು ‘ಧ್ಯಾನ’ ಎನಿಸಿಕೊಳ್ಳುತ್ತದೆ.

ಇತ್ತೀಚಿನ ಸಂಶೋಧನೆಯಂತೆ, ವ್ಯಕ್ತಿಯೊಬ್ಬ ದಿನವೊಂದರಲ್ಲಿ ಸಾವಿರಾರು ಬಗೆಯ ಆಲೋಚನೆ ಗಳನ್ನು ಮಾಡುತ್ತಾನೆ. ಅವುಗಳಲ್ಲಿ ಬಹುಪಾಲು ಆಲೋಚನೆಗಳು ಪುನರಾವರ್ತಿತ. ಭವಿಷ್ಯದಲ್ಲಿ ಆಗ ಬಹುದಾದ ಅಥವಾ ಈ ಹಿಂದೆ ಆಗಿಹೋದ ಅನೇಕ ಘಟನೆ, ಅನುಭವಗಳಿಗೆ ಸಂಬಂಧಿಸಿದಂತೆ ನಮ್ಮ ಹೆಚ್ಚಿನ ಆಲೋಚನೆಗಳು ಇರುತ್ತವೆ. ಇದರಿಂದ ಆ ಕ್ಷಣದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ನಮ್ಮ ಗಮನ ಕಡಿಮೆಯಾಗುವುದರ ಜೊತೆಗೆ ಅನಗತ್ಯ ಆತಂಕಕ್ಕೆ ಸಿಲುಕುವ ಸಂಭವವೂ ಇರುತ್ತದೆ. ನಮ್ಮೊಳಗೆ ನಾವು ನಿರಂತರವಾಗಿ ‘ವಟಗುಟ್ಟುವ’ ಮತ್ತು ಅತ್ತಿತ್ತ ಹೊಯ್ದಾಡುವ ಮನಸ್ಸನ್ನು ಶಮನ ಮಾಡಿ, ಅದ ಕ್ಕೊಂದು ಪ್ರೀತಿಯ ಲಗಾಮು ಹಾಕಲು ಧ್ಯಾನ ಸಹಕಾರಿ ಯಾಗುತ್ತದೆ.

ಅನೇಕ ಸಮೀಕ್ಷೆಗಳಲ್ಲಿ ಕಂಡುಕೊಂಡಂತೆ, ವಯಸ್ಕರಂತೆ ಮಕ್ಕಳು ಸಹ ವಿವಿಧ ಕೌಟುಂಬಿಕ ಮತ್ತು ಶೈಕ್ಷಣಿಕ ಕಾರಣಗಳಿಂದ ಭಯ, ಒತ್ತಡ, ಆತಂಕವನ್ನು ಎದುರಿಸುತ್ತಿರುತ್ತಾರೆ. ಅದರಲ್ಲೂ ನಗರಗಳಲ್ಲಿ ವಾಸಿಸುವ ಮಕ್ಕಳು ಹೆಚ್ಚು ಮಾನಸಿಕ ಒತ್ತಡ ಅನುಭವಿಸುತ್ತಾರೆ. ಒಂದು ಅಧ್ಯಯನದ ಪ್ರಕಾರ, ಜಾಗತಿಕವಾಗಿ ಶೇ 56ರಷ್ಟು ಮಕ್ಕಳು ಆತಂಕ ಅನುಭವಿಸುತ್ತಾರೆ ಎನ್ನಲಾಗಿದೆ. ಶಾಲೆಗೆ ಹೋಗಿ, ಬರುವುದು, ಶೈಕ್ಷಣಿಕ ಕಾರ್ಯಗಳ ನಿರ್ವಹಣೆ, ಪರೀಕ್ಷೆ, ಫಲಿತಾಂಶದಂತಹ ಅನೇಕ ಕಾರಣಗಳು ಮಕ್ಕಳಲ್ಲಿ ಮಾನಸಿಕ ಒತ್ತಡ ಉಂಟು ಮಾಡುವ ಸಂಭವ ಇರುತ್ತದೆ. ಇಂತಹ ಒತ್ತಡದ ಸನ್ನಿವೇಶಗಳನ್ನು ಯಶಸ್ವಿಯಾಗಿ ನಿಭಾಯಿಸಲು ಧ್ಯಾನ ಸಹಕಾರಿಯಾಗುತ್ತದೆ.

