ADVERTISEMENT

ಸಂಗತ| ಪ್ರಜಾಪ್ರಭುತ್ವ: ಪಕ್ವತೆ ಬರುವುದೆಂದು?

ಡಾ.ಆರ್.ಲಕ್ಷ್ಮೀನಾರಾಯಣ
Published 24 ಮಾರ್ಚ್ 2023, 0:18 IST
Last Updated 24 ಮಾರ್ಚ್ 2023, 0:18 IST
   

ಒಂದು ದೇಶದ ಕಾಲಮಾನದಲ್ಲಿ 75 ವರ್ಷ ತುಂಬ ಭಾರಿ ಅಲ್ಲದಿದ್ದರೂ ಕಡಿಮೆ ಕಾಲಮಾನವೇನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡು ಮುನ್ನಡೆಯುತ್ತಿರುವ ನಮ್ಮ ದೇಶದ ವಿವಿಧ ಸದನಗಳ ಸದಸ್ಯರು ಈ ಸದನಗಳಲ್ಲಿ ನಡೆದುಕೊಳ್ಳುವ ರೀತಿಗೆ ಒಂದು ಮಟ್ಟದ ಘನತೆ ಮತ್ತು ಪಕ್ವತೆ ಇದುವರೆಗಾಗಲೇ ಬರಬೇಕಾಗಿತ್ತೆಂದು ಈ ದೇಶದ ಯಾವುದೇ ನಾಗರಿಕ ಪ್ರಜೆಗೆ ಅನ್ನಿಸಿದರೆ ಅದು ತೀರಾ ಸಹಜವೇ. ಆದರೆ ಇದು ಆಗುತ್ತಿದೆಯೇ ಎಂದು ಪ್ರಶ್ನಿಸಿಕೊಂಡಾಗ ಅವನಿಗೆ ತೀರಾ ನಿರಾಶೆಯಾಗುವುದಂತೂ ಸುಳ್ಳಲ್ಲ.

ಹಾಗೆ ನೋಡಿದರೆ ಅರವತ್ತು– ಎಪ್ಪತ್ತರ ದಶಕ ಗಳಲ್ಲೇ ಈ ಸದನಗಳಲ್ಲಿ (ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳಲ್ಲಿ) ಚರ್ಚೆಗಳು, ವಾಗ್ವಾದಗಳು, ಧರಣಿ, ಮುಷ್ಕರಗಳು ತೀರಾ ಕೆಳಹಂತಕ್ಕೆ ಹೋಗದೆ, ಪಕ್ವತೆ ಅಲ್ಲದಿದ್ದರೂ ಒಂದು ಮಟ್ಟದ ಘನತೆಯನ್ನಂತೂ ಕಾಪಾಡಿಕೊಂಡಿದ್ದವು ಎನಿಸುತ್ತದೆ. ಆಗ ಸಂಸತ್ ಸದಸ್ಯರಾಗಿದ್ದ ಪಿಲೂ ಮೋದಿಯವರು ಒಮ್ಮೆ ಬೇಸತ್ತು, ಈ ಸರ್ಕಾರಕ್ಕೇನಾದರೂ ಸೂಕ್ಷ್ಮತೆ ಇದ್ದರೆ ನನ್ನ ವ್ಯಂಗ್ಯ ದಿಂದಲೇ ಈ ಸರ್ಕಾರವನ್ನು ಕೊಂದುಬಿಡುತ್ತಿದ್ದೆ ಎಂದು ಹೇಳಿದ್ದು ಕೂಡಾ ಉಂಟು. ಆದರೆ ಅವರ ಆ ಮಾತಿನ ಹರಿತವನ್ನು ಅರ್ಥಮಾಡಿಕೊಳ್ಳುವಷ್ಟು ವಿವೇಕ ವಂತೂ ಆಗಿನ ಸದಸ್ಯರಲ್ಲಿ ಇತ್ತೆಂಬುದಕ್ಕೆ ಅವರ ಮೇಲೆ ಶಿಸ್ತಿನ ಕ್ರಮವನ್ನೇನೂ ಕೈಗೊಳ್ಳದಿದ್ದುದೇ ಸಾಕ್ಷಿ.

