ADVERTISEMENT

ವಿಶ್ಲೇಷಣೆ: ಮೋದಿಯವರ ನವಮೌಖಿಕತೆಯು ಬಹುನೆಲೆಯಲ್ಲಿ ನೆಲೆಗೊಂಡಿದೆ

ನರೇಂದ್ರ ಗೆಲುವಿನ ನವಮೌಖಿಕತೆ

​ಪ್ರಜಾವಾಣಿ ವಾರ್ತೆ
Published 24 ಮೇ 2019, 2:10 IST
Last Updated 24 ಮೇ 2019, 2:10 IST
.
.   

ಬಿಜೆಪಿ ಅಭೂತಪೂರ್ವ ಜಯ ಗಳಿಸಿ, ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ಹಿಡಿಯಲಿದ್ದಾರೆ. ದೇಶವ್ಯಾಪಿ ಮೋದಿ ಅಲೆಯ ಜನಪ್ರಿಯತೆಯ ಮೂಲ ಬೇರುಗಳನ್ನು ಹುಡುಕಿದರೆ, ನಿಸ್ಸಂಶಯವಾಗಿ ಅದು ಮೌಖಿಕತೆ. ಇದನ್ನು ಆಧುನಿಕ ಮೌಖಿಕತೆಯೆಂತಲೂ, ನವಮೌಖಿಕತೆಯೆಂತಲೂ ಕರೆಯಬಹುದು.

ಹೌದು, ಈ ಒಂದು ದಶಕದ ದೇಶದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಓದಿ ತಿಳಿವನ್ನು ಹೆಚ್ಚಿಸಿಕೊಳ್ಳುವ ಓದುವರ್ಗಕ್ಕಿಂತ, ದೃಶ್ಯವನ್ನು ನೋಡಿ ಕೇಳಿಸಿಕೊಳ್ಳುತ್ತ ಅರಿವನ್ನು ರೂಪಿಸಿಕೊಳ್ಳುವ ಕೇಳುವರ್ಗ ಹೆಚ್ಚಾಗಿದೆ. ಓದಿ ಆಲೋಚಿಸುವುದು ಶ್ರಮದಾಯಕವಾದರೆ, ಅವರವರ ಕೆಲಸಗಳ ಮಧ್ಯೆಯೇ ಕೇಳಿಸಿಕೊಳ್ಳುವುದು ಮತ್ತು ಅದನ್ನು ಹಂಚುವುದು ಆರಾಮದಾಯಕ. ಜನರು ಸಹಜವಾಗಿಯೇ ಆರಾಮದಾಯಕ ಆದುದನ್ನು ಆಯ್ಕೆ ಮಾಡುತ್ತಾರೆ. ಓದುವರ್ಗವು ತಾತ್ಕಾಲಿಕವಾಗಿ ಕೇಳುವರ್ಗವಾಗಿ ಬದಲಾದಷ್ಟು, ಕೇಳುವರ್ಗ ಓದುವರ್ಗವಾಗಿ ಬದಲಾಗುವುದಿಲ್ಲ. ಹೀಗಾಗಿ ಜನರ ಕಣ್ಣು, ಕಿವಿ, ಮಿದುಳಿನ ಸಂಪರ್ಕದ ಚಟುವಟಿಕೆಗಳು ಅದಲುಬದಲಾಗಿವೆ.

ಹೀಗೆ ಕೇಳುವರ್ಗ ಹೆಚ್ಚಾಗಲು ಬಹುಮುಖ್ಯ ಕಾರಣ ಟಿ.ವಿ. ಮತ್ತು ಮೊಬೈಲ್ ಅವಲಂಬಿತರ ಹೆಚ್ಚಳ. ಇವುಗಳನ್ನು ಜೋಡಿಸುವ ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಯ ವ್ಯಾಪಕತೆ. ಹೀಗೆ ದೃಶ್ಯವನ್ನು ನೋಡಿ ಕೇಳಿಸಿಕೊಳ್ಳುವ ಕೇಳುವರ್ಗ
ವನ್ನು ವ್ಯಾಪಕವಾಗಿ ಹೆಚ್ಚಿಸಿದ ಈ ಮೀಡಿಯಾಗಳು ದೇಶದ ಬಹುಸಂಖ್ಯಾತ ಜನರ ತಿಳಿವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ.

