ADVERTISEMENT

ಸಂಗತ| ‘ಮೂಕ್‌’: ಮಹತ್ವಾಕಾಂಕ್ಷೆಯಷ್ಟೇ ಸಾಲದು

ಈ ಮಾದರಿಯ ಕಲಿಕೆಗೆ ದೇಶದಾದ್ಯಂತ ಅಗತ್ಯವಾದ ಮೂಲ ಸೌಕರ್ಯ ತೃಪ್ತಿಕರವಾಗಿ ಇದೆಯೇ ಎಂದು ಯೋಚಿಸಬೇಕಿದೆ

ಡಾ.ಶಿವಲಿಂಗಸ್ವಾಮಿ ಎಚ್.ಕೆ.
Published 5 ಸೆಪ್ಟೆಂಬರ್ 2022, 19:30 IST
Last Updated 5 ಸೆಪ್ಟೆಂಬರ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊರೊನೋತ್ತರ ಭಾರತದಲ್ಲಿ ಉನ್ನತ ಶಿಕ್ಷಣ ಕ್ಷೇತ್ರವು ಗಣನೀಯ ಬದಲಾವಣೆಗಳನ್ನು ಕಾಣುತ್ತಿದೆ. ಆನ್‌ಲೈನ್‌ ಸಂಸ್ಕೃತಿ ಕಾರಣದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ‘ಹೈಬ್ರಿಡ್ ಕಲಿಕೆ’ಯ ಯುಗ ಪ್ರಾರಂಭವಾಗಿರುವುದು ಗೋಚರಿಸುತ್ತದೆ. ಇದಕ್ಕೆ ಪೂರಕವಾಗಿ ಯುಜಿಸಿ ಕೂಡ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆಗಳನ್ನು ಜಾರಿಗೆ ತಂದಿದೆ. ಈ ದಿಸೆಯಲ್ಲಿ ಆಗಿರುವ ಮತ್ತೊಂದು ಬೆಳವಣಿಗೆಯೆಂದರೆ, ಮೂಕ್‌ (MOOC– Massive Open Online Courses) ಆನ್‌ಲೈನ್ ಕೋರ್ಸುಗಳು.

ಈ ಕೋರ್ಸುಗಳು ಆನ್‌ಲೈನಿನಲ್ಲಿ ಉಚಿತವಾಗಿ ಲಭ್ಯ ಇವೆ. ಜಗತ್ತಿನಾದ್ಯಂತ ವಿವಿಧ ಶಿಸ್ತುಗಳಲ್ಲಿ ಪ್ರಾವೀಣ್ಯ ಹೊಂದಿರುವ ನುರಿತ ಪ್ರಾಧ್ಯಾಪಕರ ಉಪನ್ಯಾಸಗಳನ್ನು ವಿದ್ಯಾರ್ಥಿಗಳು ಮನೆಯಿಂದಲೇ ಆಲಿಸಿ ನೂತನ ಕೌಶಲಗಳನ್ನು ಕಲಿಯಬಹುದು, ಆ ಮೂಲಕ ಸರ್ವಾಂಗೀಣ ಬೆಳವಣಿಗೆ ಹೊಂದಬಹುದು ಎಂಬುದು ಈ ಕೋರ್ಸ್‌ಗಳನ್ನು ರೂಪಿಸಿದ್ದರ ಹಿಂದಿರುವ ಸದಾಶಯವಾಗಿದೆ.

ಮೂಕ್‌ ಅನ್ನು ಪರಿಚಯಿಸಿ, ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಡಬೇಕು ಎಂದು ಆರಂಭದಲ್ಲಿ ಉದ್ದೇಶಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಪ್ರತಿಕ್ರಿಯೆ ನೀರಸವಾಗಿದ್ದರಿಂದ ಈಗ ಈ ಕೋರ್ಸ್‌ಗಳನ್ನು ಎಲ್ಲ ವಿಶ್ವವಿದ್ಯಾಲಯಗಳು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡು, ಶೇಕಡ 40ರವರೆಗೆ ಈ ಕೋರ್ಸುಗಳನ್ನು ಆಯ್ದುಕೊಳ್ಳುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಾಡಿಕೊಡಬೇಕು ಎಂದು ಆದೇಶಿಸಲಾಗಿದೆ. ಅಂದರೆ ಪ್ರತೀ ವಿಶ್ವವಿದ್ಯಾಲಯವು ತನ್ನ ಪರೀಕ್ಷಾ ಕ್ರಮದ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಮೂಕ್‌ ಕೋರ್ಸುಗಳ ಅಂಕಗಳನ್ನೂ ಪರಿಗಣಿಸಬೇಕು.

