ADVERTISEMENT

ಸಂಗತ | ವಿ.ವಿ.ಗಳಲ್ಲಿ ಸಂಶೋಧನೆ: ನಿಂತ ನೀರು?

ಗುಣಮಟ್ಟದ ಕೊರತೆ, ಶೀರ್ಷಿಕೆಗಳ ಪುನರಾವರ್ತನೆ, ನಕಲು ಪ್ರವೃತ್ತಿಯಿಂದ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಯು ಉತ್ಕೃಷ್ಟತೆಯನ್ನು ಕಳೆದುಕೊಳ್ಳುತ್ತಿದೆ

ರಾಜಕುಮಾರ ಕುಲಕರ್ಣಿ
Published 3 ಅಕ್ಟೋಬರ್ 2024, 23:30 IST
Last Updated 3 ಅಕ್ಟೋಬರ್ 2024, 23:30 IST
   

ಕಾಲೇಜೊಂದರ ಅನುಮತಿಯ ನವೀಕರಣದ ಪರಿವೀಕ್ಷಣೆಗೆಂದು ಇತ್ತೀಚೆಗೆ ತೆರಳಿದ್ದ ಪ್ರಾಧ್ಯಾಪಕರು ಅಲ್ಲಿನ ಸಂಶೋಧನಾ ಬೆಳವಣಿಗಯನ್ನು ನೋಡಿ ದಂಗಾದರು. ಒಂದು ವಿಭಾಗದ ಮೂವರು ಪ್ರಾಧ್ಯಾಪಕರ ದಾಖಲೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿದಾಗ, ಒಂದು ವರ್ಷದ ಅವಧಿಯಲ್ಲಿ ಆ ವಿಭಾಗಕ್ಕೆ
ಸಂಬಂಧಿಸಿದ ವಿಷಯದಲ್ಲಿ ಒಂಬತ್ತು ಸಂಶೋಧನಾ ಲೇಖನಗಳು ಪ್ರಕಟವಾಗಿರುವುದು ತಿಳಿದುಬಂತು. ಅವುಗಳನ್ನೆಲ್ಲ ಒಟ್ಟಿಗೆ ಸೇರಿಸಿ ನೋಡಿದಾಗ, ಪ್ರಕಟವಾದ ಲೇಖನಗಳ ಸಂಖ್ಯೆ ಮೂರು ಮಾತ್ರ ಎನ್ನುವ ಸತ್ಯ ಬಹಿರಂಗಗೊಂಡಿತು. ಅಂದರೆ, ಪ್ರತಿ ಪ್ರಾಧ್ಯಾಪಕ ತನ್ನ ಲೇಖನದಲ್ಲಿ ಉಳಿದ ಇಬ್ಬರು ಪ್ರಾಧ್ಯಾಪಕರ ಹೆಸರನ್ನು ಸಹ ಲೇಖಕರೆಂದು ಸೇರಿಸಿದ್ದು ಕಂಡುಬಂತು. ಮೂವರೂ ಪ್ರಾಧ್ಯಾಪಕರು ಲೇಖನಗಳನ್ನು ಪ್ರತ್ಯೇಕವಾಗಿ ತೋರಿಸಿದ್ದರಿಂದ, ಮೂರು ಲೇಖನಗಳ ಸಂಖ್ಯೆ ಒಂಬತ್ತಾಗಿ ತ್ರಿಗುಣ ಗೊಂಡಿತ್ತು. ಬೋಧಕರು ತಮ್ಮ ಶೈಕ್ಷಣಿಕ ಸಾಧನೆಯ ಉತ್ಕೃಷ್ಟತೆಯ ಪ್ರದರ್ಶನಕ್ಕಾಗಿ ಕೊಡು-ಕೊಳ್ಳುವಿಕೆಯ ಈ ಮಾರ್ಗವನ್ನು ಅನುಸರಿಸುತ್ತಿದ್ದಾರೆ.

ಬೋಧಕರು ಸಂಶೋಧನಾ ಲೇಖನಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸಂಶೋಧನಾ ವಿದ್ಯಾರ್ಥಿ
ಗಳನ್ನು ಅವಲಂಬಿಸಿರುವ ಇನ್ನೊಂದು ವಿಧಾನ ಚಾಲ್ತಿಯಲ್ಲಿದೆ. ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರು ತಮ್ಮ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಸಂಶೋಧನಾ ಲೇಖನಗಳನ್ನು ಪ್ರಕಟಿಸುವಂತೆ ಒತ್ತಡ ತರುವ ಪ್ರವೃತ್ತಿ ಹೆಚ್ಚುತ್ತಿದೆ. ಅವರು ತಮ್ಮ ಸಂಶೋಧನಾ ಲೇಖನದಲ್ಲಿ ಮಾರ್ಗದರ್ಶಕರ ಹೆಸರನ್ನು ಪ್ರಥಮ ಇಲ್ಲವೇ ಸಹಲೇಖಕ ಎಂದು ನಮೂದಿಸುವುದೇ ಇಂತಹದ್ದೊಂದು ಹುನ್ನಾರಕ್ಕೆ ಕಾರಣ.

