ಕಿರುತೆರೆ, ಸಿನಿಮಾ ಕ್ಷೇತ್ರದಲ್ಲಿ ವಿಶಿಷ್ಟ ಭರವಸೆ ಮೂಡಿಸಿದ್ದ ನಿರ್ದೇಶಕ ಗುರುಪ್ರಸಾದ್ ಯಾರೂ ಒಪ್ಪದ ಹಾದಿಯಲ್ಲಿ ಅಕಾಲಿಕ ಅಂತ್ಯ ಕಂಡಿದ್ದು ಅತೀವ ಬೇಸರ ತಂದಿತು. ನೇಣು ಬಿಗಿಗೊಳ್ಳುವ ಮುನ್ನ ಮೇಲೊಬ್ಬ ನಿರ್ದೇಶಕರು ‘ಇರಿ, ಇನ್ನೊಂದು ಶಾಟ್ ತೆಗೆಯೋಣ’ ಎಂದಿದ್ದರೂ ವಿಷಗಳಿಗೆಗೆ ಅಂಕುಶ ಬೀಳುತ್ತಿತ್ತೇನೊ. ಪ್ರಸಾದರ ಸುತ್ತ ಧ್ವನಿಸಿದ ಟೀಕೆಗಳು ಚರ್ಚೆಗೆ ಗ್ರಾಸವಾದವು. ಅವು ಹೇಗೂ ಇರಲಿ, ಸಾಧಕರು ಬಾಳಿದ ಬಗೆಯನ್ನು ವಿಸ್ತಾರವಾಗಿ ನೋಡಿ ಕಲಿಯುವ ಅಗತ್ಯವನ್ನು ಜಿಜ್ಞಾಸೆಯು ಹೊಸ ದೃಷ್ಟಿಯಲ್ಲಿ ಅನಾವರಣಗೊಳಿಸಿತು ಎನ್ನೋಣ.
ಗತಿಸಿದವರನ್ನು ಕುರಿತು ಆಡುವಾಗ ಉತ್ತಮ ವಾದವನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದಿಲ್ಲ. ಅವರ ಸದ್ಗುಣಗಳನ್ನಲ್ಲದೆ, ಅವಗುಣಗಳನ್ನೂ ಪ್ರಿಯವಾದ ಮಾತುಗಳಲ್ಲಿ ಸಾದರಪಡಿಸಿದರೆ ಪ್ರಮಾದ
ವೇನಿಲ್ಲ. ವಾಸ್ತವವನ್ನು ಬದಿಗಿರಿಸಿ ಹೊಗಳಿಕೆಗಳನ್ನು ಹಿಗ್ಗಿಸಿದರೆ ವ್ಯಕ್ತಿಯನ್ನು ಇಡಿಯಾಗಿ ನೋಡುವುದು ಅಸಾಧ್ಯ. ಗತಿಸಿದವರು ನಮ್ಮಂತೆಯೇ ಮನುಷ್ಯರಾಗಿದ್ದರು, ಅವರವರದೇ ತಪ್ಪುಗಳಿದ್ದವು, ಮನುಷ್ಯ
ರೆಲ್ಲ ‘ಪರಿಪಕ್ವ ಅಪರಿಪಕ್ವರು’ ಎನ್ನುವುದು ದಿಟ. ಆದರೆ ಸಮಾಜದಲ್ಲಿ ಸಾಧಕರೆನ್ನಿಸಿ ಮರಣ
ಹೊಂದಿದವರನ್ನು ವಸ್ತುನಿಷ್ಠವಾಗಿ ವ್ಯಾಖ್ಯಾನಿಸುವ ಆಯ್ಕೆ ನಮಗಿದೆ. ತೆರಳಿದವರ ಬದುಕು ನಮಗೆ ಮೀಮಾಂಸೆಯಾಗಬೇಕು. ಅವರ ಜೀವನದ ಸಂಗತಿಗಳಲ್ಲಿ ನಮಗೆ ಯಾವುದು ಸ್ವೀಕರಿಸಲು ಅರ್ಹ, ಯಾವುದು ವರ್ಜಿಸಲರ್ಹ ಎನ್ನುವುದನ್ನು ಚಿಂತನೆಗೆ ಒಳಪಡಿಸಬೇಕು.
