ADVERTISEMENT

ಸಂಗತ | ಗಾಂಧಿ ನೆನಪಾಗುತ್ತಾರೆ ಮತ್ತೆ ಮತ್ತೆ

ಅಂದು ಗಾಂಧಿಯನ್ನು ಗುಂಡಿಟ್ಟು ಕೊಂದ ‘ಇತಿಹಾಸ’ಕ್ಕಿಂತಲೂ ಇಂದು ಗಾಂಧಿಯ ಚಿತ್ರಕ್ಕೇ ಗುಂಡು ಹಾರಿಸುವ, ಅದನ್ನು ಸಂಭ್ರಮಿಸುವ ‘ವರ್ತಮಾನ’ ಅತ್ಯಂತ ಭಯಂಕರವಾಗಿ ಕಾಣುತ್ತಿದೆ

ಬಿ.ಆರ್.ಸತ್ಯನಾರಾಯಣ, ಬೆಂಗಳೂರು
Published 30 ಸೆಪ್ಟೆಂಬರ್ 2024, 23:30 IST
Last Updated 30 ಸೆಪ್ಟೆಂಬರ್ 2024, 23:30 IST
   

ಗಾಂಧೀಜಿ ಮತ್ತೆ ಮತ್ತೆ ನೆನಪಾಗುತ್ತಾರೆ. ಮತ್ತೆ ಮತ್ತೆ ಕಾಡುತ್ತಾರೆ. ಬರೀ ಅಕ್ಟೋಬರ್‌ ತಿಂಗಳಲ್ಲಿ ನೆನಪಾಗುತ್ತಾರೆ ಎಂಬುದು ಅರ್ಧ ಸುಳ್ಳಲ್ಲದೆ ಮತ್ತೇನಲ್ಲ. ವೈಯಕ್ತಿಕವಾಗಿ ಅಥವಾ ಒಂದು ಸಮುದಾಯ ಅಥವಾ ದೇಶ ಅತ್ಯಂತ ಕ್ಲಿಷ್ಟಕರ ಸಮಸ್ಯೆಯನ್ನು ಎದುರುಗೊಂಡಾಗಲೆಲ್ಲಾ, ಜಗತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಸುತ್ತಿರುವ ವ್ಯಾಪಾರ- ವ್ಯವಹಾರ, ಕೊಳ್ಳುಬಾಕತನ, ಗುಡ್ಡಗುಡ್ಡಗಳೇ ಕುಸಿದು ಅಭಿವೃದ್ಧಿಯ ಹೆದ್ದಾರಿಗೆ ಬಂದು ಕೊಚ್ಚಿ ಹೋದರೂ ತಾನು ಮಾತ್ರ, ತಾನೊಬ್ಬ ಮಾತ್ರ ಸರಿ, ಉಳಿದವರ್‍ಯಾರೂ ಸರಿಯಿಲ್ಲ ಎನ್ನುವ ಕಡುಭ್ರಷ್ಟ ರಾಜಕಾರಣಿಗಳನ್ನು ಕಂಡಾಗಲೆಲ್ಲ ಗಾಂಧಿ ನೆನಪಾಗುತ್ತಾರೆ.

ಗಾಂಧಿ ಮಾತ್ರ ಈ ಸಮಸ್ಯೆಗೆ ಪರಿಹಾರವಾಗಬಲ್ಲರು ಎಂದು ಎಷ್ಟೋ ಸಂದರ್ಭಗಳಲ್ಲಿ ಅನ್ನಿಸಿದ್ದಿದೆ. ವ್ಯಷ್ಟಿ ನೆಲೆಯಲ್ಲಿ ವ್ಯಕ್ತಿಯ ನೈತಿಕತೆಯ ಎಚ್ಚರ ಮತ್ತು ಬದ್ಧತೆಗೆ ಗಾಂಧಿ ಅತ್ಯುತ್ತಮ ಉದಾಹರಣೆಯಾಗಿದ್ದರು. ಅಂತೆಯೇ ಸಮಷ್ಟಿ ನೆಲೆಯಲ್ಲಿ, ಒಂದು ಸಮುದಾಯದ, ಸಮಾಜದ, ದೇಶದ, ಮನುಕುಲದ ನೈತಿಕತೆಗೂ ಅವರೊಂದು ಸಂಕೇತವಾಗಿದ್ದರು.

