ADVERTISEMENT

ಸಂಗತ | ಕ್ಷಣ ನಿಲ್ಲಿ, ಬೀಳದಿರಿ ‘ಲೈಕ್‌’ ಹಪಹಪಿಗೆ

ಡಾ .ಕೆ.ಎಸ್.ಚೈತ್ರಾ
Published 27 ಜುಲೈ 2023, 19:24 IST
Last Updated 27 ಜುಲೈ 2023, 19:24 IST
   

ಧಾರಾಕಾರ ಮಳೆಯಲ್ಲಿ ತುಂಬಿ ಭೋರ್ಗರೆಯುತ್ತಿದ್ದ ಅರಸಿನಗುಂಡಿ ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ಕಾಲು ಜಾರಿ ನೀರು ಪಾಲಾಗಿದ್ದು, ಆತನಿಗಾಗಿ ಸತತ ಶೋಧ ನಡೆದಿದೆ. ಬೆಳಗಾವಿಯ ಸಮೀಪದ ಜಲಪಾತದ ಬಳಿ ನಾಲ್ವರು ಹುಡುಗಿಯರು ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ... ದಿನದಿನವೂ ವರದಿಯಾಗುತ್ತಿರುವ ನೋವಿನ ಪ್ರಕರಣಗಳಿವು. ಭವಿಷ್ಯದ ಭರವಸೆಯಾದ ಯುವಕ, ಯುವತಿಯರು ಈ ರೀತಿ ಅಪಘಾತಕ್ಕೆ ಒಳಗಾಗಲು ಕಾರಣ ಸೆಲ್ಫಿ ಅಥವಾ ರೀಲ್ಸ್‌ ಮಾಡುವ ದುಸ್ಸಾಹಸ ಪ್ರವೃತ್ತಿ. ಹಾಗೆ ನೋಡಿದರೆ ಸೆಲ್ಫಿ, ರೀಲ್ಸ್‌ ಮಾಡುವಾಗ ಮರಣಕ್ಕೆ ಈಡಾಗುವವರ ಸಂಖ್ಯೆಯಲ್ಲಿ ವಿಶ್ವದಲ್ಲೇ ಭಾರತಕ್ಕೆ ಮೊದಲ ಸ್ಥಾನ!

ಕೈಯಲ್ಲಿ ಮೊಬೈಲ್ ಹಿಡಿದು ದೂರ ಚಾಚಿ, ಬೇಕಾದ ಭಂಗಿ, ಭಾವನೆ ನೀಡಿ ತಮ್ಮ ಭಾವಚಿತ್ರವನ್ನು ತಾವೇ ತೆಗೆದುಕೊಂಡರೆ ಅದು ಸೆಲ್ಫಿ. ಮೊಬೈಲ್‍ನಿಂದಲೇ 15ರಿಂದ 20 ಸೆಕೆಂಡುಗಳ ಕಾಲ ವಿಡಿಯೊವನ್ನು ಚಿತ್ರೀಕರಿಸಿದರೆ ಅದು ರೀಲ್ಸ್‌. ಈ ರೀತಿ ತಂತ್ರಜ್ಞಾನವನ್ನು ಬಳಸಿ ಅದಕ್ಕೆ ನಾನಾ ರೀತಿಯ ಚಿತ್ರ, ಹಾಡುಗಳನ್ನು ಸೇರಿಸಿ ಚಂದಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹಾಕುವುದು ಯುವಜನರಲ್ಲಿ ಪ್ರಮುಖವಾದ ಪ್ರೀತಿಯ ಹವ್ಯಾಸ. ಹೀಗೆ ಹಾಕಿದೊಡನೆ ಪರಿಚಿತರು, ಅಪರಿಚಿತರಿಂದ ಬರುವ ಲೈಕ್, ವ್ಯೂಸ್, ಕಮೆಂಟುಗಳು ಇದರ ಅಂತಿಮ ಗುರಿ. ಇವುಗಳೇ ಯುವಜನರ ಜನಪ್ರಿಯತೆಯ ಮಾನದಂಡ. ಲೈಕ್‍ಗಳು ಹೆಚ್ಚುತ್ತಾ ಹೋದಂತೆ ಮತ್ತಷ್ಟು ಗಳಿಸುವ ಹಂಬಲ. ಗರಿಷ್ಠ ಮಟ್ಟದಲ್ಲಿ ಮೆಚ್ಚುಗೆ ಪಡೆಯುವ ಸ್ಪೆಷಲ್ ಫೋಟೊಗಾಗಿ ಸತತ ಪ್ರಯತ್ನ. ಲೈಕ್‍ಗಾಗಿ ಶುರುವಾಗಿದ್ದು ಲೈಫನ್ನೇ ಆಕ್ರಮಿಸುತ್ತದೆ, ಕೆಲವೊಮ್ಮೆ ಕಸಿಯುತ್ತದೆ!

