ADVERTISEMENT

ಗಂಗೆ ಶುದ್ಧವಾದಾಳೇ?

ಡಾ.ಮನೋಜ ಗೋಡಬೋಲೆ
Published 17 ಅಕ್ಟೋಬರ್ 2018, 2:00 IST
Last Updated 17 ಅಕ್ಟೋಬರ್ 2018, 2:00 IST
   

ಪರಿಸರ ಹೋರಾಟಗಾರರಿಗೆ ಕಳೆದ ಗುರುವಾರ ಹಬ್ಬದಲ್ಲೂ ಸೂತಕದ ವಾತಾವರಣ. ಗಂಗೆಯ ಉಳಿವಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ, ಜೂನ್ 22ರಿಂದ ಉಪವಾಸದಲ್ಲಿದ್ದ ಸ್ವಾಮಿ ಜ್ಞಾನಸ್ವರೂಪ ಸಾನಂದ (86 ವರ್ಷ) ಅವರು 111 ದಿನಗಳ ನಂತರ ಹೃದಯಾಘಾತಕ್ಕೊಳಗಾಗಿ ಮರಣವನ್ನಪ್ಪಿದರು. ಬರೀ ಸ್ವಾಮಿಯಾಗಿದ್ದರೆ ಜನಮಾನಸದಲ್ಲಿ ನೆಲೆ ನಿಲ್ಲುತ್ತಿರಲಿಲ್ಲವೇನೋ. ಆದರೆ ಇಳಿವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸುವುದಕ್ಕೂ ಮುನ್ನ ಅವರು ರೂರ್ಕಿಯ ಐಐಟಿಯಲ್ಲಿ ಪರಿಸರ ಮತ್ತು ಸಿವಿಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ರಾಗಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ಸೇವೆಯಲ್ಲಿನ ಪರಿಸರ ಸಂಬಂಧಿ ಕ್ಷೇತ್ರದ ಜೊತೆಗಿನ ಅಪಾರ ಅನುಭವದ ಆಧಾರದ ಹಿನ್ನೆಲೆಯಲ್ಲಿ ಅವರು ಗಂಗಾ ನದಿಯ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಅಕ್ಷರಶಃ ಸಮರ್ಪಿಸಿದ್ದಾರೆ. ಹಾಗಾಗಿ ಅವರ ಧೋರಣೆಗಳನ್ನು ನಮ್ಮ ಸರ್ಕಾರಗಳು ಸಮರ್ಪಕವಾಗಿ ಪರಿಗಣಿಸಲಿಲ್ಲವೇನೋ ಎಂದು ಭಾಸವಾಗುತ್ತದೆ. ಅವರ ಚಳವಳಿಗಳನ್ನು ವಿದೇಶಿ ಹಿತಾಸಕ್ತಿಗಳಿಂದ ಪ್ರೇರಿತ ಎಂದೂ ದೂರಿದವರಿದ್ದಾರೆ.

ಗಂಗಾ ನದಿಯ ಶುದ್ಧೀಕರಣಕ್ಕಾಗಿ 2011ರಲ್ಲಿ ಹುಟ್ಟು ಹಾಕಲ್ಪಟ್ಟ ‘ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ’ ಸಂಘವನ್ನು ಈಗಿನ ಸರ್ಕಾರವು ₹ 20 ಸಾವಿರ ಕೋಟಿಗೂ ಮಿಕ್ಕಿದ ನಿಧಿಯನ್ನು ಮೀಸಲಿಟ್ಟು ಬಲ ತುಂಬುವ ಪ್ರಯತ್ನ ಮಾಡಿತು. ಈ ಸಂಘದ ಮುಖ್ಯ ಕೆಲಸವನ್ನು ಆ ಏಜೆನ್ಸಿಯ ಅಧಿಕೃತ ವೆಬ್‌ಸೈಟಿನಲ್ಲಿ ಹೀಗೆಂದು ಉಲ್ಲೇಖಿಸಿದ್ದಾರೆ: ಮಾಲಿನ್ಯವನ್ನು ನಿಯಂತ್ರಿಸಿ ನದಿ ಪುನರುಜ್ಜೀವಗೊಳಿಸುವುದು. ಪರಿಸರಕ್ಕೆ ಪೂರಕವಾಗುವಷ್ಟು ನೀರಿನ ಹರಿವನ್ನು ಖಾತರಿಪಡಿಸುವುದು ಮತ್ತು ತನ್ಮೂಲಕ ನೀರಿನ ಗುಣಮಟ್ಟ ವೃದ್ಧಿ ಹಾಗೂ ಸುಸ್ಥಿರ ಅಭಿವೃದ್ಧಿ. ಇತ್ತೀಚೆಗೆ ಬಹಿರಂಗಗೊಂಡ ಮಾಹಿತಿಯಂತೆ ಆ ಮೀಸಲು ನಿಧಿಯಲ್ಲಿನ ಬಹುಪಾಲು ಖರ್ಚಾಗದೇ ಉಳಿದಿದೆ. ಬಲೆಗಳನ್ನು ಬಳಸಿ ನದಿಯ ಕಸ-ಕಡ್ಡಿ ಆರಿಸುವುದು, ಶೌಚಾಲಯ ನಿರ್ಮಿಸುವುದು ಮುಂತಾದ ಕೆಲಸಗಳಷ್ಟೇ ಮೇಲ್ನೋಟಕ್ಕೆ ಕಂಡು ಬಂದಿವೆಯೇ ವಿನಾ ಭಾರಿ ಪ್ರಮಾಣದಲ್ಲಿ ಮಾಲಿನ್ಯವನ್ನು ನಿಯಂತ್ರಿಸಬಲ್ಲ ಕೆಲಸಗಳಾದ ಕುರುಹುಗಳಿಲ್ಲ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) ಗಂಗಾ ನದಿಯ ಮಾಲಿನ್ಯದ ಕುರಿತಂತೆ 2013ರಲ್ಲಿ ಒಂದು ವರದಿ ಬಿಡುಗಡೆ ಮಾಡಿತು. ಸಿಪಿಸಿಬಿ ಈ ವರದಿ ಸಿದ್ಧಪಡಿಸುವ ಮುನ್ನ ಸಮೀಕ್ಷೆ ಕೈಗೊಂಡಿತ್ತು. ಅದರ ಅನುಸಾರ ಕಾನ್ಪುರದ ಕುಖ್ಯಾತ ಚರ್ಮ ಹದಗೊಳಿಸುವ ಕಾರ್ಖಾನೆಗಳೂ ಸೇರಿದಂತೆ ಅಸಂಖ್ಯಾತ ಮದ್ಯ ತಯಾರಿಕಾ ಘಟಕಗಳು, ಪೇಪರ್ ಮಿಲ್‌, ಸಕ್ಕರೆ ಕಾರ್ಖಾನೆ, ಔಷಧ ತಯಾರಿಕಾ ಘಟಕ ಇತ್ಯಾದಿ ಸೇರಿ ನದಿಗುಂಟ ಒಟ್ಟು 764 ಅಧಿಕೃತ ಕೈಗಾರಿಕೆಗಳು ಅಸ್ತಿತ್ವದಲ್ಲಿದ್ದವು. ಅವುಗಳಲ್ಲಿ 441 ಕೈಗಾರಿಕೆಗಳ ಸಮೀಕ್ಷೆಯನ್ನು ಸಿಪಿಸಿಬಿ ಮಾಡಿತು. ಅಚ್ಚರಿಯ ವಿಷಯವೆಂದರೆ ಅವುಗಳಲ್ಲಿ 23 ಕೈಗಾರಿಕೆಗಳು ಮಾತ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿರುವ ಅಂಶಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರೆ ಉಳಿದ ಎಲ್ಲಾ ಕೈಗಾರಿಕೆಗಳೂ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡುಬಂತು! ಅಂದರೆ, ಗಂಗೆಯ ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ಅವು ವ್ಯಾಪಕ ಹಾನಿ ಮಾಡುತ್ತಿದ್ದವು! ಹಾಗಿದ್ದೂ ಅವು ರಾಜಾರೋಷವಾಗಿ ಕೆಲಸ ನಿರ್ವಹಿಸುತ್ತಿದ್ದವು. ಈ ಕೈಗಾರಿಕೆಗಳು ಮಾಲಿನ್ಯಕಾರಕಗಳನ್ನು ಎಗ್ಗಿಲ್ಲದೇ ನದಿಗೆ ಸುರಿಯುತ್ತಿದ್ದವು. ಜೊತೆಗೆ, ಕಾಲುವೆಗಳ ಮೂಲಕ ಸೆಳೆಯುವ ನೀರಿನಿಂದಾಗಿ, ಹಲವಾರು ಉದ್ದೇಶಗಳಿಗೆ ಕಟ್ಟಲಾಗಿರುವ ಅಣೆಕಟ್ಟೆಯಿಂದಾಗಿ ನದಿಯಲ್ಲಿ ಅನೇಕ ಸಲ ನೀರೇ ಹರಿಯುವುದಿಲ್ಲವಂತೆ! ಹಾಗಾಗಿ ಈ ನದಿಯ ಅಳಿದುಳಿದ ನೀರು ರೋಗಕಾರಕ ಕೀಟಾಣುಗಳಿಂದ ತುಂಬಿ ಸ್ನಾನ ಮಾಡಲೂ ಯೋಗ್ಯವಲ್ಲವೆಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ADVERTISEMENT

ಸಿಪಿಸಿಬಿ ವರದಿ ಪ್ರಕಾರ ಪ್ರತಿನಿತ್ಯ 1200 ಕೋಟಿ ಲೀಟರ್ ಮಲಿನ ನೀರು ಗಂಗೆಯೊಡಲು ಸೇರುತ್ತದೆ. ಆದರೆ, ಅದರ ಮೂರನೇ ಒಂದಂಶವನ್ನಷ್ಟೇ ಶುದ್ಧೀಕರಿಸ ಬಲ್ಲ ಸವಲತ್ತು ಇದೆ! ಜಲಮೂಲಕ್ಕೆ ತ್ಯಾಜ್ಯ ನೀರನ್ನು ಬಿಡುವ ಮುನ್ನ ನಿಯಮಗಳಂತೆ ಸೂಕ್ತವಾಗಿ ಸಂಸ್ಕರಿಸಬೇಕು. ಸಂಸ್ಕರಿಸುವ ಸಲುವಾಗಿ ಎಸ್‌ಟಿಪಿಗಳನ್ನು ತಮ್ಮಲ್ಲಿ ಸ್ಥಾಪಿಸಿಕೊಂಡು ಮಾಲಿನ್ಯವನ್ನು ಕಡಿಮೆಗೊಳಿಸಿಯೇ ಜಲಮೂಲಕ್ಕೆ ಬೆರೆಸಬಹುದು ಎನ್ನುತ್ತದೆ ನಿಯಮ. ನದಿಯಲ್ಲಿ ಯಾಕೆ ಯಾವಾಗಲೂ ನೀರು ಹರಿಯಬೇಕು ಎನ್ನುವುದಕ್ಕೆ ಇದು ಮುಖ್ಯ ಕಾರಣ. ಸ್ವಚ್ಛವಾದ ನೀರಲ್ಲಿ ಮಲಿನ ನೀರನ್ನು ಒಂದು ಪ್ರಮಾಣದವರೆಗೂ ಬೆರಕೆ ಮಾಡಬಹುದು. ತನ್ಮೂಲಕ ವಿಷದ ಅಂಶ ಸಾಕಷ್ಟು ತಿಳಿಯಾಗಿ ಜಲಚರಗಳಿಗೆ ತೊಂದರೆಯಾಗದು. ಕ್ರಮೇಣ ವಿಷದಂಶ ಹೋಗಲೂಬಹುದು. ಆದರೆ, ನದಿಯೆನಿಸಿಕೊಂಡ ಪಾತ್ರದಲ್ಲಿ ಸ್ವಚ್ಛ ನೀರಿನ ಹರಿವೇ ಇಲ್ಲದಿದ್ದರೆ? ಅಗರ್ವಾಲ್ ಅವರು ಹೋರಾಡಿದ್ದು ಇದೇ ವಿಷಯಕ್ಕೆ. ಬೇಕಾಬಿಟ್ಟಿ ಅಣೆಕಟ್ಟೆಗಳನ್ನು ಕಟ್ಟಿ ಅಳಿದುಳಿದ ನೀರನ್ನೂ ತಡೆಹಿಡಿದರೆ ಎಷ್ಟೆಲ್ಲಾ ಘೋರ ಅನಾಹುತಗಳಾಗಬಹುದು ಎಂಬ ಪ್ರಜ್ಞೆಯಲ್ಲಿಯೇ ಅವರು ಚಳವಳಿಗೆ ಧುಮುಕಿದ್ದು. ಸಣ್ಣಪುಟ್ಟ ಚೆಕ್ ಡ್ಯಾಮ್‌ಗಳಾಗಿದ್ದಿದ್ದರೆ ತೊಂದರೆಯೇ ಇರುತ್ತಿರಲಿಲ್ಲ.

