ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ತೀರ್ಪುಗಾರನಾಗಿ ಹೋಗಿದ್ದೆ. ಬೆಳಿಗ್ಗೆ ಹತ್ತೂವರೆಗೆ ಪ್ರಾರಂಭವಾಗುತ್ತದೆ ಎಂದಿದ್ದರಿಂದ ಸ್ವಲ್ಪ ಮೊದಲೇ ಸ್ಥಳದಲ್ಲಿದ್ದೆ. ದೂರದೂರದಿಂದ ಬೇರೆ ಬೇರೆ ಶಾಲೆಗಳ ಮಕ್ಕಳು ಸಕಲ ಸನ್ನದ್ಧರಾಗಿ, ಸ್ಪರ್ಧಿಸುವ ಉತ್ಸಾಹದಿಂದ ಬಂದಿದ್ದರು. ಮಧ್ಯವಾರ್ಷಿಕ ಪರೀಕ್ಷೆ ಹತ್ತಿರವಿದ್ದರೂ, ಮಕ್ಕಳಿಗೋಸ್ಕರ ತಮ್ಮ ಶಾಲೆಯ ಪಾಠ-ಪ್ರವಚನಗಳನ್ನೂ ತ್ಯಜಿಸಿ ನನ್ನಂತೆಯೇ ಅನೇಕ ಶಿಕ್ಷಕರು ತೀರ್ಪುಗಾರರಾಗಿ ಬಂದಿದ್ದರು. ಕಾರ್ಯಕ್ರಮ ಆಯೋಜಿಸಿದ ಅಧಿಕಾರಿಗಳು ‘ಮಧ್ಯಾಹ್ನ ಮಳೆ ಬರುವ ಸಾಧ್ಯತೆ ಇದೆ. ಮಕ್ಕಳಿಗೆ ವಾಪಸ್ ಹೋಗಲು ತೊಂದರೆಯಾಗಬಹುದು. ಬೇಗ ಮುಗಿಸಿಬಿಡೋಣ, ಬನ್ನಿ ಸರ್’ ಎಂದಿದ್ದರಿಂದ, ಕಾರ್ಯಕ್ರಮ ಮುಗಿಸಿಕೊಂಡು ನಮ್ಮ ಶಾಲೆಗೆ ಹೋಗಿ ಒಂದಾದರೂ ತರಗತಿ ತೆಗೆದುಕೊಳ್ಳಬಹುದೆಂದು ಅಂದಾಜಿಸಿದ್ದೆ.
ಉದ್ಘಾಟನಾ ಕಾರ್ಯಕ್ರಮಕ್ಕಾಗಿ ವೇದಿಕೆಗೆ ಕರೆಯಲಾಯಿತು. ಶಿಕ್ಷಕ ಪ್ರತಿನಿಧಿಗಳು, ಮುಖ್ಯೋಪಾಧ್ಯಾಯರು ಸೇರಿದಂತೆ ಅನೇಕರು ವೇದಿಕೆ ಮೇಲೆ ಕುಳಿತರು. ಮಕ್ಕಳೆಲ್ಲರೂ ಅತ್ಯುತ್ಸಾಹದಿಂದ, ಇನ್ನೇನು ಕಾರ್ಯಕ್ರಮ ಪ್ರಾರಂಭವಾಗುತ್ತದೆಂದು ನಿರೀಕ್ಷಿಸುತ್ತಾ ವೇದಿಕೆ ಎದುರು ಕುಳಿತರು. ಗಂಟೆ ಹನ್ನೆರಡಾಯಿತು, ವೇದಿಕೆಯ ಮೇಲಿದ್ದವರಲ್ಲಿ ಕೆಲವರು ಅಲ್ಲೇ ತೂಕಡಿಸಲು ಪ್ರಾರಂಭಿಸಿದರು, ಇನ್ನು ಕೆಲವರು ಹರಟೆಯಲ್ಲಿ ತೊಡಗಿದ್ದರು. ಮಕ್ಕಳು ಕುಳಿತೂ ಕುಳಿತೂ ಸುಸ್ತಾಗಿ ತುಂಟಾಟದಲ್ಲಿ ತೊಡಗಿದರು. ಕಾರ್ಯಕ್ರಮ ಮಾತ್ರ ಪ್ರಾರಂಭವಾಗಲಿಲ್ಲ.