ADVERTISEMENT

ವಿಶ್ವದ ಅನೇಕ ದೇಶಗಳಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸುವ ರೂಢಿ ಚಾಲ್ತಿಯಲ್ಲಿದೆ. ಸ್ವೀಡನ್, ಪೋರ್ಚುಗಲ್ ಮತ್ತು ನೆದರ್‌ಲ್ಯಾಂಡ್ಸ್ ದೇಶಗಳಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಾಲೆಯ ಆರಂಭ ಹಾಗೂ ಮುಕ್ತಾಯದ ವೇಳೆ ಕೆಲ ನಿಮಿಷಗಳ ಕಾಲ ವಿದ್ಯಾರ್ಥಿ ಗಳಿಗೆ ಧ್ಯಾನವನ್ನು ಅಭ್ಯಾಸ ಮಾಡಿಸುವ ಕ್ರಮ ರೂಢಿಯಲ್ಲಿದೆ. ಇದರ ಭಾಗವಾಗಿ ಶಿಕ್ಷಕರಿಗೂ ತರಬೇತಿಯನ್ನು ನೀಡಲಾಗಿದೆ.

ಸಂಕೀರ್ಣ ಉದ್ವೇಗಗಳನ್ನು ನಿರ್ವಹಿಸಲು ಇಂಗ್ಲೆಂಡ್‍ನ ಶಾಲೆಗಳಲ್ಲಿ ತನ್ಮಯ ಸ್ಥಿತಿ ಮತ್ತು ಧ್ಯಾನದ ಕುರಿತ ತರಬೇತಿಯನ್ನು ನೀಡಲಾಗುತ್ತದೆ. ಮಕ್ಕಳಿಗೆ ಸ್ನಾಯುಗಳನ್ನು ಸಡಿಲಿಸುವುದು ಹಾಗೂ ಸರಾಗ ಉಸಿರಾಟದ ಕ್ರಮವನ್ನು ಕಲಿಸಲಾಗುತ್ತಿದೆ. ಅತಿ ಚೇಷ್ಟೆ, ತುಂಟತನ ಮಾಡುವ ಮಕ್ಕಳಿಗೆ ಧ್ಯಾನದಲ್ಲಿ ತೊಡಗುವ ‘ಶಿಕ್ಷೆ’ ನೀಡುವ ಮೂಲಕ ಅವರನ್ನು ಸಹಜ ಶಿಸ್ತಿಗೆ ಒಳಪಡಿಸುವ ಕ್ರಮವೂ ಇದ್ದು, ಉಪಯುಕ್ತ ಎನ್ನಲಾಗಿದೆ.

ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್, ಫಿನ್ಲೆಂಡ್, ಜರ್ಮನಿ, ಥಾಯ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಧ್ಯಾನಾಭ್ಯಾಸದ ರೂಢಿ ಇದೆ. ಅನೇಕ ದೇಶಗಳಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳ ಮಕ್ಕಳಿಗೂ ಧ್ಯಾನದ ಅಭ್ಯಾಸ ಮಾಡಿಸಲಾಗುತ್ತಿದ್ದು, ಮಕ್ಕಳು ‘ಗಮನ ಕೇಂದ್ರೀಕರಿಸಲು’ ಪ್ರಯೋಜನ ಆಗುತ್ತಿರುವ ಬಗ್ಗೆ ವರದಿಗಳಿವೆ.

ದೆಹಲಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಜಾರಿಗೆ ತಂದ ‘ಸಂತಸದ ಪಠ್ಯಕ್ರಮ’ದ (ಹ್ಯಾಪಿನೆಸ್ ಕರಿಕ್ಯುಲಮ್) ಭಾಗವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಧ್ಯಾನ ಹಾಗೂ ತನ್ಮಯವಾಗಿ ಇರುವುದನ್ನು ಕಲಿಸಲಾಗುತ್ತಿದ್ದು, ಇದು ಶಾಲೆಗಳ ಶೈಕ್ಷಣಿಕ ಸುಧಾರಣೆಗೆ ನೆರವಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಶಾಲೆಗಳಲ್ಲಿ ಧ್ಯಾನದ ಅಭ್ಯಾಸಕ್ಕೆ ಅವಕಾಶ ಮಾಡಿಕೊಡುವುದು ಧಾರ್ಮಿಕ ಚಟುವಟಿಕೆ ಎನಿಸಿ ಕೊಳ್ಳುತ್ತದೆ ಎಂಬ ಆತಂಕ ಅನೇಕರದ್ದಾಗಿದೆ. ಧ್ಯಾನ ವನ್ನು ಧಾರ್ಮಿಕ ಚಟುವಟಿಕೆಯನ್ನಾಗಿಸದೆಯೂ ಕಲಿಸಲು ಸಾಧ್ಯವಿದೆ.

ತಮಗೆ ಅನುಕೂಲವೆನಿಸುವ ಭಂಗಿಯಲ್ಲಿ ಬೆನ್ನು ನೇರ ಮಾಡಿ ಕುಳಿತುಕೊಂಡು, ಕಣ್ಣುಗಳನ್ನು ಮೆದು ವಾಗಿ ಮುಚ್ಚಿ, ಆರಂಭದಲ್ಲಿ ಸುತ್ತಲಿನ ವಾತಾವರಣದ ವಿವಿಧ ಶಬ್ದಗಳೆಡೆ ಗಮನಹರಿಸುತ್ತಾ, ನಂತರ ನಿಧಾನವಾಗಿ ಮನಸ್ಸನ್ನು ಉಸಿರಾಟದಲ್ಲಿ ತಲ್ಲೀನ ಮಾಡುವುದು. ಮನದಲ್ಲೇಳುವ ಯಾವುದೇ ಆಲೋಚನೆಯನ್ನು ನಿಯಂತ್ರಿಸದೆ ಗಮನಿಸುತ್ತಾ, ಸಾಧ್ಯವಾದಷ್ಟೂ ಉಸಿರಾಟದ ಕಡೆಯೇ ಹೆಚ್ಚು ಗಮನ ಹರಿಸುವುದನ್ನು ಅಭ್ಯಾಸ ಮಾಡಬೇಕು.

ಉಸಿರಾಟವನ್ನು ಹೊಟ್ಟೆಯ ಮೂಲಕ ಮಾಡುವುದು ಪರಿಣಾಮಕಾರಿ. ಇದನ್ನು ಬೆಲ್ಲಿ ಬ್ರೀಥಿಂಗ್ ಎನ್ನುತ್ತಾರೆ. ಆತಂಕ, ಅವಸರವಿದ್ದಾಗ ಉಸಿರಾಟ ಏರುಪೇರಾಗುತ್ತದೆ. ಆ ಸಮಯದಲ್ಲಿ ಉಸಿರಾಟದ ಕಡೆ ಗಮನ ಹರಿಸಿದರೆ ಆತಂಕ ಮಾಯವಾಗಿ ಶಾಂತಿ ಲಭಿಸುತ್ತದೆ. ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆಗಾಗ್ಗೆ ಉಸಿರಾಟದ ಕಡೆ ಗಮನಹರಿಸಲು ತಿಳಿಸುತ್ತಾ ಅವರ ಗಮನ ಸೆಳೆಯುವ ರೂಢಿ ಇದೆ.

ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಧ್ಯಾನವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಶಾಲೆ ಗಳಲ್ಲಿ ಶಾಂತಿ, ಸೌಹಾರ್ದ ಉತ್ತಮಗೊಂಡು, ಶೈಕ್ಷಣಿಕ ಗುಣಮಟ್ಟದ ಅಭಿವೃದ್ಧಿಗೂ ಸಹಾಯಕವಾಗುತ್ತದೆ ಎಂದು ಆಶಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.