‘ರಕ್ತ, ಮಾಂಸದಿಂದ ತುಂಬಿದ್ದ ಇಂತಹವನೊಬ್ಬ ನಮ್ಮ ನಡುವೆ ನಡೆದಾಡಿದ್ದ ಎಂಬುದನ್ನು ಭವಿಷ್ಯದ ಪೀಳಿಗೆಗಳು ನಂಬುವುದಿಲ್ಲ’ ಎಂಬರ್ಥದ ಆಲ್ಬರ್ಟ್‌ ಐನ್‌ಸ್ಟೀನ್‌ ಮಾತು ಎಷ್ಟೊಂದು ನಿಜ ಎನ್ನಿಸ ಲಾರಂಭಿಸಿದೆ. ಮನುಕುಲದ ಯಾವ ಸಮಸ್ಯೆಗೆ ಗಾಂಧಿಯ ಬಳಿ ಉತ್ತರವಿರಲಿಲ್ಲ? ಈ ಕಾಲಘಟ್ಟದಲ್ಲಿ ನಿಂತು ನೋಡುವಾಗ, ಅಲ್ಲೊಂದು ಇಲ್ಲೊಂದು ತಪ್ಪುಗಳಿದ್ದರೂ ಗಾಂಧಿ ಎಂದೂ ಸುಳ್ಳು ಹೇಳಿರಲಿಲ್ಲ, ಅನ್ಯಾಯ ಎಸಗಿರಲಿಲ್ಲ. ಅವರ ಬದುಕು ತೆರೆದ ಪುಸ್ತಕದಂತಿತ್ತು. ಓದಿಕೊಂಡಂತೆಲ್ಲಾ ಗಾಂಧಿ ಎಂಬುದು ವ್ಯಕ್ತಿಯೇ ಅಥವಾ ಅದೊಂದು ಶಕ್ತಿಯೇ ಅನ್ನಿಸತೊಡಗಿದ್ದು ಸುಳ್ಳಲ್ಲ.

ADVERTISEMENT

ಗಾಂಧಿ ಗತಿಸಿ 75 ವರ್ಷಗಳೇ ಆಗಿಹೋಗಿವೆ. ಜಗತ್ತಿನ ಎಷ್ಟೋ ಸಮಸ್ಯೆಗಳು ಉಲ್ಬಣಿಸುತ್ತಿವೆ. ಅಣ್ಣ–ತಮ್ಮಂದಿರ, ಬಂಧುಗಳ, ಸ್ನೇಹಿತರ ನಡುವಿನ ಜಗಳಗಳಿಂದ ಹಿಡಿದು ದೇಶ ದೇಶಗಳ ನಡುವಿನ ಯುದ್ಧಗಳು ಕೊನೆಯಾಗಿಲ್ಲ. ಮುಗಿದುಹೋಗಿರುವ ಯುದ್ಧಗಳಿಂದ ಯಾವ ಸಮಸ್ಯೆಗೂ ಪರಿಹಾರ ಸಿಕ್ಕಿಲ್ಲ. ಬದಲಿಗೆ, ಹೊಸ ಹೊಸ ಯುದ್ಧಗಳಿಗೆ ಮುನ್ನುಡಿ ಬರೆದೇ ಹೋಗುತ್ತಿವೆ! ಹೀಗೇ, ಮನುಕುಲ ಎಷ್ಟು ಕಾಲ ಯುದ್ಧಗಳಲ್ಲಿ ಮುಳುಗಿ ಅಮಾಯಕರು ಸಾಯುತ್ತಲೇ ಇರಬೇಕು? ಅದಕ್ಕೊಂದು ಕೊನೆ ಇಲ್ಲವೇ? ತೀರಾ ಇತ್ತೀಚೆಗೆ ಪ್ಯಾಲೆಸ್ಟೀನ್‌- ಇಸ್ರೇಲ್‌ ಹಾಗೂ ರಷ್ಯಾ- ಉಕ್ರೇನ್‌ ಮತ್ತು ಈಗಷ್ಟೇ ಪ್ರಾರಂಭವಾಗಿರುವ ಇಸ್ರೇಲ್- ಲೆಬನಾನ್ ಯುದ್ಧಗಳಲ್ಲಿ ಕಳೆದೊಂದು ವರ್ಷದಲ್ಲಿ ಸತ್ತವರು, ಸಾಯುತ್ತಿರುವ
ವರನ್ನು ಕಂಡಾಗ ಗಾಂಧಿ ನೆನಪಾಗುತ್ತಾರೆ.

