ADVERTISEMENT

‘ಶಿಕ್ಷಣ ರಾಜಕೀಯ’ಕ್ಕೆ ಪರ್ಯಾಯ

​ಪ್ರಜಾವಾಣಿ ವಾರ್ತೆ
Published 28 ಜೂನ್ 2018, 17:43 IST
Last Updated 28 ಜೂನ್ 2018, 17:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಓಪನ್‌ ಬುಕ್‌ ಪರೀಕ್ಷಾ ವ್ಯವಸ್ಥೆ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಆದರೆ, ಪರೀಕ್ಷಾ ವ್ಯವಸ್ಥೆಯನ್ನು ಬದಲಿಸಲು ಹೊರಟಿರುವುದೇಕೆ ಎಂಬುದು ಸ್ಪಷ್ಟವಾಗಿಲ್ಲ.

ಪರೀಕ್ಷಾ ವ್ಯವಸ್ಥೆಯಲ್ಲಿ ಅತಿಯಾದ ಭ್ರಷ್ಟತೆ ಇದೆಯೆಂದೊ, ಅಂಕ ಗಳಿಕೆಯ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಮಾನಸಿಕ ಹಿಂಸೆ ಉಂಟುಮಾಡುತ್ತಿದೆ ಎಂದೊ, ಕಲಿಕೆಯಿಂದ ಆಗಬೇಕಾದ ಗ್ರಹಿಕೆ ಹಾಗೂ ಆಲೋಚನಾ ಶಕ್ತಿಯ ವೃದ್ಧಿಯನ್ನು ಪರೀಕ್ಷಾ ಭಯವು ಕಸಿಯುತ್ತಿದೆ ಎಂದೊ, ಅಂಕ ಗಳಿಕೆಯ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ತಾರತಮ್ಯ ಮನೋಭಾವ ಮೂಡಿಸುತ್ತಿದೆ ಎಂದೊ... ಪರೀಕ್ಷಾ ವ್ಯವಸ್ಥೆ ಬದಲಾವಣೆಯ ಹಿಂದಿನ ಆಲೋಚನೆ ಯಾವುದಾದರೂ ಇರಬಹುದು.

ಕೆಲವು ಖಾಸಗಿ ಶಾಲೆಗಳವರು, ‘ನಮ್ಮ ಶಾಲೆಯಲ್ಲಿ ಸರ್ಕಾರಿ ಶಾಲೆಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ನೀಡು
ತ್ತೇವೆ’ ಎಂದು ಹೇಳಿಕೊಳ್ಳುವುದರ ಹಿಂದೆ ಶೈಕ್ಷಣಿಕ ರಾಜಕೀಯವಿದೆ. ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿ, ಕೊಠಡಿಯಲ್ಲಿ ನೋಟ್ಸ್ ಕೊಟ್ಟೋ ಉತ್ತರವನ್ನು ಹೇಳಿ ಬರೆಯಿಸುವ ಮೂಲಕವೋ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಿಂತ ಮುಂದಿರುವುದನ್ನು ಅಂಕಿಅಂಶಗಳ ಸಮೇತ ತೋರಿಸಿ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾ ಹುಡಿ ಮಣ್ಣನ್ನು ಎಲ್ಲರಿಗೂ ಎರಚಿ ಜಾಣ್ಮೆ ಮೆರೆಯುತ್ತಾರೆ. ಈ ಶೇಕಡಾವಾರು ಫಲಿತಾಂಶವೇ ಪೋಷಕರಿಗೆ ಆಕರ್ಷಕವಾಗಿ ಕಾಣಿಸುತ್ತದೆ.

