ADVERTISEMENT

ಕಲಿಕೆಗೆ ಪೂರಕ ಯಾವ ಮಾಧ್ಯಮ?

ಇಂಗ್ಲಿಷ್ ಮಾಧ್ಯಮ ಶಾಲೆಗಳು ಕಲಿಕೆಯ ಮಟ್ಟ ಹೆಚ್ಚಿಸಿಲ್ಲ

ಎ.ಎನ್‌ ಎಮ ಇಸ್ಮಾಯಿಲ್
Published 28 ನವೆಂಬರ್ 2018, 20:20 IST
Last Updated 28 ನವೆಂಬರ್ 2018, 20:20 IST
ಕಲಿಕೆ
ಕಲಿಕೆ   

ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಆಡುವ, ಆಲಿಸುವ ವಾತಾವರಣದಿಂದ ಬರುವ ಮಕ್ಕಳ ಕಲಿಕಾ ಕೌಶಲದ ಪ್ರಮಾಣ ಬಹಳ ಹೆಚ್ಚು. ಇದು ಪ್ರಪಂಚದ ಎಲ್ಲೆಡೆಯೂ ನಿಜ. ಭಾರತದಲ್ಲಿ 25 ಕೋಟಿಗೂ ಹೆಚ್ಚು ಜನರು ಕನಿಷ್ಠ ಎರಡು ಭಾಷೆಗಳನ್ನು ಅರಿತವರು. ಸುಮಾರು 9 ಕೋಟಿ ಮಂದಿ ಮೂರು ಅಥವಾ ಅದಕ್ಕಿಂತ ಹೆಚ್ಚು ಭಾಷೆಗಳನ್ನು ಅರಿತಿರುತ್ತಾರೆ.

ಹೀಗೆ ಬಹುಭಾಷೆಗಳನ್ನು ಅರಿತವರ ಸಂಖ್ಯೆ ಬಡವರಲ್ಲಿಯೇ ಹೆಚ್ಚು. ಆದರೆ ಬಹುಭಾಷಿಕ ಹಿನ್ನೆಲೆಯಿಂದ ಬರುವ ಭಾರತದ ಬಡಮಕ್ಕಳ ಕಲಿಕಾ ಕೌಶಲ ಮಾತ್ರ ಅಭಿವೃದ್ಧಿ ಹೊಂದಿದ ದೇಶಗಳ ಬಹುಭಾಷಿಕ ಹಿನ್ನೆಲೆಯ ಮಕ್ಕಳಿಗಿಂತ ಕಡಿಮೆ. ಕಲಿಕಾ ಕೌಶಲಕ್ಕೂ ಬಡತನಕ್ಕೂ ಸಂಬಂಧವಿಲ್ಲ. ಹಾಗಿದ್ದರೆ ಈ ವಿರೋಧಾಭಾಸಕ್ಕೆ ಏನು ಕಾರಣ?

ಕೇಂಬ್ರಿಜ್ ವಿಶ್ವವಿದ್ಯಾಲಯದ ಅಂತರಶಿಸ್ತೀಯ ಅಧ್ಯಯನ ವಿಭಾಗಗಳಲ್ಲಿ ಒಂದಾದ ಕೇಂಬ್ರಿಜ್ ಲಾಂಗ್ವೇಜ್ ಸೈನ್ಸಸ್‌ನ ನೇತೃತ್ವ ವಹಿಸಿರುವ ಇಯಂತಿ ಸಿಂಪ್ಲಿ (Ianti Tsimpli) ಭಾರತದಲ್ಲಿ ನಡೆಸುತ್ತಿರುವ ಸಂಶೋಧನೆಯು ಮೇಲಿನ ಪ್ರಶ್ನೆಗೆ ಕೆಲ ಮಟ್ಟಿಗಿನ ಉತ್ತರ ಕಂಡುಕೊಂಡಿದೆ. ಬಿಹಾರ, ತೆಲಂಗಾಣ, ಕರ್ನಾಟಕ, ದೆಹಲಿ ಮುಂತಾದೆಡೆ ವ್ಯಾಪಿಸಿರುವ ಇಯಂತಿ ಅವರ ಕ್ಷೇತ್ರಕಾರ್ಯ ಹಲವು ಹೊಳಹುಗಳನ್ನು ನೀಡುತ್ತಿದೆ.

