ADVERTISEMENT

ಓಪನ್ ಬುಕ್ ಎಕ್ಸಾಂ ಒಳ್ಳೆಯದೇ?

ಚಂದ್ರಶೇಖರ ದಾಮ್ಲೆ
Published 14 ಆಗಸ್ಟ್ 2018, 20:15 IST
Last Updated 14 ಆಗಸ್ಟ್ 2018, 20:15 IST

ಪರೀಕ್ಷಾ ಕೊಠಡಿಯಲ್ಲಿ ಪುಸ್ತಕವನ್ನು ತೆರೆದು ಉತ್ತರವನ್ನು ಹುಡುಕಿ, ಪಠ್ಯದಿಂದ ನೋಡಿ ಬರೆಯಬಹುದೆನ್ನುವ ವಿಧಾನ ಒಳ್ಳೆಯದೇ?

‘ಹೌದು’ ಎನ್ನುವವರಿರಬಹುದು. ‘ಹೌದೇನು, ಅದು ಒಳ್ಳೆಯದೇನು?’ ಎಂದು ಕೇಳುವವರೂ ಇರಬಹುದು. ಏನೇ ಆದರೂ, ನಮ್ಮ ಶಿಕ್ಷಣ ಸಚಿವ ಎನ್. ಮಹೇಶ್‌ ತಮ್ಮ ಆಡಳಿತಾವಧಿಯಲ್ಲಿ ಇದನ್ನು ಜಾರಿಗೆ ತರಬೇಕೆನ್ನುವ ಉತ್ಸಾಹದಲ್ಲಿದ್ದಾರೆಂಬ ಸೂಚನೆಗಳು ಅವರ ಭಾಷಣಗಳಲ್ಲಿ ಸಿಗುತ್ತಿವೆ.

ಈ ಕುರಿತ ಪರ-ವಿರೋಧ ಚರ್ಚೆಗಳು ಸಾಕಷ್ಟು ನಡೆದಿವೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಅದೆಂದರೆ, ಪುಸ್ತಕ ನೋಡಿ ಬರೆಯುವ ವ್ಯವಸ್ಥೆಯನ್ನು ವಿರೋ
ಧಿಸುವವರು, ‘ಈಗ ಇರುವ ಪರೀಕ್ಷಾ ಪದ್ಧತಿ ಸರಿ ಇದೆ’ ಎಂದು ಒಪ್ಪಿಕೊಳ್ಳಬೇಕು. ಆದರೆ ಹಾಗೆ ಒಪ್ಪುವುದು ಕಷ್ಟ. ಏಕೆಂದರೆ ಅದು ಸ್ಮರಣಶಕ್ತಿಯ ಆಧಾರದಲ್ಲಿ ನಿಂತಿದೆ. ಪರೀಕ್ಷೆ ಬರೆದಾಕ್ಷಣವೇ ಕಲಿತದ್ದನ್ನು ಮರೆಯುವಷ್ಟು ಜಾಳಾದ ಶಿಕ್ಷಣ ಅದು. ಹಾಗಿದ್ದ ಬಳಿಕ ‘ಪರೀಕ್ಷೆ, ಪರೀಕ್ಷೆ’ ಎಂದು ಗೋಳಾಡಿ, ವಿದ್ಯಾರ್ಥಿಗಳಷ್ಟೇ ಅಲ್ಲ ಪೋಷಕರೂ ಒತ್ತಡಕ್ಕೆ ಒಳಗಾಗುವ ದುರವಸ್ಥೆ ಯಾಕೆ? ವಿದ್ಯಾರ್ಥಿಗಳ ಆತ್ಮಹತ್ಯೆಯ ತನಕ ಮುಂದುವರಿಯುವ ಸಮಸ್ಯೆಗಳಿಗೆ ಆಸ್ಪದವೇಕೆ? ಖಾಸಗಿ ಶಾಲೆಗಳವರೇ ಹೆಚ್ಚು
ತೇರ್ಗಡೆಯಾಗಿ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಿಂದುಳಿಯುವ ಪದ್ಧತಿ ಯಾಕೆ? ಓಪನ್ ಬುಕ್ ಎಕ್ಸಾಂ ಮಾಡಿದರೆ ಟೆನ್ಷನ್ ಇಲ್ಲದೆ ಎಲ್ಲರೂ ಪಾಸಾಗಬಹು
ದಲ್ಲ? ಪರೀಕ್ಷಾ ಭಯದ ಮೂಲೋತ್ಪಾಟನೆ ಮಾಡಬಹುದಲ್ಲ? ಇದರಿಂದ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಫಲಿತಾಂಶದಲ್ಲಿ ಸಮತೋಲನವನ್ನು ತರಬಹುದಲ್ಲ? ಇಂತಹ ತರ್ಕಗಳ ಮೂಲಕ ಶಿಕ್ಷಣದಲ್ಲಿ ಸುಧಾರಣೆಯನ್ನು ತರಬಯಸುವ ಶಿಕ್ಷಣ ಸಚಿವರ ಆಶಯ ಒಳ್ಳೆಯದೇ. ಆದರೆ ಅದರ ಈಡೇರಿಕೆಗೆ ಉಪಾಯ ಇದಲ್ಲ! ಇದು ಬಾಲವನ್ನು ಹಿಡಿದು ಹಾವನ್ನು ನಿಯಂತ್ರಿಸುವ ದುಸ್ಸಾಹಸವಷ್ಟೇ ಆದೀತು. ಹಾವನ್ನು ಪಳಗಿಸಬೇಕಿದ್ದರೆ ಅದರ ತಲೆಯನ್ನೇ ಹಿಡಿಯಬೇಕು. ಪರೀಕ್ಷೆ ಎಂಬುದು ಶಿಕ್ಷಣದ ಬಾಲ. ಅದು ಕೊನೆಗೆ ಬರುವಂತಹುದು. ಅದರ ತಲೆ ಬೇರೆಡೆಯೇ ಇದೆ. ಅಲ್ಲಿಗೆ ಸಚಿವರು ಕೈ ಚಾಚಬೇಕು. ಅದರ ಕುರಿತಾಗಿ ಒಂದಿಷ್ಟು ಜಿಜ್ಞಾಸೆ ಅಗತ್ಯ.