ADVERTISEMENT

ಇಂತಹ ಮೀಡಿಯಾಗಳನ್ನು ಬಳಸಿ ಮೋದಿ ಪರವಾದ ಪ್ರಚಾರವನ್ನು ಪುನರಾವರ್ತಿಸಲಾಯಿತು. ಹಾಗೆಯೇ ಬಹುಸಂಖ್ಯಾತ ಜನರ ನಂಬಿಕೆ, ಆಚರಣೆ, ಪಾರಂಪರಿಕತೆಯ ನದಿಯಲ್ಲಿ ಮೋದಿಯವರ ಪ್ರಚಾರವನ್ನೂ ಹರಿಬಿಡಲಾಯಿತು. ಹೀಗೆ ಮೋದಿ ಬೆಂಬಲಿತ ಜನರನ್ನು ಪ್ರೇರೇಪಿಸಿರುವುದು ಇದೇ ಮೀಡಿಯಾಗಳು. ಈ ಬೆಂಬಲಿಗರನ್ನು ಮಾತಿಗೆಳೆದರೆ ಮೋದಿಯವರ ಬಗೆಗೆ ಬಹುಪಾಲು ಮಂದಿಗೆ ಹೆಚ್ಚೇನೂ ಗೊತ್ತಿರುವುದಿಲ್ಲ. ಅವರ ಮಾತು ಎರಡು–ಮೂರು ವಾಕ್ಯಕ್ಕೆ ಸೀಮಿತವಾಗುತ್ತದೆ. ಇನ್ನು ಇವರ ಜತೆ ಚರ್ಚೆಯ ಮಾತು ದೂರ ಉಳಿಯಿತು. ಆರೋಗ್ಯಪೂರ್ಣ ಸಂವಾದಕ್ಕೆ ತೆರೆದುಕೊಳ್ಳಲಾಗದ ಜನಸಮೂಹ ವ್ಯಾಪಕವಾಗಿರುವುದು ಇದರಿಂದ ತಿಳಿಯುತ್ತದೆ. ಈ ವರ್ಗ ಬಲು ದೊಡ್ಡದು. ಇಂತಹ ಸಮೂಹವು ಯಾವುದೇ ನಾಯಕ ಅಥವಾ ನಾಯಕಿಯನ್ನು ಬೆಂಬಲಿಸಿದರೂ ದೇಶದ ಪ್ರಜಾಪ್ರಭುತ್ವದ ಬೇರು ಗಟ್ಟಿಗೊಳಿಸುವ ಕ್ರಿಯೆಗೆ ಅವರಿಂದ ಹೆಚ್ಚಿನ ಕೊಡುಗೆಯನ್ನೇನೂ ನಾವು ನಿರೀಕ್ಷಿಸುವಂತಿಲ್ಲ.

ಹತ್ತು ವರ್ಷ ದೇಶವನ್ನು ಮುನ್ನಡೆಸಿದ ಮನಮೋಹನ್ ಸಿಂಗ್ ಅವರು ಓದುವರ್ಗದವರಾದರೆ, ಸ್ವತಃ ಮೋದಿ ಅವರು ಕೇಳುವರ್ಗದವರು. ಹಾಗಾಗಿ ಅವರದು ತಡೆರಹಿತ ಮಾತುಗಾರಿಕೆ. ಈ ಕಾರಣಕ್ಕೆ ಮೋದಿಯವರ ಬಗೆಗೆ ಜನಪದರಲ್ಲಿ ‘ಮಾತಿನ ಮಲ್ಲ’ ಎಂಬ ನುಡಿಗಟ್ಟಿದೆ. ಅಂತರ್ಜಾಲದಲ್ಲಿ ಸಿಗುವ ಮೋದಿಯವರ ಶೇ 90ರಷ್ಟು ಫೋಟೊಗಳು ಭಾಷಣ ಮಾಡುತ್ತಿರುವ ಚಿತ್ರಗಳಾಗಿವೆ.

‘ಮನ್ ಕಿ ಬಾತ್’ ಅನ್ನೂ ಮೋದಿಯವರು ಇದಕ್ಕೆ ಪೂರಕವೆಂಬಂತೆ ಬಳಸಿಕೊಂಡರು. ಅಷ್ಟೇ ಯಾಕೆ, ರೇಡಿಯೊ ಕೇಳದ ಬಹುಸಂಖ್ಯಾತರಿಗೆ ಅದೇ ರೇಡಿಯೊ ಭಾಷಣಗಳು ದೃಶ್ಯ ಮಾಧ್ಯಮಗಳಲ್ಲಿಯೂ,ಆಡಿಯೊ ಕ್ಲಿಪಿಂಗ್‍ಗಳಾಗಿ ವಾಟ್ಸ್‌ಆ್ಯಪ್‌ಗಳಲ್ಲಿಯೂ
ಹರಿದಾಡಿದವು. ಹೀಗೆ ಏಕಮುಖಿ ಮಾತನ್ನೇ ಮಾಧ್ಯಮವನ್ನಾಗಿಸಿಕೊಂಡಿದ್ದೇ ಮೋದಿಯವರು ಬಹುಜನರಲ್ಲಿ ನೆಲೆಯೂರಲು ಕಾರಣವಾಯಿತು.

