ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಕೊಡಲು, ಕಾಲೇಜು ಪ್ರಾಚಾರ್ಯರಾಗಿರುವ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ‘ನಿಮ್ಮ ಕಾಲೇಜು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಜಯ ಗಳಿಸಿದ ಫೋಟೊ ಇಂದಿನ ಪತ್ರಿಕೆಗಳಲ್ಲಿ ಚೆನ್ನಾಗಿ ಬಂದಿದೆ. ವಿದ್ಯಾರ್ಥಿಗಳೊಂದಿಗೆ ನಿಮ್ಮ ಫೋಟೊ ಕೂಡ ಇದೆ, ಅಭಿನಂದನೆ’ ಎಂದೆ. ಅವರು ತಮ್ಮ ಪುತ್ರನನ್ನು ಕರೆದು, ನೆರೆಮನೆಗೆ ಹೋಗಿ ಪತ್ರಿಕೆ ತೆಗೆದುಕೊಂಡು ಬರಲು ಹೇಳಿದರು. ಆ ಹುಡುಗ ಹೋಗಿ ವಾಪಸ್ ಬಂದು ‘ಡ್ಯಾಡಿ ಅವರು ಪತ್ರಿಕೆ ಓದುತ್ತಿದ್ದಾರೆ, ನಂತರ ಬರಲು ಹೇಳಿದರು’ ಎಂದ. ಪ್ರಾಚಾರ್ಯರ ಮುಖ ಸಣ್ಣದಾಯಿತು.
‘ಮನೆಗೆ ಪತ್ರಿಕೆ ತರಿಸುವುದಿಲ್ಲವೇ?’ ಎಂದೆ. ಕಾಲೇಜಿಗೆ ಎಲ್ಲ ಪತ್ರಿಕೆಗಳೂ ಬರುತ್ತವೆ. ಅಲ್ಲೇ ಓದುತ್ತೇನೆ, ನ್ಯೂಸ್ ಎಲ್ಲಾ ಟಿ.ವಿ.ಯಲ್ಲಿ ಬರುತ್ತದೆ...?’ ಎಂದರು. ಲೇಖಕರೂ ಆಗಿರುವ ಪ್ರಾಚಾರ್ಯರು ಮನೆಗೆ ಒಂದು ದಿನಪತ್ರಿಕೆ ತರಿಸುವುದಿಲ್ಲ, ತಮಗೆ ಬೇಕೆನಿಸಿದರೆ ಪಕ್ಕದ ಮನೆಯಿಂದ ತಂದು ಓದುತ್ತಾರೆ ಎಂಬುದನ್ನು ತಿಳಿದು ಬೇಸರವಾಯಿತು.
ಕಚೇರಿಗಳಲ್ಲಿ, ವಾಚನಾಲಯಗಳಲ್ಲಿ ಪತ್ರಿಕೆ ಓದುತ್ತೇವೆ, ಸುದ್ದಿಗಳು ಟಿ.ವಿ.ಯಲ್ಲಿ ಬರುತ್ತವೆ, ಮೊಬೈಲ್ ಫೋನ್‌ನಲ್ಲಿಯೂ ಪತ್ರಿಕೆಯನ್ನು ನೋಡಬಹುದು. ಹೀಗಾಗಿ, ಮನೆಗೆ ಪತ್ರಿಕೆ ತರಿಸಿಕೊಳ್ಳುವ ಅವಶ್ಯವಿಲ್ಲ ಎನ್ನುವ ಮನೋಭಾವ ಅನೇಕರಲ್ಲಿ ಕಂಡುಬರುತ್ತದೆ. ಅದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗತೊಡಗಿದೆ. ದಿನಪತ್ರಿಕೆಗಾಗಿ ಪ್ರತಿ ತಿಂಗಳು ಹಣ ಖರ್ಚು ಮಾಡುವುದು ವ್ಯರ್ಥ ಎನ್ನುವುದು ಇವರ ಭಾವನೆ ಆಗಿರಬಹುದು. ಆದರೆ ಮನೆಗೆ ಪತ್ರಿಕೆ ತರಿಸುವುದರಿಂದ ಆಗುವ ಉಪಯೋಗಗಳ ಬಗ್ಗೆ ಇವರು ಯೋಚಿಸಿದಂತೆ ಕಾಣುವುದಿಲ್ಲ.
