ADVERTISEMENT

ಸಂಗತ | ಚರ್ಚೆಗೆ ಗ್ರಾಸವಾದ ವಿಜ್ಞಾನಿಗಳ ಪಟ್ಟಿ

ಪ್ರಾಯೋಗಿಕ ನೆಲೆಯಲ್ಲಿ ಉಪಯೋಗಕ್ಕೆ ಬರುವ ಸಂಶೋಧನೆಯು ಶೈಕ್ಷಣಿಕ ವಲಯದಲ್ಲಿ ಎಷ್ಟರಮಟ್ಟಿಗೆ ನಡೆಯುತ್ತಿದೆ ಎಂಬ ಕುರಿತು ಪರಿಶೀಲಿಸುವುದು ಆದ್ಯತೆಯಾಗಬೇಕು.

ಎಚ್.ಕೆ.ಶರತ್
Published 4 ಅಕ್ಟೋಬರ್ 2024, 23:30 IST
Last Updated 4 ಅಕ್ಟೋಬರ್ 2024, 23:30 IST
.
.   

ಎಲ್ಸ್‌ವಿಯರ್‌ ಪ್ರಕಾಶನ ಸಂಸ್ಥೆ ವರ್ಷಕ್ಕೊಮ್ಮೆ ಪ್ರಕಟಿಸುವ, ಅತಿ ಹೆಚ್ಚು ಉಲ್ಲೇಖಗಳನ್ನು (ಸೈಟೇಷನ್‌) ಹೊಂದಿರುವ ಅಗ್ರಶ್ರೇಣಿಯ ಶೇಕಡ 2ರಷ್ಟು ವಿಜ್ಞಾನಿಗಳ ಪಟ್ಟಿಯು ಉನ್ನತ ಶಿಕ್ಷಣ ಮತ್ತು ಸಂಶೋಧನಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಅಧ್ಯಾಪಕರ ಕುರಿತು ಮಾಧ್ಯಮಗಳಲ್ಲೂ ವರದಿಗಳು ಬಿತ್ತರವಾಗುತ್ತಿವೆ. ಅಧ್ಯಾಪಕರನ್ನು ಈ ಸಾಧನೆಗಾಗಿ ಸನ್ಮಾನಿಸಿ, ಅಭಿನಂದಿಸುವ ಕೆಲಸ ಭಾರತೀಯ ತಂತ್ರಜ್ಞಾನ ಸಂಸ್ಥೆ ಗಳಿಂದ(ಐಐಟಿ) ಹಿಡಿದು ಖಾಸಗಿ ವಿಶ್ವವಿದ್ಯಾಲಯಗಳವರೆಗೆ ಎಲ್ಲೆಡೆಯೂ ನಡೆಯುತ್ತಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷ ಟಿ.ಜಿ.ಸೀತಾರಾಮ್ ಅವರು ಕೂಡ ಈ ಪಟ್ಟಿಯಲ್ಲಿ ಹಿಂದಿನ ನಾಲ್ಕು ವರ್ಷಗಳಿಂದ ಸತತವಾಗಿ ಸ್ಥಾನ ಪಡೆಯುತ್ತಿದ್ದಾರೆ. ಎಐಸಿಟಿಇ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹೆಮ್ಮೆಪಡುವ ವಿಚಾರವೆಂದು ಹೇಳಿಕೊಂಡಿದೆ. ಈ ಪಟ್ಟಿಯನ್ನು ಕೆಲವರು ಜಾಗತಿಕ ಮಟ್ಟದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿ ಎಂದು ಕೂಡ ತಪ್ಪಾಗಿ ಬಿಂಬಿಸುತ್ತಿದ್ದಾರೆ.