ಕುಡಿಯುವ ನೀರಿನಲ್ಲಿ ಕರಗಿದ ಆಮ್ಲಜನಕದ ಪ್ರಮಾಣ ಕನಿಷ್ಠ 6 ಮಿ.ಗ್ರಾಂ ಇರಲೇಬೇಕು. ಸ್ನಾನದ ನೀರಿನಲ್ಲಿ 5 ಮಿ.ಗ್ರಾಂ ಇದ್ದರೆ ಆದೀತು. ಇನ್ನು ಮಾಲಿನ್ಯದ ಸೂಚಕವಾದ ಬಯಲಾಜಿಕಲ್ ಆಕ್ಸಿಜನ್ ಡಿಮಾಂಡ್ (ಬಿ.ಒ.ಡಿ.), ಕುಡಿಯುವ ನೀರಾದರೆ 2 ಮಿ.ಗ್ರಾಂಗಿಂತ ಕಮ್ಮಿಯಿರಬೇಕು. ಸ್ನಾನಕ್ಕೆ 3 ಮಿ.ಗ್ರಾಂ ಆಗಬಹುದು. ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯ ನೀರಿನ ಬಿ.ಒ.ಡಿ. ಎಷ್ಟೋ ಸಾವಿರದಷ್ಟಿರುತ್ತದೆ. ನದಿಗೆ ಸೇರುವ ಮುನ್ನ ಎಸ್‌ಟಿಪಿಗಳ ಮುಖಾಂತರ ಬಿ.ಒ.ಡಿ.ಯನ್ನು 30 ಮಿ.ಗ್ರಾಂಗಳಿಗೂ ಕಮ್ಮಿ ಮಾಡಬೇಕು. ಅಂತಹ ನೀರು ಶುದ್ಧ ನೀರಿನ ಜೊತೆಗೂಡಿ ತಿಳಿಯಾಗಿ ಬಳಕೆಯ ಮಟ್ಟಕ್ಕೆ ಕ್ರಮೇಣ ಬರಬಹುದು. ಆದರೆ, ನೀರಿನ ಹರಿವೇ ಇಲ್ಲವಾದರೆ ನೀರನ್ನು ಸಂಸ್ಕರಿಸಿ ನದಿಗೆ ಹರಿಸಿದರೂ ಅಂತಹ ನೀರು ಸ್ನಾನಕ್ಕೂ ಯೋಗ್ಯವಲ್ಲ! ದೇಶದ ಬಹುತೇಕ ನದಿಗಳು ಈಗ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ನಾರತೊಡಗಿವೆ. ಬೆಂಗಳೂರಲ್ಲೇ ಜಲಮೂಲಗಳು ರಾಜಕಾಲುವೆಗಳಾಗಿ ಬಿಟ್ಟಿವೆ. ಉಳಿದ ಊರುಗಳಲ್ಲೂ ಅದೇ ಪರಿಸ್ಥಿತಿಯಿದೆ. ಬ್ರಿಟಿಷರು ತಮ್ಮ ಥೇಮ್ಸ್ ನದಿ ಪುನರುಜ್ಜೀವಗೊಳಿಸಿದ್ದಾರೆ. ನಾವೇಕೆ ದಪ್ಪ ಚರ್ಮದವರಾಗುತ್ತಿದ್ದೇವೆ? ಈ ಸ್ವಚ್ಛಗೊಳಿಸುವಿಕೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರಬೇಕು. ಅದು ದೈನಂದಿನ ಪ್ರಕ್ರಿಯೆ. ಸರ್ಕಾರಗಳು ಬದಲಾಗುತ್ತಲೇ ಇರುತ್ತವೆ. ನಾವು ಬದಲಾಗದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.