ಜನ ಮನರಂಜನೆಗೆ ನೀಡುವಷ್ಟು ಮಹತ್ವವನ್ನು ಜ್ಞಾನ ವೃದ್ಧಿಗೆ, ತಮ್ಮ ಬದುಕಿನ ಅಭ್ಯುದಯಕ್ಕೆ ಪೂರಕವಾದ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೆ ಆಸಕ್ತಿ ತೋರುತ್ತಿಲ್ಲ
ಪರಿಚಯಸ್ಥ ನಿವೃತ್ತ ಶಿಕ್ಷಕರೊಬ್ಬರು ತಮ್ಮೂರಿನ ಮಕ್ಕಳು, ಕೃಷಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಗ್ರಾಮದಲ್ಲಿ ವಾದ್ಯವೃಂದ, ಶಾಲಾ ಮಕ್ಕಳೊಂದಿಗೆ ಪ್ರಭಾತ್ ಫೇರಿ ಹೊರಟಿತು. ಈ ವೇಳೆ ಜನರಿಂದ ನೀರಸ ಪ್ರತಿಕ್ರಿಯೆ ಕಂಡುಬಂತು. ಕಾರ್ಯಕ್ರಮದ ಉದ್ದೇಶದ ಬಗ್ಗೆ ಊರಿಗೆಲ್ಲ ಕೇಳುವಂತೆ ಧ್ವನಿವರ್ಧಕದಲ್ಲಿ ಪದೇ ಪದೇ ಘೋಷಣೆ ಮಾಡಲಾಯಿತಾದರೂ ಜನ ಕಿವಿಗೆ ಹಾಕಿಕೊಳ್ಳಲೇ ಇಲ್ಲ!
ಶಾಲಾ ಮಕ್ಕಳು, ಆತ್ಮೀಯರು, ಸನ್ಮಾನಕ್ಕೆ ಬಂದವರು... ಹೀಗೆ ಅಲ್ಲಿ ಇರಲೇಬೇಕಾದ ಅನಿವಾರ್ಯ ಇದ್ದವರಷ್ಟೇ ಇದ್ದರು. ಜನ ಸೇರಬಹುದು ಎಂದು ನಿರೀಕ್ಷಿಸುತ್ತಾ ನಿಗದಿತ ವೇಳೆಗಿಂತ ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾಯಿತು. ‘ಈಗಷ್ಟೇ ಮಳೆ ಬಿಡುವು ಕೊಟ್ಟಿದೆ. ರೈತರೆಲ್ಲ ಹೊಲದಲ್ಲಿದ್ದಾರೆ. ಅದಕ್ಕಾಗಿ ಜನ ಇಲ್ಲ...’ ಹೀಗೆ ಆಯೋಜಕರು ಜಾಣ ಸ್ಪಷ್ಟೀಕರಣ ನೀಡಿದರು! ರಾಸಾಯನಿಕ, ಕ್ರಿಮಿನಾಶಕಮುಕ್ತ ಕೃಷಿ ಮತ್ತು ಒತ್ತಡಮುಕ್ತ ಕಲಿಕೆ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳು ಮನಮುಟ್ಟುವಂತೆ ವಿಷಯ ಮಂಡಿಸಿದರು. ಆದರೆ ಇದು ಮುಟ್ಟಬೇಕಾದವರಿಗೆ ಮುಟ್ಟಲೇಇಲ್ಲ. ಮಕ್ಕಳು, ಇದ್ದ ಅಲ್ಪಸ್ವಲ್ಪ ಸಭಾಸದರ ಗೌಜುಗದ್ದಲದ ಮಧ್ಯೆಯೇ ಅತಿಥಿಗಳ ಮಾತೂ ಮುಗಿದುಹೋಯಿತು.
