ದೇಹದಲ್ಲಿ ರಕ್ತಪರಿಚಲನೆ ಇರುವಂತೆಯೇ ಭೂಭಾಗದಲ್ಲಿ ನದಿಗಳ ಹರಿವು... ಕೋಟಿಗಟ್ಟಲೆ ಜೀವಕೋಶಗಳಿಗೆ ರಕ್ತವು ಪೋಷಕಾಂಶವನ್ನು ಸರಬರಾಜು ಮಾಡಿದ ಹಾಗೆ ನದಿಗಳು ತಮ್ಮ ಇಕ್ಕೆಲ ದಂಡೆಗಳಿಗೂ ಪೋಷಕತ್ವವನ್ನು ಹಾಯಿಸಿ ನದಿಪಾತ್ರವನ್ನು ಹಸಿರಾಗಿಸುತ್ತವೆ, ಹಸನಾಗಿಸುತ್ತವೆ. ಕೋಶಗಳಿಂದ ಕಶ್ಮಲವು ರಕ್ತವನ್ನು ಸೇರುವಂತೆ ನೆಲದ ತ್ಯಾಜ್ಯ ನದಿಗೆ ಅರ್ಪಣೆ. ಆದರೆ ರಕ್ತವು ಮೂತ್ರಜನ
ಕಾಂಗಗಳಲ್ಲಿ ಶುದ್ಧೀಕರಣಗೊಳ್ಳುವಂತಹದೇ ವ್ಯವಸ್ಥೆಯು ನದಿಯನ್ನು ಸೇರುವ ಮುನ್ನ ತ್ಯಾಜ್ಯದ ಸಂಸ್ಕರಣೆಯಾಗಿ, ನದಿನೀರಿನ ಶುದ್ಧೀಕರಣವಾಗಿ ಇರಬೇಕು. ಇಲ್ಲದೆಹೋದರೆ ಅಪಾಯ, ಜೀವಜಲವೂ ವಿಷಮಯಗೊಳ್ಳುತ್ತದೆ. ನೆತ್ತರು ನಂಜಾದರೆ ಉಳಿವುಂಟೇ? ನದಿ ಮಲಿನಗೊಂಡರೂ ಹಾಗೆಯೇ.
ಮಲೆನಾಡು ಹಾಗೂ ಬಯಲುಸೀಮೆಯನ್ನು ಒಳಗೊಂಡಂತೆ ಐದು ಜಿಲ್ಲೆಗಳ ಸುಮಾರು 400 ಕಿ.ಮೀ. ದೂರದ ಹರಿವಿನಲ್ಲಿ ಒಂದು ಕೋಟಿಯಷ್ಟು ಜನರ ಜೀವದಾಯಿನಿಯಂತಿರುವ ನದಿಯೇ ತುಂಗಭದ್ರೆ. ಘಟ್ಟಪ್ರದೇಶದ ಸಸ್ಯಸಂಕುಲ, ಗಿಡಮೂಲಿಕೆಗಳ ನಡುವೆ ಶುಭ್ರ ನೊರೆ-ತೊರೆಯಾಗಿ ಹರಿದುಬರುವ ಕಾರಣಕ್ಕೆ ‘ತುಂಗಾ ಪಾನ...’ ಎಂಬ ನಾಣ್ಣುಡಿ ಹುಟ್ಟಿಕೊಂಡಿತು. ಆದರೀಗ ನದಿನೀರಿಗೆ ಕೆಲವು ಖನಿಜಾಂಶಗಳ ಅತಿಯಾದ ಸೇರ್ಪಡೆಯ ಕಾರಣಕ್ಕೆ, ಅಮೃತಕ್ಕೆ ಸಮಾನವಾಗಿದ್ದ ತುಂಗೆಯ ನೀರು ‘ಬಳಕೆಗೆ ಯೋಗ್ಯವಲ್ಲ’ ಎಂಬ ಪ್ರಮಾಣಪತ್ರ ಪಡೆಯುವಂತಹ ದುಃಸ್ಥಿತಿಯನ್ನು ತಲುಪಿಬಿಟ್ಟಿದೆ.
ನದಿದಂಡೆಯಲ್ಲಿ ಅನೂಚಾನವಾಗಿ ಸಾಗಿರುವ ಮರಳು ಗಣಿಗಾರಿಕೆ, ಸೂಕ್ತ ಸಂಸ್ಕರಣೆಗೆ ಒಳಪಡಿಸದೆ ನದಿಗೆ ಸೇರಿಸುತ್ತಿರುವ ನಗರತ್ಯಾಜ್ಯ, ಮಿತಿಮೀರಿದ ರಾಸಾಯನಿಕ ಗೊಬ್ಬರ, ಕೀಟನಾಶಕದ ಆಧುನಿಕ ಕೃಷಿ ಪದ್ಧತಿಯಿಂದ ನದಿಯ ಅಸ್ತಿತ್ವಕ್ಕೆ ನಿರಂತರವಾಗಿ ಧಕ್ಕೆಯಾಗುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಲ್ಲಿನ ನದಿಗಳು ತಿಳಿಯಾಗಿ ಕಂಗೊಳಿಸುತ್ತಿದ್ದರೆ, ದೇವತೆಯಂತೆ ಆರಾಧಿಸುವ ಇಲ್ಲಿನ ಎಷ್ಟೋ ನದಿಗಳು ಮಲಿನಗೊಂಡ ಚರಂಡಿಗಳಂತೆ ಮಾರ್ಪಟ್ಟಿವೆ.
ಜಲಾನಯನ ಪ್ರದೇಶದಲ್ಲಿನ ನಿರಂತರ ಅರಣ್ಯನಾಶವು ನದಿಯ ಉಳಿವಿಗೆ ಗಂಭೀರವಾಗಿ ಸವಾಲೊಡ್ಡುತ್ತಿದೆ. ಜೀವನದಿಗಳು ಉಗಮವಾಗಿ ನೂರಾರು ಮೈಲಿ ಹರಿದು ತಮ್ಮ ದಡವನ್ನು ಸಮೃದ್ಧಗೊಳಿಸಲು ಸಹಜ ಕಾಡು-ಗುಡ್ಡಗಳು ಅಗತ್ಯ. ಹಾಗಾಗಿ, ಅರಣ್ಯ ಒತ್ತುವರಿಯನ್ನು ನಿಯಂತ್ರಿಸಿ, ಅಕೇಷಿಯ, ನೀಲಗಿರಿಯಂತಹ ಏಕಜಾತಿಯ ನೆಡುತೋಪುಗಳಿಗೆ ವಿದಾಯ ಹೇಳಿ, ಮಲೆನಾಡಿನ ನೈಸರ್ಗಿಕ ಕಾಡನ್ನೂ ವೈವಿಧ್ಯಮಯ ಜೀವಸಂಕುಲವನ್ನೂ ಉಳಿಸಿಕೊಳ್ಳಬೇಕಾದ ತುರ್ತಿದೆ. ಈ ಕಾರಣದಿಂದ, ನದಿಪಾತ್ರದ ಜನರು ಅಸಂಖ್ಯ ನದಿ-ತೊರೆಗಳನ್ನು ಹೆರುವ, ಸಲಹುವ ಜೀವವೈವಿಧ್ಯದ ತೊಟ್ಟಿಲಾದ ಪರಿಸರಸೂಕ್ಷ್ಮ ಪಶ್ಚಿಮ ಘಟ್ಟವನ್ನು ಸಂರಕ್ಷಿಸಿಕೊಳ್ಳಲು ಹಂಬಲಿಸುತ್ತಿದ್ದಾರೆ.
ಜಲಮೂಲ ಮತ್ತು ನದಿಯ ನೈರ್ಮಲ್ಯವು ಜನರ ಆರೋಗ್ಯದ, ಜನಜೀವನದ ಅಳಿವು, ಉಳಿವಿನ
ಪ್ರಶ್ನೆಯಾಗಿರುವುದರಿಂದ, ನದಿಯನ್ನು ತಾಜಾವಾಗಿ ಉಳಿಸಲು ಹಲವು ಪರಿಸರ ತಂಡಗಳು ಒಗ್ಗೂಡುತ್ತಿವೆ. ಚಿಕ್ಕಮಗಳೂರಿನ ಶೃಂಗೇರಿಯಿಂದ ಕೊಪ್ಪಳದ ಕಿಷ್ಕಿಂಧೆಯವರೆಗೂ ಪಾದಯಾತ್ರೆಗೆ ವೇದಿಕೆ ಸಿದ್ಧಗೊಳ್ಳುತ್ತಿದೆ. ‘ನಿರ್ಮಲ ತುಂಗಭದ್ರಾ’ ಎಂಬ, ನದಿಯ ಸ್ವಚ್ಛತೆ ಮತ್ತು ನೀರಿನ ಶುದ್ಧತೆಯ ಕುರಿತಾದ ಜನಜಾಗೃತಿ, ಜಲಜಾಗೃತಿಯ ಆಂದೋಲನವೊಂದು ಹುರುಪಿನಿಂದಲೇ ರೂಪುಗೊಳ್ಳುತ್ತಿದೆ. ಆ ಮೂಲಕ ಸಾರ್ವಜನಿಕರು ಹಾಗೂ ಸರ್ಕಾರದ ಗಮನಸೆಳೆಯಲು ನಾಡಜನರು ಒಂದಾಗಿ ಜೀವನದಿಗಳ ರಕ್ಷಣೆಗೆ
ಮುಂದಾಗುತ್ತಿದ್ದಾರೆ. ಆದ್ಯತೆಯ ಹಕ್ಕೊತ್ತಾಯಗಳನ್ನುಹೊತ್ತುಕೊಂಡು ನದಿಯ ನಡಿಗೆಗುಂಟ ಜನರೂ ಅರಿವಿನ ಹೆಜ್ಜೆಹಾಕಲು ಸಜ್ಜಾಗಿದ್ದಾರೆ.
