ADVERTISEMENT

ಸಂಗತ| ಭೂಮಿಯ ಸನ್‍ಸ್ಕ್ರೀನ್‌ಗೆ ಬೇಕು ರಕ್ಷಣೆ

ಭೂಮಿಯ ಬಿಸಿ ಹೆಚ್ಚುತ್ತಲೇ ಹೋದರೆ ನಮ್ಮ ಆಹಾರ, ನಾವು ಮತ್ತು ಲಸಿಕೆ ಯಾವುದೂ ಸುರಕ್ಷಿತವಲ್ಲ

ಗುರುರಾಜ್ ಎಸ್.ದಾವಣಗೆರೆ
Published 15 ಸೆಪ್ಟೆಂಬರ್ 2021, 20:24 IST
Last Updated 15 ಸೆಪ್ಟೆಂಬರ್ 2021, 20:24 IST
.
.   

ಈ ಸಲದ ವಿಶ್ವ ಓಝೋನ್ ದಿನಾಚರಣೆಯನ್ನು ‘ಕೀಪಿಂಗ್ ಅಸ್, ಅವರ್ ಫುಡ್ ಆ್ಯಂಡ್ ವ್ಯಾಕ್ಸಿನ್ಸ್ ಕೂಲ್’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸ ಲಾಗುತ್ತಿದೆ. ಅಂದರೆ ಶಾಖವರ್ಧಕ ಅನಿಲಗಳ ಹೊಮ್ಮುವಿಕೆಯನ್ನು ಕಡಿತ ಮಾಡಿ ನಮ್ಮ ಆಹಾರ, ಆರೋಗ್ಯ ಮತ್ತು ಲಸಿಕೆಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂಬುದು ಅದರ ಸಂದೇಶ. ಓಝೋನ್ ಪದರದ ಸುರಕ್ಷತೆಗೂ ಇದಕ್ಕೂ ಏನು ಸಂಬಂಧ ಎನ್ನುತ್ತೀರಾ? ಸಂಬಂಧವಿದೆ.

ಭೂಮಿಯ ಮೇಲೆ 20 ಕಿ.ಮೀ. ಎತ್ತರದಲ್ಲಿ ಶುರು ವಾಗಿ 50 ಕಿ.ಮೀ.ವರೆಗೂ ವ್ಯಾಪಿಸಿರುವ ಓಝೋನ್ ಪದರ ಛಿದ್ರವಾಗುವುದನ್ನು ತಡೆಯಲು ಸಿಎಫ್‍ಸಿ (ಕ್ಲೋರೊಫ್ಲೋರೊ ಕಾರ್ಬನ್) ಮತ್ತು ಬಿಎಫ್‍ಸಿ (ಬ್ರೋಮೊಫ್ಲೋರೊ ಕಾರ್ಬನ್) ನಿಷೇಧಿಸಿ ಈಗ ಎಚ್‍ಸಿಎಫ್‍ಸಿಗಳನ್ನು (ಹೈಡ್ರೊ ಕ್ಲೋರೊ ಫ್ಲೋರೊ ಕಾರ್ಬನ್) ಬಳಸಲು ಪ್ರಾರಂಭಿಸಿದ್ದೇವೆ. ಮೊದಲಿನ ಎರಡರಿಂದ ಓಝೋನ್ ಪದರ ಬಚಾವಾಗಿದೆ. ಆದರೆ ಕೊನೆಯದರಿಂದ ಭೂಮಿಯ ಬಿಸಿ ಹೆಚ್ಚುತ್ತಿದೆ. ಆಗ ನಮ್ಮ ಆಹಾರ, ನಾವು ಮತ್ತು ಲಸಿಕೆ ಯಾವುದೂ ಸುರಕ್ಷಿತವಾಗಿ ಇರುವುದಿಲ್ಲ.

ನಾವು ಪ್ರತಿನಿತ್ಯ ಬಳಸುವ ಬಸ್ಸು– ಕಾರು– ರೈಲುಗಳ ಡೀಸೆಲ್ ಹೊಗೆ, ರಸಗೊಬ್ಬರ, ಪೇಂಟ್‍ಗಳು ಹೊಮ್ಮಿಸುವ ಮಾಲಿನ್ಯ, ಎ.ಸಿ, ನೋವು ನಿವಾರಕ ಸ್ಪ್ರೇ, ಸುಗಂಧ ಸೂಸುವ ತುಂತುರು ಡಬ್ಬಿ, ಫ್ರಿಜ್‌ಗಳಲ್ಲಿ ಬಳಸುವ ಸಿಎಫ್‍ಸಿ ಮತ್ತು ಬಿಎಫ್‍ಸಿಗಳಿಂದ ಓಝೋನ್ ಪದರಕ್ಕೆ ತೂತು ಬೀಳುತ್ತದೆ.