ಮೃತರ ಕುಟುಂಬದವರು ಮತ್ತು ಆಪ್ತರ ಮನಸ್ಸು ನೋಯದಂತಹ ಸೃಜನಶೀಲ ವಿಮರ್ಶೆ ಸ್ವಾಗತಾರ್ಹ. ಪ್ರತಿಭಾಶಾಲಿಗಳೇ ಆಗಿದ್ದಿರಲಿ ಅವರ ಬದುಕಿನ ಪುಟಗಳನ್ನು ಒರೆಗಲ್ಲಿಗೆ ಹಚ್ಚದಿದ್ದರೆ ಇತಿಹಾಸದ ತಪ್ಪುಗಳು ಮರುಕಳಿಸುತ್ತವೆ. ಹಾಗಾಗಿ, ಈ ದಿಸೆಯಲ್ಲಿ ಸಮತೋಲನದ ಅವಲೋಕನ ಮೌಲಿಕ. ಸಂದ ಸಂತರು, ದಾರ್ಶನಿಕರು, ಶಿಕ್ಷಣ ತಜ್ಞರೆಲ್ಲರೂ ಒಕ್ಕೊರಲಿನಿಂದ ಹೇಳಿದ್ದು ಅದೇ ನುಡಿಯೆ- ತಮ್ಮ ಬದುಕು ತೆರೆದ ಪುಸ್ತಕ ಎಂದು. ‘ಸತ್ಯದೊಂದಿಗೆ ನನ್ನ ಪ್ರಯೋಗಗಳು’ ಎನ್ನುವುದೇ ಗಾಂಧಿಯವರ ಆತ್ಮಕಥೆ. ‘ತುಂಬಲಾಗದ ನಷ್ಟ’, ‘ಮತ್ತೆ ಜನಿಸಿ ಬನ್ನಿ’, ‘ಕಳೆದುಕೊಂಡ ನಾವು ಅನಾಥರು’ ಎಂಬಂತಹ ಸಿದ್ಧಮಾದರಿಯ ಭಾವಗಳು ಇನ್ನೆಷ್ಟು ಕಾಲ ನಮ್ಮನ್ನು ಆಳಬೇಕು? ನಿಧನರಾದರು ಎನ್ನಲೂ ಹಿಂಜರಿದು ಅದಕ್ಕೆ ಪರ್ಯಾಯವಾಗಿ, ನೇಪಥ್ಯಕ್ಕೆ ಸಂದರು, ಕೊನೆ ಯುಸಿರೆಳೆದರು, ದೂರವಾದರು ಎಂದೆಲ್ಲ ಮೃದುನುಡಿ
ಗಳನ್ನೇ ಬಳುಸುತ್ತೇವೆ. ಮೃತರನ್ನು ಕೊಂಡಾಡದಿದ್ದರೆ ಶಿಷ್ಟಾಚಾರಕ್ಕೆ ಚ್ಯುತಿ ಎಂದೇ ಪರಿಗಣನೆ. ಮಳೆ, ಬಿಸಿಲು, ನೆರೆ, ಭೂಕಂಪದಂತಹದೇ ಒಂದು ನೈಸರ್ಗಿಕ ನಿಯಮ ನಮ್ಮನ್ನು ದಿಗ್ಭ್ರಮೆಗೊಳಿಸ ಬಾರದಲ್ಲವೆ?
ಶ್ರದ್ಧಾಂಜಲಿ ಸಭೆಗಳಲ್ಲಿನ ಯಾಂತ್ರಿಕ ಮಾತುಗಳು ಅಥವಾ ಮೈಕ್ ಮುಂದೆ ಪುಟಿಯುವ ವಿಷಾದವೇ ಅಗಲಿದವರ ಬಗೆಗಿನ ನೋಟಗಳಲ್ಲ ಎಂದು ಅರಿಯುವಷ್ಟು ಪ್ರಬುದ್ಧತೆ ಜನರಿಗಿದೆ. ಈಚೆಗೆ ಒಂದಲ್ಲೊಂದು ದೌರ್ಬಲ್ಯಕ್ಕೊಳಗಾಗಿ ತಮ್ಮ ಅಕಾಲ ಮರಣಕ್ಕೆ ತಾವೇ ಕಾರಣರಾಗುವ ಕುಶಲಮತಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ದುರ್ದೈವ. ಸಾಮರ್ಥ್ಯ, ಮೇಧಾಶಕ್ತಿ ನಡುವೆ ಕನಿಷ್ಠ ಸಹನೆಯಿದ್ದಿದ್ದರೆ ಅವರು ಸಮಾಜಕ್ಕೆ ಇನ್ನಷ್ಟು ನೀಡುತ್ತಿದ್ದರು. ದುಡುಕಿದ ಪ್ರತಿಭಾನ್ವಿತರಿಂದ ಒಳ್ಳೆಯ ಮಾದರಿಯಂತೆಯೆ ಒಳ್ಳೆಯ ಎಚ್ಚರಿಕೆಯೂ ಜನಮಾನಸಕ್ಕೆ ಅನಾವರಣಗೊಂಡಿರುತ್ತದೆ.
