ಪ್ರತಿವರ್ಷ ನವೆಂಬರ್ 25ರಂದು ‘ಅಂತರರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ’ವನ್ನು ಆಚರಿಸಲಾಗುತ್ತದೆ. ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ ಕುರಿತು ಜನಸಾಮಾನ್ಯರಲ್ಲಿ ಅರಿವು ಹೆಚ್ಚಿಸುವ ಸಲುವಾಗಿ ವಿಶ್ವಸಂಸ್ಥೆಯು 1999ರಿಂದ ಈ ದಿನವನ್ನು ಆಚರಿಸುತ್ತಾ ಬಂದಿದೆ. ಡೊಮಿನಿಕನ್ ರಿಪಬ್ಲಿಕ್‌ನ ಸರ್ವಾಧಿಕಾರದ ಸರ್ಕಾರವು ‘ಮಿರಾಬಲ್ ಸಹೋದರಿಯರು’ ಎಂದೇ ಹೆಸರಾಗಿದ್ದ ಮೂವರು ಮಹಿಳಾ ರಾಜಕೀಯ ಕಾರ್ಯಕರ್ತರನ್ನು 1960ರ ನ. 25ರಂದು ಬರ್ಬರವಾಗಿ ಹತ್ಯೆ ಮಾಡಿದ್ದರ ನೆನಪಿ ನಲ್ಲಿ ಈ ದಿನವನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿವಿಧ ಆಯಾಮಗಳು ಯಾವುವು? ಅವು ನಿರಾತಂಕವಾಗಿ ನಡೆಯುತ್ತಿರುವು ದರ ಹಿನ್ನೆಲೆಯೇನು? ಅವುಗಳನ್ನು ತಡೆಗಟ್ಟುವ ಸೂಕ್ತ ಕ್ರಮಗಳೇನು ಎಂಬಂಥ ಮುಖ್ಯ ಪ್ರಶ್ನೆಗಳು ಎದುರಾಗುತ್ತವೆ.
ಮಹಿಳೆಯರ ಮೇಲಿನ ದೌರ್ಜನ್ಯ ಕೇವಲ ದೈಹಿಕ ಹಿಂಸೆಗೆ ಅನ್ವಯಿಸುವುದಿಲ್ಲ. ಇದು ಲೈಂಗಿಕ, ಭಾವನಾತ್ಮಕ, ಮಾನಸಿಕ ಮತ್ತು ಆರ್ಥಿಕ ದೌರ್ಜನ್ಯಗಳನ್ನು ಕೂಡ ಒಳಗೊಂಡಿದೆ. ಜೊತೆಗೆ ಸಾರ್ವಜನಿಕ ವಲಯ ಹಾಗೂ ಖಾಸಗಿ ಬದುಕಿಗೂ ಅನ್ವಯಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ದೌರ್ಜನ್ಯಗಳು ಅಪರಿಚಿತರಿಗಿಂತ ಮಹಿಳೆಯ ನಿಕಟ ಸಂಬಂಧಿಗಳಿಂದಲೇ ನಡೆ ಯುತ್ತವೆ. ಉದಾಹರಣೆಗೆ, ಭಯ ಸೃಷ್ಟಿಸುವ ಮೂಲಕ ಆಕೆಯ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಅಧಿಕಾರ ಚಲಾಯಿಸಲು ವಿವಿಧ ಹಿಂಸಾತ್ಮಕ ನಡವಳಿಕೆ ಗಳನ್ನು ಅನುಸರಿಸಲಾಗುತ್ತದೆ.
ಪುರುಷರಲ್ಲಿ ಕಂಡುಬರುವ ಕೋಪ ಅಥವಾ ಲೈಂಗಿಕ ಪ್ರಚೋದನೆಗಳು ಸಹಜ ಹಾಗೂ ಸ್ವನಿಯಂತ್ರಣ ಮೀರಿದವಾಗಿದ್ದು, ಮಹಿಳೆ ತಾನು ಬಯಸಿದರೆ ಈ ದೌರ್ಜನ್ಯದಿಂದ ಮುಕ್ತಿ ಪಡೆಯು ವುದು ಕಷ್ಟವೇನಲ್ಲ, ಮದ್ಯಸೇವನೆಯಿಂದ ಮಾತ್ರ ಪುರುಷ ಹಿಂಸಾತ್ಮಕವಾಗಿ ವರ್ತಿಸುತ್ತಾನೆ ಎಂಬಂತಹ ಪೂರ್ವಗ್ರಹಗಳು ಸಮಾಜದಲ್ಲಿವೆ.
