ದೇಶದ ಬಹುಪಾಲು ರಾಜ್ಯಗಳು ಈಗ ಅನ್‌ಲಾಕ್ ಘೋಷಿಸಿರುವುದರಿಂದ ಉದ್ಯಮಗಳು ಫುಲ್‍ಟೈಂ ಕೆಲಸ ಶುರುಮಾಡಿವೆ. ಲಾಕ್‍ಡೌನ್‍ನಿಂದಾಗಿ ದೇಶದ 90 ನಗರಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದ್ದ ವಾಯುಮಾಲಿನ್ಯವು ಸರಕು ಸಾಗಣೆ, ಕಟ್ಟಡ ನಿರ್ಮಾಣ, ರಸ್ತೆ ಅಗಲೀಕರಣ, ನಾಗರಿಕ ವಾಹನಗಳ ಸಂಚಾರ ಬಿರುಸುಗೊಂಡು ಮತ್ತೆ ಏರತೊಡಗಿದೆ.
ಮಾಲಿನ್ಯ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಲಿನ್ಯ ನಿಯಂತ್ರಣ ಮಂಡಳಿಗಳ ನಾಯಕತ್ವದಲ್ಲಿ ಹಲವು ಕ್ರಮ ಕೈಗೊಂಡಿವೆ. ಅದರಂತೆ ನಗರಗಳ ಮತ್ತು ನದಿ ತೀರಗಳ ಹೆಚ್ಚು ಮಾಲಿನ್ಯಕಾರಕ ಉದ್ಯಮಗಳು ಸೆಮ್ಸ್ (CEMS– ಕಂಟಿನ್ಯುಯಸ್ ಎಮಿಷನ್ ಮಾನಿಟರಿಂಗ್ ಸಿಸ್ಟಂ) ಅಳವಡಿಸಿಕೊಂಡು, ಹೊಮ್ಮುತ್ತಿರುವ ಮಾಲಿನ್ಯದ ಮಾಹಿತಿಯನ್ನು ನಿರಂತರವಾಗಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸರ್ವರ್‌ಗೆ ಪ್ರತೀ ಹದಿನೈದು ನಿಮಿಷಕ್ಕೊಮ್ಮೆ ಕಳಿಸಬೇಕೆಂಬ ನಿಯಮ ಜಾರಿಯಾಗಿದೆ. ಹಿಂದೆಲ್ಲಾ 3 ಅಥವಾ 6 ತಿಂಗಳಿಗೊಮ್ಮೆ ಮಾಲಿನ್ಯದ ವರದಿಯು ಮಂಡಳಿಯ ಕೈ ಸೇರುತ್ತಿತ್ತು. ಕ್ರಮ ತೆಗೆದುಕೊಳ್ಳಲು ಅಥವಾ ಸರಿಪಡಿಸಿಕೊಳ್ಳಿ ಎಂದು ಹೇಳಲು ಮತ್ತಾರು ತಿಂಗಳಾಗಿ ವಾತಾವರಣ ಮತ್ತಷ್ಟು ವಿಷಮಯವಾಗುತ್ತಿತ್ತು. ಈಗ ಹಾಗಲ್ಲ. ದಿನದ ಮಾಹಿತಿಯನ್ನು ಅಂದಂದೇ ನೋಡಿ, ಯಾವ್ಯಾವ ಉದ್ಯಮ ತನ್ನ ಮಾಲಿನ್ಯವನ್ನು ನಿಯಂತ್ರಣದಲ್ಲಿರಿಸಿದೆ ಅಥವಾ ಇಲ್ಲ ಎಂದು ಗಮನಿಸುವ ಮಂಡಳಿಯು, ಹೆಚ್ಚು ಮಾಲಿನ್ಯ ಉಂಟುಮಾಡುವ ಉದ್ಯಮಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸುವುದು, ನೋಟಿಸ್ ಜಾರಿ ಮಾಡುವುದು, ದಂಡ ವಿಧಿಸುವಂತಹ ಕೆಲಸ ಮಾಡುತ್ತಿದೆ. ಆದರೆ ಸರ್ವರ್‌ಗೆ ಬರುವ ಮಾಹಿತಿಯೇ ಸರಿ ಇಲ್ಲ ಎಂಬುದು ಪತ್ತೆಯಾಗಿದೆ!