ಪ್ರಮುಖ ಬೇಡಿಕೆಗಳು:
ನೀರು ಇಂಗುವಿಕೆ ಕ್ಷೀಣವಾಗುತ್ತಿರುವುದರಿಂದ ಬೇಸಿಗೆಯಲ್ಲಿ ಜಲಕ್ಷಾಮವೂ ಮಳೆಗಾಲದಲ್ಲಿ ಪ್ರವಾಹವೂ ಸಾಮಾನ್ಯವೆನಿಸಿವೆ. ಇವುಗಳ ನಿವಾರಣೆಗೆ ಶಾಶ್ವತ ಯೋಜನೆಯಾಗಿ ಜಲಾನಯನ ಪ್ರದೇಶದ ಅಭಿವೃದ್ಧಿ ಮತ್ತು ನದಿದಂಡೆಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸಹಜಕಾಡನ್ನು ಬೆಳೆಸುವುದು.
ಅಗತ್ಯವಿರುವಲ್ಲಿ ಸಂಸ್ಕರಣಾ ಘಟಕಗಳ ಸ್ಥಾಪನೆಯ ಮೂಲಕ, ಜನವಸತಿ ಪ್ರದೇಶಗಳ ಕೊಳಚೆ ಮತ್ತು ನಗರ-ಕೈಗಾರಿಕೆಗಳ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡ ತ್ಯಾಜ್ಯಗಳನ್ನು ಸಂಸ್ಕರಿಸಿಯೇ ನದಿಗೆ ಹರಿಸುವುದು.
ನದಿದಂಡೆಯಲ್ಲಿ ಗಣಿಗಾರಿಕೆ, ಮರಳು ಮಾಫಿಯಾ ನಿಯಂತ್ರಿಸಿ ದಂಡೆಯ ಕೊರೆತ ಹಾಗೂ ಜಲಚರಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವುದು.
ನದಿ ನೀರನ್ನು ವೈಜ್ಞಾನಿಕ ಪರೀಕ್ಷೆಗೊಳಪಡಿಸಿ, ಗುಣಮಟ್ಟದಲ್ಲೇನಾದರೂ ವ್ಯತ್ಯಾಸ ಕಂಡುಬಂದಲ್ಲಿ ತಜ್ಞರ ಸಮಿತಿ ರಚಿಸಿ, ಕಾರಣ, ಪರಿಣಾಮಗಳ ಅಧ್ಯಯನ ಕೈಗೊಳ್ಳುವುದು.
ಸಾರ್ವಜನಿಕರಲ್ಲಿ ಜಲಸಾಕ್ಷರತೆ ಮತ್ತು ಶುದ್ಧನೀರಿನ ಮಹತ್ವದ ಬಗೆಗೆ ಜಲಜಾಗೃತಿ ಮೂಡಿಸುವುದು.
‘ಪಶ್ಚಿಮಘಟ್ಟ ಅಧ್ಯಯನ ಕೇಂದ್ರ’ವನ್ನು ಸ್ಥಾಪಿಸುವ ಮೂಲಕ ಈ ಮಲೆಘಟ್ಟದ ಪರಿಸರ, ಮಳೆ, ನೀರು, ಕಾಡು, ಕೃಷಿ, ಗಣಿಗಾರಿಕೆ, ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಬಗೆಗೆ ವೈಜ್ಞಾನಿಕ ಅಧ್ಯಯನ ಕೈಗೊಳ್ಳುವುದು. ನದಿ ಮತ್ತು ನದಿನೀರಿಗೆ ಸಂಬಂಧಿಸಿದ ಇತರೆಲ್ಲಾ ಸಮಸ್ಯೆಗಳ ಕುರಿತು ಗಮನಹರಿಸುವುದು... ಹೀಗೆ.
ನವೆಂಬರ್ ಮೊದಲ ವಾರದಲ್ಲಿ ನದಿಪಾತ್ರದ ಫಲಾನುಭವಿಗಳು ಕೈಗೊಳ್ಳುತ್ತಿರುವ ಪಾದಯಾತ್ರೆಗೆ ಬಲ ಬರಲಿ. ಜೀವನದಿಗಳು ತಮ್ಮ ಶುದ್ಧ ಪರಿಸರ, ಪಾವಿತ್ರ್ಯವನ್ನು ಮರಳಿ ಪಡೆಯುವಂತಾಗಲಿ ಎಂಬುದು ಆಶಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.