ನಂತರ ಹಾಸ್ಯ ಕಲಾವಿದರೊಬ್ಬರ ಕಾರ್ಯಕ್ರಮ. ಅವರು ನಗೆ ಚಟಾಕಿಗಳನ್ನು ಹಾರಿಸುತ್ತಿದ್ದಂತೆಯೇ ಅದೆಲ್ಲಿದ್ದರೋ ಜನ, ಕಾರ್ಯಕ್ರಮದ ಸ್ಥಳಕ್ಕೆ ಪ್ರವಾಹದ ರೀತಿ ಹರಿದುಬರಬೇಕೇ?! ಶಾಲೆಯ ಆವರಣ ಕಿಕ್ಕಿರಿದು ಕಾಂಪೌಂಡ್, ಮನೆಯ ಮಾಳಿಗೆಗಳೆಲ್ಲ ಸಾಲದೇ ಬಂದವು. ಆ ಕಲಾವಿದ ‘ಹಿತ್ತಲಕ್ಕೆ ಕರಿಬೇಡ ಮಾವ’, ‘ಪ್ರೀತ್ಸೇ ಪ್ರೀತ್ಸೇ’, ‘ನಾ ಡ್ರೈವರಾ’ ಎಂಬೆಲ್ಲ ‘ಹಾಟ್’ ಚಿತ್ರಗೀತೆಗಳ ಪ್ರಾರಂಭದ ಸಾಲುಗಳನ್ನು ಹೇಳುತ್ತಿದ್ದಂತೆಯೇ ಶಾಲಾ ಮಕ್ಕಳು ಮುಂದಿನ ಸಾಲುಗಳನ್ನು ಒಕ್ಕೊರಲಿನಿಂದ ಹಾಡಿದವು. ಬಿಟ್ಟಿದ್ದರೆ ಇಡೀ ಹಾಡನ್ನೇ ರಾಗಬದ್ಧವಾಗಿ ಹಾಡುವ ಜೋಷ್‌ನಲ್ಲಿದ್ದವು. ಅದೇ ವೇಳೆ ಅದೇ ಹಾಸ್ಯ ಕಲಾವಿದ 15×7 ಎಷ್ಟು ಎಂದು ಮಕ್ಕಳಿಗೆ ಕೇಳಿ, ಸ್ವಲ್ಪ ಸಮಯವನ್ನೂ ಕೊಟ್ಟರು. ಆದರೆ ಒಂದೇ ಒಂದು ಮಗುವಿನಿಂದ ಕೊನೆಗೂ ಪ್ರತ್ಯುತ್ತರ ಬರಲೇ ಇಲ್ಲ! ಜನ ಗಂಟೆಗಟ್ಟಲೆ ನಿಂತೇ ಹಾಸ್ಯ ಕಾರ್ಯಕ್ರಮವನ್ನು ಸವಿದರು. ಮುಗಿಯುತ್ತಿದ್ದಂತೆಯೇ ಬಂದ ವೇಗದಲ್ಲೇ ಕರಗಿದರು.
ಇದು ಆ ಒಂದು ಕಾರ್ಯಕ್ರಮ, ಊರಿನ ಕತೆ-ವ್ಯಥೆ ಮಾತ್ರ ಅಲ್ಲ. ಇಂದು ಎಲ್ಲೆಡೆ ಇದೇ ಸಮಸ್ಯೆ. ಸಮಾಜಕ್ಕೆ ಅತ್ಯಂತ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿ, ಬಹಳಷ್ಟು ಪ್ರಚಾರ ಕೊಟ್ಟರೂ ಜನ ಸೇರುವುದೇ ಇಲ್ಲ. ಖಾಲಿ ಕುರ್ಚಿಗಳನ್ನು ಕಂಡು ಮುಜುಗರ, ಕಸಿವಿಸಿ ಅನುಭವಿಸುವ ಸರದಿ ಸಂಘಟಕರದ್ದು. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಭ್ರಮನಿರಸನಗೊಂಡವರು ‘ಸ್ವಂತ ದುಡ್ಡು ಹಾಕಿ ಬೇಕಾದರೆ ಕಾರ್ಯಕ್ರಮ ಮಾಡಬಹುದು. ಆದರೆ ಈ ಜನರನ್ನು ಕೂಡಿಸೋ ಫಜೀತಿ ಇದೆಯಲ್ಲ, ಅದು ಯಾವ ಶತ್ರುವಿಗೂ ಬೇಡ. ಅದಕ್ಕೆ ಎಲ್ಲಾ ಕೈ ಬಿಟ್ಟು ತಣ್ಣಗೆ ಇದೀವೀಗ...’ ಎಂದು ಹೇಳುವುದನ್ನು ಕೇಳುತ್ತಲೇ ಇರುತ್ತೇವೆ.
ಕಾರ್ಯಕ್ರಮಗಳಿಗೆ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳು, ಅತಿಥಿಗಳು ಭಣ ಭಣ ಎನ್ನುವ ವಾತಾವರಣ ಕಂಡು ಬೇಸರದಿಂದಲೇ ನಾಲ್ಕು ಮಾತುಗಳನ್ನಾಡಿ ತಮ್ಮ ಮಾತಿಗೆ ವಿರಾಮ ಹೇಳಿದ ಉದಾಹರಣೆಗಳಿಗೆ ಲೆಕ್ಕವಿಲ್ಲ. ಇನ್ನು ಚುನಾವಣೆ ಸಂದರ್ಭದಲ್ಲಿ ಮತದಾನ ಜಾಗೃತಿ ಜಾಥಾ ಮಾಡುವಾಗ, ಆರೋಗ್ಯ ಇಲಾಖೆಯು ಡೆಂಗಿ, ಮಲೇರಿಯಾದಂತಹ ಕಾಯಿಲೆಗಳ ಕುರಿತು ಅರಿವು ಮೂಡಿಸುವಾಗ, ಪೊಲೀಸ್ ಇಲಾಖೆಯ ಅಪರಾಧ ತಡೆ ಮಾಸಾಚರಣೆ ಸೇರಿದಂತೆ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳಂತಹ ಮಹತ್ವದ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವುದೇ ದೊಡ್ಡ ಸವಾಲು. ಹಾಗೋ ಹೀಗೋ ಕಷ್ಟಪಟ್ಟು ಒಂದಷ್ಟು ಜನರನ್ನು ಸೇರಿಸಿದರೂ ಅವರನ್ನು ಸ್ವಲ್ಪ ಹೊತ್ತು ಒಂದೆಡೆ ಹಿಡಿದಿಡಲು ಹರಸಾಹಸ ಪಡಬೇಕು.
