ತುಂಗಾ ನದಿಯ ಸೇತುವೆಯ ಮೇಲೆ ದಿನನಿತ್ಯ ವಾಯುವಿಹಾರ ಮಾಡುವಾಗ, ಕೆಳಗೆ ಬಳುಕುತ್ತ ರಭಸವಾಗಿ ಹರಿಯುವ ನದಿಯ ಸೊಬಗನ್ನು ಕಣ್ತುಂಬಿ ಕೊಳ್ಳುವುದೇ ಒಂದು ಆನಂದ. ಈ ಮಳೆಗಾಲ
ದಲ್ಲಂತೂ ತುಂಗೆಯ ಅಬ್ಬರ ಮನಮೋಹಕ.
ನದಿಗಳು ಯಾವ ಪ್ರತಿಫಲವನ್ನೂ ಬಯಸದೆ ಎಷ್ಟೊಂದು ಜೀವರಾಶಿಗಳಿಗೆ, ಹೊಲ-ಗದ್ದೆಗಳಿಗೆ ನೀರುಣಿಸುತ್ತಾ ಸಾಗುತ್ತವೆ. ಆದರೆ ನಾವು ನದಿಗಳ ಮಡಿಲನ್ನು ಎಗ್ಗಿಲ್ಲದೇ ಮಲಿನಗೊಳಿಸುತ್ತಿದ್ದೇವೆ. ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ತಂದು ನದಿಗಳ ಮಡಿಲಿಗೆ ಹಾಕುವುದನ್ನು ಕಂಡಾಗ ವಿಷಾದವಾಗುತ್ತದೆ. ಅದನ್ನು ನದಿಗೆ ಹಾಕುವವರನ್ನು ಪ್ರಶ್ನಿಸಿದರೆ, ‘ನದಿಯೇನು ನಿಮ್ಮದಾ?’ ಎಂಬ ಸಿದ್ಧ ಪ್ರಶ್ನೆಯೊಂದು ಅವರಿಂದ ತೂರಿ ಬರುತ್ತದೆ. ‘ಹೌದು, ನದಿ ಬರೀ ನನ್ನದಲ್ಲ, ನಮ್ಮೆಲ್ಲರದ್ದು. ಅದನ್ನು ಮಲಿನಗೊಳಿಸಬೇಡಿ’ ಎಂದು ಹೇಳಲು ಅವಕಾಶವನ್ನೂ ಕೊಡದೆ ತ್ಯಾಜ್ಯವನ್ನು ಎಸೆದು ತಮ್ಮ ವಾಹನವನ್ನು ಚಲಾಯಿಸಿಕೊಂಡು ಹೊರಟುಬಿಡುತ್ತಾರೆ.
ನದಿಗಳನ್ನು ದೇವರೆಂದು ಪೂಜಿಸುವವರೂ ನಾವೆ, ಪೂಜನೀಯವಾದ ನದಿಗಳಿಗೆ ಕಸವನ್ನು ಸುರಿಯು
ತ್ತಿರುವವರೂ ನಾವೆ. ಇಂತಹ ಮಾಲಿನ್ಯವನ್ನು ತಡೆಯಲೆಂದೇ ಶಿವಮೊಗ್ಗೆಯ ತುಂಗಾ ಸೇತುವೆಗೆ ಕಬ್ಬಿಣದ ಜಾಲರಿಗಳನ್ನು ಹಾಕಲಾಗಿದೆ. ಆದರೆ ತಿಳಿಗೇಡಿ ಜನ, ಹತ್ತು-ಹನ್ನೆರಡು ಅಡಿ ಎತ್ತರವಿರುವ ಈ ಜಾಲರಿಯ ಮೇಲಿನಿಂದ ಚೆಂಡನ್ನು ಎತ್ತಿ ಎಸೆಯುವಂತೆ ನದಿಗೆ ತ್ಯಾಜ್ಯವನ್ನು ಎಸೆದು, ತಮ್ಮ ಸಾಹಸ ಕಾರ್ಯಕ್ಕೆ ಬೀಗುತ್ತ ಹೊರಟು ಹೋಗುತ್ತಾರೆ. ನದಿಗೆ ಕಸ ಹಾಕಿದಲ್ಲಿ ದಂಡ ವಿಧಿಸಲಾಗುವುದು ಎಂಬ ಫಲಕ ಸಹ ಯಾವ ಪರಿಣಾಮವನ್ನೂ ಬೀರಿಲ್ಲ. ಜಿಲ್ಲಾ ಆಡಳಿತ ಹಾಗೂ ಕೆಲ ಪರಿಸರಪ್ರಿಯ ಸಂಘ-ಸಂಸ್ಥೆಗಳು ಈ ಕುರಿತು ಅದೆಷ್ಟೇ ಅರಿವು ಮೂಡಿಸಲು ಯತ್ನಿಸಿದರೂ ದಪ್ಪ ಚರ್ಮದ ಜನರಿಗೆ ಇವುಗಳ ಅಳಲು ಕೇಳಿಸುವುದೇ ಇಲ್ಲ.