ADVERTISEMENT

ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಅಳೆಯಲು ಪ್ರತೀ ವರ್ಷ ದೇಶವ್ಯಾಪಿಯಾಗಿ ಸುಮಾರು ಆರು ಲಕ್ಷ ವಿದ್ಯಾರ್ಥಿಗಳನ್ನು ಆಯ್ದು ಕಲಿಕೆಯ ಮಟ್ಟವನ್ನು ಅರಿಯುವ ಪ್ರಯತ್ನ ನಡೆಯುತ್ತಿದೆ. ಇದರ ಫಲಿತಾಂಶಗಳಂತೆ ಐದನೇ ತರಗತಿಯಲ್ಲಿರುವ ಸುಮಾರು ಅರ್ಧಕ್ಕಿಂತ ಹೆಚ್ಚು ಮಕ್ಕಳು ಎರಡನೇ ತರಗತಿಯ ಪಠ್ಯವನ್ನು ಓದುವುದರಲ್ಲಿ ವಿಫಲರಾಗುತ್ತಾರೆ. ಎರಡನೇ ತರಗತಿಯ ಮಕ್ಕಳು ಬಿಡಿಸಬಹುದಾದ ಲೆಕ್ಕಗಳನ್ನೂ ಅರ್ಥೈಸುವುದರಲ್ಲಿ ಸೋಲುತ್ತಾರೆ.

ಇಯಂತಿಯವರ ಸಂಶೋಧನೆಯ ಉದ್ದೇಶವಿರುವುದೇ ಈ ವೈಫಲ್ಯದ ಕಾರಣಗಳನ್ನು ಕಂಡುಕೊಳ್ಳುವುದು. ಸಂಶೋಧನೆಯ ಆರಂಭಿಕ ಫಲಿತಾಂಶಗಳಂತೆ ಅನೇಕ ಮಕ್ಕಳ ಮಟ್ಟಿಗೆ ಬೋಧನಾ ಮಾಧ್ಯಮ ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ಮಕ್ಕಳಿಗೆ ತಾವು ಬೆಳೆಯುವ ವಾತಾವರಣದಲ್ಲಿ ಪರಿಚಿತವಲ್ಲದ ಇಂಗ್ಲಿಷ್ ಭಾಷೆಯಲ್ಲಿ ಬೋಧಿಸುತ್ತಿರುವುದೇ ಸದ್ಯದ ಮಟ್ಟಿಗೆ ದೊಡ್ಡ ಸಮಸ್ಯೆ ಎಂದು ಇಯಂತಿ ಅಭಿಪ್ರಾಯಪಡುತ್ತಾರೆ.

ಇಯಂತಿಯವರ ಸಂಶೋಧನೆಯ ಪ್ರಾಥಮಿಕ ಫಲಿತಾಂಶಗಳನ್ನು ಮತ್ತೊಂದು ವಿಷಯದ ಜೊತೆಗೆ ಜೋಡಿಸಿ ಅರ್ಥ ಮಾಡಿಕೊಳ್ಳಬೇಕು. ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಖಾಸಗಿ ಶಾಲೆಗಳಿಗೆ ಸೇರುವ ಮಕ್ಕಳ ಪ್ರಮಾಣ ಹೆಚ್ಚಾಗುತ್ತಿದೆ. ಮಾರುಕಟ್ಟೆಯು ಇಂಗ್ಲಿಷನ್ನು ಬಯಸುತ್ತದೆ. ಆದ್ದರಿಂದ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಲಿ ಎಂದು ಪಾಲಕರೂ ಬಯಸುತ್ತಿದ್ದಾರೆ.

ಸರ್ಕಾರಿ ಶಾಲೆಗಳಿನ್ನೂ ಸ್ಥಳೀಯ ಭಾಷಾ ಮಾಧ್ಯಮಕ್ಕೇ ಅಂಟಿಕೊಂಡಿರುವುದರಿಂದ ಬಡವರ ಮಕ್ಕಳೂ ತಮ್ಮ ಮಿತಿಯ ಖಾಸಗಿ ಶಾಲೆಗಳಿಗೇ ಸೇರುವುದು ಸಹಜವಾಗುತ್ತಿದೆ. ಆದರೆ ಈ ಖಾಸಗಿ ಶಾಲೆಗಳ ಗುಣಮಟ್ಟ ಸರ್ಕಾರಿ ಶಾಲೆಗಳಿಗಿಂತ ಯಾವ ಬಗೆಯಲ್ಲೂ ಉತ್ತಮವಲ್ಲ. ಸಾಮಾನ್ಯ ಖಾಸಗಿ ಶಾಲೆಗಳ ಗುಣಮಟ್ಟವನ್ನು ಬಿಡಿ.

ಪ್ರೋಗ್ರಾಂ ಫಾರ್ ಇಂಟರ್‌ನ್ಯಾಷನಲ್ ಸ್ಟೂಡೆಂಟ್ ಅಸೆಸ್ಮೆಂಟ್ ಗುರುತಿಸಿರುವ ಭಾರತದ 100 ಅತ್ಯುತ್ತಮ ಖಾಸಗಿ ಶಾಲೆಗಳು ಕೂಡಾ ವಿಶ್ವಮಟ್ಟದಲ್ಲಿ ತೀರಾ ಸಾಮಾನ್ಯ. ಎಷ್ಟರಮಟ್ಟಿಗೆ ಎಂದರೆ ಭಾರತದ ಅತ್ಯುತ್ತಮ ಖಾಸಗಿ ಶಾಲೆಗಳ ಮಟ್ಟ ಕೂಡಾ ಮೆಕ್ಸಿಕೊ, ಸ್ಲೊವೇನಿಯಾ ಮತ್ತು ಇಟಲಿಯಂಥ ದೇಶಗಳ ಸಾಧಾರಣ ಶಾಲೆಗಳಿಗಿಂತ ಕಡಿಮೆ.