ADVERTISEMENT

‘ಖಾಸಗಿ ಶಾಲಾ ಮೇನಿಯಾ’ ಸರ್ಕಾರಿ ಶಾಲೆಗಳ ಮೇಲೆ ಒತ್ತಡ ಉಂಟುಮಾಡುತ್ತದೆ. ಕೆಲ ಸರ್ಕಾರಿ ಶಾಲೆಗಳಲ್ಲೂ ಪರೀಕ್ಷಾ ಕೊಠಡಿಯಲ್ಲಿ ಉತ್ತರ ಹೇಳಿಕೊಟ್ಟು ಅಥವಾ ನೋಟ್ಸ್ ಕೊಟ್ಟು ಉತ್ತರ ಬರೆಯಿಸಲಾಗುತ್ತದೆ. ಫಲಿತಾಂಶ ಕಡಿಮೆಯಾದರೆ ಇಲಾಖೆಯ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಭಯ ಇದಕ್ಕೆ ಕಾರಣ. ಹೀಗೆ ಒಟ್ಟಾರೆ ಪರೀಕ್ಷಾ ವ್ಯವಸ್ಥೆ ಭ್ರಷ್ಟಗೊಂಡಿರುವ ಸಂದರ್ಭದಲ್ಲಿ ಸಚಿವರ ಹೇಳಿಕೆ ಬಹಳ ಮಹತ್ವ ಪಡೆದಿದೆ.

ಉತ್ತಮ ಫಲಿತಾಂಶಕ್ಕೆ ಗಂಟು ಬೀಳಿಸುವ ಶಿಕ್ಷಣ ವ್ಯವಸ್ಥೆಯಲ್ಲಿ ಮನೆಪಾಠ ಅನಿವಾರ್ಯವೆಂದು ಒಪ್ಪಿಕೊಳ್ಳುವ ಸ್ಥಿತಿಯು ವಿದ್ಯಾರ್ಥಿಗಳ ಗಾಯದ ಮೇಲೆ ಬರೆ ಎಳೆದಂತೆ. ಇದು ಮಕ್ಕಳ ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ. ಇದರ ಪರಿಣಾಮ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಇರಬೇಕಾದ ಓದಿನ ಪ್ರೀತಿಯನ್ನು ‘ಓದಿನ ದ್ವೇಷ’ವಾಗಿ ಬದಲಾಯಿಸುತ್ತದೆ. ಇಂತಹ ಶಿಕ್ಷಣವು ಪೋಷಕರಿಗೂ ದುಬಾರಿಯಾಗಿ, ಶಾಲೆಗಳು ಬಂಡವಾಳ ಹೂಡಿಕೆಯ ಜಾಗಗಳಾಗುತ್ತಿವೆ.

ಈಗಿನ ಪರೀಕ್ಷಾ ವ್ಯವಸ್ಥೆಯು ವಿದ್ಯಾರ್ಥಿಗಳ ನೆನಪಿನ ಶಕ್ತಿಯನ್ನು ಆಧರಿಸಿದ್ದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಕಂಠಪಾಠ ಮಾಡುತ್ತಾರೆ. ಈ ಕಂಠಪಾಠವೇ ಗ್ರಹಿಕೆ, ಆಲೋಚನೆಗಳ ಜಾಗವನ್ನು ಆಕ್ರಮಿಸಿಕೊಂಡಿದೆ. ಇದರಿಂದ ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಭಾವನಾತ್ಮಕ ಬೆಳವಣಿಗೆಗೂ ಅಡ್ಡಿಯಾಗಿದೆ. ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಆಲೋಚನಾಹೀನರಾಗಿಯೂ ಉತ್ತಮ ಅಂಕ ಪಡೆಯುವ ಸಾಧನೆ ಮಾಡಬಹುದು. ಇಂತಹ ಪದ್ಧತಿಯಿಂದ ಸಕಾರಾತ್ಮಕ ಸಾಮಾಜಿಕ ಬದಲಾವಣೆಯನ್ನು ಬಯಸುವುದು ಭ್ರಮೆಯಲ್ಲವೇ?