ADVERTISEMENT

ಪ್ರತಿಬಾರಿ ಶಿಕ್ಷಣ ನೀತಿಯನ್ನು ಪರಿಷ್ಕರಿಸಿದಾಗ, ಉನ್ನತ ಶಿಕ್ಷಣದ ಸುಧಾರಣೆಗಾಗಿ ಸಮಕಾಲೀನ ಮಾದರಿಗಳನ್ನು ಅಳವಡಿಸಿಕೊಂಡು, ಭಾರತೀಯ ವಿಶ್ವವಿದ್ಯಾಲಯಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆ ಇದ್ದೇ ಇರುತ್ತದೆ. ಇದು ಉತ್ತೇಜನಕಾರಿ ನಡೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಪರಿಷ್ಕೃತ ಶಿಕ್ಷಣ ನೀತಿಗಳು ಹೊಸತನವನ್ನು ಪರಿಚಯಿಸಿದಾಗಲೆಲ್ಲ ಅದರ ಅನುಷ್ಠಾನದ ರೂಪುರೇಷೆಗಳು ನಮ್ಮ ಮುಂದೆ ಸವಾಲುಗಳಾಗಿ ಕಾಣುತ್ತವೆ. ಮಹತ್ವಾಕಾಂಕ್ಷೆಯುಳ್ಳ ನಾಯಕರಲ್ಲಿ ಪ್ರಮುಖವಾಗಿ ಎದ್ದು ಕಾಣುವುದು ಆದರ್ಶವಾದ ಮತ್ತು ವಾಸ್ತವದ ನಡುವೆ ಇರುವ ಅಗಾಧವಾದ ಅಂತರ.

ಅಂತರಶಿಸ್ತೀಯ ಕಲಿಕೆಯ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಯ ಯಾವುದೇ ಕೋರ್ಸನ್ನು ಕಲಿಯಲು ಅವಕಾಶ ಕಲ್ಪಿಸುವ ಸಲುವಾಗಿ ಆನ್‌ಲೈನ್ ಕಲಿಕೆಯನ್ನು ಅಧಿಕೃತಗೊಳಿಸುವುದು ಮೇಲ್ನೋಟಕ್ಕೆ ಶ್ಲಾಘನೀಯ. ಆದರೆ ಈ ‘ಹೈಬ್ರಿಡ್ ಮಾದರಿ’ಯ ಸದುಪಯೋಗ ಪಡೆಯಬೇಕಿರುವುದು ವಿದ್ಯಾರ್ಥಿಗಳಾಗಿರುವುದರಿಂದ, ಭಾರತದಾದ್ಯಂತ ಈ ಮಾದರಿಯ ಕಲಿಕೆಗೆ ಅಗತ್ಯವಾದ ಮೂಲಸೌಕರ್ಯ ತೃಪ್ತಿಕರವಾಗಿ ಇದೆಯೇ ಎಂದು ಯೋಚಿಸಬೇಕಿದೆ.

ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಹೆಚ್ಚಾಗಿ ಕಲಾ ವಿಭಾಗವನ್ನು ಆರಿಸಿ ಕೊಳ್ಳುತ್ತಾರೆ. ಇದಕ್ಕೆ ಆಸಕ್ತಿ ಒಂದು ಕಾರಣವಾದರೆ, ಕಲಿಕಾ ಮಾಧ್ಯಮ ಅತ್ಯಂತ ಪ್ರಮುಖವಾದ ಇನ್ನೊಂದು ಕಾರಣ. ಉನ್ನತ ಶಿಕ್ಷಣದಲ್ಲಿ ದ್ವಿಭಾಷಾ ಕಲಿಕೆಗೆ ಆದ್ಯತೆ ಇದೆ ಎಂದು ಹೊರನೋಟಕ್ಕೆ ಅನ್ನಿಸುತ್ತದೆ. ಆದರೆ ಪರೀಕ್ಷೆಯಲ್ಲಿ ಕನ್ನಡದಲ್ಲಿ ಉತ್ತರಿಸುವ ಅವಕಾಶ ಇರುವುದರಿಂದ, ಇಂಗ್ಲಿಷ್ ಕಲಿಕೆಗೆ ಆದ್ಯತೆ ಕಡಿಮೆ ಇರುತ್ತದೆ. ಹೀಗಾಗಿ, ಮೂಕ್‌ ಕೋರ್ಸುಗಳು ಸುಲಭವಾಗಿ ಲಭ್ಯ ಎಂಬ ಕಾರಣದಿಂದ ಎಲ್ಲ ಮಕ್ಕಳ ಮೇಲೆ ಒಮ್ಮೆಲೇ ಹೇರಿದರೆ, ಇಂಗ್ಲಿಷಿನಲ್ಲಿ ಸಿಗುವ ಆನ್‌ಲೈನ್‌ ಉಪನ್ಯಾಸಗಳು ಎಷ್ಟರಮಟ್ಟಿಗೆ ಅವರಿಗೆ ಉಪಯುಕ್ತವಾಗುತ್ತವೆ ಎಂಬುದು ಪ್ರಮುಖ ಪ್ರಶ್ನೆ.

