ADVERTISEMENT

ಸಂಗತ | ವೃತ್ತಿ ಕೌಶಲ: ಬೇಕು ಸಮನ್ವಯ

ವಿದ್ಯಾರ್ಥಿಗಳು ಇಂಟರ್ನ್‌ಶಿಪ್‌ ಮತ್ತು ಪ್ರಾಜೆಕ್ಟ್‌ಗಳನ್ನು ಕೈಗೊಳ್ಳುವುದಕ್ಕೆ ಹೆಚ್ಚು ಅವಕಾಶ ಕಲ್ಪಿಸಲು ಉದ್ಯಮ ವಲಯ ಮುತುವರ್ಜಿ ತೋರಬೇಕಿದೆ

ಎಚ್.ಕೆ.ಶರತ್
Published 31 ಜುಲೈ 2024, 23:49 IST
Last Updated 31 ಜುಲೈ 2024, 23:49 IST
   

‘ವಿಶ್ವವಿದ್ಯಾಲಯಗಳಿಂದ ಪದವಿ ಪಡೆದು ಉದ್ಯೋಗ ಮಾರುಕಟ್ಟೆ ಪ್ರವೇಶಿಸುವ ಯುವಸಮುದಾಯದಲ್ಲಿ
ಕೆಲಸ ನಿರ್ವಹಿಸಲು ಅಗತ್ಯವಿರುವ ಕೌಶಲಗಳೇ ಇರುವುದಿಲ್ಲ’ ಎನ್ನುವ ಅಸಮಾಧಾನವು ಉದ್ಯಮ ವಲಯದಿಂದ ಹೊರಹೊಮ್ಮುವುದು ಸರ್ವೇಸಾಮಾನ್ಯ. ವೃತ್ತಿಪರ ಶಿಕ್ಷಣವೆಂದೇ ಕರೆಯಲಾಗುವ ಎಂಜಿನಿಯರಿಂಗ್ ಪೂರೈಸಿದ ಹೆಚ್ಚಿನ ಉದ್ಯೋಗ ಆಕಾಂಕ್ಷಿಗಳಲ್ಲಿ ಕೆಲಸ ನಿರ್ವಹಿಸಲು ಬೇಕಿರುವ ಪ್ರಾಯೋಗಿಕ ಜ್ಞಾನವೇ ಇರುವುದಿಲ್ಲ. ಕಾಲೇಜುಗಳಲ್ಲಿ ಕೆಲಸಕ್ಕೆ ಬಾರದ ಸಂಗತಿಗಳನ್ನು ಹೆಚ್ಚಾಗಿ ಕಲಿಸಲಾಗುತ್ತಿದೆ. ಪದವಿಯಲ್ಲಿ ಓದುವುದಕ್ಕೂ ವೃತ್ತಿ ನಿರ್ವಹಿಸಲು ಬೇಕಿರುವ ಜ್ಞಾನಕ್ಕೂ ಸಂಬಂಧವೇ ಇಲ್ಲವೆನ್ನುವ ಆಕ್ಷೇಪವನ್ನು ಉದ್ಯೋಗದಾತರೊಂದಿಗೆ ಸ್ವತಃ ಉದ್ಯೋಗ ಆಕಾಂಕ್ಷಿಗಳೂ ವ್ಯಕ್ತಪಡಿಸುತ್ತಾರೆ.