ಈ ಶೈಕ್ಷಣಿಕ ವ್ಯವಸ್ಥೆಯ ಮಧ್ಯದಲ್ಲೇ ಸಚಿವರು ಪರೀಕ್ಷೆಯ ಬಿಗುವನ್ನು ಸಡಿಲಗೊಳಿಸುವ ಮಾತನ್ನಾಡಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಕೊಂಚ ಸಮಾಧಾನ ತರಬಹುದು. ಇದರ ಜೊತೆಗೆ ಪ್ರಾಥಮಿಕ ಹಂತದಲ್ಲಾದರೂ ಕಲಿಕಾ ಸ್ವರೂಪವನ್ನೂ ಬದಲಾಯಿಸಿದರೆ (ಪ್ರಾಯೋಗಿಕವಾಗಿ) ಒಳಿತು ಎನ್ನಿಸುತ್ತದೆ. ಪಠ್ಯಪುಸ್ತಕದಲ್ಲಿ ಪ್ರತಿ ಪಾಠದ ಕೊನೆಗೆ ಕೆಲವು ಪ್ರಶ್ನೆಗಳನ್ನು ಪಟ್ಟಿ ಮಾಡಿಕೊಡುವ ವ್ಯವಸ್ಥೆಯನ್ನು ನಿಲ್ಲಿಸಬೇಕು. ಮೊದಲೇ ಪ್ರಶ್ನೆಗಳನ್ನು ಕೊಟ್ಟು, ಪರೀಕ್ಷೆಯಲ್ಲಿ ಪುಸ್ತಕ ನೋಡಿ ಉತ್ತರ ಬರೆಯಲು ಹೇಳುವುದು ಒಟ್ಟಾರೆ ವ್ಯವಸ್ಥೆಯನ್ನು ಇನ್ನಷ್ಟು ಕೆಡಿಸಿದಂತಾಗುವುದೇ ಹೊರತು ಬಹಳ ಸುಧಾರಿಸಿದಂತೇನೂ ಆಗದು.

ಪ್ರತಿ ಪಾಠವನ್ನು ಬೋಧಿಸಿದ ನಂತರ ಶಿಕ್ಷಕರೇ ಆ ಪಾಠದಿಂದ ಕೆಲವು ಪ್ರಶ್ನೆಗಳನ್ನು ಎತ್ತುವಂತೆ ಮಾಡಬೇಕು. ಹೀಗೆ ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಪಠ್ಯಕ್ಕೆ ಸಂಬಂಧಿಸಿದಂತೆ ತರಾವರಿ ಪ್ರಶ್ನೆಗಳನ್ನು ಕೇಳಿದಂತಾಗುತ್ತದೆ. ಇದು ಹೆಚ್ಚು ಸೃಜನಾತ್ಮಕ ಅಲ್ಲವೇ? ಇದರಿಂದ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವವನ್ನೂ ರೂಢಿಸಿದಂತೆ ಆಗುತ್ತದೆ. ಅವರಲ್ಲಿ ಆಲೋಚನಾ ಶಕ್ತಿಯನ್ನು ಉದ್ದೀಪಿಸಿದಂತಾಗುತ್ತದೆ. ಇದು ಸಮಾಜದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರಬಹುದು.

ದೊಡ್ಡಿಶೇಖರ, ಪುತ್ತೂರು
*

ಸ್ವೇಚ್ಛಾ ಪ್ರವೃತ್ತಿಗೆ ದಾರಿ!

ಓಪನ್‌ ಬುಕ್‌ ಪರೀಕ್ಷಾ ವ್ಯವಸ್ಥೆ ಬಗ್ಗೆ ಕಳೆದ ಕೆಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಈ ವ್ಯವಸ್ಥೆಯಿಂದ ಮಕ್ಕಳ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ. ಸ್ಮರಣ ಶಕ್ತಿ, ಗ್ರಹಣ ಶಕ್ತಿ, ಲೇಖನ ಶಕ್ತಿಗಳು ಕುಂಠಿತವಾಗುತ್ತವೆ. ತರಗತಿಯಲ್ಲಿ ಪಾಠ ಮಾಡುವಾಗ ವಿದ್ಯಾರ್ಥಿಗಳು ಏಕಾಗ್ರತೆಯಿಂದಿರುವ ಬದಲು, ಹೇಗೂ ‘ಪುಸ್ತಕ ನೋಡಿ ಬರೆದರಾಯಿತು’ ಎಂಬ ಧೋರಣೆ ತಳೆದು, ಓದುವ ಅಭ್ಯಾಸದಿಂದ ದೂರವಾಗುತ್ತಾರೆ ಎಂಬುದು ನನ್ನ ಅಭಿಪ್ರಾಯ.