ADVERTISEMENT

ಪ್ರಸ್ತುತ ಪರೀಕ್ಷಾ ಪದ್ಧತಿಯ ನಿರ್ವಹಣೆಯಲ್ಲಿ ನಕಲು ಹೊಡೆಯುವುದನ್ನು ತಡೆಯುವ ಸವಾಲು ಇದೆ. ಓಪನ್ ಬುಕ್‍ನಲ್ಲಿ ನಕಲೆಂಬುದೇ ಇಲ್ಲ. ಹಾಗಾಗಿ ಪರೀಕ್ಷಾ ಕೊಠಡಿಗಳಲ್ಲಿ ಶಿಕ್ಷಕರು ಭಯೋತ್ಪಾದಕರಂತೆ ವರ್ತಿಸಬೇಕಾಗಿಲ್ಲ. ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವ ಸ್ಕ್ವಾಡ್‍ಗಳು ಬೇಕಾಗಿಲ್ಲ. ಕೊಠಡಿ ಮೇಲ್ವಿಚಾರಕರೇ ಪುಸ್ತಕದಲ್ಲಿ ಉತ್ತರ ಎಲ್ಲಿದೆ ಎಂದು ಹೇಳಿಕೊಟ್ಟರೂ ಕೇಳುವವರಿಲ್ಲ. ಹೀಗೆ ಮಾಡುವುದರ ಮೂಲಕ ವಿದ್ಯಾರ್ಥಿಗಳು ಫೇಲ್ ಆಗದಂತೆ ಪರೀಕ್ಷೆಗಳನ್ನು ನಡೆಸಬಹುದು. ಆದರೆ ಜೀವನದಲ್ಲಿ ಫೇಲ್ ಆಗದಂತಹ ಶಿಕ್ಷಣ ನೀಡಿದಂತಾಗುತ್ತದೆಯೇ? ಇದು ಮೂಲಭೂತ ಪ್ರಶ್ನೆ. ಹಾಗಾಗಿ ಶಿಕ್ಷಣ ಸಚಿವರು ಮಾಡಬೇಕಾದ್ದು ಶಿಕ್ಷಣವನ್ನು ಸಶಕ್ತಗೊಳಿಸುವ ಕೆಲಸ. ಕಳೆದ ಎರಡು ದಶಕಗಳಲ್ಲಿ ಯಾವ ಶಿಕ್ಷಣ ಸಚಿವರೂ ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದಿಲ್ಲ. ಅಧಿಕಾರ ಇಲ್ಲದಾಗ ಬಡಬಡಿಸುವ ಬಿಜೆಪಿಯ ಮುಂದಾಳುಗಳು, ತಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಕನ್ನಡ ಮಾಧ್ಯಮಕ್ಕೆ ಸಂಬಂಧಪಟ್ಟ ಕೇಸ್‍ನಲ್ಲಿ ಪ್ರಬಲ ವಾದವನ್ನು ಮಂಡಿಸದೆ ಬಿಟ್ಟರು. ಸರ್ಕಾರವನ್ನು ಗೆಲ್ಲಿಸಿಕೊಳ್ಳದೆ ‘ಖಾಸಗಿ ಶಾಲೆಗಳ ಉದ್ದಿಮೆದಾರರು’ ಗೆಲ್ಲುವ ಹಾಗೆ ಮಾಡಿದರು. ಶಿಕ್ಷಣ ಎಂಬುದು ಸರಿಪಡಿಸಬೇಕಾದ ಬಾಬತ್ತು ಎಂದು ಯಾರಿಗೂ ಅನ್ನಿಸಲೇ ಇಲ್ಲ. ಬದಲಾಗಿ ಖಾಸಗಿಯವರಿಗೆ ಅನುಗ್ರಹ ಮಾಡುತ್ತಲೇ ಬಂದರು. ಇದಕ್ಕೆ ಅನುಕೂಲಕರವಾಗಿ ಶಿಕ್ಷಣ ಕಾರ್ಯದರ್ಶಿಗಳ ಹಾಗೂ ಆಯುಕ್ತರ ವರ್ತನೆಗಳಿದ್ದುವು. ಎಲ್ಲರೂ ‘ಇಂಗ್ಲಿಷ್, ಅನ್ನ ಕೊಡುವ ಭಾಷೆ’ ಎಂದರೇ ವಿನಾ ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಸೊರಗುತ್ತಿರುವ ಕಡೆಗೆ ಲಕ್ಷ್ಯ ಹರಿಸಲೇ ಇಲ್ಲ. ಆದ್ದರಿಂದ ಈಗ ಶಿಕ್ಷಣದ ತಲೆಯನ್ನು ಶಿಕ್ಷಣ ಸಚಿವರು ಸರಿಪಡಿಸಿದರೆ ಮಾತ್ರ ಪರೀಕ್ಷೆಯ ಸಮಸ್ಯೆ ಬಗೆಹರಿಯುತ್ತದೆ.

ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮೀಡಿಯಂಗೆ ಪರಿವರ್ತಿಸುವುದರಿಂದ ಸಮಾನತೆ ತರಲು ಸಾಧ್ಯ ಎಂಬ ಭ್ರಮೆ ಹರಡಿಸುವವರಿದ್ದಾರೆ. ರಾಜ್ಯದಾದ್ಯಂತ ಏಕರೂಪದ ಶಿಕ್ಷಣ ತರಬೇಕೆಂಬ ತಮ್ಮ ಪ್ರತಿಪಾದನೆಯನ್ನೇ ಬಂಡವಾಳ ಮಾಡಿಕೊಂಡು ಇಂಗ್ಲಿಷ್ ಪರವಾಗಿ ನಿಂತು ಕನ್ನಡ ಮಾಧ್ಯಮವನ್ನು ಅವಹೇಳನ ಮಾಡುವ ಮುತ್ಸದ್ದಿಗಳಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ಸಚಿವರು ಸಮಸ್ಯೆಯ ತಲೆಯನ್ನು ಬಗ್ಗಿಸದೆ ಪರೀಕ್ಷೆಗಳನ್ನು ಸುಲಭ ಮಾಡಿ ಬಿಟ್ಟು ಸುಧಾರಣೆ ಮಾಡಿದೆನೆಂದುಕೊಂಡರೆ ಅದು ಮುಂದಿನ ತಲೆಮಾರನ್ನು ದುರ್ಬಲಗೊಳಿಸಿದ ಅಪರಾಧವಾಗುತ್ತದೆ.