ಪುರುಷರು ಮತ್ತು ಮಹಿಳೆಯರ ನಡುವೆ ಅಧಿಕಾರ ಹಾಗೂ ಸಂಪನ್ಮೂಲ ಹಂಚಿಕೆಯ ನಡುವೆ ಇರುವ ಅಸಮತೋಲನವು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರಮುಖ ಕಾರಣ ಎಂಬುದು ಮಹತ್ತರವಾದ ಅಂಶ. ಪುರುಷ ಮತ್ತು ಮಹಿಳೆ ಹೀಗೆಯೇ ನಡೆದುಕೊಳ್ಳಬೇಕು ಎಂಬಂಥ ನಿಖರ ವ್ಯಾಖ್ಯಾನಗಳು ಸಹ ಇದಕ್ಕೆ ಕೊಡುಗೆ ನೀಡುತ್ತವೆ. ಮಹಿಳೆ ಮೂಲತಃ ‘ಸಹನಾಮಯಿ’ ಎನ್ನುವ ಬಿರುದು, ಪುರುಷ ಮಾಡುವ ಎಂತಹ ಘೋರ ಅವಮಾನ, ದೌರ್ಜನ್ಯವನ್ನೂ ಆಕೆ ಸಹಿಸಬಲ್ಲಳು ಎಂಬ ಸಾಮಾಜಿಕ ನಿಲುವಿಗೆ ಕಾರಣವಾಗಿ, ದೌರ್ಜನ್ಯಗಳು ನಿರಂತರವಾಗಿ ಮುಂದುವರಿಯಲು ಕಾರಣವಾಗಿದೆ.
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊದ ವರದಿ ಅನುಸಾರ, ದೇಶದ ಶೇ 26ರಷ್ಟು ಮಹಿಳೆಯರು ಜೀವನ ಸಂಗಾತಿಯಿಂದ ದೈಹಿಕ ಹಿಂಸೆಯನ್ನು ಅನುಭವಿಸಿದ್ದಾರೆ ಹಾಗೂ ಗರ್ಭಿಣಿಯರೂ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಹಾಗೆಯೇ, ಪ್ರತೀ ಮೂರು ನಿಮಿಷಗಳಿಗೊಮ್ಮೆ ಮಹಿಳೆಯರ ಮೇಲೆ ಅಪರಾಧ ಎಸಗಲಾಗುತ್ತಿದೆ. ಪ್ರತೀ ಗಂಟೆಗೆ ಕನಿಷ್ಠ ಇಬ್ಬರು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಪ್ರತೀ ಆರು ಗಂಟೆಗಳಿಗೊಮ್ಮೆ ಒಬ್ಬ ಯುವ ವಿವಾಹಿತ ಮಹಿಳೆಯನ್ನು ಹಿಂಸಿಸಿ ಸಾಯಿಸಲಾಗುತ್ತಿದೆ ಅಥವಾ ಆತ್ಮಹತ್ಯೆಗೆ ಪ್ರಚೋದಿಸಲಾಗುತ್ತಿದೆ.
ದೌರ್ಜನ್ಯದ ಪರಿಣಾಮವಾಗಿ ಮಹಿಳೆಯರು ಉದ್ಯೋಗ, ಆರ್ಥಿಕತೆ, ಸ್ವಆರೈಕೆ ಹಾಗೂ ಶಿಶುಪಾಲನೆ ಯಲ್ಲಿ ತೀವ್ರ ಕೊರತೆಯನ್ನು ಅನುಭವಿಸುತ್ತಾರೆ. ವಿಪರ್ಯಾಸವೆಂದರೆ, ಮಹಿಳೆಯರ ಮೇಲೆ ನಡೆಯುವ ಹೆಚ್ಚಿನ ದೌರ್ಜನ್ಯಗಳು ದೌರ್ಜನ್ಯಗಳೆಂದೇ ಪರಿಗಣಿತವಾಗಿಲ್ಲ. ವಿಶೇಷವಾಗಿ, ಕೌಟುಂಬಿಕ ಹಿಂಸಾಚಾರವು ಮಹಿಳೆ ಸಹಿಸಿಕೊಳ್ಳಬೇಕಾದ ಸಹಜ ನಡವಳಿಕೆ ಎಂಬಂತೆ ಬಿಂಬಿಸಲ್ಪಟ್ಟಿದೆ. ಒಂದು ವೇಳೆ ಮಹಿಳೆ ತನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ಹೇಳಿಕೊಂಡರೂ ಸಾಮಾನ್ಯವಾಗಿ ‘ಹೊಂದಾಣಿಕೆ’ ಮಾಡಿಕೊಳ್ಳಲು ಉಪದೇಶ ನೀಡಲಾಗುತ್ತದೆ.