ಈಚಿನ ವರ್ಷಗಳಲ್ಲಿ ಯಾವ ರಾಜ್ಯದ ಶಾಸನಸಭೆ ಗಳನ್ನು ನೋಡಿದರೂ ಮಾತೆತ್ತಿದರೆ ಸಾಕು ಧರಣಿಗಳು, ಪ್ರತಿಭಟನೆಗಳು ಕೆಲವೊಮ್ಮೆ ಕೈಕೈ ಮಿಲಾಯಿಸು ವಷ್ಟು ಉಗ್ರಹಂತಕ್ಕೂ ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಸಂಸತ್ತಿನ ಸದನಗಳೂ ಇದಕ್ಕೆ ತೀರಾ ಹೊರತೇನಲ್ಲವೆಂಬ ರೀತಿಯಲ್ಲಿ ಸಾಗುತ್ತಿರುವುದು ಸಮಾಧಾನದ ಸಂಗತಿಯಂತೂ ಅಲ್ಲ. ಕೆಲವು ಸಲ ಆಳುವ ಸರ್ಕಾರ ಮತ್ತು ಅದರ ಸದಸ್ಯರು ಮರ್ಯಾದೆಯ ಮಿತಿ ಮೀರಿದರೆ, ಇನ್ನು ಹಲವು ಸಲ ವಿರೋಧ ಪಕ್ಷಗಳು ವಿರೋಧಿಸುವ ನೆವದಲ್ಲಿ ಸದನಗಳ ಘನತೆಯನ್ನು ಮೀರಿ ಹೋಗುತ್ತಿರುವುದು ಪತ್ರಿಕೆ ಗಳಲ್ಲಿ ವರದಿಯಾಗುತ್ತಿರುವುದು ಮಾಮೂಲಾಗಿ ಬಿಟ್ಟಿದೆ.

ADVERTISEMENT

ಇನ್ನು ಸದನದಲ್ಲಿ ಏನು ಮಾತನಾಡಿದರೂ ಅದಕ್ಕೆ ಕಾನೂನಿನ ರಕ್ಷಣೆ ಉಂಟೆಂಬ ಕಾರಣಕ್ಕೆ ಅಸಂಸದೀಯ ಪದಗಳ ಪ್ರಯೋಗವೂ ದಿನಬೆಳಗಾದರೆ ಆಗುತ್ತಿರು ವುದೂ ಸಭಾಧ್ಯಕ್ಷರು ಅವನ್ನು ಕಡತಗಳಿಂದ ತೆಗೆಸುತ್ತಿರುವುದೂ ಸಾಮಾನ್ಯವಾಗಿಬಿಟ್ಟಿದೆ. ಬ್ರಹ್ಮಾಸ್ತ್ರವನ್ನು ದಿನವೂ ಪ್ರಯೋಗಿಸುತ್ತಿದ್ದರೆ ಅದು ತನ್ನ ಮಹತ್ವವನ್ನೇ ಕಳೆದುಕೊಂಡು ಮೊಂಡಾಗಿಬಿಡುತ್ತದೆ ಎಂಬುದು ಸದಸ್ಯರಿಗೆ ಅರಿವಾದ ದಿನ ನಮ್ಮ ಪ್ರಜಾಪ್ರಭುತ್ವಕ್ಕೆ ಮಂಗಳದ ದಿನ.

