ADVERTISEMENT

ಜ್ಞಾನ, ಕೌಶಲ, ಅಂಕ: ಯಾವುದು ಹಿತ?

ತರಗತಿಗಳಲ್ಲಾಗುವ ಪಾಠವು ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುತ್ತಿದೆಯೇ?

ಡಾ.ಶಿವಲಿಂಗಸ್ವಾಮಿ ಎಚ್.ಕೆ.
Published 16 ಆಗಸ್ಟ್ 2018, 19:30 IST
Last Updated 16 ಆಗಸ್ಟ್ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ತೆರೆದ ಪುಸ್ತಕ ಪರೀಕ್ಷೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ನಮ್ಮ ಪಠ್ಯಕ್ರಮಗಳು ವಿದ್ಯಾರ್ಥಿಗಳನ್ನು ಜ್ಞಾನದ ಕಡೆಗೆ ಒಯ್ಯಬೇಕೋ ಅಥವಾ ಕೌಶಲದ ಕಡೆಗೋ ಎಂಬ ಬಗ್ಗೆಯೂ ಚರ್ಚೆಯಾಗಬೇಕಾಗಿದೆ. ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಕೌಶಲ ಮತ್ತು ಜ್ಞಾನ ಎರಡನ್ನೂ ಅರ್ಥ ಮಾಡಿಕೊಳ್ಳುವ ಪ್ರಯತ್ನಗಳು ಗಮನಾರ್ಹವಾಗಿ ನಡೆದವು. ಅಮೆರಿಕದ ತತ್ವಶಾಸ್ತ್ರಜ್ಞ ಅಲಾನ್ ಬ್ಲೂಮ್ ತಮ್ಮ ‘ದಿ ಕ್ಲೋಸಿಂಗ್ ಆಫ್ ದಿ ಅಮೆರಿಕನ್ ಮೈಂಡ್’ ಪುಸ್ತಕದಲ್ಲಿ ವಿಶ್ವವಿದ್ಯಾಲಯಗಳ ಜವಾಬ್ದಾರಿಗಳನ್ನು ವಿವರಿಸುತ್ತಾ, ‘ಉದಾರ ಶಿಕ್ಷಣಕ್ಕೆ ಬದ್ಧವಾಗಿರುವ ವಿಶ್ವವಿದ್ಯಾಲಯಗಳು, ತಮ್ಮ ವಿದ್ಯಾರ್ಥಿಗಳು ವ್ಯಕ್ತಿತ್ವ ಸಂಪೂರ್ಣತೆಯನ್ನು ಸಾಧಿಸಲು ನಿರಂತರವಾಗಿ ಶ್ರಮಿಸಬೇಕು. ಉನ್ನತ ಶಿಕ್ಷಣ ಎಂದರೆ ಉನ್ನತ ಕಲಿಕೆ. ಬೇಷರತ್ತಾದ ಉದಾರ ಶಿಕ್ಷಣದ ಪ್ರಸರಣಕ್ಕೆ ವಿಶ್ವವಿದ್ಯಾಲಯಗಳಲ್ಲಿ ಅವಕಾಶವಾಗದಿದ್ದಲ್ಲಿ ವಿದ್ಯಾರ್ಥಿಗಳು ಜ್ಞಾನದ ಆರ್ಜನೆಯಲ್ಲಿ ಅಜಾಗರೂಕರಾಗಿ, ವಿಚಾರಗಳ ಉಪಯುಕ್ತತೆ ಮತ್ತು ಅನುಪಯುಕ್ತತೆಯ ಮಧ್ಯೆ ಇರುವಗೆರೆಯನ್ನು ಗುರುತಿಸಲು ಅಸಮರ್ಥರಾಗುತ್ತಾರೆ’ ಎಂದಿದ್ದಾರೆ. ಅವರ ಪ್ರಕಾರ ವಿಶ್ವವಿದ್ಯಾಲಯದಲ್ಲಿ ಬೌದ್ಧಿಕ ಸ್ವಾತಂತ್ರ್ಯ, ಸೈದ್ಧಾಂತಿಕ ಸಹಿಷ್ಣುತೆ ಇರಬೇಕು ಮತ್ತು ಜನಾಂಗೀಯ ದ್ವೇಷಕ್ಕೆ ಅವಕಾಶ ಇರಬಾರದು.