2014ರಲ್ಲೇ ಕಾನೂನು ಜಾರಿಗೊಳಿಸಿದ ಮಂಡಳಿ, ದೇಶದ 17 ಬಗೆಯ ಉದ್ಯಮಗಳನ್ನು ಅತಿ ಹೆಚ್ಚು ಮಾಲಿನ್ಯಕಾರಕ ಉದ್ಯಮಗಳೆಂದು ಗುರುತಿಸಿ, ಸೆಮ್ಸ್ ಅಳವಡಿಸಿಕೊಳ್ಳಲೇಬೇಕು ಎಂದು ತಾಕೀತು ಮಾಡಿತ್ತು. ಚರ್ಮದ ಕೈಗಾರಿಕೆ, ಡಿಸ್ಟಿಲರೀಸ್, ಸಿಮೆಂಟ್ ಫ್ಯಾಕ್ಟರಿ, ಸಕ್ಕರೆ ಮಿಲ್ಲು, ತೈಲ ರಿಫೈನರಿಗಳು ಅತಿಹೆಚ್ಚು ಮಾಲಿನ್ಯ ಉಂಟು ಮಾಡುತ್ತವೆಯಾದ್ದರಿಂದ ಅಂಥ 4,251 ಘಟಕಗಳನ್ನು ಗುರುತಿಸಿತ್ತು. ತಮ್ಮ ಉದ್ಯಮಕ್ಕೆ ಸರಿಹೊಂದುವ ಸೆಮ್ಸ್ ಅನ್ನು ನೀವೇ ಆಯ್ಕೆ ಮಾಡಿಕೊಳ್ಳಿ ಎಂಬ ಸ್ವಾತಂತ್ರ್ಯ ನೀಡಿತ್ತು. ಎಡವಟ್ಟಾದದ್ದು ಇಲ್ಲಿಯೇ! ಮಾರುಕಟ್ಟೆಯಲ್ಲಿ ಸಾವಿರ ರೂಪಾಯಿಯಿಂದ ಹಿಡಿದು ಹಲವು ಲಕ್ಷ ರೂಪಾಯಿ ಬೆಲೆಯ ಸೆಮ್ಸ್ ಲಭ್ಯವಿವೆ. ಇಂಥದ್ದನ್ನೇ ಹಾಕಬೇಕೆಂಬ ನಿಯಮವಿಲ್ಲದ್ದರಿಂದ ಮಾಲಿನ್ಯವನ್ನು ಮುಚ್ಚಿಡಲು ಬಹುತೇಕ ಕಂಪನಿಗಳು ಕಡಿಮೆ ಬೆಲೆ– ದರ್ಜೆಯ ಸೆಮ್ಸ್ ಅಳವಡಿಸಿಕೊಂಡಿದ್ದು, ಅವು ನೀಡುವ ಮಾಹಿತಿ ಸರಿಯಾಗಿಲ್ಲ ಎಂಬುದು ಗೊತ್ತಾಗಿದೆ.
ಸೆಮ್ಸ್ ತುಂಬಾ ನಾಜೂಕಿನ ಮತ್ತು ಉನ್ನತ ತಂತ್ರಜ್ಞಾನದ ಸಂಕೀರ್ಣ ಉಪಕರಣ. ಅದನ್ನು ನಿರ್ವಹಿಸಲು ತರಬೇತಿ ಪಡೆದ ಕೆಲಸಗಾರರು ಬೇಕು. ಬಳಕೆದಾರರು ಮತ್ತು ವಾರ್ಷಿಕ ಸರ್ವಿಸ್ ನೀಡು ವವರಿಗೆ ಸರಿಯಾದ ತರಬೇತಿ ನೀಡಿದ ನಂತರವೇ ಉಪಕರಣ ಅಳವಡಿಸಬೇಕು.