ADVERTISEMENT

ಮೊದಲ ಸಲ, ಅಂಟಾರ್ಕ್ಟಿಕಾದ ಮೇಲಿನ ವಾಯುಮಂಡಲದ ಓಝೋನ್ ಪದರಕ್ಕೆ ತೂತಾಗಿದೆ ಎಂಬ ಮಾಹಿತಿ ಸಿಕ್ಕ ತಕ್ಷಣ ವಿಜ್ಞಾನಿಗಳು ವಾತಾವರಣದಲ್ಲಿನ ಸ್ವತಂತ್ರ ಕ್ಲೋರಿನ್ ಅಣು ಮತ್ತು ಕ್ಲೋರಿನ್ ಮಾನಾಕ್ಸೈಡ್‍ನಿಂದ ತೂತಾಗಿದೆ ಎಂದು ಕಂಡುಹಿಡಿದು ಪರಿಹಾರವನ್ನೂ ಸೂಚಿಸಿದರು. ಇದಲ್ಲದೆ ಸರಿಸುಮಾರು ನೂರು ರಾಸಾಯನಿಕಗಳಿಂದ ಓಝೋನ್ ಪದರಕ್ಕೆ ಅಪಾಯವಿದೆ ಎಂದು ಗೊತ್ತಾದ ಮೇಲೆ 1987ರಲ್ಲಿ ಸಭೆ ಸೇರಿ ಮಾಂಟ್ರಿಯಲ್ ಒಪ್ಪಂದಕ್ಕೆ ಸಹಿ ಹಾಕಿದ ಎಲ್ಲ ದೇಶಗಳ ನಾಯಕರು ‘ಆಯಿತು ಸಿಎಫ್‍ಸಿ ಮತ್ತು ಬಿಎಫ್‍ಸಿ ಬಳಕೆ ನಿಲ್ಲಿಸಿ, ವಿಜ್ಞಾನಿಗಳು ಶಿಫಾರಸು ಮಾಡಿರುವ ಹೈಡ್ರೊ ಕ್ಲೋರೊ ಫ್ಲೋರೊ ಕಾರ್ಬನ್ ಬಳಸುತ್ತೇವೆ’ ಎಂದರು.

ಮುಂದುವರಿದ ರಾಷ್ಟ್ರಗಳು 2004ರಲ್ಲಿ ಸಿಎಫ್‍ಸಿ ಮತ್ತು ಬಿಎಫ್‍ಸಿ ಉತ್ಪಾದನೆ ಹಾಗೂ ಬಳಕೆಯನ್ನು ನಿಷೇಧಿಸಿದವು. ನಾವು ಅದನ್ನು ಮಾಡಿದ್ದು ಆರು ವರ್ಷಗಳಾದ ನಂತರ. ಆ ವೇಳೆಗೆ ಎಚ್‍ಸಿಎಫ್‍ಸಿ ಗಳೂ ಸುರಕ್ಷಿತ ಅಲ್ಲ ಮತ್ತು ಅವುಗಳಿಂದ ಓಝೋನ್ ಪದರಕ್ಕೆ ಅಪಾಯವಿದೆ, ಅವು ಕಾರ್ಬನ್ ಡೈ ಆಕ್ಸೈಡ್‍ಗಿಂತ ಸಾವಿರಾರು ಪಟ್ಟು ಹೆಚ್ಚು ಭೂಮಿ ಬಿಸಿ ಮಾಡುವ ಶಾಖವರ್ಧಕಗಳು ಎಂದು ತಿಳಿದುಬಂತು. ಒಂದು ರೀತಿಯಲ್ಲಿ ‘ಊದುವುದನ್ನು ಕೊಟ್ಟು ಒದರು ವುದನ್ನು ತೆಗೆದುಕೊಂಡಂತಾಯಿತು’ ಎಂದು ಸಂಕಟಕ್ಕೆ ಬಿದ್ದ ಮಾಂಟ್ರಿಯಲ್ ಒಪ್ಪಂದದ ರೂವಾರಿಗಳು ನಾಲ್ಕು ವರ್ಷಗಳ ಹಿಂದೆ ರುವಾಂಡದ ಕಿಗಳಿಯಲ್ಲಿ ಸಭೆ ಸೇರಿ, 2030ಕ್ಕೆ ಎಚ್‍ಸಿಎಫ್‍ಸಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ನಿರ್ಧರಿಸಿದರು. ವಿಶ್ವದ ಕೆಲವು ದೇಶಗಳು ಮಾತ್ರ ಸಹಿ ಮಾಡಿದ್ದು ಭಾರತ, ಚೀನಾ ಮತ್ತು ಅಮೆರಿಕ ಸದ್ಯಕ್ಕೆ ಸಾಧ್ಯವಿಲ್ಲ ಎಂದಿವೆ.