ಇದೀಗ ಸದ್ಯರೊಬ್ಬರು ಸದನಕ್ಕೆ ಅಪಚಾರ ಮಾಡು ವಂಥ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಪಮಾನಗೊಳಿಸುವಂಥ ಮಾತನ್ನೇ ಆಡಿದ್ದಾರೆ ಎಂದಿಟ್ಟುಕೊಳ್ಳೋಣ. ಅದಕ್ಕಾಗಿ ಕ್ಷಮೆ ಯಾಚಿಸ ಬೇಕೆಂದು ಪಟ್ಟುಹಿಡಿಯಲೂಬಹುದು. ಆದರೆ ಹಾಗೆ ಎಷ್ಟು ದಿನಗಳವರೆಗೂ ಪಟ್ಟುಹಿಡಿಯಬಹುದು? ಅದಕ್ಕೂ ಒಂದು ಮಿತಿ ಎಂಬುದು ಇರಬೇಕಲ್ಲವೆ? ಸದನದಲ್ಲಿ ಎಷ್ಟೋ ಮಹತ್ವದ ವಿಷಯಗಳ ಬಗೆಗೆ ಚರ್ಚೆ ನಡೆಯುವುದಿರುತ್ತದೆ. ಈ ರೀತಿ ಕ್ಷಮೆ ಕೇಳಲಿಲ್ಲವೆಂದು ಸದನವನ್ನು ಮುಂದೂಡುವುದನ್ನೋ ಇಲ್ಲ ಸದನ ನಡೆಯದಂತೆ ಗಲಭೆ ಎಬ್ಬಿಸುವು ದನ್ನೋ ನಿರಂತರವಾಗಿ ಮಾಡುತ್ತಲೇ ಹೋದರೆ ಬಡ ತೆರಿಗೆದಾರನ ಹಣದ ದುರ್ವ್ಯಯ ಆದಂತೆ ಆಗುವುದಿಲ್ಲವೇ? ಅಷ್ಟರಮಟ್ಟಿಗೆ ದೇಶಕ್ಕೂ ಅದೊಂದು ಕಪ್ಪುಚುಕ್ಕೆ ಮತ್ತು ಹಿನ್ನಡೆಯೇ ಆಗುತ್ತದೆ.

ಯಾವುದೇ ವಿಷಯದ ಬಗ್ಗೆ ಪಟ್ಟುಹಿಡಿಯುವು ದಕ್ಕೂ ಒಂದು ಮಿತಿ ಇರಬೇಕಲ್ಲವೆ? ಈಗಾಗಲೇ ಎಷ್ಟೆಲ್ಲಾ ಒತ್ತಾಯಿಸಿದರೂ ಕ್ಷಮೆ ಕೇಳದಿರುವವರ ಬಗ್ಗೆ ಮತ್ತು ಕ್ಷಮೆಗಾಗಿ ಒತ್ತಾಯಿಸುತ್ತಿರುವವರ ಬಗ್ಗೆ ಒಂದು ಸಾರ್ವಜನಿಕ ಅಭಿಪ್ರಾಯವಂತೂ ತನಗೆ ತಾನೇ ರೂಪುಗೊಂಡಿರುತ್ತದೆ. ಯಾವತ್ತೂ ಸಾರ್ವಜನಿಕರ ಅಭಿಪ್ರಾಯವೆಂಬುದು ಬಹಳ ಮಹತ್ವದ ಸಂಗತಿ. ಅದು ಮನಃಪೂರ್ವಕವಾಗಲ್ಲದೆ ಒತ್ತಾಯಕ್ಕೆ ಒಳಗಾಗಿ ಬರೀ ಶಬ್ದಗಳಲ್ಲಿ ಯಾಂತ್ರಿಕವಾಗಿ ಕ್ಷಮೆ ಕೋರುವುದಕ್ಕಿಂತಲೂ ಮಹತ್ವದ್ದು ಮತ್ತು ಹೆಚ್ಚು ಪರಿಣಾಮಕಾರಿ ಯಾದದ್ದು. ಆದರೆ ದುರ್ದೈವದ ಸಂಗತಿಯೆಂದರೆ, ನಮ್ಮ ಇಷ್ಟು ದೊಡ್ಡ ಸಂಸದೀಯ ಪ್ರಜಾಪ್ರಭುತ್ವದ ದೇಶದಲ್ಲಿ ಸಾರ್ವಜನಿಕ ಅಭಿಪ್ರಾಯಕ್ಕೆ ಸಿಗಬೇಕಾದಷ್ಟು ಮರ್ಯಾದೆ, ಅದರ ಬಗೆಗೆ ಎಚ್ಚರ ರಾಜಕೀಯಸ್ಥರಲ್ಲಿ ಇನ್ನೂ ಬಂದೇ ಇಲ್ಲ ಎಂಬುದೇ ಕಟು ಸತ್ಯ.