ಸರ್ಕಾರದಿಂದ ಗುರುತಿಸಲ್ಪಟ್ಟ ಲ್ಯಾಬ್‍ಗಳು ಉಪಕರಣಗಳನ್ನು ಪ್ರಮಾಣೀಕರಿಸಬೇಕೆಂಬ ನಿಯಮವಿದೆ. ಅಳವಡಿಕೆಯಾಗಿರುವ ಉಪಕರಣಗಳು ಸರಿ ಇವೆಯೇ? ಆಯಾ ಉದ್ಯಮಗಳಿಗೆ ಹೊಂದುತ್ತವೆಯೇ ಎಂಬುದನ್ನು ಜರ್ಮನಿ ಮತ್ತು ಇಂಗ್ಲೆಂಡ್‌ನ ಸಂಸ್ಥೆ ಗಳಿಂದ ಪ್ರಮಾಣೀಕರಿಸಿಕೊಳ್ಳಬೇಕು ಎಂಬುದು ಹಲವು ಕಂಪನಿಗಳನ್ನು ಕೆರಳಿಸಿದೆ. ಮೇಕ್ ಇನ್ ಇಂಡಿಯಾ ತಳಹದಿಯ ಮೇಲೆ ಕೆಲಸ ಮಾಡುವಾಗ ನಮ್ಮ ಉಪಕರಣಗಳಿಗೆ ನಮ್ಮದೇ ಪ್ರಮಾಣಪತ್ರವಿರಬೇಕು ಮತ್ತು ಆ ಕೆಲಸ ಶೀಘ್ರವಾಗಿ ಆಗಬೇಕು, ಇಲ್ಲದಿದ್ದರೆ ಅಳವಡಿಸಿರುವ ವ್ಯವಸ್ಥೆ ಔಟ್‍ಡೇಟೆಡ್ ಆಗುವ ಸಾಧ್ಯತೆಗಳಿವೆ ಎಂದಿರುವ ಕಂಪನಿ ಮಾಲೀಕರು, ನಮ್ಮ ತಂತ್ರಜ್ಞಾನ ವನ್ನು ಸರ್ಟಿಫೈ ಮಾಡಲು ನಮ್ಮದೇ ಲ್ಯಾಬ್‍ಗಳೇಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಉತ್ತರವೆಂಬಂತೆ ಕಳೆದ ಆಗಸ್ಟ್‌ನಲ್ಲಿ ಸಿಎಸ್‍ಐಆರ್ (ಕೇಂದ್ರೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ) ಮತ್ತು ಎನ್‍ಪಿಎಲ್ (ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ) ಸಹಯೋಗದಲ್ಲಿ ತಜ್ಞ ಸಮಿತಿಯೊಂದನ್ನು ರಚಿಸಿರುವ ಕೇಂದ್ರ ಸರ್ಕಾರ, ಇನ್ನು ಮುಂದೆ ಪ್ರಮಾಣಪತ್ರ ಈ ಸಮಿತಿಯಿಂದಲೇ ದೊರೆಯುತ್ತದೆ ಎಂದಿದೆ. ಅಲ್ಲಿಂದೀಚೆಗೆ ಹತ್ತು ತಿಂಗಳಾಗಿದ್ದರೂ ಕೆಲಸ ಶುರುವಾಗಿಲ್ಲ. ಈಗಲೂ ವಿದೇಶಿ ಕಂಪನಿಗಳೇ ಸರ್ಟಿಫೈ ಮಾಡುತ್ತಿವೆ.
ದೆಹಲಿ ಸರ್ಕಾರ ₹ 20 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ, ಪಾರ್ಟಿಕ್ಯುಲೇಟ್ ಮ್ಯಾಟರ್ ನಿಯಂತ್ರಿಸುವ ಸ್ಮಾಗ್ ಟವರ್ ಅನ್ನು ಆಗಸ್ಟ್ 15ಕ್ಕೆ ಕನಾಟ್ ಪ್ಲೇಸ್‍ನಲ್ಲಿ ಪ್ರಾರಂಭಿಸಲಿದೆ. ಕೇಂದ್ರ ಸರ್ಕಾರದ ನ್ಯಾಷನಲ್ ಕ್ಲೀನ್ ಏರ್ ಪ್ರೋಗ್ರಾಂ ಜಾರಿಯಲ್ಲಿದ್ದು, 2024ಕ್ಕೆ ದೇಶದ 122 ಪ್ರಮುಖ ನಗರಗಳ ಮಾಲಿನ್ಯವನ್ನು ಶೇ 25ರಷ್ಟು ಕಡಿಮೆ ಮಾಡುವ ಕೆಲಸ ನಡೆದಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಸೆಮ್ಸ್ ಅಳವಡಿಕೆ ಕುರಿತು ಸ್ಪಷ್ಟ ಗುರಿ ಹೊಂದಿ, ಪ್ರಮಾಣೀಕರಣಕ್ಕೆ ಇಂತಿಷ್ಟು ಸಮಯ ಎಂದು ನಿಗದಿಪಡಿಸಿ, ನಿರ್ವಹಣೆಗೆ ಬೇಕಾದ ಮಾರ್ಗಸೂಚಿಗಳನ್ನು ಶೀಘ್ರವಾಗಿ ರೂಪಿಸಿದರೆ ಮಾತ್ರ ಏರುತ್ತಿರುವ ಮಾಲಿನ್ಯಕ್ಕೆ ಕಡಿವಾಣ ಹಾಕಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.