2020ನೇ ಸಾಲಿನಿಂದ ಪಿಎಚ್.ಡಿ ಪದವಿಗೆ ಪ್ರವೇಶ ಪಡೆಯುವವರು ‘ಸಂಶೋಧನಾ ಪ್ರಕಟಣೆ ಮತ್ತು ನೈತಿಕತೆ’ (Research Publication & Ethics) ವಿಷಯವನ್ನು ಕಡ್ಡಾಯವಾಗಿ ಓದಲೇಬೇಕಿರುವ ನಿಯಮಾವಳಿಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ರೂಪಿಸಿದೆ. ಸಂಶೋಧನಾರ್ಥಿ ಗಳೆಲ್ಲರೂ ಕೋರ್ಸ್‌ವರ್ಕ್‌ನ ಭಾಗವಾಗಿ ಈ ವಿಷಯದ ಪರೀಕ್ಷೆ ಬರೆದು ಉತ್ತೀರ್ಣರಾಗ ಬೇಕಿರುವುದು ಕಡ್ಡಾಯ. ಸಂಶೋಧನೆಯ ಮೂಲಕ ತಾವು ಕಂಡುಕೊಂಡ ಅಂಶಗಳನ್ನು ಪ್ರಬಂಧ ಅಥವಾ ಲೇಖನವಾಗಿ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟಿಸುವಾಗ ಅನುಸರಿಸಬೇಕಾದ ಕ್ರಮಗಳೇನು ಎಂಬುದರ ಕುರಿತು ಮನದಟ್ಟು ಮಾಡಿಕೊಡುವಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸಲಿದೆ.
ಈ ಬಾರಿ ವಿಶ್ವವಿದ್ಯಾಲಯವೊಂದು ತನ್ನಲ್ಲಿ ಪಿಎಚ್.ಡಿ ಪದವಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳ ಮೂಲಕ ‘ಸಂಶೋಧನಾ ಪ್ರಕಟಣೆ ಮತ್ತು ನೈತಿಕತೆ’ ವಿಷಯವನ್ನು ಬೋಧಿಸಿತು. ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಷಯ ತಜ್ಞರು, ಸಂಶೋಧನಾ ಲೇಖನಗಳನ್ನು ಪ್ರಕಟಿಸುವಾಗ ಏನು ಮಾಡಬೇಕು ಮತ್ತು ಯಾವುದನ್ನೆಲ್ಲ ಮಾಡ ಕೂಡದು ಎಂಬುದನ್ನು ಸಂಶೋಧನಾರ್ಥಿಗಳಿಗೆ ತಿಳಿಸಿ ಕೊಟ್ಟರು. ಆನ್‍ಲೈನ್ ತರಗತಿ ವೇಳೆ, ತಮಗಿರುವ ಅನುಮಾನಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಬೋಧಕರಿಗೆ ಪ್ರಶ್ನೆ ಕೇಳುವ ಅವಕಾಶ ದೊರೆತಾಗ, ಸಂಶೋಧನಾರ್ಥಿಯೊಬ್ಬರು ಕೇಳಿದ ಪ್ರಶ್ನೆ ಗಮನಾರ್ಹವಾದುದು.
‘ಈ ಕೋರ್ಸಿನಲ್ಲಿ ಕಲಿತ ವಿಷಯಗಳನ್ನು ಪಾಲಿಸುವುದು ಮತ್ತು ಅನುಷ್ಠಾನಕ್ಕೆ ತರುವುದು ನಮ್ಮಿಂದ ಮಾತ್ರ ಸಾಧ್ಯವಿಲ್ಲ. ನಮಗೆ ಮಾರ್ಗದರ್ಶನ ನೀಡುವವರಿಗೂ ಸಂಶೋಧನಾ ಲೇಖನಗಳ ಪ್ರಕಟಣೆ ವೇಳೆ ಅನುಸರಿಸಬೇಕಾದ ಕ್ರಮಗಳ ಕುರಿತು ತಿಳಿದಿರಬೇಕಲ್ಲವೇ? ತಿಳಿವಳಿಕೆ ಇದ್ದರೂ ಇವನ್ನೆಲ್ಲ ಕಟ್ಟುನಿಟ್ಟಾಗಿ ಪಾಲಿಸುವ ಬದ್ಧತೆ ತೋರುವರೆಂಬ ಖಾತರಿಯೇನು? ಒಂದುವೇಳೆ ಸಂಶೋಧನಾರ್ಥಿ ನೈತಿಕ ಚೌಕಟ್ಟು ಮೀರಿ ಏನನ್ನೂ ಮಾಡಬಾರದೆನ್ನುವ ನಿಲುವಿಗೆ ಬದ್ಧನಾಗಿ, ಆತನ ಮಾರ್ಗದರ್ಶಕರಿಗೆ ಆ ಬದ್ಧತೆ ಇಲ್ಲದೇ ಹೋದಾಗ ಎದುರಾಗುವ ಸಂಘರ್ಷದಿಂದ ಪಾರಾಗುವುದು ಹೇಗೆ?’ ಎಂದು ಒಬ್ಬರು ಕೇಳಿದ್ದಕ್ಕೆ, ಉಳಿದವರು ತಾವು ಕೂಡ ಈ ಪ್ರಶ್ನೆಗೆ ಉತ್ತರ ನಿರೀಕ್ಷಿಸುತ್ತಿರುವುದಾಗಿ ದನಿಗೂಡಿಸಿದರು.