ಮೂಕ್‌ ಉಪನ್ಯಾಸಗಳನ್ನು ನೇರವಾಗಿ ಆಲಿಸಬಹುದು ಮತ್ತು ಹಾಗೆಯೇ ರೆಕಾರ್ಡ್ ಆಗಿರುವ ಉಪನ್ಯಾಸಗಳೂ ಲಭ್ಯ. ಅತ್ಯಂತ ಮಹತ್ವಾ
ಕಾಂಕ್ಷೆಯ ಈ ನೂತನ ಯೋಜನೆ ಕೇವಲ ಉಪನ್ಯಾಸಗಳ ಲಭ್ಯತೆ ಕುರಿತು ಮಾತನಾಡುತ್ತದೆ. ಆದರೆ ಹೆಚ್ಚಾಗಿ ಇಂಗ್ಲಿಷಿನಲ್ಲಿ ಮಾತ್ರ ಲಭ್ಯವಿರುವ ಉಪನ್ಯಾಸಗಳನ್ನು ಆಲಿಸಿ ಈ ಹೈಬ್ರಿಡ್ ಮಾದರಿಗೆ ಹೊಂದಿಕೊಳ್ಳಲು ಎಲ್ಲ ವಿದ್ಯಾರ್ಥಿಗಳೂ ಭಾಷಿಕವಾಗಿ ಮತ್ತು ತಾಂತ್ರಿಕವಾಗಿ ಸಜ್ಜಾಗಿದ್ದಾರೆಯೇ ಎಂದು ಯೋಚಿಸಬೇಕಿರುವುದು ಶಿಕ್ಷಣ ನೀತಿ ನಿರೂಪಕರ ಜವಾಬ್ದಾರಿ.

ಇಲ್ಲಿ ಎದುರಾಗುವ ಅತ್ಯಂತ ಪ್ರಮುಖ ಸಮಸ್ಯೆಯೆಂದರೆ, ಭಾಷಾ ಸಾಮರ್ಥ್ಯ. ಆನ್‌ಲೈನ್‌ ಉಪನ್ಯಾಸಗಳನ್ನು ಸದ್ಬಳಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ತಮ್ಮ ಭಾಷಾ ಸಾಮರ್ಥ್ಯ ಮತ್ತು ತಾಂತ್ರಿಕ ಕೌಶಲಗಳನ್ನು ಕರಗತ ಮಾಡಿಕೊಳ್ಳುವತ್ತ ತುರ್ತಾಗಿ ಗಮನಹರಿಸಬೇಕು. ಮೂಕ್‌ ಕೋರ್ಸುಗಳು ರಾಷ್ಟ್ರ ಮಟ್ಟದಲ್ಲಿ ಲಭ್ಯವಿರುವುದರಿಂದ, ಗ್ರಾಮೀಣ ವಿದ್ಯಾರ್ಥಿಗಳು ಹೊರ ರಾಜ್ಯಗಳ ವಿದ್ಯಾರ್ಥಿಗಳ ಪೈಪೋಟಿಯನ್ನು ಸಹ ಎದುರಿಸಲು ಸಜ್ಜಾಗಬೇಕು. ದೇಶದ ವಿವಿಧ ಮೂಲೆಗಳಿಂದ ಉತ್ಕೃಷ್ಟ ಮಟ್ಟದ ಉಪನ್ಯಾಸಗಳು ಆನ್‌ಲೈನ್ ವೇದಿಕೆಗಳನ್ನು ಪ್ರತಿದಿನ ಸೇರಿಕೊಳ್ಳುತ್ತವೆ. ಆದರೆ ಭಾರತೀಯರಲ್ಲಿ ಎಲ್ಲರ ಬಳಕೆಗಾಗಿ ಒಂದು ಭಾರತೀಯ ಭಾಷೆ ಇಲ್ಲದಿರುವುದರಿಂದ ಇಂಗ್ಲಿಷ್ ಬಳಕೆ ಅನಿವಾರ್ಯ.

ಉಪನ್ಯಾಸಕರಿಗೆ ಹೇಗೆ ಇಂಗ್ಲಿಷ್ ಅನಿವಾರ್ಯವೊ ಹಾಗೆಯೇ ಎಲ್ಲ ವಿದ್ಯಾರ್ಥಿಗಳಿಗೂ ವಾಸ್ತವ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಅನಿವಾರ್ಯವಾಗಿದೆ. ಹೀಗಾಗಿ ಅವರು ತಮ್ಮ ಇಂಗ್ಲಿಷ್ ಭಾಷಾ ಸಾಮರ್ಥ್ಯವನ್ನು ಉತ್ತಮಗೊಳಿಸಿ ಕೊಳ್ಳಲು ಮನಸ್ಸು ಮಾಡಲೇಬೇಕಾಗುತ್ತದೆ. ಆಗಷ್ಟೇ ಮಹತ್ವಾಕಾಂಕ್ಷೆಯ ಮೂಕ್‌ ಕೋರ್ಸುಗಳು
ಯಶಸ್ವಿಯಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.