ಹಲವು ದಶಕಗಳಿಂದ ಬಂದಿರುವ ವ್ಯವಸ್ಥೆಯನ್ನು ಏಕಾಏಕಿ ಬದಲಿಸುವುದು ಸಮಂಜಸವಲ್ಲ. ಸರ್ಕಾರಿ ಶಾಲೆಯೇ ಆಗಿರಲಿ, ಖಾಸಗಿ ಶಾಲೆಯೇ ಆಗಿರಲಿ ನರ್ಸರಿಯಿಂದ ತೊಡಗಿ ಪ್ರೌಢಶಾಲಾ ಹಂತದವರೆಗೆ ಅಕ್ಷರ ಜ್ಞಾನವಿಲ್ಲದಿರುವ ಹಲವು ವಿದ್ಯಾರ್ಥಿಗಳಿದ್ದಾರೆ.
ಇದಕ್ಕೆ ಸರ್ಕಾರದ ನಿಯಮಗಳೇ ಕಾರಣ. ಮಕ್ಕಳನ್ನು ಅನುತ್ತೀರ್ಣಗೊಳಿಸಬಾರದು. ಅವರನ್ನು ಗದರಿಸಬಾರದು (ಮಕ್ಕಳು ಏನೇ ಮಾಡಿದರೂ), ಓದಲು ಬರೆಯಲು, ಹೋಂವರ್ಕ್ ಮಾಡಲು ಬಾರದಿದ್ದರೂ ದಂಡನೆ ಇರಬಾರದು... ಹೀಗೆಲ್ಲ ಮಾಡಿದರೆ ಮಕ್ಕಳಲ್ಲಿ ‘ಹೇಗಿದ್ದರೂ ಸರಿ’ ಎಂಬ ಸ್ವೇಚ್ಛಾ ಪ್ರವೃತ್ತಿ ಬರುತ್ತದೆ.

ಕಂಠಪಾಠ ವ್ಯವಸ್ಥೆಯನ್ನು ಯಾವ ಶಿಕ್ಷಕರೂ ಬಯಸುವುದಿಲ್ಲ (ಪದ್ಯಗಳನ್ನು ಹೊರತು ಪಡಿಸಿ). ಆದರೆ ತರಗತಿಗಳಲ್ಲಿ ಮಾಡಿದ ಪಾಠವನ್ನು ಓದಿ, ಅರ್ಥೈಸಿ, ಮನನ ಮಾಡಿ ಸ್ವಂತವಾಗಿ ಬರೆಯುವ ರೀತಿಯನ್ನು ಅವರು ಹೇಳಿಕೊಡಬೇಕು. ಕಂಠಪಾಠ ಮಾಡಿದರೆ ಪರೀಕ್ಷೆ ಮುಗಿದ ತರುವಾಯ ಅವನ್ನು ಮರೆತುಬಿಡುವ ಸಾಧ್ಯತೆಯೇ ಹೆಚ್ಚು. ಆದರೆ ಪುಸ್ತಕ ನೋಡಿ ಬರೆಯುವ ವ್ಯವಸ್ಥೆ ಮಕ್ಕಳ ಕಲಿಕಾ ಮಟ್ಟವನ್ನು ಕುಗ್ಗಿಸುತ್ತದೆ. ಇದು ‘ಮಕ್ಕಳ ಬಿಡುಗಡೆಗೆ ಹಾದಿ’ ಹೇಗಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ.

ಟಿ.ವಿ., ಕಂಪ್ಯೂಟರ್, ಸ್ಮಾರ್ಟ್‌ ಫೋನ್‌ಗಳು ಇಂದಿನ ಮಕ್ಕಳನ್ನು ಓದುವ ಅಭ್ಯಾಸದಿಂದ ದೂರ ಮಾಡುತ್ತಿವೆ. ಹೊಸ ಪದ್ಧತಿಯಿಂದ ಮಕ್ಕಳು ಬರೆಯುವ ಸಾಮರ್ಥ್ಯವನ್ನಾದರೂ ಪಡೆಯಲು ಸಾಧ್ಯವೇ?

ಡಾ. ವರದಾ ಶ್ರೀನಿವಾಸ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.