ಈ ಪಟ್ಟಿಯಲ್ಲಿ ಸ್ಥಾನ ಪಡೆಯುವ ಭಾರತೀಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಸಂಶೋಧನಾ ಕ್ಷೇತ್ರದಲ್ಲಿ ಭಾರತ ಮುನ್ನಡೆಯುತ್ತಿರುವುದಕ್ಕೆ ಹಿಡಿದ ಕನ್ನಡಿ ಎಂದು ಒಕ್ಕೂಟ ಸರ್ಕಾರ ಕೂಡ ಹೇಳಿಕೊಳ್ಳುತ್ತಿದೆ. ಒಕ್ಕೂಟ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಪ್ರೊ. ಅಜಯ್ ಕುಮಾರ್ ಸೂದ್ ಅವರು ಇತ್ತೀಚೆಗೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ನೀಡುವ ವೇಳೆ ಆಡಿರುವ ಮಾತುಗಳು ಇದನ್ನು
ಪುಷ್ಟೀಕರಿಸುವಂತಿದ್ದವು. ‘ಈ ಪಟ್ಟಿಯಲ್ಲಿ ಸ್ಥಾನ ಪಡೆಯುವ ಭಾರತೀಯ ಸಂಶೋಧಕರ ಸಂಖ್ಯೆ ಹಿಂದಿನ ನಾಲ್ಕು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಇದು ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ವೃದ್ಧಿ ಸುತ್ತಿರುವುದಕ್ಕೆ ಸಾಕ್ಷಿ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಒಂದೆಡೆ ಈ ಪಟ್ಟಿಯು ದೇಶದ ಶಿಕ್ಷಣ ಮತ್ತು ಸಂಶೋಧನಾ ವಲಯದಲ್ಲಿ ಉತ್ಸಾಹ ಹೆಚ್ಚಲು ಕಾರಣವಾಗಿದ್ದರೆ, ಇದಕ್ಕೆ ದೊರೆಯುತ್ತಿರುವ ಪ್ರಚಾರ ಮತ್ತು ಪ್ರಾಮುಖ್ಯ ಕುರಿತು ಕೆಲವರು ಸಕಾರಣಗಳಿಗಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಸಂಶೋಧನಾ ಲೇಖನಗಳ ಉಲ್ಲೇಖ ಎಂಬ ಮಾನದಂಡ ಆಧರಿಸಿ ಖಾಸಗಿ ಪ್ರಕಾಶನ ಸಂಸ್ಥೆಯೊಂದು ಹೊರತರುತ್ತಿರುವ ಪಟ್ಟಿಗೆ ಇಷ್ಟೆಲ್ಲ ಮಹತ್ವ ನೀಡುವ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಎದ್ದಿದೆ. ಹೆಚ್ಚು ಬಾರಿ ಉಲ್ಲೇಖಿಸಲ್ಪಟ್ಟಿದೆ ಎಂಬುದು ಸಂಶೋಧನಾ ಗುಣಮಟ್ಟಕ್ಕೆ ಕನ್ನಡಿ ಹಿಡಿಯಲಾರದು. ಅಧಿಕ ಉಲ್ಲೇಖಗಳನ್ನು ಪಡೆಯಲು ವಾಮಮಾರ್ಗ ಕಂಡುಕೊಂಡು, ಈ ಪಟ್ಟಿಯಲ್ಲಿ ಸ್ಥಾನ ಗಳಿಸಲು ಯಶಸ್ವಿ ಯಾಗಿರುವ ನಿದರ್ಶನಗಳಿಗೂ ಬರವಿಲ್ಲ. ತಮ್ಮದೇ ಗುಂಪು ರಚಿಸಿಕೊಂಡು ಪರಸ್ಪರರ ಸಂಶೋಧನಾ ಲೇಖನಗಳನ್ನು ಅಗತ್ಯವಿಲ್ಲದಿದ್ದರೂ ಉಲ್ಲೇಖಿಸುತ್ತಾ ಹೋಗುವ ವಿಧಾನವೂ ಚಾಲ್ತಿಯಲ್ಲಿದೆ. ಅಲ್ಲದೆ ತಮ್ಮ ಲೇಖನಗಳಿಗೆ ಆಧಾರವಾಗಿ ತಾವು ಈ ಮೊದಲು ಪ್ರಕಟಿಸಿರುವ ಬರಹಗಳನ್ನು ಉಲ್ಲೇಖಿಸುವುದೂ ಇದೆ.

ಯಾವ ವಿಷಯದ ಕುರಿತು ಹೆಚ್ಚು ಸಂಶೋಧನಾ ಲೇಖನಗಳು ಪ್ರಕಟವಾಗುತ್ತವೋ ಆ ಕ್ಷೇತ್ರದ ಸಂಶೋಧಕರ ಬರಹಗಳಿಗೆ ಸಹಜವಾಗಿಯೇ ಅಧಿಕ ಸಂಖ್ಯೆಯ ಉಲ್ಲೇಖಗಳು ದೊರೆಯಲಿವೆ. ಹೆಚ್ಚು ಜನ ತೊಡಗಿಕೊಳ್ಳದ ವಿಷಯದ ಕುರಿತು ಸಂಶೋಧನೆ ನಡೆಸುವವರಿಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದು. ಗುಣಮಟ್ಟಕ್ಕಿಂತ ಉಲ್ಲೇಖ ಪ್ರಮಾಣವನ್ನೇ ಮುನ್ನೆಲೆಗೆ ತರುತ್ತಿರುವ
ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವವರು ಸಂಶೋಧನಾ ಲೇಖನಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ನೈತಿಕ ಮಾನ ದಂಡಗಳನ್ನು ಯಾವ ಮಟ್ಟಿಗೆ ಪಾಲಿಸುತ್ತಿದ್ದಾರೆ ಎಂಬ ಕುರಿತು ಕೂಡ ಪ್ರಶ್ನೆಗಳು ಎದ್ದಿವೆ.