ವೇದಿಕೆಯ ಎದುರು ಕುಳಿತು ಇದನ್ನೆಲ್ಲ ನೋಡುತ್ತಿದ್ದ ನಾನು ‘ಕಾರ್ಯಕ್ರಮ ತಡವೇಕೆ’ ಎಂದು ಆಯೋಜಕರಿಗೆ ಕೇಳಿದ್ದಕ್ಕೆ, ‘ಸಾರ್, ಇಲ್ಲಿ ಪಂಚಾಯಿತಿ ಮಾಜಿ ಮೆಂಬರ್ ಒಬ್ಬರ ಹವಾ ಜಾಸ್ತಿ. ಅವ್ರನ್ ಬಿಟ್ಟು ಮಾಡೋ ಹಾಗಿಲ್ಲ. ಅದ್ಕೆ ಬೆಳಿಗ್ಗೆ ಅವರಿಗೆ ಪ್ರೋಗ್ರಾಮಿನ ವಿಷಯ ತಿಳಿಸಿದಾಗ, ‘ಪಿ.ಡಿ.ಒ. ಇರ್ತಾರೆ, ನಾನೇನು ಬರೋದಿಲ್ಲ. ಕಾರ್ಯಕ್ರಮ ಮಾಡಿ ಮುಗ್ಸಿ’ ಅಂದಿದ್ರು. ಈಗ ಸ್ವಲ್ಪ ಹೊತ್ತಿನ ಮುಂಚೆ ಫೋನ್ ಮಾಡಿ, ‘ನಾನ್ ಬರ್ತಿದೀನ್ರಿ, ಕಾರ್ಯಕ್ರಮ ಸ್ಟಾರ್ಟ್ ಮಾಡ್ಬೇಡಿ, ನಾನ್ ಬಂದ್ಮೇಲೆ ಶುರು ಮಾಡುವಂತ್ರಿ’ ಅಂದ್ರು. ಹಾಗಾಗಿ ಲೇಟಾಗ್ತಾಯಿದೆ. ಅವ್ರು ತುಂಬಾ ರ‍್ಯಾಷ್, ಅವರು ಬರೋದ್ರೊಳಗೆ ಶುರು ಮಾಡಿದ್ರೆ ಬಾಯಿಗ್ ಬಂದಂಗೆ ಬಯ್ದ್ ಬಿಡ್ತಾರೆ’ ಎಂದರು. ಇದನ್ನು ಕೇಳಿ ಬಹಳ ಬೇಜಾರಾಯ್ತು. ಆದರೆ ವ್ಯವಸ್ಥೆಯೇ ಅವ್ಯವಸ್ಥೆಯ ಆಗರವಾಗಿರುವಾಗ ಕೆಲವೊಮ್ಮೆ ಸುಮ್ಮನಿರಬೇಕಾದ ಅನಿವಾರ್ಯ ಉಂಟಾಗುತ್ತದೆ.
ಅತಿಥಿ ಮಹೋದಯರ ಬರುವಿಕೆಯ ನಿರೀಕ್ಷೆಯಲ್ಲಿ ಸುಮ್ಮನೆ ಕುಳಿತೆವು. ಅಂತೂ ಒಂದಿಷ್ಟು ಭಟ್ಟಂಗಿಗಳ ಜೈಕಾರದೊಂದಿಗೆ, ಕಾರ್ಯಕ್ರಮದ ಸ್ವಯಂ ಮುಖ್ಯ ಅತಿಥಿಯಾದ ಪಂಚಾಯಿತಿ ಮಾಜಿ ಮೆಂಬರ್ ಬಂದರು. ಈ ಮಹಾಶಯರೊಂದಿಗೆ ಸ್ವಯಂ ಅತಿಥಿಗಳಾಗಿ ಹೆಚ್ಚಿನ ಸಂಖ್ಯೆಯಲ್ಲಿ ವೇದಿಕೆ ಏರಿದ್ದವರೆಲ್ಲರೂ ಸರದಿಯಲ್ಲಿ ದೀರ್ಘ ಭಾಷಣ ಮಾಡಿ, ಭಾಷಣ ಸ್ಪರ್ಧೆ ನಡೆಯಿತೇನೋ ಎನ್ನುವಂತಿದ್ದ ಉದ್ಘಾಟನಾ ಕಾರ್ಯಕ್ರಮವನ್ನು ಮುಗಿಸಿದರು. ಕೊನೆಗೆ, ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗಾಗಿ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವುದರೊಳಗೆ ಮಧ್ಯಾಹ್ನ ಎರಡು ಗಂಟೆ ಬಾರಿಸಿತ್ತು. ಸ್ಪರ್ಧೆಗೆ ತಯಾರಾಗಿ ಲಕಲಕ ಎನ್ನುತ್ತಿದ್ದ ಮಕ್ಕಳ ಹುಮ್ಮಸ್ಸು ಬತ್ತಿಹೋಗಿತ್ತು, ಮುಖ ಬಾಡಿ ಹೋಗಿತ್ತು.