ಕಲಿಕೆಯ ಮಾಧ್ಯಮದ ವಿಷಯದ ಚರ್ಚೆ ಈಗ ಕಲಿಕೆಯರಿಮೆಯ ಆಚೆಗೆ ಹೋಗಿ ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಯಾಗುವುದರಿಂದ ಮೇಲೆ ಹೇಳಿದ ಯಾವುದೇ ಅಧ್ಯಯನ ಫಲಿತಾಂಶಗಳನ್ನೂ ಯಾರೂ ನೆನಪಿಸಿಕೊಳ್ಳುವುದಿಲ್ಲ. ಪಾಲಕರೇನೋ ತಮ್ಮ ಮಕ್ಕಳಿಗೆ ಒಳ್ಳೆಯದೊಂದು ಭವಿಷ್ಯವನ್ನು ಕಲ್ಪಿಸುವ ದೃಷ್ಟಿಯಿಂದ ತಥಾಕಥಿತ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ. ಕಲಿಕೆಯು ಶಾಲೆಯ ಆಚೆಗೂ ನಡೆಯುವುದರಿಂದ ಇಂಗ್ಲಿಷ್ ಈ ಮಕ್ಕಳಿಗೆ ಪರಕೀಯವಾಗಿಯೇ ಉಳಿಯುತ್ತದೆ.

ಇಯಂತಿಯವರ ತಂಡ ಈ ತನಕ ಕಂಡುಕೊಂಡಿರುವ ವಿಚಾರಗಳಲ್ಲಿ ಮಕ್ಕಳು ಅರ್ಧದಲ್ಲೇ ಶಾಲೆ ತೊರೆಯುವುದಕ್ಕೂ ಇದು ಕಾರಣವಾಗುತ್ತಿದೆ. ಎಸ್ಎಸ್ಎಲ್‌ಸಿಯ ಹಂತದಲ್ಲಿ ಅನುತ್ತೀರ್ಣರಾಗುವ ಹೆಣ್ಣು ಮಕ್ಕಳು ಶಾಲೆಯನ್ನು ತೊರೆದೇಬಿಡುತ್ತಾರೆ. ಅನೇಕ ಗಂಡುಮಕ್ಕಳ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಈ ಸಮಸ್ಯೆಯ ನಿವಾರಣೆ ಸರಳವಲ್ಲ. ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವ ವಯಸ್ಸಿನಲ್ಲಿ ಮಕ್ಕಳಿಗೆ ಪರಿಚಿತವಾಗಿರುವ ಭಾಷೆಯಲ್ಲಿ ಕಲಿಸುವ ನೀತಿಯೊಂದನ್ನು ರೂಪಿಸಿದರೆ ಅದು ಭಾರತದ ಶಿಕ್ಷಣ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿ
ಬಿಡಬಹುದು.

ಶೇಕಡ 30ರಷ್ಟು ಬಹುಭಾಷಿಕ ಹಿನ್ನೆಲೆಯಿರುವ ಭಾರತದ ಮಕ್ಕಳು ನಿಜಕ್ಕೂ ಅಭಿವೃದ್ಧಿ ಹೊಂದಿದ ದೇಶಗಳ ಮಟ್ಟದ ಕಲಿಕಾ ಸಾಮರ್ಥ್ಯವನ್ನು ಪ್ರದರ್ಶಿಸುವ ಸಾಧ್ಯತೆಯನ್ನು ಇದು ತೆರೆಯುತ್ತದೆ. ಕಲಿಕಾ ಮಾಧ್ಯಮದ ಸಮಸ್ಯೆಗೆ ಈಗಾಗಲೇ ಒಂದು ರಾಜಕೀಯ ಆಯಾಮವಿದೆ. ಇದರ ನಿವಾರಣೆಗೂ ರಾಜಕೀಯ ನಿರ್ಧಾರದ ಅಗತ್ಯವಿದೆ. ನಮ್ಮ ಭಾಷಾವಾರು ರಾಜ್ಯ ವಿಂಗಡಣೆಯ ಹಿಂದಿದ್ದ ಒಕ್ಕೂಟ ವ್ಯವಸ್ಥೆಯ ತತ್ವವನ್ನು ಮತ್ತೆ ನೆನಪಿಸಿಕೊಳ್ಳಬೇಕು. ಶಿಕ್ಷಣವನ್ನು ಜಂಟಿಪಟ್ಟಿಯಿಂದ ಹೊರತಂದು ರಾಜ್ಯಪಟ್ಟಿಗೆ ಸೀಮಿತಗೊಳಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.