ಬ್ಲೂಮ್ ಅವರ ಅಭಿಪ್ರಾಯಗಳ ನೆರಳಿನಲ್ಲೇ ಯುರೋಪಿನ ಶೈಕ್ಷಣಿಕ ಸಂಕಥನಗಳನ್ನು ಪರಿಗಣಿಸಿದರೆ ಅರಿಸ್ಟಾಟಲ್ ರಚಿಸಿದ ‘ನಿಕೋಮೇಖಿಯಾನ್ ಎಥಿಕ್ಸ್’ ಬಹು ಮುಖ್ಯವಾದ ಅಧ್ಯಯನವಾಗಿ ಮೂಡಿಬರುತ್ತದೆ. ‘ಬೌದ್ಧಿಕ ಸದ್ಗುಣ’ದ ಬಗ್ಗೆ ಪ್ರತಿಪಾದಿಸುವ ಅರಿಸ್ಟಾಟಲ್ ‘ಅನುಭವಸಹಿತವಾದ ಜ್ಞಾನ’ವನ್ನು ಶಿಫಾರಸು ಮಾಡುತ್ತಾನೆ. ‘ಟೆಕ್ನೆ’ ಮತ್ತು ‘ಎಪಿಸ್ಟಮ್’ ಎಂಬ ಪರಿಕಲ್ಪನೆ ಹುಟ್ಟುಹಾಕುವ ಅರಿಸ್ಟಾಟಲ್, ಕೌಶಲ ಮತ್ತು ಜ್ಞಾನದ ಮಧ್ಯೆ ಇರುವ ವ್ಯತ್ಯಾಸ ವಿವರಿಸುತ್ತಾ ‘ಬೌದ್ಧಿಕ ಸದ್ಗುಣವೆಂದರೆ ಜ್ಞಾನಾರ್ಜನೆ. ಅದು ಅರಿಯುವ ಮತ್ತು ಅನುಭವಸಹಿತವಾಗಿ ಅರ್ಥಮಾಡಿಕೊಳ್ಳುವ ಹಂಬಲ’ ಎನ್ನುತ್ತಾನೆ.

ಹಾಗೆಯೇ ಕೌಶಲಗಳನ್ನು ಶಿಫಾರಸು ಮಾಡುವ ಶಿಕ್ಷಣ ತಜ್ಞರ ಅಭಿಪ್ರಾಯದಲ್ಲಿ, ಜ್ಞಾನದ ಉಪಯೋಗವಾಗುವುದು ಅದನ್ನು ಬಳಸುವ ಬಗೆ ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ದೊರೆತಾಗ ಮಾತ್ರ. ಹಾಗಾಗಿ ಕೌಶಲ ಎಂಬ ಪದ ಪ್ರಸ್ತುತ ಎಲ್ಲಾ ಶಿಕ್ಷಣ ಕೇಂದ್ರಗಳಲ್ಲಿಯೂ ಚಾಲ್ತಿಯಲ್ಲಿದ್ದು, ಯುರೋಪ್‌ನಿಂದಲೇ ಎರವಲು ಪಡೆದ ‘ಫಿನಿಶಿಂಗ್ ಸ್ಕೂಲ್’ ಪರಿಕಲ್ಪನೆ ಕೂಡ ನಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದೆ. ಈ ಫಿನಿಶಿಂಗ್ ಸ್ಕೂಲ್‌ಗಳ ಮೂಲ ಉದ್ದೇಶ ಉದ್ಯೋಗಕೇಂದ್ರಿತ ಕೌಶಲಗಳನ್ನು ಕಲಿಸಿ, ವಿದ್ಯಾರ್ಥಿಗಳ ಶಿಕ್ಷಣವನ್ನು ಸಂಪೂರ್ಣಗೊಳಿಸುವುದಾಗಿದೆ. ಕೌಶಲವನ್ನು ಪ್ರತ್ಯೇಕವಾಗಿ ತರಬೇತಿ ಮೂಲಕ ಪಡೆಯಬೇಕಾದ ಅನಿವಾರ್ಯವಿದ್ದಲ್ಲಿ ಮತ್ತು ನಮ್ಮದು ಕೇವಲ ಕೌಶಲಾರ್ಜನೆಯಾಗಿದ್ದರೆ ಅದಕ್ಕೆ ಶಿಕ್ಷಣ ಕೇಂದ್ರ ಎಂಬ ಪ್ರತ್ಯೇಕ ಸ್ಥಳವೇಕೆ ಬೇಕು ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ.