ಇಂತಹ ಅನೇಕ ಸಂದರ್ಭಗಳಿಗೆ ಸಾಕ್ಷಿಯಾಗಿದ್ದರಿಂದ, ನನಗ್ಯಾಕೋ ಪ್ರಸ್ತುತ ವ್ಯವಸ್ಥೆ, ರಾಜಕಾರಣದ ಬಗ್ಗೆ ತುಂಬಾ ಬೇಸರವಾಯಿತು. ಶಾಲೆಯಲ್ಲಿ ನಡೆಯುವ ಎಲ್ಲ ಶೈಕ್ಷಣಿಕ ವಿಷಯಗಳಲ್ಲಿಯೂ ರಾಜಕಾರಣಿಗಳ ಹಸ್ತಕ್ಷೇಪ, ದರ್ಪ ಅಗತ್ಯವಿಲ್ಲ ಎನಿಸುತ್ತದೆ. ಶಾಲಾ ಮಕ್ಕಳ ಇಂತಹ ಸ್ಪರ್ಧಾ ಕಾರ್ಯಕ್ರಮಕ್ಕೂ ಯಾರೋ ರಾಜಕೀಯ ಮುಖಂಡರು ಅಷ್ಟು ಅವಶ್ಯಕವೇ? ಅವರು ಬಾರದೆ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲವೇ? ಮಕ್ಕಳ ಪರಿಸ್ಥಿತಿಯನ್ನು, ಸಮಯದ ಮಹತ್ವವನ್ನು ಅರಿಯದ ವ್ಯಕ್ತಿ ಅದೆಂತಹ ನಾಯಕನಾಗಲು ಸಾಧ್ಯ? ಈ ರೀತಿಯ ಅನೇಕ ಪ್ರಶ್ನೆಗಳು ತಲೆಯಲ್ಲಿ ಕೊರೆಯುತ್ತಿವೆ.
ಜನನಾಯಕರು, ಊರಿನ ಮುಖಂಡರು ಶಾಲೆಯ ಕಾರ್ಯಕ್ರಮಗಳಿಗೆ ಬಂದು, ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿ, ಅವರನ್ನು ಹರಸಿ, ತಮ್ಮ ಕೈಲಾದ ಸಹಾಯ ಮಾಡಿದರೆ ಆ ಶಾಲೆಗೂ, ಶಾಲಾ ಕಾರ್ಯಕ್ರಮಕ್ಕೂ ಒಳಿತು. ಆದರೆ ಶಾಲೆಯಲ್ಲಿ ನಡೆಯುವ ಯಾವುದೋ ಚಿಕ್ಕ ಪುಟ್ಟ ಕಾರ್ಯಕ್ರಮವೂ ತಾನು ಬಂದರೆ ಮಾತ್ರ ನಡೆಯಬೇಕು ಎಂಬ ಧೋರಣೆ ಎಷ್ಟು ಸರಿ? ಹಾಗೆ ಬರುವುದಾದರೂ ಸಮಯಪಾಲನೆ ಕೂಡ ಮುಖ್ಯವಲ್ಲವೇ? ಜನನಾಯಕರೆನಿಸಿಕೊಂಡವರು ಜನರ ಹಿತ ಕಾಯಲು ಸದಾ ಹಂಬಲಿಸಬೇಕೇ ಹೊರತು, ಜನರಿಗೆ ಹಿಂಸೆ ನೀಡುವಂತೆ ಆಗಬಾರದು. ಅದರಲ್ಲಿಯೂ ಮುಂದಿನ ಉಜ್ವಲ ಪ್ರಜೆಗಳಾಗುವ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾದುದು ಜನನಾಯಕರ ಕರ್ತವ್ಯ. ಹಾಗಾಗಿ ಶಾಲಾ ಹಂತದ ಕಾರ್ಯಕ್ರಮಗಳಿಗೆ ಬರುವುದಾದರೂ ಯಾರಿಗೂ ಅದರಿಂದ ತೊಂದರೆಯಾಗದಂತೆ, ಮಾರ್ಗದರ್ಶಕರಾಗಿ ಬರಬೇಕು. ಆಗ, ದೇಶ ಭವ್ಯವಾಗಿ ಬೆಳೆಯುತ್ತದೆ. ರಾಜಕೀಯ ಬಿಟ್ಟು ದೇಶದ ಭವಿಷ್ಯವಿಲ್ಲ. ಆದರೆ, ಆ ರಾಜಕೀಯವು ಅರಾಜಕತೆಗೆ ಕಾರಣವಾಗಬಾರದು.
ಲೇಖಕ: ಶಿಕ್ಷಕ, ಸರ್ಕಾರಿ ಪ್ರೌಢಶಾಲೆ,ಬಟ್ಲಹಳ್ಳಿ, ಚಿಂತಾಮಣಿ ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.