ಬೆಂಗಳೂರಿನ ಚಾಮರಾಜಪೇಟೆಯ ಆಟದ ಮೈದಾನ ಮಾಲೀಕತ್ವದ ವಿಚಾರದಲ್ಲಿ ವಾದ-ವಿವಾದಗಳು ನಡೆದಿವೆ. ಈ ಸಲದ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜಾರೋಹಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅದೇ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಬಗ್ಗೆ ಪರ– ವಿರೋಧದ ಮಾತುಗಳು ಕೇಳಿಬರುತ್ತಿವೆ.
ದೇಶದ ವಿವಿಧೆಡೆ ಕೆಲವು ಮೈದಾನಗಳು ಮಾಲೀ ಕತ್ವದ ವಿಚಾರದಲ್ಲಿ ಕಲಹಕ್ಕೆ, ರಾಜಕೀಯ ಸಮರಕ್ಕೆ ಎಡೆ ಮಾಡಿಕೊಡುತ್ತಿವೆ. ಎಷ್ಟೋ ವರ್ಷಗಳಿಂದ ಈ ಸಂಗತಿಗಳು ಜ್ವಲಂತವಾಗಿಯೇ ಇವೆ. ಸುಲಭವಾಗಿ ಬಗೆಹರಿಯದ ಇಂತಹ ಸಂಗತಿಗಳನ್ನು ಇಟ್ಟುಕೊಂಡು ಮತಬ್ಯಾಂಕ್ ರಾಜಕಾರಣ, ಜಾತಿ ರಾಜಕಾರಣಕ್ಕೆ ಅವಕಾಶ ನೀಡಬಾರದು. ವಿವಾದಾಸ್ಪದವಾಗಿರುವ ಮೈದಾನದಂತಹ ಸ್ವತ್ತುಗಳನ್ನು ಸರ್ಕಾರ ವಶಕ್ಕೆ ಪಡೆದು, ಸರ್ವಜನರಿಗೂ ಜಾತಿ ಮತಭೇದವೆಣಿಸದೆ ಮುಕ್ತವಾಗಿ ಬಳಸಲು ಅವಕಾಶ ನೀಡಬೇಕು. ಹಬ್ಬ
ಹರಿದಿನಗಳ ಆಚರಣೆಗೆ ಆ ಜಾಗಗಳನ್ನು ಯಾರಾದರೂ ಬಳಸಬಹುದಾದ ರೀತಿಯಲ್ಲಿ ನೀತಿಯನ್ನು ಜಾರಿ ಗೊಳಿಸಬೇಕು. ತೀರಾ ಜಟಿಲವಾಗಿರುವ ಪ್ರಸಂಗಗಳಲ್ಲಿ ವಾಹನಗಳ ನಿಲುಗಡೆಗೆ ಮೀಸಲಿಡಬಹುದು.
ಇಂತಹ ವಿಷಯಗಳಲ್ಲಿ ದೃಢ ನಿಲುವು ತಾಳದೇ ಇದ್ದರೆ ರಾಜಕೀಯ ಪಕ್ಷಗಳಿಗೆ, ರಾಜಕೀಯ ಧುರೀಣರಿಗೆ ಒಂದಿಲ್ಲೊಂದು ಸಂದರ್ಭದಲ್ಲಿ, ಒಂದಿಲ್ಲೊಂದು ಸ್ಥಳದಲ್ಲಿ ಈ ತೆರನಾದ ಸಂಘರ್ಷವನ್ನು ಹುಟ್ಟುಹಾಕಲು ನಿರಂತರವಾಗಿ ಅವಕಾಶ ಸಿಗುತ್ತದೆ. ಇದರಲ್ಲಿ ರಾಜಕೀಯ ಪಕ್ಷಗಳು ಕಳೆದುಕೊಳ್ಳುವಂಥದ್ದು ಏನೂ ಇರುವುದಿಲ್ಲ. ಇಂಥ ಸಂಗತಿಗಳ ಹಿನ್ನೆಲೆಯಲ್ಲಿ ಉದ್ಭವಿಸಬಹುದಾದ ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ಅನಗತ್ಯವಾದ ಖರ್ಚುವೆಚ್ಚಗಳು ಪರೋಕ್ಷವಾಗಿ ಜನಸಾಮಾನ್ಯರ ತೆರಿಗೆಗೆ ಸೇರಿಸಲ್ಪಡುತ್ತವೆ. ಸಾರ್ವಜನಿಕರ ಸ್ವತ್ತುಗಳು ಯಾರದ್ದೋ ಕೋಪ ತಣಿಸಲು, ಯಾವುದೋ ಸಮುದಾಯವನ್ನು ತುಷ್ಟಿಗೊಳಿಸಲು ನಷ್ಟಕ್ಕೀಡಾಗು
ತ್ತವೆ. ಗಲಭೆಗಳು ಉಂಟಾದಾಗ ಕರ್ಫ್ಯೂ, ನಿಷೇಧಾಜ್ಞೆ, ವ್ಯಾಪಾರ ವಹಿವಾಟುಗಳ ಮೇಲೆ ನಿರ್ಬಂಧ ಹೀಗೆ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ.