ADVERTISEMENT

ಕೇವಲ ಕೌಶಲಗಳಿಗೆ ಆದ್ಯತೆ ನೀಡುವ ಸಂಕಥನಗಳಿಗೆ ಉತ್ತರವೆಂಬಂತೆ ಲುಡ್ವಿಗ್ ವಿಟ್ ಗೈನ್ ಸ್ಟೈನ್ ಎಂಬತತ್ವಶಾಸ್ತ್ರಜ್ಞ ‘ಕ್ರಿಯಾ ಜ್ಞಾನ’ ಎಂಬ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತಾ, ‘ಜ್ಞಾನದ ಆರ್ಜನೆ ಪ್ರಾಯೋಗಿಕವಾಗಿ ಆಗಬೇಕು’ ಎನ್ನುತ್ತಾನೆ. ಹಾಗೆಯೇ ಜರ್ಮನಿಯ ಉನ್ನತ ಶಿಕ್ಷಣ ಕ್ಷೇತ್ರದ ಇತಿಹಾಸದಲ್ಲಿ ಗಣನೀಯವಾದ ಬೆಳವಣಿಗೆಗಳನ್ನು ತಂದಂತಹ ಅಲೆಕ್ಸಾಂಡರ್ ವಾನ್ ಹಂಬೊಲ್ಟ್ ಅಧ್ಯಯನ ಮತ್ತು ಸಂಶೋಧನೆಯ ಸಮ್ಮಿಲನವಾದ ‘ಸಮಗ್ರ ಉನ್ನತ ಶಿಕ್ಷಣ’ವನ್ನು ಪ್ರತಿಪಾದಿಸಿದರು. ಇದೇ ಉದ್ದೇಶಕ್ಕಾಗಿ ಬರ್ಲಿನ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಜ್ಞಾನಾರ್ಜನೆಯ ಹಾದಿಯಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕಲ್ಪಿಸಬೇಕು ಎಂದೂ ವ್ಯಾಖ್ಯಾನಿಸಿದರು.

ವಿಶ್ವವಿದ್ಯಾಲಯದ ಪರಿಕಲ್ಪನೆಯನ್ನು ಯುರೋಪ್‌ನಿಂದ ಎರವಲು ಪಡೆದಿರುವ ನಾವು, ಅಲ್ಲಿನ ಅನೇಕ ಬುದ್ಧಿಜೀವಿಗಳ ಶೈಕ್ಷಣಿಕ ಸಂಕಥನಗಳನ್ನು ಪರಿಗಣಿಸದೆ ಇರಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ತರಗತಿಗಳಲ್ಲಾಗುವ ಪಾಠವು ಮೊದಲು ಜ್ಞಾನವಾಗಿ ಲಭಿಸಿ, ನಂತರ ವಿದ್ಯಾರ್ಥಿಗಳಿಗೆ ಅದು ಕೌಶಲವೂ ಆಗಿ ಪರಿಣಮಿಸಿ ಅವರಲ್ಲಿ ಉದ್ಯೋಗ ಕಲ್ಪಿಸುತ್ತಿದೆಯೇ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಜ್ಞಾನ ಮತ್ತು ಕೌಶಲ ಎಂಬ ಪದಗಳ ನಡುವಿನ ಚರ್ಚೆಯುರೋಪ್‌ನಲ್ಲಿ ತೀವ್ರವಾಗಿದ್ದರೆ ನಮಗೆ ಅವೆರಡರ ಪ್ರಸರಣಕ್ಕೆ ಅಗತ್ಯವಾದ ಸಂವಹನ ವ್ಯವಸ್ಥೆ ಯಾವ ಮಾಧ್ಯಮದಲ್ಲಿರಬೇಕು ಎಂಬುದು ಇನ್ನೂ ಬಿಡಿಸಲಾಗದ ಒಗಟಾಗಿದೆ. ಆದ್ದರಿಂದ ಕಲಿಕಾ ಮಾಧ್ಯಮದ ಸಮಸ್ಯೆಯನ್ನು ಬಗೆಹರಿಸಕೊಳ್ಳಲಾರದ ಈ ಸಂದರ್ಭದಲ್ಲಿ ನಮ್ಮ ಶಿಕ್ಷಕರು ಜ್ಞಾನವೋ ಕೌಶಲವೋ ಎಂಬಚರ್ಚೆಗೆ ಕಿವಿಗೊಡದೆ, ಹೇಗಿದ್ದರೂ ಮೃದು ಕೌಶಲಗಳಿಗಾಗಿ ಪ್ರತ್ಯೇಕ ವ್ಯವಸ್ಥೆಯಾಗಿ ಫಿನಿಶಿಂಗ್ ಸ್ಕೂಲುಗಳು ಇವೆ ಎಂಬ ಧೈರ್ಯದಿಂದ ಅಂಕಗಳಿಗೆ ಮಹತ್ವ ಕೊಡುವಂತಾಗಿದೆ. ಅದನ್ನು ಸಾಧಿಸಲಿಕ್ಕಾಗಿ ತೆರೆದ ಪುಸ್ತಕ ಪರೀಕ್ಷೆಗೂ ಶಿಫಾರಸು ಆಗುತ್ತದೆ. ಆದರೆ ಪುಸ್ತಕದಲ್ಲಿ ಉತ್ತರ ಎಲ್ಲಿ ಅಡಕವಾಗಿದೆ ಎಂಬುದನ್ನು ಅರಿಯುವ ಜ್ಞಾನವೂ ಮುಖ್ಯ ಎಂಬುದನ್ನು ಮರೆಯುವಂತಿಲ್ಲ.