ಟಿ.ಪಿ.ಕೈಲಾಸಂ ಅವರನ್ನು ಅವರ ಆಪ್ತರೊಬ್ಬರು ‘ಏನು ಸಾರ್, ಇಷ್ಟೊಂದು ಧೂಮಪಾನ? ಮಹಾತ್ಮ ಗಾಂಧಿಯವರ ಸರಳತೆ, ಸದಭ್ಯಾಸಗಳು ನಿಮ್ಮನ್ನು ಪ್ರಭಾವಿಸಬಹುದಿತ್ತಲ್ಲ’ ಅಂತ ಪ್ರಶ್ನಿಸಿದರಂತೆ. ಅದಕ್ಕೆ ಕೈಲಾಸಂ ‘ನಿಜವೆ, ಗಾಂಧೀಜಿ ಒಂದು ಉದಾಹರಣೆ. ನಾನೋ ಒಂದು ಜಾಗೃತಿ’ ಎಂದರಂತೆ! ಸಾವೆನ್ನುವುದು ಬದುಕು ಮತ್ತು ಸಮಯದ ಪರಿಮಿತವನ್ನು ಬೋಧಿಸುತ್ತದೆ, ಬದುಕಿನ ಶೈಲಿಯನ್ನು ಸುಧಾರಿಸುತ್ತದೆ. ಒಬ್ಬರ ಮರಣ ನಮ್ಮನ್ನು ಬದ್ಧತೆ ಮತ್ತು ನಿರ್ವಹಿಸ ಬೇಕಾದ ಕರ್ತವ್ಯದತ್ತ ಸೆಳೆಯುತ್ತದೆ. ಈ ದೃಷ್ಟಿಯಿಂದ ನಮ್ಮ ಪಾಲಿಗೆ ಪರರ ಸಾವು ಕಟು ವಿಮರ್ಶಕ, ರಾಜಿಯಾಗದ ಒಂದು ಜಾಗೃತಿ. ಹೇಗೆ ಬದುಕಬೇಕೆನ್ನುವುದನ್ನು ಕಲಿಯಲು ಇಡೀ ಬದುಕು ಸಾಲದಂತೆ. ಅದಕ್ಕೂ ಅದ್ಭುತವೆಂದರೆ, ಹೇಗೆ ಸಾಯಬೇಕೆನ್ನುವುದನ್ನು ಕಲಿಯಲೂ ಇಡೀ ಬದುಕು ಸಾಲದು!
ಆಪ್ತೇಷ್ಟರ ಅಗಲಿಕೆ ನಮ್ಮನ್ನು ದುಃಖಿತರನ್ನಾ ಗಿಸುವುದು ಸ್ವಾಭಾವಿಕ. ಆದರೆ ಅದು ಮಿತಿಮೀರಿ ಕಾಡಿದರೆ ವೃಥಾ ಒಂಟಿತನ, ಆಯಾಸ, ಭಯ, ಖಿನ್ನತೆ. ಜನಪದರು ಸಾವನ್ನು ನಿಷ್ಠುರವಾಗಿಯೇ ತೆರೆದಿಡುವ ಪರಿ ನಮ್ಮನ್ನು ಕಿವಿಮಾತಿನಿಂದ ಸಂತೈಸುವುದೇ ವಿನಾ ಕೆರಳಿಸದು: ‘ಸಾವಿನ ಮನೆಯಲ್ಲಿ ಯಾರು ಕೆಟ್ಟರೆಂದರೆ ಸತ್ತವರೇ!’ ಅಗಲಿ ಹೋದವರು ಆರೋಗ್ಯ ಕಾಪಾಡಿಕೊಂಡು ಮತ್ತಷ್ಟು ದಿನ ಬದುಕಬಹುದಿತ್ತೆಂಬ ಆಶಯವೂ ಈ ಒರಟು ಉದ್ಗಾರದಲ್ಲಿದೆ. ತಮ್ಮ ಇಬ್ಬರು ಗಂಡುಮಕ್ಕಳ ಪೈಕಿ ಹಿರಿಯವನು ಆಕಸ್ಮಿಕವಾಗಿ ಅಸುನೀಗಿದಾಗ, ದಂಪತಿಗೆ ಗುರುವೊಬ್ಬರು ‘ಒಬ್ಬನೇ ಮಗ ಎಂದು ತಿಳಿಯಿರಿ’ ಎಂದು ಸಮಾಧಾನಿಸಿದರು. ಕಿರಿಯ ಮಗ ತನ್ನ ಅಪ್ಪ, ಅಮ್ಮನಿಗೆ ‘ಒಂದು ವೇಳೆ ನಾನೂ ಸತ್ತರೆ ನಾನು ನಿಮ್ಮ ಮಗನೇ ಅಲ್ಲವೆಂದು ಭಾವಿಸುತ್ತೀರ?’ ಎಂದು ಪ್ರಶ್ನಿಸಿದ್ದ. ‘ಜನ ನನ್ನನ್ನು ಎಷ್ಟೊಂದು ಪ್ರೀತಿಸುತ್ತಾರೆ. ನಿನ್ನ ಮೇಲೆ ಅವರಿಗೆ ಏಕೆ ಅಷ್ಟೊಂದು ದ್ವೇಷ?’ ಅಂತ ಬದುಕು ಸಾವನ್ನು ಕೇಳಿತಂತೆ. ಅದಕ್ಕೆ ಸಾವು ಉತ್ತರಿಸಿದ್ದು: ‘ಏಕೆಂದರೆ ನೀನು ಸುಂದರ ಸುಳ್ಳು, ನಾನು ನೋವಿನ ನಿಜ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.