ಶಿವಮೊಗ್ಗದಲ್ಲಿ ಇತ್ತೀಚೆಗೆ ಫ್ಲೆಕ್ಸ್ ವಿಚಾರದಲ್ಲಿ ಉಂಟಾದ ಗಲಭೆಯ ಕಾರಣ ಸಂಜೆ 5 ಗಂಟೆಗೆ ಪ್ರಮುಖ ಮಾರುಕಟ್ಟೆಗಳನ್ನು ಪೊಲೀಸರು ಮುಚ್ಚಿಸಿ ದ್ದರು. ತಳ್ಳುಗಾಡಿಯ ತಿನಿಸು ವ್ಯಾಪಾರಿಯೊಬ್ಬರು ‘ನಮಗೆ ಹೆಚ್ಚು ವ್ಯಾಪಾರವಾಗುವುದೇ ಸಂಜೆ. ರಾತ್ರಿ ಹತ್ತು ಗಂಟೆಯ ತನಕ ದುಡಿದರೆ ಮರುದಿನ ಹೊಟ್ಟೆ ತುಂಬುತ್ತದೆ. ಸಂಜೆಯ ವ್ಯಾಪಾರಕ್ಕೆಂದು ಬೆಳಿಗ್ಗೆಯೇ ಆಹಾರ ಸಾಮಗ್ರಿ ಸಿದ್ಧಪಡಿಸಿಕೊಂಡಿರುತ್ತೇವೆ. ಹೀಗೆ ಏಕಾಏಕಿ ವಹಿವಾಟು ನಿಲ್ಲಿಸಿದರೆ ನಮಗಾಗುವ ನಷ್ಟ ತುಂಬಿಕೊಡುವ ಮಾತು ಇರಲಿ, ನಾಳೆಯ ಖರ್ಚು ವೆಚ್ಚಗಳಿಗೆ ಯಾರನ್ನು ಕೇಳಬೇಕು’ ಎಂದು ಗೋಳಾಡು ತ್ತಿದ್ದರು. ಇದೊಂದು ನಿದರ್ಶನವಷ್ಟೆ. ಪ್ರತಿಬಾರಿ ಗಲಭೆ ಉಂಟಾದಾಗಲೂ ಹೀಗೆ ನರಳುವವರು ಇದ್ದೇ ಇರುತ್ತಾರೆ. ಸಮಾಜದಲ್ಲಿ ಕ್ಷೋಭೆ ಹುಟ್ಟುಹಾಕುವವರಾಗಲೀ, ಅಸಹನೆಯ ಕಟ್ಟೆಯೊಡೆಯಲು ಕುಮ್ಮಕ್ಕು ತುಂಬುವವರಾಗಲೀ ಇಂತಹ ಪ್ರಕರಣಗಳಿಂದ ಯಾವುದೇ ರೀತಿಯ ಕಷ್ಟನಷ್ಟಕ್ಕೆ ಒಳಗಾಗುವುದಿಲ್ಲ.
ನಮ್ಮ ದೇಶ ‘ಜಾತ್ಯತೀತ’ ಎಂದು ಹೇಳುತ್ತಲೇ, ಜಾತಿ ಸಂಘರ್ಷವನ್ನು, ಜಾತಿ ಸಂಕೋಲೆಯನ್ನು ವ್ಯವಸ್ಥಿತವಾಗಿ ಪೋಷಿಸಿಕೊಂಡು ಬರಲಾಗುತ್ತಿದೆ. ಯಾವುದೋ ಕಾಲದಲ್ಲಿ, ಯಾವುದೋ ಕಾರಣಕ್ಕಾಗಿ ಯಾವುದೋ ಒಂದು ಜಾತಿಗೆ ಅಥವಾ ಸಮುದಾಯಕ್ಕೆ ಸಿಕ್ಕಿರಬಹುದಾದ ಜಾಗಗಳನ್ನು ಸರ್ವ ಸಮುದಾಯಕ್ಕೂ ಸೇರಿದ ಸ್ವತ್ತು ಎಂದು ಪರಿಗಣಿಸಿದಲ್ಲಿ ಕಾಲಕ್ರಮೇಣ, ಅಷ್ಟರಮಟ್ಟಿಗಾದರೂ ವಾದವಿವಾದಗಳ ಸಂಖ್ಯೆ
ಕಡಿಮೆಯಾಗುತ್ತದೆ, ಸಾಮಾಜಿಕ ಸ್ವಾಸ್ಥ್ಯ ಆ ಪ್ರಮಾಣದಲ್ಲಿಯಾದರೂ ಸದೃಢವಾಗಿರುತ್ತದೆ.
ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ ಬಹಳಷ್ಟು ನೇತಾರರು ಪ್ರಚೋದನೆ ನೀಡಿ, ಪ್ರಚಾರ ಪಡೆದು, ನೇಪಥ್ಯಕ್ಕೆ ಸರಿದುಬಿಡುತ್ತಾರೆ. ಅಮಾಯಕರು ಅಂಥ ಮಾತುಗಳಿಗೆ ಮರುಳಾಗಿ, ಗಲಭೆ ಉಂಟು ಮಾಡುತ್ತಾರೆ. ಹುಬ್ಬಳ್ಳಿಯ ಈದ್ಗಾ ಮೈದಾನದ ಹೆಸರಿನಲ್ಲಿ ವರ್ಷಾನುಗಟ್ಟಲೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಅನೇಕ ಸಂಘರ್ಷಮಯ ಸನ್ನಿವೇಶಗಳು ಎದುರಾದವು. ಈದ್ಗಾ ಮೈದಾನದ ಹೆಸರಿನಲ್ಲಿ ಮುನ್ನೆಲೆಗೆ ಬಂದು ಇಂದು ರಾಜಕೀಯ ಜೀವನದಲ್ಲಿ ಸುಭದ್ರವಾಗಿ ನೆಲೆಯೂರಿದವರೂ ಇದ್ದಾರೆ. ಆದರೆ ಈ ಎಲ್ಲವುಗಳ ಮಧ್ಯೆ ನರಳಿದವರು ಮತ್ತದೇ ಜನಸಾಮಾನ್ಯರು! ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇಂತಹ ಕ್ಷುಲ್ಲಕ ಸಂಗತಿಗಳಿಗೆ ಪ್ರಾಣ ತೆತ್ತವರೆಷ್ಟೋ, ಆಸ್ತಿಪಾಸ್ತಿ ಕಳೆದುಕೊಂಡವರೆಷ್ಟೋ, ಬದುಕುವ ಭರವಸೆಯನ್ನೇ ಬಿಟ್ಟವರೆಷ್ಟೋ?!
ಸಮಷ್ಟಿಪ್ರಜ್ಞೆಯಿಂದ ಯೋಚಿಸುವ, ಸಮಚಿತ್ತವನ್ನೇ ಕಳೆದುಕೊಂಡಿರುವ ರಾಜಕೀಯ ವ್ಯವಸ್ಥೆಯ ಇಂತಹ ವ್ಯಸನಕ್ಕೆ, ಕಿಂಚಿತ್ತೂ ಸಾಮಾಜಿಕ ಕಳಕಳಿ ಇಲ್ಲದವರಿಗೆ ಯಾವುದೋ ಒಂದು ಜಾಗದ ಕುರಿತು ವಿವಾದವನ್ನೆಬ್ಬಿಸುವ, ಅದರಲ್ಲಿ ತಮ್ಮ ಬೆಳವಣಿಗೆ
ಯನ್ನು ಕಾಣಬಯಸುವ ವಿಕ್ಷಿಪ್ತ ಮನಃಸ್ಥಿತಿಗೆ ಕಡಿವಾಣ ಹಾಕುವುದು ಜನಸಾಮಾನ್ಯರ ನೆಮ್ಮದಿ, ನಿರಾತಂಕದ ಜೀವನಕ್ಕೆ ಸಹಕಾರಿ.
ದೇಶದ ಸಮಗ್ರತೆ, ಏಕತೆ, ಸಂಘಟಿತ ಅಭಿವೃದ್ಧಿಯ ದೃಷ್ಟಿಯಲ್ಲಿ ಇಂತಹ ನಿರ್ಧಾರಗಳು ಎಲ್ಲ ಜಾತಿ-ಜನಾಂಗ-ಮತ-ಪಂಥ-ಧರ್ಮದವರಿಗೂ ಅನುಕೂಲಕರವೇ ಆಗುತ್ತವಾದ್ದರಿಂದ ಈ ದಿಸೆಯಲ್ಲಿ ದೃಢವಾದ ನಿಲುವು ಇಂದಿನ ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.