ಕೌಟುಂಬಿಕ ಹಿಂಸಾಚಾರದಿಂದ ಬದುಕುಳಿದವರ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಜೀವನ ದುದ್ದಕ್ಕೂ ಬಿಕ್ಕಟ್ಟಿನಲ್ಲಿ ಇರುತ್ತದೆ. ಇದು, ಅವರ ಮಕ್ಕಳ ಮೇಲೂ ಪರಿಣಾಮ ಬೀರಬಹುದು. ಈ ದಿಸೆಯಲ್ಲಿ ಸಾಮಾಜಿಕ ಸಂಘಟನೆಗಳ ಒತ್ತಾಸೆಯ ಮೇರೆಗೆ ಸರ್ಕಾರಗಳು ಕಳೆದ ಕೆಲವು ದಶಕಗಳಲ್ಲಿ ಬಲವಾದ ಕಾನೂನುಗಳು, ತ್ವರಿತ ನ್ಯಾಯಾಲಯಗಳು, ಪೊಲೀಸ್ ಸಹಾಯವಾಣಿಗಳು ಹಾಗೂ ಠಾಣೆಗಳನ್ನು ಸ್ಥಾಪಿಸಿವೆ. ಇದರೊಂದಿಗೆ, ನಾಗರಿಕ ಸೇವಾ ಸಂಸ್ಥೆಗಳು ಕೂಡ ಜನಜಾಗೃತಿ ಮೂಡಿಸಲು ಶ್ರಮಿಸುತ್ತಿವೆ. ಆದರೂ ದೌರ್ಜನ್ಯ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗುತ್ತಿಲ್ಲ.
ಕೌಟುಂಬಿಕ ಹಿಂಸಾಚಾರವನ್ನು ಖಾಸಗಿ ವಿಚಾರವೆಂದು ಪರಿಗಣಿಸದೆ, ಸಂತ್ರಸ್ತರಿಗೆ ದೈಹಿಕ ಆರೈಕೆಯೊಂದಿಗೆ ಮಾನಸಿಕ ಸ್ಥೈರ್ಯ, ಸಾಂತ್ವನ, ಭರವಸೆ ಸಿಗುವ ದಿಸೆಯಲ್ಲಿ ಸರ್ಕಾರಗಳು, ಸಾಮಾಜಿಕ ಸಂಘಟನೆಗಳು ಹೆಚ್ಚು ಕಾರ್ಯಪ್ರವೃತ್ತವಾಗಬೇಕಾಗಿದೆ. ಬಾಹ್ಯ ಪ್ರಪಂಚದಲ್ಲಿ ಕೂಡ ಮಹಿಳೆಯರಿಗೆ ಆತ್ಮಾಭಿಮಾನದಿಂದ ಬದುಕಲು ಹಾಗೂ ತಮ್ಮ ಮೇಲಾದ ದೌರ್ಜನ್ಯವನ್ನು ನಿರ್ಭೀತರಾಗಿ ಹಂಚಿಕೊಳ್ಳಲು ಆತ್ಮಸ್ಥೈರ್ಯ ತುಂಬಬೇಕಾಗಿದೆ. ‘ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ, ಇವುಗಳನ್ನು ಮೀರಿದ ಸ್ವಂತ ಬದುಕೊಂದು ನಿಮಗಿದೆ ಹಾಗೂ ಉನ್ನತ ಭವಿಷ್ಯದ ಸಾಧ್ಯತೆಗಳಿವೆ’ ಎನ್ನುವ ಮನವರಿಕೆಯನ್ನು ಮಹಿಳೆಯರಿಗೆ ಮಾಡಿಕೊಡಬೇಕಾದ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.