ಹದಿಹರೆಯದಲ್ಲಿ ಇತರರು ತನ್ನನ್ನು ಗುರುತಿಸಬೇಕು, ಮೆಚ್ಚಬೇಕು ಎಂಬ ಆಸೆ ಸಹಜವೇ. ಸ್ವತಃ ತೆಗೆದುಕೊಳ್ಳಬಹುದಾದ ಈ ಸೆಲ್ಫಿ, ರೀಲ್ಸ್‌ಗೆ ಬರುವ ಪ್ರತಿಕ್ರಿಯೆಗಳು ಖುಷಿಯನ್ನು ನೀಡಿ, ಕೆಲಮಟ್ಟಿಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸುವುದು ನಿಜ. ಸ್ಮಾರ್ಟ್ ಫೋನ್‌ಗಳ ಸೆಲ್ಫಿಸ್ಟಿಕ್‍ಗಳಿಂದ ಎಲ್ಲರೂ ದಿನವೂ ಸೆಲ್ಫಿ, ರೀಲ್ಸ್‌ ಅಪ್‌ಲೋಡ್ ಮಾಡುವವರೇ. ಹೀಗಿರುವಾಗ, ಇತರರಿಗಿಂತ ಭಿನ್ನವಾಗಿ ಗಮನ ಸೆಳೆಯುವುದು ಹೇಗೆ? ಅಪಾಯಕಾರಿ ಸ್ಥಳಗಳಲ್ಲಿ, ಊಹಿಸಲಾರದ ಭಂಗಿಗಳಲ್ಲಿ ರೀಲ್ಸ್‌ ಮಾಡುವುದು ಒಂದು ಮಾರ್ಗ. ಹೀಗಾಗಿ ಸಮುದ್ರದ ಅಲೆಗಳ ನಡುವೆ, ವೀಲಿಂಗ್ ಮಾಡುತ್ತಾ ಬೈಕಿನಲ್ಲಿ, ಚಲಿಸುವ ರೈಲಿನ ಬಾಗಿಲಲ್ಲಿ, ಸೇತುವೆಯ ಅಂಚಿನಲ್ಲಿ... ಹೀಗೆ ಹೊಸ ಹೊಸ ಅಪಾಯಕಾರಿ ಸ್ಥಳಗಳನ್ನು ಜನ ಹುಡುಕುತ್ತಿದ್ದಾರೆ.

ADVERTISEMENT

ಈಗಂತೂ ಮಳೆಗಾಲ. ನದಿ, ಸಮುದ್ರಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕೆಲವು ಜಲಪಾತಗಳು ಭೋರ್ಗರೆಯುತ್ತಿವೆ. ಇಂಥ ವೇಳೆ ಸಮುದ್ರದ ಅಲೆ,  ಜಲಪಾತದ ಹಿನ್ನೆಲೆಯಲ್ಲಿ ತೆಗೆಯುವ ಸೆಲ್ಫಿ, ರೀಲ್ಸ್‌ ಮೈ ಝುಮ್ಮೆನ್ನಿಸುತ್ತವೆ. ಬಿಸಿರಕ್ತ, ವಿವೇಚನೆ ಇಲ್ಲದ ಬುದ್ಧಿ, ಲೈಕ್‍ಗಳ ಸುತ್ತಲೇ ತಿರುಗುವ ಮನಸ್ಸು... ನಾನಾ ರೀತಿಯ ದುಸ್ಸಾಹಸಗಳನ್ನು ಮಾಡಲು ಪ್ರಚೋದನೆ ನೀಡುತ್ತವೆ. ಗಮನಿಸಬೇಕಾದ ಅಂಶವೆಂದರೆ, ಸತತ ಸುರಿಯುವ ಮಳೆಯಿಂದಾಗಿ ಬಂಡೆಗಳ ಮೇಲೆ ಪಾಚಿ ಬೆಳೆದಿರುತ್ತದೆ. ನೆಲದಲ್ಲಿನ ಮಣ್ಣು ಕೂಡ ಹಸಿಯಾಗಿ, ಜಾರುತ್ತದೆ. ಇಂತಹ ಬಂಡೆಗಳ ಮೇಲೆ ನಿಂತು, ಕ್ಯಾಮೆರಾ ನೋಡುತ್ತಾ ಪೋಸ್ ಕೊಡುವಾಗ ಜಾರುವ ಎಲ್ಲ ಸಾಧ್ಯತೆಯೂ ಇರುತ್ತದೆ. ಜಲಪಾತಗಳಲ್ಲಿ ಎತ್ತರದಿಂದ ಆಳಕ್ಕೆ ಧುಮುಕುವ ನೀರಿಗೆ ರಭಸ ಹೆಚ್ಚು. ಆಳದಲ್ಲಿ ನೀರಿನ ಸುಳಿಗಳೂ ಇರುತ್ತವೆ. ಸಮುದ್ರದ ಅಲೆಗಳು ಕ್ಷಣಕ್ಷಣಕ್ಕೂ ಬದಲಾಗುತ್ತವೆ. ಅದನ್ನು ಊಹಿಸಲೂ ಯಾರಿಗೂ ಸಾಧ್ಯವಿಲ್ಲ. ಮಿಂಚಿನ ವೇಗದಲ್ಲಿ ದೈತ್ಯ ಅಲೆಗಳಾಗಿ ತೀರಕ್ಕೆ ಅಪ್ಪಳಿಸುವುದಷ್ಟೇ ಅಲ್ಲ ಜೀವಗಳನ್ನು ಸೆಳೆಯುವ ಶಕ್ತಿ ಸಮುದ್ರಕ್ಕಿದೆ. ಒದ್ದೆಯಾದ ಮರಳಿನಲ್ಲಿ ಕಾಲಿಟ್ಟಂತೆ ಕಾಲು ಕೆಳಗೆ ಕುಸಿಯುತ್ತದೆ. ಹಾಗಾಗಿ ಮಳೆಗಾಲದಲ್ಲಿ ಸಮುದ್ರದೊಡನೆ ಸರಸ ಸಲ್ಲದು!