ಪತ್ರಿಕೆ ಮನೆಯಲ್ಲಿ ಇದ್ದರೆ ಮಹಿಳೆಯರು ತಮಗೆ ಬಿಡುವು ದೊರೆತಾಗ ನಿಧಾನಕ್ಕೆ ಓದುತ್ತಾರೆ. ಇದರಿಂದ ಅವರಲ್ಲಿ ಓದುವ ಪ್ರೀತಿ ಮತ್ತು ಲೋಕಜ್ಞಾನ ಬೆಳೆಯುತ್ತದೆ. ಮಕ್ಕಳಿಗೆ ಉಪಯುಕ್ತ ಮಾಹಿತಿ, ಪಠ್ಯದ ವಿಷಯಕ್ಕೆ ಸಂಬಂಧಿಸಿದ ಹೆಚ್ಚಿನ ವಿವರ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ವೈಜ್ಞಾನಿಕ ಆವಿಷ್ಕಾರಗಳ ಪರಿಚಯ, ಭಾಷಾ ಪ್ರೌಢಿಮೆ, ವಾಕ್ಯ ರಚನೆ ಕೌಶಲ, ಶಬ್ದ ಸಂಪತ್ತು ಬೆಳೆಯುತ್ತವೆ. ಪತ್ರಿಕೆಗಳಲ್ಲಿಯ ಚಿತ್ರಗಳನ್ನು ನೋಡಿ ಆನಂದಿಸುತ್ತಾರೆ. ತಾವೇ ಚಿತ್ರ ರಚಿಸುವ, ಕಥೆ, ಕವನ, ಪ್ರಬಂಧ ಬರೆಯುವ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ನಿಯಮಿತವಾಗಿ ಪತ್ರಿಕೆ ಓದುವುದರಿಂದ ಅವರಲ್ಲಿ ಸೃಜನಾತ್ಮಕ ಕಲೆ ಬೆಳೆಯುತ್ತದೆ. ಲೇಖಕರಾಗಿ, ಕಲಾವಿದರಾಗಿ, ಚಿಂತಕರಾಗಿ ಬೆಳೆದವರೆಲ್ಲರೂ ಪತ್ರಿಕೆಗಳಿಂದ ಪಡೆದ ಪ್ರೇರಣೆಯ ಬಗ್ಗೆ ಹೇಳುತ್ತಾರೆ.
ಪತ್ರಿಕೆಗಳು ಜನಪರ ಹೋರಾಟಗಳ ಬೆನ್ನೆಲುಬು. ವ್ಯಕ್ತಿ ಮತ್ತು ಸಮಾಜಕ್ಕೆ ಆಗುವ ಅನ್ಯಾಯಗಳನ್ನು ಪತ್ರಿಕೆಗಳು ಸಾರ್ವತ್ರಿಕವಾಗಿ ಬಿಚ್ಚಿಡುತ್ತವೆ. ದೃಶ್ಯ ಮಾಧ್ಯಮದಲ್ಲಿ ನೋಡುವುದಕ್ಕೂ ಪ್ರಕಟಿತ ವರದಿ ಓದಿ ತಿಳಿದುಕೊಳ್ಳುವುದಕ್ಕೂ ಬಹಳ ವ್ಯತ್ಯಾಸವಿದೆ. ಪ್ರಕಟಿತ ವರದಿ ಸ್ಪಷ್ಟತೆಯನ್ನು ನೀಡುತ್ತದೆ. ದೃಶ್ಯ ಮಾಧ್ಯಮದಲ್ಲಿ ಅಬ್ಬರ ಜಾಸ್ತಿ, ಹೂರಣ ಕಡಿಮೆ. ದೃಶ್ಯ ಪ್ರಪಂಚಕ್ಕಿಂತ ಅಕ್ಷರ ಪ್ರಪಂಚ ಪರಿಣಾಮಕಾರಿಯಾದದ್ದು. ಪತ್ರಿಕೆ ಓದುವಾಗ ಇರುವ ಸಂಯಮ, ಸಾವಧಾನವು ಟಿ.ವಿ. ನೋಡುವಾಗ ಇರುವುದು ಸಾಧ್ಯವೇ ಇಲ್ಲ.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರ ದೊಡ್ಡದು. ಗಾಂಧೀಜಿ, ನೆಹರೂ, ಲೋಕಮಾನ್ಯ ತಿಲಕರಂತಹ ನಾಯಕರು ಜನರಲ್ಲಿ ಪತ್ರಿಕೆಗಳ ಮೂಲಕ ರಾಷ್ಟ್ರಪ್ರಜ್ಞೆ ಬೆಳೆಸಿದರು. ಜನಾಂದೋಲನವನ್ನು ಕಟ್ಟುವ ದೃಷ್ಟಿಯಿಂದ ಅವರು ಸ್ವತಃ ಹಲವು ಪತ್ರಿಕೆಗಳನ್ನು ರೂಪಿಸಿದರು.
1975ರ ತುರ್ತು ಪರಿಸ್ಥಿತಿ ದಿನಗಳಲ್ಲಿ ಸೆನ್ಸಾರ್ ಹೇರಿ ಪತ್ರಿಕೆಗಳ ಬಾಯಿ ಮುಚ್ಚಲಾಗಿತ್ತು. ಆ ದಿನಗಳಲ್ಲಿ ವಿದೇಶಿ ಪತ್ರಿಕೆಗಳು ಭಾರತದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪಿಸುವ ಹೋರಾಟವನ್ನು ಯಶಸ್ವಿಯಾಗಿ ನಿರ್ವಹಿಸಿದವು. ಜಗತ್ತಿನ ತುಂಬಾ ಭಾರತದ ಜನತೆಯ ಪರವಾಗಿ ಅಭಿಪ್ರಾಯ ರೂಪಿಸಿದವು.