ನಮ್ಮ ಭಾರತದಲ್ಲಿಯೇ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ಸತ್ತವರೆಷ್ಟು? ಮನೆ ಮಠ ಕಳೆದುಕೊಂಡವರೆಷ್ಟು? ದೇಶದ ಆಡಳಿತದ ಚುಕ್ಕಾಣಿ ಹಿಡಿದವರೇ ಅದನ್ನೊಂದು ಸಮಸ್ಯೆಯೇ ಅಲ್ಲವೆಂಬಂತೆ ನಿರ್ಲಿಪ್ತರಾಗಿದ್ದಾರೆ ಅಥವಾ ನಿರ್ಲಕ್ಷಿಸಿದ್ದಾರೆ. ಆದರೆ ಜನ ಸಾಯುವುದು ನಿಂತಿದೆಯೇ? ಸಹಸ್ರಾರು ಜನರು ವರ್ಷಗಳ ಕಾಲ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆಯುವುದು ನಾಗರಿಕ ಸಮಾಜದ ಲಕ್ಷಣವೇ? ಪೊಲೀಸ್‌, ಮಿಲಿಟರಿ, ಆಡಳಿತ ವ್ಯವಸ್ಥೆಯೇ ಒಂದು ಹಂತದಲ್ಲಿ ಕೈಚೆಲ್ಲಿದೆಯೇನೋ ಅನ್ನಿಸುವಂತಹ ಈ ವಾತಾವರಣದಲ್ಲಿ ಗಾಂಧಿ ಇರಬೇಕಿತ್ತು. ಸರಿಯೋ ತಪ್ಪೋ, ಹಟ ಮಾಡಿಯಾದರೂ ಅಮಾಯಕರು, ಮಕ್ಕಳು ಸಾಯುವುದನ್ನಂತೂ ಆತ ತಪ್ಪಿಸುತ್ತಿದ್ದ ಅನ್ನಿಸಿದ್ದಿದೆ.