ನೈತಿಕ ಮಾನದಂಡಗಳನ್ನು ಅನುಸರಿಸದಿರುವ ಕಾರಣಕ್ಕೆ ಈಗಾಗಲೇ ಪ್ರಕಟಗೊಂಡಿರುವ ಲೇಖನಗಳನ್ನು ಹಿಂಪಡೆಯುವ ಪರಿಪಾಟವೂ ಇದೆ. ‘ಇಂಡಿಯಾ ರಿಸರ್ಚ್ ವಾಚ್‍ಡಾಗ್’ ನಡೆಸಿರುವ ವಿಶ್ಲೇಷಣೆ ಪ್ರಕಾರ, ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಶೇ 8.65ರಷ್ಟು ಭಾರತೀಯ ಸಂಶೋಧಕರ ಲೇಖನಗಳನ್ನು ಪ್ರಕಟಣೆ ನಂತರ ಹಿಂಪಡೆಯಲಾಗಿದೆ. ಈ ಬಾರಿ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ 5,352 ಭಾರತೀಯ ಸಂಶೋಧಕರಲ್ಲಿ 463 ಮಂದಿಯ ಕೆಲ ಲೇಖನಗಳನ್ನು ಹಿಂಪಡೆಯಲಾಗಿದೆ. ಶೇಕಡಾವಾರು ಅಂಕಿ-ಅಂಶ ಪರಿಗಣಿಸಿದರೆ, ಹಿಂಪಡೆಯುವಿಕೆ ಪ್ರಮಾಣದಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಚೀನಾ ಮತ್ತು ಜಪಾನ್ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿವೆ.

ಉನ್ನತ ಶಿಕ್ಷಣ ವಲಯದಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಂಶೋಧನಾ ಪತ್ರಿಕೆಗಳಲ್ಲಿ
ಹೆಚ್ಚು ಲೇಖನಗಳನ್ನು ಪ್ರಕಟಿಸುವ ಅಧ್ಯಾಪಕರಿಗೆ, ವೇತನ ಹೆಚ್ಚಳ ಮಾಡುವಾಗ, ಬಡ್ತಿ ನೀಡುವಾಗ ಆದ್ಯತೆ ದೊರೆಯುತ್ತಿದೆ. ಹೀಗಾಗಿ, ಸಂಶೋಧನಾ ಚಟುವಟಿಕೆಗಳ ಪ್ರಮಾಣ ಏರುಗತಿಯಲ್ಲಿದೆ. ಆದರೆ, ಪ್ರಾಯೋಗಿಕ ನೆಲೆಯಲ್ಲೂ ಉಪಯೋಗಕ್ಕೆ ಬರುವ ಸಂಶೋಧನೆಯು ಶೈಕ್ಷಣಿಕ ವಲಯದಲ್ಲಿ ಎಷ್ಟರಮಟ್ಟಿಗೆ ನಡೆಯುತ್ತಿದೆ ಎಂಬ ಕುರಿತು ಕೂಡ ಪರಿಶೀಲಿಸುವುದು ಆದ್ಯತೆಯಾಗಬೇಕಿದೆ.

ಅತಿ ಹೆಚ್ಚು ಉಲ್ಲೇಖಗಳನ್ನು ಹೊಂದಿರುವ ವಿಜ್ಞಾನಿಗಳ ಪಟ್ಟಿಯಲ್ಲಿ ಗುಣಮಟ್ಟದ ಸಂಶೋಧನೆ ನಡೆಸುತ್ತಿರುವ ಬಹಳಷ್ಟು ಮಂದಿ ಕೂಡ ಸ್ಥಾನ ಪಡೆದಿರಬಹುದು. ಆದರೆ, ಈ ಪಟ್ಟಿ ಪರಿಪೂರ್ಣ ವಲ್ಲ. ಬಹಳಷ್ಟು ಮಿತಿಗಳನ್ನು ಹೊಂದಿರುವ ಇದಕ್ಕೆ ಸಿಗುತ್ತಿರುವ ಮನ್ನಣೆ ಸಮಸ್ಯಾತ್ಮಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.