ಇಂತಹವೆಲ್ಲ ಕೊನೆಗೆ ಫೋಟೊಗೆ ಪೋಸ್, ಪ್ರಚಾರ, ಲೆಕ್ಕಕ್ಕಷ್ಟೇ ಸೀಮಿತವಾಗುತ್ತವೆ. ಅದೇ ಹಾಸ್ಯ ಕಾರ್ಯಕ್ರಮ, ಆರ್ಕೆಸ್ಟ್ರಾ, ಡಾನ್ಸ್ ಸೇರಿದಂತೆ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಚಾರದ ಕೊರತೆಯ ಮಧ್ಯೆಯೂ ಬಹಳಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸುತ್ತಾರೆ! ತಡರಾತ್ರಿವರೆಗೂ ಇಂತಹ ಕಾರ್ಯಕ್ರಮಗಳು ನಡೆದರೂ ಒಂಟಿಗಾಲಲ್ಲಿ ನಿಂತಾದರೂ ನೋಡುವ ಜನರಿಗೆ ನಮ್ಮಲ್ಲಿ ಬರವಿಲ್ಲ.
ಹೀಗೆ ಮನರಂಜನೆಗೆ ಜನ ನೀಡುವಷ್ಟು ಮಹತ್ವವನ್ನು ಜ್ಞಾನ ವೃದ್ಧಿಗೆ, ತಮ್ಮ ಬದುಕಿನ ಅಭ್ಯುದಯಕ್ಕೆ ಪೂರಕವಾದ ಮಾಹಿತಿಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಇಂದಿನ ತಲೆಮಾರು ಇಂತಹ ಹಾದಿಯಲ್ಲಿರುವಾಗ ಯುವಪೀಳಿಗೆ ಸರಿಪಥದಲ್ಲಿ ಹೇಗೆ ಸಾಗಲು ಸಾಧ್ಯ? ದೊಡ್ಡವರು ಬೇವು ಬಿತ್ತಿ ಮಕ್ಕಳಿಂದ ಮಾವು ನಿರೀಕ್ಷಿಸಿದರೆ ಆದೀತೇ? ಮನೆ, ಅಷ್ಟೇಕೆ ಇಡೀ ಊರು ಮನರಂಜನೆಗಷ್ಟೇ ಜೋತು ಬಿದ್ದಿರುವಾಗ ಮಕ್ಕಳಿಗೂ ಅದೇ ಬಗೆಯ ಅಮಲು ಏರುತ್ತದೆ. ಪರಿಣಾಮ ಮಕ್ಕಳಲ್ಲಿ ಓದು-ಬರಹ, ಭವಿಷ್ಯದ ಬಗ್ಗೆ ಗಂಭೀರ ನಿಲುವು ಇಲ್ಲವಾಗುತ್ತಿದೆ. ಮನುಷ್ಯನಿಗೆ ಊಟ, ನಿದ್ರೆ, ವಿಶ್ರಾಂತಿಯಷ್ಟೇ ಮನರಂಜನೆಯೂ ಅತ್ಯವಶ್ಯ. ಆದರೆ ಇಡೀ ಬದುಕನ್ನು ಮನರಂಜನೆಯೊಂದೇ ಆವರಿಸಿಕೊಳ್ಳಬಾರದಲ್ಲವೆ?
ಜನರ ಇಂತಹ ಸ್ವಭಾವ, ಮನಃಸ್ಥಿತಿ ಬದಲಾಗಬೇಕು. ಮನರಂಜನೆಯಷ್ಟೇ ಮನೋ, ಬೌದ್ಧಿಕ ವಿಕಾಸ ಸೇರಿದಂತೆ ಸರ್ವತೋಮುಖ ಅಭ್ಯುದಯಕ್ಕೂ ಪ್ರಾಶಸ್ತ್ಯ ನೀಡಬೇಕಾದುದು ಇಂದಿನ ತುರ್ತುಗಳಲ್ಲೊಂದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.