ಮೇಲಿಂದ ಮೇಲೆ ಆಗುತ್ತಿರುವ ಈ ಪ್ರಕರಣಗಳ ಕುರಿತಾಗಿ ಪೊಲೀಸರು ಬಹಳಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಗೋಕಾಕ್ ಫಾಲ್ಸ್, ಜೋಗ್ ಫಾಲ್ಸ್ ಮತ್ತು ಜನಪ್ರಿಯ ಸಮುದ್ರ ತೀರಗಳಲ್ಲಿ ಪೊಲೀಸರು ಜನರನ್ನು ಎಚ್ಚರಿಸುತ್ತಿದ್ದಾರೆ. ಸೆಲ್ಫಿ ತೆಗೆಯಬಾರದು ಎಂದು ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆ. ಮುಂಬೈ,  ಗೋವಾದಂತಹ ಪ್ರವಾಸಿ ತಾಣಗಳಲ್ಲಿ ಮಾಡಿದಂತೆ ‘ನೋ ಸೆಲ್ಫಿ ಝೋನ್’ ಎಂದು ಗುರುತಿಸುವ ಬಗ್ಗೆ ಚಿಂತನೆ ನಡೆದಿದೆ. ವಿಷಾದದ ಸಂಗತಿ ಎಂದರೆ, ಸೆಲ್ಫಿ, ರೀಲ್ಸ್ ಕ್ರೇಜ್‍ಗೆ ಬಿದ್ದಿರುವ ಜನ ಅವನ್ನೆಲ್ಲಾ ಗಾಳಿಗೆ ತೂರಿ ಒಂದು ಫೋಟೊ, ಒಂದು ವಿಡಿಯೊ ಸಲುವಾಗಿ ತಮ್ಮ ಜೀವವನ್ನೇ ಪಣಕ್ಕೆ ಇಡುತ್ತಿದ್ದಾರೆ. ಲಕ್ಷ ಲೈಕ್ಸ್, ವ್ಯೂಸ್‌ ಯಾವುವೂ ಜೀವವನ್ನು ಮರಳಿಸುವುದಿಲ್ಲ, ಕಳೆದುಕೊಂಡವರ ನೋವನ್ನು ಮರೆಸುವುದಿಲ್ಲ ಎನ್ನುವುದನ್ನು ನೆನಪಿನಲ್ಲಿಡಬೇಕು.

ಬದುಕಿಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ತಂದೆ ತಾಯಿ, ಅಮ್ಮನನ್ನು ಕಳೆದುಕೊಂಡ ಮುದ್ದು ಮಕ್ಕಳು, ಪತಿಯನ್ನು ಕಳೆದುಕೊಂಡ ಮಡದಿ, ಹೀಗೆ ಒಂದೊಂದೇ ಮುಖವನ್ನು ನೆನೆಸಿಕೊಂಡಾಗಲೆಲ್ಲ ಹೊಟ್ಟೆಯಲ್ಲಿ ಸಂಕಟ. ಕ್ಷಣದ ಸಂತೋಷಕ್ಕಾಗಿ, ಒಂದಷ್ಟು ಲೈಕುಗಳ ಹಪಹಪಿಗಾಗಿ ಅಮೂಲ್ಯವಾದ ಬದುಕನ್ನೇ ಈ ರೀತಿ ಬಲಿ ಕೊಡುವುದು ಸರಿಯೇ?

‘ಏನೂ ಆಗಲ್ಲ’ ಎನ್ನುವ ಅತಿಯಾದ ಆತ್ಮವಿಶ್ವಾಸ, ‘ನಮಗೆಲ್ಲಾ ಗೊತ್ತಿದೆ’ ಎನ್ನುವ ಅಹಂ, ಅನುಭವದ ಮಾತಿಗೆ ಕಿವಿಗೊಡದ ಹಟ, ರೀಲ್ಸ್‌ಗೆ ಹೊರತಾದ ರಿಯಲ್ ಬದುಕಿನ ಬಗ್ಗೆ ಬೇಜವಾಬ್ದಾರಿ... ಇಂಥವುಗಳಿಂದ ಹೊರಬಂದರೆ ಈ ಪ್ರಾಣಬಲಿ ನಿಂತೀತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.