ನಾಲ್ಕೈದು ದಶಕಗಳ ಹಿಂದೆ ಕೆರೆ, ಹೊಳೆ, ನದಿಗಳ ನೀರು ಬೊಗಸೆಯಲ್ಲಿ ತುಂಬಿ ಕುಡಿಯುವಂತೆ ಇರುತ್ತಿತ್ತು. ಆದರೆ ಇಂದು ಒಂದೊಂದು ಬೊಗಸೆ ನೀರಿನೊಂದಿಗೂ ಪ್ಲಾಸ್ಟಿಕ್ ತ್ಯಾಜ್ಯ ಸಿಗುತ್ತದೆ. ಝರಿ, ಜಲಪಾತಗಳನ್ನು ಕಣ್ತುಂಬಿಕೊಳ್ಳಲೆಂದು ಹೋದರೆ ಅದರ ಆಸುಪಾಸಿನಲ್ಲಿ ಪ್ಲಾಸ್ಟಿಕ್ ಹಾಗೂ ಕಸದ ರಾಶಿ ಗೋಚರಿಸುತ್ತದೆ. ಅದರ ಜೊತೆಗೆ ಕುಡಿದು ಬಿಸಾಡಿದ ನೀರಿನ ಹಾಗೂ ಮದ್ಯದ ಬಾಟಲಿಗಳು ಕಣ್ಣಿಗೆ ರಾಚುತ್ತವೆ. ಮಳೆಗಾಲದಲ್ಲಿ ರಭಸವಾಗಿ ಹರಿಯುವ ನೀರು ಈ ಎಲ್ಲ ಕಸವನ್ನೂ ಆಪೋಶನ ತೆಗೆದು
ಕೊಳ್ಳುತ್ತ ನದಿ, ಸಾಗರಗಳಿಗೆ ಕೊಂಡೊಯ್ಯುತ್ತದೆ. ಹೀಗೆ ಮಲಿನಗೊಳ್ಳುವ ನೀರು ಕುಡಿಯುವುದಿರಲಿ, ನಿತ್ಯ ಬಳಕೆಗೆ ಕೂಡ ಯೋಗ್ಯವಾಗಿ ಇರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಹಲವಾರು ಕ್ರಾಂತಿಗಳಾಗಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ದೊರೆಯಲೆಂದು ಆರೋಗ್ಯಕ್ಕೆ ಮಾರಕವಾದ ಕೀಟನಾಶಕಗಳು ಹಾಗೂ ರಸಗೊಬ್ಬರಗಳ ಬಳಕೆ ಯಾಗುತ್ತಿದೆ. ಮಳೆಗಾಲದಲ್ಲಿ ತೋಟ, ಹೊಲ-ಗದ್ದೆಗೆ ನುಗ್ಗುವ ನೀರು ಹರಿದುಬಂದು ನದಿಗಳನ್ನು ಸೇರಿದಾಗ, ಆ ನೀರು ವಿಷಯುಕ್ತವಾಗುತ್ತದೆ. ಇಂಥ ನೀರನ್ನು ಪ್ರಾಣಿ-ಪಕ್ಷಿ, ಜಾನುವಾರುಗಳಷ್ಟೇ ಅಲ್ಲದೆ ನಾವು ಕೂಡ ಸೇವಿಸುತ್ತೇವೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುವುದು ಸಹಜ.