ಮತ್ತೊಬ್ಬರು, ‘ನಾವು ಅಧ್ಯಾಪಕರಾಗಿ ಕಾರ್ಯನಿರ್ವಹಿಸುವ ಸಂಸ್ಥೆಯ ಆಡಳಿತಕ್ಕೂ ಸಂಶೋಧನಾ ಪ್ರಕಟಣೆ ಮತ್ತು ನೈತಿಕತೆ ಕುರಿತು ಅರಿವಿರಬೇಕಲ್ಲವೇ?’ ಎಂದು ಪ್ರಶ್ನಿಸಿದರು. ಸಂಶೋಧನಾರ್ಥಿಗಳಲ್ಲಿನ ಈ ಗೊಂದಲ ಬಗೆಹರಿಸಲು ಸರಳ ಪರಿಹಾರ ಗಳಿಲ್ಲ ಎಂಬುದನ್ನು ಮನಗಂಡ ವಿಷಯ ತಜ್ಞರು, ‘ಪರಿಸ್ಥಿತಿ ಮುಂಬರುವ ದಿನಗಳಲ್ಲಿ ಸುಧಾರಿಸಬಹುದು. ಈ ದಿಸೆಯಲ್ಲಿ ಸಂಬಂಧಪಟ್ಟವರು ಕೂಡ ಸೂಕ್ತ ಕ್ರಮ ಕೈಗೊಳ್ಳಬಹುದು’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವೇತನ ಹೆಚ್ಚಳ ಮತ್ತು ಬಡ್ತಿಗೆ ಅರ್ಹವಾಗಲು ನಿರ್ದಿಷ್ಟ ಸಂಖ್ಯೆಯ ಸಂಶೋಧನಾ ಪ್ರಬಂಧಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕೆಂಬ ನಿಯಮಗಳನ್ನು ವಿಧಿಸಿರುವುದರಿಂದ, ಹೇಗಾದರೂ ಸರಿ ಅಗತ್ಯವಿರುವಷ್ಟು ಸಂಶೋಧನಾ ಲೇಖನಗಳು ತಮ್ಮ ಹೆಸರಿನಲ್ಲಿ ಪ್ರಕಟವಾಗುವಂತೆ ನೋಡಿಕೊಂಡರೆ ಸಾಕು ಎನ್ನುವ ವಾತಾವರಣ ಉನ್ನತ ಶಿಕ್ಷಣ ವಲಯದಲ್ಲಿ ಬೇರೂರಿದೆ.