ಕಿಗಳಿ ಒಪ್ಪಂದ ಕಳೆದ ಜನವರಿಯಿಂದ ಜಾರಿಗೆ ಬಂದಿದೆ. ಶೀತಲೀಕರಣ ಉದ್ಯಮಗಳಲ್ಲಿ ಎಚ್‍ಸಿಎಫ್‍ಸಿಗಳ ಬಳಕೆ ಅತ್ಯಧಿಕವಾಗಿದ್ದು, ರೈತರ ಬೆಳೆಯನ್ನು ಕಾಪಾಡುವ ಕೋಲ್ಡ್ ಸ್ಟೋರೇಜ್ ಮತ್ತು ಗ್ರಾಹಕರು ಬಳಸುವ ಎ.ಸಿ, ರೆಫ್ರಿಜಿರೇಟರ್‌ಗಳಿಗೆ ಅದು ಬೇಕೇ ಬೇಕು. ಇಂಡಿಯಾ ಕೂಲಿಂಗ್ ಆ್ಯಕ್ಷನ್ ಪ್ಲಾನ್ - ICAP ಅನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಇನ್ನು ಇಪ್ಪತ್ತು ವರ್ಷಗಳಲ್ಲಿ ಶೀತಲೀಕರಣ ಉದ್ಯಮದ ಬೇಡಿಕೆ ಬಹಳಷ್ಟು ಹೆಚ್ಚಲಿದೆ ಮತ್ತು ಎಚ್‍ಸಿಎಫ್‍ಸಿ ಸಂಪೂರ್ಣ ನಿಷೇಧಕ್ಕೆ 30 ವರ್ಷ ಹಿಡಿಯಬಹುದು ಎಂಬ ಅಂದಾಜಿದೆ. ವಿಶ್ವದ ಹವಾನಿಯಂತ್ರಕ ವ್ಯವಸ್ಥೆಯ ಬಹುಪಾಲು ಬೇಡಿಕೆಯನ್ನು ಪೂರೈಸು ತ್ತಿರುವ ಚೀನಾ ತನಗೂ ಸಮಯ ಬೇಕು ಎಂದಿದೆ.

ನಮ್ಮ ಫ್ರಿಜ್ ಮತ್ತು ಎ.ಸಿ.ಗಳಲ್ಲಿ ಎಚ್‍ಸಿಎಫ್‍ಸಿ- 22 (ಕ್ಲೋರೊ ಡೈಫ್ಲೋರೊ ಮೀಥೇನ್) ಸಂಯುಕ್ತವನ್ನು ಬಳಸುತ್ತಿದ್ದೇವೆ. ಇದರ ಉತ್ಪಾದನೆಯ ಜೊತೆಗೆ ಬೈಪ್ರಾಡಕ್ಟಾಗಿ ಹೊಮ್ಮುವ ಎಚ್‍ಸಿಎಫ್‍ಸಿ- 23 (ಕ್ಲೋರೊ ಟ್ರೈಫ್ಲೋರೊ ಮೀಥೇನ್) ಸಂಯುಕ್ತವು ಭೂಮಿಯ ಶಾಖ ವರ್ಧಿಸುವುದರಿಂದ ಬೇರೆ ಮಾರ್ಗ ಹುಡುಕಬೇಕಿದೆ. ಅತ್ಯುತ್ತಮ ಶೀತಕಾರಕಗಳು ಮತ್ತು ಕಡಿಮೆ ಶಾಖವರ್ಧಕಗಳಾದ ಬುಟೇನ್ ಮತ್ತು ಪ್ರೊಪೇನ್‍ಗಳನ್ನು ಬಳಸುವ ಅವಕಾಶವಿದೆ. ಆದರೆ ಬಳಸಲು ಪರವಾನಗಿ ಇಲ್ಲ. ಅಲ್ಲದೆ ಇವು ತೀವ್ರವಾಗಿ ದಹಿಸುವ ಗುಣ ಹೊಂದಿರುವುದರಿಂದ ಬಳಸುವಾಗ ಭಾರಿ ಎಚ್ಚರಿಕೆ ವಹಿಸಬೇಕಾಗುತ್ತದೆ.

ಒಂದೆಡೆ ಓಝೋನ್ ಪದರದ ರಂಧ್ರ ಮುಚ್ಚಲು ಸಿಎಫ್‍ಸಿ ಬಳಕೆ ನಿಲ್ಲಿಸಿದ್ದೇವೆ. ಈಗ ಬಳಸುತ್ತಿರುವ ಎಚ್‍ಸಿಎಫ್‍ಸಿಗಳಿಂದ ಭೂಮಿಯ ಬಿಸಿ ಏರುತ್ತಿದೆ. ಒಟ್ಟಿನಲ್ಲಿ ಒಂದನ್ನು ಪಡೆದುಕೊಳ್ಳಲು ಇನ್ನೊಂದನ್ನು ಬಿಡಬೇಕು ಎಂಬಂತಾಗಿದೆ. ಆದರೂ ಓಝೋನ್ ಪದರಕ್ಕೆ ತೂತು ಬೀಳದಂತೆ ತಡೆಯಲೇಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.