‘ವೃತ್ತಿಗೆ ಅಗತ್ಯವಿರುವುದನ್ನು ಕಲಿಸದ ಶಿಕ್ಷಣವನ್ನು ವೃತ್ತಿಪರವೆಂದು ಕರೆಯಬಹುದೇ’ ಎಂಬ ಪ್ರಶ್ನೆ ಗಮನಾರ್ಹವಾದುದು. ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ಪೂರಕವಾದ ಕೌಶಲಗಳನ್ನು ಪದವಿ ಓದಿನ ವೇಳೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೈಗೂಡುವಂತೆ ಮಾಡಬೇಕೆನ್ನುವ ಆಶಯ ಈಡೇರಬೇಕಿದ್ದರೆ, ವಿಶ್ವವಿದ್ಯಾಲಯಗಳೊಂದಿಗೆ ಉದ್ದಿಮೆ ಸಂಸ್ಥೆಗಳೂ ಕೈಜೋಡಿಸಬೇಕಾದ ಜರೂರತ್ತಿದೆ. ಶೈಕ್ಷಣಿಕ ವಲಯ ಮತ್ತು ಉದ್ಯಮ ವಲಯ ಎರಡರ ನಡುವೆಯೂ ಸಮನ್ವಯ ಏರ್ಪಡದಿದ್ದರೆ, ಈ ಸಮಸ್ಯೆಯ ಪರಿಹಾರಕ್ಕೆ ಕಂಡುಕೊಳ್ಳುವ ಮಾರ್ಗೋಪಾಯಗಳು ಪರಿಣಾಮಕಾರಿ ಆಗಲಾರವು.

ಪ್ರಾಯೋಗಿಕ ಕಲಿಕೆಗೆ ಉತ್ತೇಜನ ನೀಡುವ ಆಶಯದೊಂದಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) 2020- 21ನೇ ಶೈಕ್ಷಣಿಕ ಸಾಲಿನಿಂದ ಪಠ್ಯಕ್ರಮದಲ್ಲಿ ಇಂಟರ್ನ್‌ಶಿಪ್‌ಗೆ ಹೆಚ್ಚಿನ ಅವಕಾಶ ಕಲ್ಪಿಸುತ್ತಾ ಬಂದಿದೆ. ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ದೊರೆಯುವ ರಜಾ ಅವಧಿಯಲ್ಲಿ ನಿಗದಿತ ಅವಧಿಯ ಇಂಟರ್ನ್‌ಶಿಪ್‌ ಪೂರೈಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗುತ್ತಿದೆ. ವಿದ್ಯಾರ್ಥಿಗಳು ಇಂಟರ್ನ್‌ಶಿಪ್‌ ಮಾಡುವ ನೆಪದಲ್ಲಾದರೂ ಉದ್ಯಮ ಸಂಸ್ಥೆಗಳಲ್ಲಿನ ಕೆಲಸದ ವಾತಾವರಣ ಹೇಗಿರಲಿದೆ ಎಂಬ ಕುರಿತು ಪ್ರಾಥಮಿಕ ತಿಳಿವಳಿಕೆ ಹೊಂದಲಿ, ಜೊತೆಗೆ ಒಂದಿಷ್ಟು ಪ್ರಾಯೋಗಿಕ ಜ್ಞಾನ ಸಂಪಾದಿಸಲಿ ಎಂಬುದು ಇದರ ಆಶಯ. ಆದರೆ, ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಮಾಡಲು ಎಷ್ಟು ಕಂಪನಿಗಳು ಅವಕಾಶ ಕಲ್ಪಿಸುತ್ತಿವೆ ಎನ್ನುವುದು ಇಲ್ಲಿ ಪರಿಗಣನೆಗೆ ಬರಬೇಕಿದೆ.