ಸಂಶೋಧನಾ ಲೇಖನಗಳ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಮಾನದಂಡಗಳನ್ನು ರೂಪಿಸಲಾಗಿದೆ. ಹೀಗಾಗಿ ಕೆಲವೊಮ್ಮೆ ಸಂಶೋಧನಾ ಲೇಖನಗಳ ಗುಣಮಟ್ಟ ಸ್ವೀಕಾರಾರ್ಹವಾಗಿದ್ದರೂ, ಸಂಶೋಧನಾ ಲೇಖನಗಳನ್ನು ಬರೆಯುವ ಮತ್ತು ಪ್ರಕಟಿಸುವ ಪ್ರಕ್ರಿಯೆಯಲ್ಲಿ ನೈತಿಕತೆಯ ಎಲ್ಲೆ ಮೀರಿರಬಹುದಾದ ಸಾಧ್ಯತೆಯೂ ಇರಲಿದೆ. ಉನ್ನತ ಶಿಕ್ಷಣ ವಲಯದಲ್ಲಿ ವೃತ್ತಿಪರತೆ ಮತ್ತು ನೈತಿಕ ಪ್ರಜ್ಞೆ ಮೈಗೂಡದೇ ಹೋದಲ್ಲಿ, ವ್ಯಕ್ತಿಗತ ನೆಲೆಯಲ್ಲಿ ಅದನ್ನು ಮೈಗೂಡಿಸಿದರೂ ಅನುಷ್ಠಾನಕ್ಕೆ ತರುವುದು ತ್ರಾಸದಾಯಕ. ಈ ಕುರಿತು ಬರೀ ಸಂಶೋಧನಾರ್ಥಿ ಗಳಲ್ಲದೆ ಮಾರ್ಗದರ್ಶಕರು, ಕಾಲೇಜು- ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿ, ಪ್ರಾಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲೂ ತಿಳಿವಳಿಕೆ ಮೂಡಿಸುವ ಅಗತ್ಯವಿದೆ.
ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ತುದಿಗಾಲಿನಲ್ಲಿ ನಿಂತಿರುವ ಸಂಶೋಧನಾರ್ಥಿಗಳು ಮತ್ತು ಬೋಧಕರ ಅಗತ್ಯಗಳನ್ನು ಕ್ಷಿಪ್ರಗತಿ ಯಲ್ಲಿ ಪೂರೈಸುವ ಮೂಲಕ ಹಣ ಗಳಿಸಬಹುದು ಎಂಬುದನ್ನು ಕಂಡುಕೊಂಡಿರುವ ಕೆಲವರು, ಪ್ರಕಟಣೆಗೆ ಸ್ವೀಕರಿಸುವ ಸಂಶೋಧನಾ ಪತ್ರಿಕೆಗಳನ್ನು ಹುಟ್ಟುಹಾಕಿ, ಕೆಲ ವರ್ಷಗಳಿಂದ ಯಶಸ್ವಿ ಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳಬೇಕಾದ ಅಧ್ಯಾಪಕರೇ, ‘ಪತ್ರಿಕೆ ಯಾವುದಾದರೂ ಪರವಾಗಿಲ್ಲ, ಪ್ರಕಟಣೆಗೆ ಕಳಿಸಿ’ ಎನ್ನುವ ನಿಲುವಿಗೆ ಜೋತುಬೀಳುವುದೂ ಇದೆ.
ಗುಣಮಟ್ಟ ಕಾಯ್ದುಕೊಳ್ಳದ ಸಂಶೋಧನಾ ಪತ್ರಿಕೆ ಗಳಲ್ಲಿ ಲೇಖನ ಪ್ರಕಟಿಸುವುದಕ್ಕಿಂತ ಪ್ರಕಟಿಸದಿರುವುದೇ ಏಕೆ ಉತ್ತಮವೆಂದು ಇಡೀ ಶೈಕ್ಷಣಿಕ ವಲಯಕ್ಕೆ ಮನದಟ್ಟು ಮಾಡಿಕೊಡುವ ಅಗತ್ಯ ಇದೆ. ಗುಣಮಟ್ಟದೊಂದಿಗೆ ನೈತಿಕತೆಯೂ ಮೈಗೂಡುವಂತೆ
ನೋಡಿಕೊಳ್ಳಬೇಕೆಂದರೆ, ನೈತಿಕಪ್ರಜ್ಞೆ ಕಾಪಿಟ್ಟು ಕೊಂಡ ಶೈಕ್ಷಣಿಕ ವಾತಾವರಣ ರೂಪುಗೊಳ್ಳಬೇಕು. ಲಭ್ಯವಿರುವ ತಾಂತ್ರಿಕ ಹತಾರಗಳ ಮೂಲಕ ತಕ್ಕ ಮಟ್ಟಿಗೆ ಗುಣಮಟ್ಟ ಕಾಯ್ದುಕೊಳ್ಳಲಷ್ಟೇ ಸಾಧ್ಯವಿದೆ.
ಶೈಕ್ಷಣಿಕ ವಲಯದಲ್ಲಿ ನಡೆಯುವ ಸಂಶೋಧನೆಗಳ ಲ್ಲಿನ ಅನೈತಿಕತೆಗೆ ಕಡಿವಾಣ ಹಾಕಲು ನೈತಿಕಪ್ರಜ್ಞೆ ಯನ್ನು ಜಾಗೃತಗೊಳಿಸುವ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.