ಲಗಾಮು ಇಲ್ಲದೆ ಬಯಲಿನಲ್ಲಿ ಓಡುವ ಕುದುರೆಯಂತೆ ಶಿಕ್ಷಣ ಸಾಗುತ್ತಿದೆ. ಅದೆಷ್ಟೋ ಬಗೆಯ ಸಿಲಬಸ್‌, ಎಂಥೆಂಥದೋ ಸ್ಪರ್ಧಾತ್ಮಕ ಪರೀಕ್ಷೆಗಳು, ಹನ್ನೊಂದನೇ ತರಗತಿಯ ಪರೀಕ್ಷೆಗೆ ಒಂದನೇ ತರಗತಿಯಿಂದಲೇ ತಯಾರಿ ನಡೆಸುವ ತರಬೇತಿ ಕೇಂದ್ರಗಳು, ಮಕ್ಕಳ ಬಾಲ್ಯವನ್ನು ಕಸಿದು ಟೆನ್ಷನ್ ಹೆಚ್ಚಿಸುವಂತಹ ಪಠ್ಯೋದ್ಯಮದ ದಂಧೆಗಳು... ಇವೆಲ್ಲ ಮೇಲ್ವರ್ಗದವರಿಗೆ ಮತ್ತು ಮೇಲು ಮಧ್ಯಮ ವರ್ಗದವರಿಗೆ ಆಕರ್ಷಣೆಗಳು. ಇನ್ನು ಕೆಳಮಧ್ಯಮ ಮತ್ತು ಬಡವರಿಗೆ ಉಳಿದಿರುವುದು ಸೋರುವ, ನಾರುವ, ಆವರಣ ರಹಿತ, ಶಿಕ್ಷಕರಿಲ್ಲದೆ ಬಸವಳಿದ, ಮಕ್ಕಳ ಸಂಖ್ಯೆ ಕಡಿಮೆಯಾಗಿ ಕಂಗಾಲಾಗಿರುವ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು! ಇವುಗಳಿಗೆ ಇಂಗ್ಲಿಷ್ ಮೀಡಿಯಂ ಎಂಬ ಹಣೆಪಟ್ಟಿ ಹಚ್ಚಿದರೂ ಅವು ಸುಪುಷ್ಪವಾಗುವುದಿಲ್ಲ. ಏಕೆಂದರೆ ಬೇಕಾಗಿರುವುದು ಇಂಗ್ಲಿಷ್ ಮೀಡಿಯಂ ಅಲ್ಲ. ಬದಲಾಗಿ ಇಂಗ್ಲಿಷನ್ನು ಭಾಷೆಯಾಗಿ ಕಲಿಸುವ ವ್ಯವಸ್ಥೆ. ಇದಕ್ಕಾಗಿ ತರಬೇತಾದ ಶಿಕ್ಷಕರ ನೇಮಕಾತಿ. ಜೊತೆಗೆ ಸರ್ವಶಿಕ್ಷಣ ಅಭಿಯಾನದಲ್ಲಿ ಹೇಳಿದ ಎಲ್ಲ ಬಗೆಯ ಸುಧಾರಣೆಗಳು ಆಗಬೇಕು. ಇದನ್ನು ಮಾಡದ ಹೊರತು ಅಸಮಾನತೆಯನ್ನು ತೊಡೆದು ಹಾಕಬೇಕಾದ ಶಿಕ್ಷಣವೇ ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುವ ಆಯುಧವಾಗುತ್ತದೆ. ಈ ಆತಂಕ ನಿವಾರಣೆಯ ಯತ್ನ ಶಿಕ್ಷಣ ಸಚಿವರಿಂದ ಆಗಬೇಕು. ಇಲ್ಲವಾದರೆ ಕಲಿಕೆಯೆಂಬುದು ಕೇವಲ ಸೂಪರ್‌ಫಿಷಿಯಲ್ ಆಗಿ ಜ್ಞಾನಸಂಪನ್ನ ಯುವಜನರು ರೂಪುಗೊಳ್ಳದೆ ಸಮಾಜವೇ ಬಸವಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.