ADVERTISEMENT

ಅತ್ಯಲ್ಪ ಪ್ರಮಾಣದ ವಿದ್ಯಾರ್ಥಿಗಳಿಗೆ ಮಾತ್ರ ನೇರವಾಗಿ ಉದ್ಯಮ ಸಂಸ್ಥೆಗಳಲ್ಲೇ ಇಂಟರ್ನ್‌ಶಿಪ್‌ ಮಾಡುವ ಅವಕಾಶ ದೊರೆಯುತ್ತಿದೆ. ಉಳಿದ ವಿದ್ಯಾರ್ಥಿಗಳ ಇಂಟರ್ನ್‌ಶಿಪ್‌ ಬೇಡಿಕೆ ಪೂರೈಸಲೆಂದೇ ಬಹಳಷ್ಟು ಖಾಸಗಿ ತರಬೇತಿ ಕೇಂದ್ರಗಳು ತಲೆ ಎತ್ತುತ್ತಿವೆ. ಇವು ಕಾಲೇಜುಗಳೊಂದಿಗೆ ಒಪ್ಪಂದ ಮಾಡಿಕೊಂಡು ನಿಗದಿತ ಅವಧಿಯ ಇಂಟರ್ನ್‌ಶಿಪ್‌ ಕೋರ್ಸ್‌ಗಳನ್ನು ಆಯಾ ಕಾಲೇಜು ಕ್ಯಾಂಪಸ್‌ನಲ್ಲೇ ನಡೆಸಿ ಪ್ರಮಾಣಪತ್ರ ನೀಡುತ್ತಿವೆ. ಇದಕ್ಕಾಗಿ ವಿದ್ಯಾರ್ಥಿಗಳಿಂದ ಶುಲ್ಕವನ್ನೂ ಪಡೆಯಲಾಗುತ್ತಿದೆ. ಇದರಿಂದಾಗಿ ಇಂಟರ್ನ್‌ಶಿಪ್‌ನ ಮೂಲ ಆಶಯವೇ ಹಿನ್ನೆಲೆಗೆ ಸರಿದಂತಾಗಿದೆ.

2021–22ನೇ ಶೈಕ್ಷಣಿಕ ಸಾಲಿನಲ್ಲಿ ಎಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆದಿರುವ ವರಿಗೆ ಅಂತಿಮ ಸೆಮಿಸ್ಟರ್‌ನಲ್ಲಿ ಇಂಟರ್ನ್‌ಶಿಪ್‌ ಹೊರತುಪಡಿಸಿ ಬೇರೆ ಯಾವ ವಿಷಯವನ್ನೂ ಪಠ್ಯಕ್ರಮದಲ್ಲಿ ಸೇರಿಸಲಾಗಿಲ್ಲ. ಹೀಗಾಗಿ, ಅವಕಾಶ ದೊರೆತರೆ ಕಂಪನಿಯಲ್ಲಿ ಅಂತಿಮ ಸೆಮಿಸ್ಟರ್‌ ಅವಧಿಪೂರ್ತಿ ಕೆಲಸ ನಿರ್ವಹಿಸಿ ಪ್ರಾಯೋಗಿಕ ಜ್ಞಾನ ಸಂಪಾದಿಸಲು ಸಾಧ್ಯವಿದೆ. ಉದ್ಯಮ ವಲಯ ಲಾಭ-ನಷ್ಟದ ಲೆಕ್ಕಾಚಾರ ಬದಿಗಿರಿಸಿ, ಪ್ರಾಯೋಗಿಕ ಕಲಿಕೆಯನ್ನು ಪಠ್ಯಕ್ರಮದ ಭಾಗವಾಗಿಸುವ ಶೈಕ್ಷಣಿಕ ವಲಯದ ಆಶಯದ ಸಾಕಾರಕ್ಕೆ ಕೈಜೋಡಿಸುವ ಅಗತ್ಯ ಇದೆ.

ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಮತ್ತು ಪ್ರಾಜೆಕ್ಟ್‌ ಗಳನ್ನು ಕೈಗೊಳ್ಳಲು ಹೆಚ್ಚೆಚ್ಚು ಅವಕಾಶ ಕಲ್ಪಿಸಲು ಉದ್ಯಮ ವಲಯ ಮುತುವರ್ಜಿ ತೋರಬೇಕಿದೆ. ಹೀಗೆ ಮಾಡದೆ, ಕೆಲಸಕ್ಕೆ ಬೇಕಿರುವ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿಲ್ಲ ಎಂದು ದೂರುತ್ತಾ ಕೂರುವುದರಿಂದ ಹೆಚ್ಚಿನ ಸುಧಾರಣೆ ಆಗಲಾರದು. ಈ ದಿಸೆಯಲ್ಲಿ ಭಾರತೀಯ ಮಷೀನ್ ಟೂಲ್ ಉತ್ಪಾದಕರ ಸಂಸ್ಥೆ (ಐಎಂಟಿಎಂಎ) ಕೆಲ ಹೆಜ್ಜೆಗಳನ್ನು ಈಗಾಗಲೇ ಇಟ್ಟಿರುವುದು ಇಲ್ಲಿ ಉಲ್ಲೇಖಾರ್ಹ. ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಪ್ರತಿವರ್ಷ ತಾನು ನಡೆಸುವ, ಉತ್ಪಾದನಾ ಕ್ಷೇತ್ರಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಟ್ಟದ ಪ್ರದರ್ಶನದಲ್ಲಿ ಆಯ್ದ ಕೆಲ ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳಲು ಸಂಸ್ಥೆಯು ಅವಕಾಶ ಕಲ್ಪಿಸುತ್ತಾ ಬಂದಿದೆ. ಇದಕ್ಕಾಗಿ ‘ಅಕಡೆಮಿಕ್ ಪೆವಿಲಿಯನ್’ ಎಂಬ ಉಪಕ್ರಮವನ್ನು ರೂಪಿಸಿರುವ ಸಂಸ್ಥೆ, ಅಲ್ಲಿ ಶಿಕ್ಷಣ ಸಂಸ್ಥೆಗಳು ಸಂಶೋಧನಾ ಚಟುವಟಿಕೆಗಳನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತಿದೆ.

ಉದ್ಯಮ ವಲಯದಲ್ಲಿನ ಪ್ರಾಯೋಗಿಕ ಸಮಸ್ಯೆ ಗಳೇನು ಮತ್ತು ಶೈಕ್ಷಣಿಕ ಸಂಶೋಧನೆಯ ಫಲಿತಾಂಶ ಪ್ರಾಯೋಗಿಕವಾಗಿಯೂ ಪ್ರಸ್ತುತವಾಗಬೇಕಿದ್ದರೆ ಏನು ಮಾಡಬೇಕು ಎಂಬ ಕುರಿತು ಅರಿವು ಮೂಡಿಸುವಲ್ಲಿ ಇದು ಗಮನಾರ್ಹ ಪಾತ್ರ ನಿರ್ವಹಿಸುತ್ತಿದೆ. ಉದ್ಯಮದ ನಿರೀಕ್ಷೆಗೆ ಪೂರಕವಾದುದನ್ನು ವೃತ್ತಿಪರ ಶಿಕ್ಷಣದ ಭಾಗವಾಗಿ ಕಲಿಸಬೇಕೆನ್ನುವ ಆಶಯ ಈಡೇರಬೇಕಿದ್ದರೆ, ಶೈಕ್ಷಣಿಕ ವಲಯವನ್ನು ಒಳಗೊಳ್ಳುವ ಉಪಕ್ರಮಗಳ ಜಾರಿಗೆ ಮುಂದಾಗುವ ಹೊಣೆಗಾರಿಕೆ ತಮ್ಮ ಮೇಲೂ ಇದೆ ಎಂಬುದನ್ನು ಉದ್ಯಮ ವಲಯ ಮನಗಾಣಬೇಕಿದೆ. ವಿದ್ಯಾರ್ಥಿಗಳನ್ನು ಒಳಗೆ ಬಿಟ್ಟುಕೊಳ್ಳುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಧೋರಣೆಯನ್ನು ಬದಲಿಸಿಕೊಳ್ಳದೆ, ದೂರುತ್ತಾ ಕಾಲ ತಳ್ಳುವುದರಿಂದ ಬದಲಾವಣೆ ತರಲಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.