ಇದೀಗ ‘ಮೋದಿ ಜಾನಪದ’ ಕುರಿತು ಅಧ್ಯಯನ ಮಾಡಬಹುದಾಗಿದೆ. ಕಾರಣ, ಮೋದಿ ಬಗೆಗಿನ ಕಥೆಗಳು, ಗಾದೆಗಳು, ಕಾರ್ಟೂನ್‍ಗಳು, ವ್ಯಂಗ್ಯ, ಜೋಕು, ಗಾಸಿಪ್‍ಗಳು ಹೊಸ ತಾಂತ್ರಿಕ ಭಾಷೆಯ ಟ್ರೋಲ್ ಆಗಿ ದೇಶವ್ಯಾಪಿ ಸಾಮಾಜಿಕ ಜಾಲತಾಣ
ಗಳಲ್ಲಿ ಚಾಲ್ತಿಯಲ್ಲಿವೆ. ಇವುಗಳನ್ನೆಲ್ಲಾ ಒಟ್ಟುಹಾಕಿದರೆ, ಸ್ಪಷ್ಟವಾಗಿ ಮೋದಿ ಪರ ಮತ್ತು ವಿರೋಧದ ಎರಡು ಆಯಾಮಗಳಲ್ಲಿವೆ. ಆದರೆ ಜೋಕು, ವ್ಯಂಗ್ಯ, ಗಾದೆ, ಕಾರ್ಟೂನ್‍ಗಳಲ್ಲಿ ಮೋದಿ ವಿರೋಧಿ ರಚನೆಗಳೇ ಹೆಚ್ಚಾಗಿವೆ. ಬೆಂಬಲಿತ ರಚನೆಗಳಲ್ಲಿ ಮೋದಿ ಬಗೆಗಿನ ಅತಿಮಾನುಷ, ಅತಿರಂಜಿತ ಅವಾಸ್ತವಿಕ ಕತೆಗಳು, ಹಾಡು, ಚಿತ್ರಗಳು ಹುಟ್ಟಿವೆ.

ಮೌಖಿಕ ಪರಂಪರೆಯಲ್ಲಿ ಒಂದು ಹಾಡೋ ಕಥೆಯೋ ಹುಟ್ಟಿಕೊಂಡಾಗ, ಕೆಲವು ಅನಾಮಧೇಯವಾಗಿದ್ದರೆ ಮತ್ತೆ ಕೆಲವು ಜನಪದ ಕವಿರಚಿತವಾಗಿರುತ್ತವೆ. ಇಲ್ಲಿ ಮುಖ್ಯವಾದ ಗುಣವೆಂದರೆ, ಹೀಗೆ ರಚನೆಗೊಂಡ ಕತೆ, ಗೀತೆ, ನುಡಿಗಟ್ಟುಗಳ ವಿಷಯ ಅಥವಾ ಸಂಗತಿಗಳು ನಿಜವೇ ಎಂದು ಪರಿಶೀಲನೆಗೆ ಒಳಪಡದೆ ಜನರಿಂದ ಜನರಿಗೆ ಮೌಖಿಕವಾಗಿ ಹಂಚಿಕೆಯಾಗುತ್ತವೆ. ಇದನ್ನೇ ಜನ ಮರುಳೋ ಜಾತ್ರೆ ಮರುಳೋ ಎನ್ನುವುದು.

ಹೀಗಿರುವಾಗ ಟಿ.ವಿ. ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಮೋದಿ ಬಗೆಗಿನ ವಿಡಿಯೊಗಳು ಸತ್ಯಾಸತ್ಯತೆಯ ಪರಿಶೀಲನೆಗೆ ಒಳಗಾಗದೆ ಜನಸಾಮಾನ್ಯರಲ್ಲಿ ಬಾಯಿಯಿಂದ ಬಾಯಿಗೆ ಹಂಚಿಕೆಯಾಗಿವೆ ಮತ್ತು ಅವು ನಿಜವೆಂಬಂತೆ ಜನರಲ್ಲಿ ಬೇರುಬಿಟ್ಟಿವೆ. ಜನಸಾಮಾನ್ಯರಲ್ಲಿ ಸಹಜವಾಗಿರುವ ನಾಯಕಾರಾಧನೆ ಕೂಡ ಇದಕ್ಕೆ ಜೊತೆಯಾಗಿದೆ. ಹೀಗೆ ಬಹುನೆಲೆಯಲ್ಲಿ ಮೋದಿಯವರ ನವಮೌಖಿಕತೆ ಈ ದೇಶದಲ್ಲಿ ನೆಲೆಗೊಂಡಿದೆ. ಬಹುಶಃ ಈ ನವಮೌಖಿಕತೆಯೇ ಮೋದಿಯವರ ಭರ್ಜರಿ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.