ಯಾವುದೇ ಒಂದು ಸಂಗತಿಯನ್ನು ಪೂರ್ಣ ಸೂರ್ಯಗ್ರಹಣದಂತೆ ಅದು ಇಡೀ ಸದನದ ಕಲಾಪ ವನ್ನೆಲ್ಲಾ ನುಂಗಿಹಾಕುವ ಹಂತಕ್ಕೆ ಕೊಂಡೊಯ್ಯ ಬಾರದು ಎಂಬಷ್ಟು ವಿವೇಕ ಸದನದ ಒಳಗಿರುವ ಎಲ್ಲ ಸದಸ್ಯರಿಗೆ ಪಕ್ಷಾತೀತವಾಗಿ ಉದಯಿಸಿದಾಗಲೇ ನಮ್ಮ ಸಂಸದೀಯ ಪ್ರಜಾಪ್ರಭುತ್ವಕ್ಕೊಂದು ಪಕ್ವತೆ ಬಂದಿತೆಂದು ನಿಟ್ಟುಸಿರು ಬಿಡಬಹುದೇನೋ. ಅದು ಕೂಡ ಬಹುಶಃ ಸಾಧ್ಯವಿಲ್ಲವೇನೋ. ಕಾರಣ, ಇನ್ನೇನು ಕರ್ನಾಟಕವು ಸದ್ಯದಲ್ಲೇ ವಿಧಾನಸಭಾ ಚುನಾವಣೆಗೆ ಹೋಗಲಿದೆ. ಮುಂದಿನ ವರ್ಷ ಇಡೀ ದೇಶ ಸಂಸತ್ ಸದಸ್ಯರನ್ನು ಆರಿಸಬೇಕಾಗಿದೆ.

ಚುನಾವಣಾ ನೀತಿ ಸಂಹಿತೆಯು ನಿಯಮದ ಪ್ರಕಾರ ಇನ್ನೂ ಜಾರಿಯಾಗಿಲ್ಲವೆಂಬುದರ ದುರುಪ ಯೋಗ (ಸದುಪಯೋಗ?) ಮಾಡಿಕೊಳ್ಳುತ್ತಿರುವ ವಿವಿಧ ರಾಜಕೀಯ ಪಕ್ಷಗಳು ಮತ್ತು ಅವುಗಳ ಸಂಭಾವ್ಯ ಹುದ್ದರಿಗಳು, ಮತದಾರರಿಗೆ ನಾನಾ ಥರದ ಆಮಿಷಗಳು, ಪ್ರಲೋಭನೆಗಳನ್ನು ಒಡ್ಡಲಾರಂಭಿಸಿರುವುದನ್ನು ನೋಡಿದರೆ, ಇನ್ನೂ ಈ ಪಕ್ವತೆ ಎಂಬುದು ಬರಬೇಕಾದರೆ ಅದಿನ್ನೆಷ್ಟು ವರ್ಷಗಳು ಬೇಕೋ ಎಂದು ನಿಟ್ಟುಸಿರು ಬಿಡುವುದೊಂದೇ ಮತದಾರನ ಹಣೆಬರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.