ಮನೆಯಿಂದ ಹೊರಗೆ ಹೋಗದ ಅಸಹಾಯಕ ಹಿರಿಯರಿಗೆ ಪತ್ರಿಕೆ ಸ್ನೇಹಿತನಂತೆ ಕೆಲಸ ಮಾಡುತ್ತದೆ. ಅವರಿಗೆ ಖುಷಿಯಾಗಿ ಸಮಯ ಕಳೆಯುವುದಕ್ಕೆ ದಿನಪತ್ರಿಕೆಗಳ ಓದು ನೆರವಾಗುತ್ತದೆ. ಓದು ಧ್ಯಾನಕ್ಕೆ ಸಮಾನ ಎನ್ನುವ ಮಾತೂ ಇದೆ.
ಪರಿಚಿತ ಹಿರಿಯರೊಬ್ಬರು ಪತ್ರಿಕೆಗಳನ್ನು ಹರಡಿಕೊಂಡು ಮನೆಯ ಮುಂದಿನ ಹೊರಾಂಗಣದಲ್ಲಿ ಓದುತ್ತಾ ಕುಳಿತಿದ್ದರು. ‘ಎಷ್ಟು ಪತ್ರಿಕೆಗಳನ್ನು ತರಿಸುತ್ತೀರಿ ಸರ್?’ ಎಂದೆ. ಅವರು ‘ಎರಡು ಕನ್ನಡ, ಒಂದು ಇಂಗ್ಲಿಷ್ ಪತ್ರಿಕೆ ತರಿಸುತ್ತೇನೆ’ ಎಂದರು. ಸ್ವಲ್ಪ ತಡೆದು ಅವರು ‘ಮನೆಗೆ ಪತ್ರಿಕೆ ತರಿಸುವುದೆಂದರೆ ಬೆಳಿಗ್ಗೆ ಮನೆಯ ಮುಂದೆ ನೀರು ಚಿಮುಕಿಸಿ ರಂಗೋಲಿ ಹಾಕಿದಾಗೆ. ಪತ್ರಿಕೆ ಒಂದು ಪುಟ್ಟ ವಿಶ್ವವಿದ್ಯಾಲಯ. ನಾನು ಏಕಾಂಗಿಯಾಗಿ ಇದ್ದಾಗಲೂ ಎಲ್ಲರೊಡನೆ ಇದ್ದೀನಿ ಎನ್ನುವ ಭಾವವನ್ನು ಪತ್ರಿಕೆ ತುಂಬುತ್ತದೆ’ ಎಂದರು.
ಪತ್ರಿಕೆಯು ಚಿಂತನೆ, ಪ್ರಚೋದನೆ, ಮನರಂಜನೆ ಮತ್ತು ಬೋಧನೆಯನ್ನು ಕೊಡುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗಳ ಪಾತ್ರ ಬಹಳ ದೊಡ್ಡದು. ಜನರನ್ನು ಜನರಿಗೆ, ಜನರನ್ನು ಸರ್ಕಾರಕ್ಕೆ, ಸರ್ಕಾರವನ್ನು ಜನರಿಗೆ ಪರಿಚಯಿಸುವ ಮಹತ್ವದ ಕಾರ್ಯವನ್ನು ಅವು ಮಾಡುತ್ತವೆ. ಪತ್ರಿಕೆಯು ವಿಶ್ವದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಅದನ್ನು ಕೊಳ್ಳುವುದಕ್ಕೆ ಮಾಡುವ ಖರ್ಚು ಕೂಡ ಒಂದು ಹೂಡಿಕೆ. ಮನೆಯಲ್ಲಿ ಅಂದಿನ ದಿನಪತ್ರಿಕೆ ಇರುವುದು ಕುಟುಂಬದ ಘನತೆಯನ್ನು ಹೆಚ್ಚಿಸುತ್ತದೆ.
‘ಪತ್ರಿಕೆಗಳಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ನನ್ನಿಂದ ಸಾಧ್ಯವಿಲ್ಲ’ ಎಂದು ನೆಹರೂ ಹೇಳುತ್ತಿದ್ದರು. ಹಾಲು, ದಿನಸಿಯಂತೆ ಪತ್ರಿಕೆ ಕೂಡ ಮನೆಗೆ ಅವಶ್ಯ ವಸ್ತುವೇ ಆಗಿದೆ. ಕುಟುಂಬವನ್ನು ಸಶಕ್ತವಾಗಿ, ಸಂತೋಷವಾಗಿ ಇಡಲು ಮನೆಗೆ ಬರಲಿ ದಿನಪತ್ರಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.