ಈ ನಡುವೆ ಉಚಿತವಾಗಿ ದೊರೆಯುವ ಸಂಶೋಧನಾ ಲೇಖನಗಳಿಗೆ ವಿದ್ಯಾರ್ಥಿಗಳು ಮತ್ತು ಬೋಧಕರಿಂದ ಬೇಡಿಕೆ ಹೆಚ್ಚುತ್ತಿದೆ. ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ
ಸೇವೆ ಸಲ್ಲಿಸುತ್ತಿರುವ ನನ್ನ ಸ್ನೇಹಿತರೊಬ್ಬರಿಗೆ ಇತ್ತೀಚೆಗೆ ಸಂಶೋಧನಾ ವಿದ್ಯಾರ್ಥಿಯೊಬ್ಬನಿಂದ ನಿರ್ದಿಷ್ಟ ಲೇಖನಕ್ಕೆ ಬೇಡಿಕೆ ಬಂತು. ವಿವಿಧ ಜಾಲತಾಣಗಳನ್ನು ಪರಿಶೀಲಿಸಿದಾಗ, ಲೇಖನ ಪಡೆಯಲು ನಿರ್ದಿಷ್ಟ ಶುಲ್ಕ ಪಾವತಿಸುವುದು ಕಡ್ಡಾಯವೆಂದು ತಿಳಿದುಬಂತು. ಆದರೆ ಆತ ಉಚಿತವಾಗಿ ದೊರೆಯುವ ಬೇರೆ ಲೇಖನ ಓದಿದರಾಯಿತು ಎಂದು ಪ್ರತಿಕ್ರಿಯಿಸಿದ. ಸಂಶೋಧನೆಯ ವೇಳೆ ನಿರ್ದಿಷ್ಟ ಲೇಖನಕ್ಕೆ ಬದಲಾಗಿ ಪರ್ಯಾಯ ಲೇಖನ ಎನ್ನುವ ಅನುಕೂಲಸಿಂಧು ನಿಲುವಿನಿಂದ ಸಂಶೋಧನೆಯಲ್ಲಿ ಉತ್ಕೃಷ್ಟತೆಯನ್ನು
ಸಾಧಿಸುವುದಾದರೂ ಹೇಗೆ ಎನ್ನುವುದು ನನ್ನ ಸ್ನೇಹಿತರ ಆತಂಕವಾಗಿತ್ತು. ವಿದ್ಯಾರ್ಥಿಗಳು ಮಾತ್ರವಲ್ಲ ಆಕರ್ಷಕ ಸಂಬಳ ಪಡೆಯುವ ಬೋಧಕರು ಕೂಡ ಉಚಿತವಾಗಿ ಸಿಗುವ ಮಾಹಿತಿಗಾಗಿ ಬೇಡಿಕೆ
ಸಲ್ಲಿಸುತ್ತಿರುವುದು ವಿಪರ್ಯಾಸದ ಸಂಗತಿ.

ADVERTISEMENT

ವಾಮಮಾರ್ಗದ ಮೂಲಕ ಓದುಗರಿಗೆ ಮಾಹಿತಿ ತಲುಪಿಸಲು ಇಂದು ಅನೇಕ ಜಾಲತಾಣ ಗಳಿರುವುದು ಇಂತಹ ಬೇಡಿಕೆಗೆ ಕಾರಣ. ಸಾಮಾನ್ಯ ಮಾಹಿತಿ ಮಾತ್ರವಲ್ಲದೆ, ಸಂಶೋಧನಾ ಲೇಖನಗಳು ಕೂಡ ಓದುಗರಿಗೆ ಉಚಿತವಾಗಿ ಲಭ್ಯವಾಗುತ್ತಿವೆ.