ನಾವು ದಿನನಿತ್ಯ ಬಳಸುವ ನೀರು ಹೀಗೆ ಮಲಿನವಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಡೆ ಕೊಳಚೆ ನೀರು ನೇರವಾಗಿ ನದಿಯ ಒಡಲನ್ನು ಸೇರುತ್ತದೆ. ಕೊಳಚೆ ನೀರನ್ನು ಶುದ್ಧೀಕರಿಸಿ ನದಿಗಳಿಗೆ ಹರಿಸಬೇಕೆಂಬ ನಿಯಮವಿದ್ದರೂ ಆ ನಿಯಮ ಕಾಗದದಲ್ಲಷ್ಟೇ ಉಳಿದುಹೋಗಿದೆ. ನದಿ ಪಾತ್ರದಗುಂಟ ತಲೆ ಎತ್ತಿರುವ ಹೋಟೆಲ್, ರೆಸಾರ್ಟ್ ಗಳಿಂದಲೂ ಎಗ್ಗಿಲ್ಲದೆ ನದಿಗಳಿಗೆ ಕೊಳಚೆ ನೀರು ಹರಿದು ಬರುತ್ತದೆ. ಕಾರ್ಖಾನೆಗಳಿಂದ ಹೊರಹೊಮ್ಮುವ ರಾಸಾಯನಿಕಯುಕ್ತ ನೀರು, ಮಾಂಸಾಹಾರಕ್ಕೆಂದು ವಧಿಸಿದ ಪ್ರಾಣಿಗಳ ತ್ಯಾಜ್ಯದಂತಹವು ನದಿಗಳ ಒಡಲನ್ನು ಹೊಕ್ಕು ಅಲ್ಲಿನ ನೀರು ಹಾಲಾಹಲದಂತೆ ಆಗುತ್ತಿದೆ. ಪುಣ್ಯಕ್ಷೇತ್ರಗಳಿಗೆ ಹೋದಾಗ ಅಲ್ಲಿರುವ ನದಿಗಳಲ್ಲಿ ಮಿಂದು, ಉಟ್ಟ ಬಟ್ಟೆ, ಚೌಲಕರ್ಮ ಮಾಡಿದ ಕೂದಲು, ದೇವರ ಪೂಜೆಗೆ ಬಳಸಿದ್ದ ತ್ಯಾಜ್ಯವನ್ನು ಸಹ ಜನರು ಅಲ್ಲಿಯೇ ಬಿಟ್ಟು ಬರುವುದರಿಂದಲೂ ನದಿಗಳು ತಮ್ಮ ಶುಚಿತ್ವವನ್ನು ಕಳೆದುಕೊಳ್ಳುತ್ತಿವೆ.
ಹಲವಾರು ನದಿಗಳ ನೀರು ಕುಡಿಯಲಾಗಲೀ ನಿತ್ಯ ಬಳಕೆಗಾಗಲೀ ಯೋಗ್ಯವಾಗಿಲ್ಲವೆಂದು ವರದಿಗಳು ಹೇಳುತ್ತವೆ. ಸಾಕ್ಷಾತ್ ದೇವರ ಸ್ವರೂಪ ಎಂದು ನಂಬಲಾಗಿರುವ ನೀರನ್ನು ನಾವು ಬರೀ ದಾಹ ತಣಿಸುವ ಹಾಗೂ ಶುಚಿಗೊಳಿಸುವ ಒಂದು ವಸ್ತುವೆಂಬಂತೆ ನೋಡುತ್ತಿರುವುದು ವಿಷಾದನೀಯ.
ಪರಿಸರದ ಮೇಲೆ ಅವ್ಯಾಹತವಾಗಿ ನಡೆದಿರುವ ದೌರ್ಜನ್ಯದಿಂದ ನಮ್ಮ ಮುಂದಿನ ತಲೆಮಾರು ಬೆಲೆ ತೆರಬೇಕಾಗುತ್ತದೆ. ಪ್ರಕೃತಿಯು ನಮಗೆ ನೀಡಿದ ಪಂಚ ಭೂತಗಳನ್ನು ಭಕ್ತಿಭಾವದಿಂದ ಬಳಸಿ ಮುಂದಿನ ಪೀಳಿಗೆಯೂ ಅನುಭವಿಸಲು ಯೋಗ್ಯವಾಗಿರುವಂತೆ ಉಳಿಸಿ ಹೋಗುವ ಮನಃಸ್ಥಿತಿ ನಮ್ಮಲ್ಲಿ ಬರಬೇಕು. ಇಲ್ಲದೇಹೋದಲ್ಲಿ ನಮ್ಮ ಮಕ್ಕಳೇ ನಮಗೆ ಶಾಪ ಹಾಕದಿರಲಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.