ದೀರ್ಘಕಾಲದ ಜನಾಂಗೀಯ ಕಾದಾಟಗಳಿಂದ, ಯುದ್ಧದ ಹಿಂಸೆಯಿಂದ ಮನುಕುಲಕ್ಕೆ ಮುಕ್ತಿ ಬೇಕಾದರೆ ಪ್ರತಿ ವ್ಯಕ್ತಿಯ ಮನಸ್ಸಿನಲ್ಲೂ ನೈತಿಕತೆ ಎಚ್ಚರವಾಗಬೇಕಿದೆ. ಎಲ್ಲರೂ ತನ್ನಂತೆಯೇ ಎಂಬ ಒಂದು ಅನುಭೂತಿ ಮನುಷ್ಯನ ಮನಸ್ಸಿನಲ್ಲಿ ಖಂಡಿತವಾಗಿ ಬೆಳೆಯಬೇಕಿದೆ. ಇಂತಹ ವ್ಯಕ್ತಿಗತ ಅನುಭೂತಿಯೇ ಒಂದು ದೇಶವನ್ನೂ ಇಡೀ ಜಗತ್ತನ್ನೂ ಕಾಪಾಡುವ ಚೈತನ್ಯವಾಗುತ್ತದೆ. ಗಾಂಧಿ ವಿಚಾರಧಾರೆ ಮಾನವನ ಎದೆಯಿಂದಲೆದೆಗೆ ಹರಿಯಲಾರಂಭಿಸಬೇಕಿದೆ. ಆದರೆ ಇದು ವರ್ತಮಾನದ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಯಾವ ದೇಶದಲ್ಲೂ ಅಷ್ಟೊಂದು ಸುಲಭವಲ್ಲ ಎಂಬಂತಹ ಸನ್ನಿವೇಶ ಸೃಷ್ಟಿ ಯಾಗಿರುವುದು ವರ್ತಮಾನದ ದುರಂತ.

75 ವರ್ಷಗಳ ಹಿಂದೆ ಗಾಂಧಿಯನ್ನು ಗುಂಡಿಟ್ಟು ಕೊಂದ ‘ಇತಿಹಾಸ’ಕ್ಕಿಂತಲೂ ಇಂದು ಗಾಂಧಿಯ ಚಿತ್ರಕ್ಕೇ ಗುಂಡು ಹಾರಿಸುವ, ಅದನ್ನು ಸಂಭ್ರಮಿಸುವ, ವೈಯಕ್ತಿಕ ನಿಂದನೆ, ತೇಜೋವಧೆಗಿಳಿಯುವ ‘ವರ್ತಮಾನ’ ಅತ್ಯಂತ ಭಯಂಕರವಾಗಿ ಕಾಣುತ್ತಿದೆ. ವಿದೇಶಗಳಲ್ಲಿ ಗಾಂಧಿ ಪ್ರತಿಮೆ ಎದುರು ತಲೆಬಾಗಿ ನಿಲ್ಲುವವರಿಗೆ, ಭಾರತದಲ್ಲಿಯೇ ಗಾಂಧಿಯ ತೇಜೋವಧೆಗಿಳಿದವರು ಕಾಣುವುದಿಲ್ಲ!

ಆದರೂ, ಒಳ್ಳೆಯತನ ಎಂಬುದು ಮನುಷ್ಯನ ಆನುಷಂಗಿಕ ಗುಣ, ಸ್ವಭಾವ. ಅದು ತತ್ಕಾಲದಲ್ಲಿ ನಿದ್ರಿಸುತ್ತಿರಬಹುದು, ಆದರೆ ಸತ್ತಿಲ್ಲ. ಮನುಕುಲದ ಉನ್ನತಿಗೆ ವ್ಯಷ್ಟಿಯ ಬಯಕೆ ಸಮಷ್ಟಿಯ ಬಯಕೆಯೂ ಆಗಿ ಕೈಗೂಡುತ್ತದೆ ಎಂಬ ನಿರೀಕ್ಷೆಯಂತೂ ಇದ್ದೇ ಇದೆ. ಈ ನಿರೀಕ್ಷೆಗೆ ಆಧಾರವೇ ಗಾಂಧಿ!

ಚಿಕ್ಕಮಕ್ಕಳ ಮನಸ್ಸಿಗೆ ಗಾಂಧಿ ಎಂಬ ಚೈತನ್ಯದ ಸ್ಪರ್ಶ ಆಗಬೇಕಿದೆ, ಅಷ್ಟೆ! ನೆಲಕ್ಕೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರಗಳಂತೆಯೇ ಎಳೆಯ ಮನಸ್ಸಿಗಿಳಿದ ‘ಗಾಂಧಿ’ ಮನುಕುಲಕ್ಕೆ ಉಸಿರಾಗಬಲ್ಲರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.