ಪ್ರಕಾಶಕರ ಅನುಮತಿ ಇಲ್ಲದೆ ಸಂಶೋಧನಾ ಲೇಖನಗಳನ್ನು ಉಚಿತವಾಗಿ ಒದಗಿಸುವ ಜಾಲತಾಣ
ಗಳನ್ನು ಪತ್ತೆಹಚ್ಚುವಲ್ಲಿ ಗ್ರಂಥಪಾಲಕರ ಪಾತ್ರ ಪ್ರಮುಖವಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ಮಾರ್ಗದಿಂದಾದರೂ ಸರಿ ಗ್ರಂಥಪಾಲಕ ತಮಗೆ ಬೇಕಾದ ಲೇಖನವನ್ನು ಉಚಿತವಾಗಿ ಒದಗಿಸಬೇಕೆಂದು ಅಪೇಕ್ಷಿಸುತ್ತಾರೆ. ತಮ್ಮ ವೃತ್ತಿಯ ಅಸ್ತಿತ್ವಕ್ಕಾಗಿ ಗ್ರಂಥಪಾಲಕರು ಇಂತಹ ಕಾರ್ಯಕ್ಕೆ
ಮುಂದಾಗುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಂಶೋಧನಾ ನಿಯತಕಾಲಿಕಗಳ ಪೇಪರ್ ಮಾದರಿಯ ಪ್ರಕಟಣೆ ಸಂಖ್ಯಾತ್ಮಕವಾಗಿ
ಕ್ಷೀಣಿಸುತ್ತಿದೆ. ಹೆಚ್ಚಿನ ಪ್ರಕಾಶಕರು ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಮಾದರಿಯಲ್ಲಿ ಪ್ರಕಟಿಸಲು ಒಲವು ತೋರುತ್ತಿದ್ದಾರೆ. ಕಾಗದ ಮತ್ತು ಮುದ್ರಣ ಸಾಮಗ್ರಿಗಳ ಅಧಿಕ ಬೆಲೆ ಈ ಮಾರ್ಪಾಡಿಗೆ ಕಾರಣ. ಶಿಕ್ಷಕರು, ವಿದ್ಯಾರ್ಥಿಗಳು ಸಂಶೋಧನಾ ಲೇಖನಗಳನ್ನು ಶುಲ್ಕ ಪಾವತಿಸಿ ಪಡೆಯಲು ಸಿದ್ಧರಿಲ್ಲದಿರುವುದು, ಕೆಲವು ಜಾಲತಾಣಗಳು ಸಂಶೋಧನಾ ಲೇಖನಗಳನ್ನು ಉಚಿತವಾಗಿ ಒದಗಿಸುತ್ತಿರುವುದು ಪ್ರಕಾಶಕರ ಆರ್ಥಿಕ ಸಮಸ್ಯೆಯನ್ನು ಉಲ್ಬಣಗೊಳಿಸಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಂತಹ ಉನ್ನತ ಶಿಕ್ಷಣ ಸಮಿತಿಗಳು ಬೋಧಕರು ಸಂಶೋಧನಾ ಲೇಖನ ಪ್ರಕಟಿಸುವುದನ್ನು ಕಡ್ಡಾಯಗೊಳಿಸಿವೆ. ವೇತನ ಬಡ್ತಿ ಮತ್ತು ಹುದ್ದೆಯ ಬಡ್ತಿಗೆ ಇದನ್ನು ಪರಿಗಣಿಸುವುದ ರಿಂದ ಹೆಚ್ಚಿನ ಶಿಕ್ಷಕರು ಇದನ್ನೊಂದು ಅನಿವಾರ್ಯ ನಿಯಮವೆನ್ನುವಂತೆ ಪಾಲಿಸುತ್ತಾರೆಯೇ ವಿನಾ ಸ್ವಯಂ ಆಸಕ್ತಿಯಿಂದ ಸಂಶೋಧನೆಯಲ್ಲಿ ತೊಡಗಿಕೊಳ್ಳು ವುದು ವಿರಳ. ದೀರ್ಘಕಾಲ ಅಧ್ಯಯನದಲ್ಲಿ ತೊಡಗಿಸಿ
ಕೊಳ್ಳಲು ಸಿದ್ಧರಿಲ್ಲದ ಸಂಶೋಧಕರಲ್ಲಿ ನಕಲು ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ನಕಲನ್ನು ಪತ್ತೆಹಚ್ಚಲು ತಂತ್ರಾಂಶಗಳು ಬಳಕೆಯಲ್ಲಿ ಇವೆಯಾದರೂ ಅದೇ ತಂತ್ರಾಂಶಗಳ ಸಹಾಯದಿಂದ ನಕಲು ಕಡಿಮೆ ಪ್ರಮಾಣದಲ್ಲಿ ಗೋಚರವಾಗುವಂತೆ ಮಾಡಲು ಕೂಡ ಸಾಧ್ಯವಿದೆ ಎಂದು ಸಂಶೋಧಕರು ಬಲ್ಲರು.

ಗುಣಮಟ್ಟದ ಸಂಶೋಧನೆಗಾಗಿ ಶಿಕ್ಷಕರು, ವಿದ್ಯಾರ್ಥಿಗಳು ಮಾತ್ರವಲ್ಲದೆ ಗ್ರಂಥಪಾಲಕರು ಹಾಗೂ ಜಾಲತಾಣ ನಿರ್ವಾಹಕರ ಮನೋಭಾವದಲ್ಲೂ ಬದಲಾವಣೆ ಆಗಬೇಕಾದದ್ದು ಸದ್ಯದ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.