ಜ್ಞಾನ ಶಾಖೆಗಳಲ್ಲಿ ಕಲಿಕಾ ಮಾಧ್ಯಮವು ಸಮಸ್ಯೆಯಾಗುವುದು ವಿಶೇಷವಾಗಿ ವಸಾಹತೀಕರಣಗೊಂಡ ದೇಶಗಳಲ್ಲಿ. ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಗಳನ್ನು ಅಳಿಸಿ ಹಾಕಿ ವಸಾಹತುಗಾರ ತನ್ನ ಭಾಷೆ ಮತ್ತು ಸಂಸ್ಕೃತಿಯನ್ನು ಸ್ಥಾಪಿಸಿರುವುದರಿಂದ ನಮ್ಮ ಪರಿಸ್ಥಿತಿ ಅಮೆರಿಕ ಮತ್ತು ಯುರೋಪ್‌ಗಳಿಗಿಂತ ವಿಭಿನ್ನವಾಗಿದೆ ಮತ್ತು ಆಖಂಡಗಳಲ್ಲಿ ಕಲಿಕಾ ಮಾಧ್ಯಮ ಒಂದು ಅಡಚಣೆಯಾಗಿ ಕಂಡುಬರುವುದಿಲ್ಲ. ಆದರೆ ನಮ್ಮಲ್ಲಿ ಸ್ಥಳೀಯ ಭಾಷೆಗಳು ಸಂಪೂರ್ಣವಾಗಿ ಅಳಿಸಿಯೂಹೋಗದೆ, ಇಂಗ್ಲಿಷ್ ಭಾಷೆ ಆಧಿಪತ್ಯವನ್ನು ಸಂಪೂರ್ಣವಾಗಿ ಸಾಧಿಸದೆಯೂ ಇರುವುದರಿಂದ ಕಲಿಕಾ ಮಾಧ್ಯಮದ ವಿಚಾರವಾಗಿ ಅಸ್ಥಿರತೆ ನೆಲೆಸಿದೆ. ಈ ಕಾರಣಕ್ಕಾಗಿ ನಮ್ಮ ವಿಶ್ವವಿದ್ಯಾಲಯಗಳ ದೃಷ್ಟಿಯಲ್ಲಿ ಪ್ರಶ್ನೆಗಳಾಗಿ ಉಳಿಯುವುದು ನಮ್ಮ ಬೋಧನೆ ಮತ್ತು ಪಠ್ಯಕ್ರಮಗಳು ಮಾಧ್ಯಮದ ಸವಾಲನ್ನು ಮೀರಿ, ಜ್ಞಾನದ ಪ್ರಸರಣಕ್ಕೆ ಬುನಾದಿ ಹಾಕಿ ಅದು ಕೌಶಲವೂ ಆಗಿ ಪರಿಣಮಿಸುವುದೇ ಅಥವಾ ವಿದ್ಯಾರ್ಥಿಗಳಿಗೆ ಇಷ್ಟು ಅಂಕ ಎಂದು ಮೊದಲೇ ನಿಗದಿಪಡಿಸಿ, ತೇರ್ಗಡೆಯಾದವರ ಸಂಖ್ಯೆ ಹೆಚ್ಚಿಸಿ ಉದ್ಯೋಗಕ್ಕೆ ಅಗತ್ಯವಿರುವ ಕೌಶಲಗಳನ್ನು ಬೇರೆಡೆ ಅರಸುವಂತೆ ಮಾಡಬೇಕೇ ಎಂಬುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.